14 Oct 2009

ನಮ್ಮೂರ ದೀಪಾವಳಿ.

ದೀಪಾವಳಿ ಹಬ್ಬಗಳ ರಾಜ. ನಮ್ಮ ಊರಿನಲ್ಲಿ "ದೊಡ್ಡಹಬ್ಬ" ಎಂದೇ ಇದನ್ನು ಕರೆಯುತ್ತಾರೆ.ಮಳೆಗಾಲ ಆಗಷ್ಟೆ ಹಿಂದೆಸರಿದು ಮೆಲ್ಲಗೆ ಚಳಿಗಾಲ ಇಣುಕುವ ಸಮಯ. ಅಡಿಕೆ ತೋಟಕ್ಕೆ ಔಷಧ ಹೊಡೆಸುವುದು,ಕಳೆ ತೆಗೆಸುವುದು, ಭತ್ತದ ಗದ್ದೆಯ ಅಗೆ ಹಾಕುವುದು , ನೆಟ್ಟಿ ಮುಂತಾದ ಮಳೆಗಾಲದ ಕೆಲಸಗಳೆಲ್ಲ ಮುಗಿದಿರುತ್ತದೆ.ಮುಂದೆ ಬರುವ ಕೊನೆ ಕೊಯಿಲು,ಗದ್ದೆ ಕೊಯಿಲಿನ ನಡುವೆ ಬರುವ ಈ ಹಬ್ಬ ಒಂದು ರೀತಿಯಲ್ಲಿ ರಿಫ್ರೆಶ್ ಆಗಲು ಅವಕಾಶ ಮಾಡಿಕೊಡುತ್ತದೆ.

ದೀಪಾವಳಿಯೆಂದರೆ ನನಗೆ ನೆನಪಾಗುವುದು ಹತ್ತಿಪ್ಪತ್ತು ವರುಷಗಳ ಹಿಂದೆ ನನ್ನ ಬಾಲ್ಯದಲ್ಲಿ ನಮ್ಮ ಊರಿನಲ್ಲಿ ನಮ್ಮ ಮನೆಯಲ್ಲಿ ಆಚರಿಸುತ್ತಿದ್ದ ರೀತಿ.
ಒಂದುವಾರದಿಂದಲೆ ಹಬ್ಬಕ್ಕೆ ತಯಾರಿ ಪ್ರಾರಂಭ.ಮಳೆಗಾಲದಲ್ಲಿ ಲೆಕ್ಕವಿಲ್ಲದಷ್ಟು ಜಾತಿಯ ಕಳೆ ಬೆಳೆದು ಮಿನಿ ಕಾಡುಗಳಂತಾಗುವ ಮನೆಯಂಗಳವನ್ನು ಆಳುಗಳೊಂದಿಗೆ ಸೇರಿ ಸ್ವಚ್ಛಗೊಳಿಸುವ ಕೆಲಸ ಗಂಡಸರದಾದರೆ,ಮನೆಯೊಳಗಿನ ಬಲೆ ಧೂಳು ಕಸಗಳನ್ನು ಕೊಡವಿ ಸ್ವಚ್ಛಗೊಳಿಸುವ ಕೆಲಸ ಹೆಂಗಸರದು.ನಮ್ಮ ಮನೆಯಲ್ಲಿ ನಾನು ನನ್ನ ತಂಗಿ ಪ್ರತಿ ದೀಪಾವಳಿಗೂ ಮೊದಲು ಅಮ್ಮನಿಂದ ಸಹಸ್ರನಾಮಾರ್ಚನೆಗೊಳಗಾಗುತ್ತಿದ್ದೆವು. ಮಳೆಗಾಲದಲ್ಲಿ ಸಿಗುತ್ತಿದ್ದ ಚಿತ್ರವಿಚಿತ್ರ ಬಣ್ಣದ ಓಡುಹುಳ(beetles)ಗಳಿಂದ ಹಿಡಿದು ಪೇಪರಿನ ಮೂಲೆಯಲ್ಲೆಲ್ಲೊ ಬಂದ ಶಾರುಖ್ ಖಾನ್ ಚಿತ್ರದವರೆಗೆ ಸಂಗ್ರಹವಾಗುತ್ತಿದ್ದ ನಮ್ಮ ಸಂಗ್ರಹಾಲಯ{ಓದುವ ಮೇಜು,ಪುಸ್ತಕಗಳನ್ನಿಡುವ ಕಪಾಟು}ವನ್ನು ಸ್ವಚ್ಛಗೊಳಿಸುವುದೇ ಅಮ್ಮನಿಗೆ ದೊಡ್ಡ ಸವಾಲಾಗುತ್ತಿತ್ತು.

ಹೀಗೆ ಮನೆಯ ಒಳ ಹೊರಗೆಲ್ಲ ಆದಮೇಲೆ ಮನೆಯೆದುರಿನ ರಸ್ತೆಯನ್ನು ಸ್ವಚ್ಚಗೊಳಿಸಿ ತಳಿರು ತೋರಣಗಳಿಂದ ಶೃಂಗರಿಸುತ್ತಾರೆ.
ನಮ್ಮೂರಿನಲ್ಲಿ ದೀಪಾವಳಿಯ ಆಚರಣೆ ಮುಖ್ಯವಾಗಿ ನಡೆಯುವುದು ಎರಡು ದಿನ "ಬೂರೆ ಹಬ್ಬ" ಮತ್ತು "ಗೋಪೂಜೆ".
ಬೂರೆ ಹಬ್ಬದ ಹಿಂದಿನ ದಿನದಿಂದ ಹಬ್ಬದ ಆಚರಣೆಗಳು ಪ್ರಾರಂಭವಾಗುತ್ತಿತ್ತು. ಆ ದಿನ ಬಚ್ಚಲಿನ ಹಂಡೆ ನೀರಿನ ತೊಟ್ಟಿಗಳನ್ನು ತೊಳೆದು ಹೊಸನೀರು ತುಂಬುತ್ತಿದ್ದರು. ಸಂಜೆಯ ವೇಳೆಗೆ ಹಂಡೆಯನ್ನು ಕಹಿಹಿಂಡಲೆ ಬಳ್ಳಿ ಸುತ್ತಿ ಅಲಂಕರಿಸುತ್ತಇದ್ದರು. ರಾತ್ರಿ ಕಳುವಾಗುವ ಭಯದಿಂದ ಕೈತೋಟದಲ್ಲಿ ಬೆಳೆದ ತರಕಾರಿ ಹಣ್ಣು ಹೂವುಗಳನ್ನು ಕೊಯ್ದಿಡುತ್ತಿದ್ದೆವು. ಆ ದಿನ ರಾತ್ರಿ ಊರಿನ ಹುಡುಗರಿಗೆ ಹಬ್ಬ. "ಬೂರೆ ಹಾಯುವುದು " ಎಂದರೆ ಊರಿನ ಮನೆಗಳಲ್ಲಿ ಬೆಳೆದ ತರಕಾರಿ ಹಣ್ಣುಗಳನ್ನು ಕೊಯ್ದು ತಿನ್ನುವುದು,ಎಳನೀರನ್ನಿಳಿಸಿ ಕುಡಿಯುವುದು ಮೊದಲಾದ ಪುಂಡಾಟಿಕೆ ಮಾಡಲು ಮುಕ್ತ ಅವಕಾಶ. ನಮ್ಮೂರಿನ ತರಲೆ ಹುಡುಗರು ಮೊದಲು ಆಯ್ದುಕೊಳ್ಳುತ್ತಿದ್ದುದೇ ತನ್ನ ಎಳನೀರುಗಳನ್ನು ಕಪಾಡಿಕೊಳ್ಳಬೇಕೆಂದು ಅಂಗಳದಲ್ಲಿ ನಾಲ್ಕು ಬಲ್ಬ್ ಉರಿಸಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ ರಾಮಹಿರಿಯಪ್ಪನ ಮನೆಯನ್ನು. ಅದು ಹೇಗೊ ಅವರನ್ನು ಏಮಾರಿಸಿ ಎಳನೀರುಗಳನ್ನಿಳಿಸಿ ಕುಡಿದು ಅವಶೇಷಗಳನ್ನು ಅವರಿಗೆ ಕಾಣುವಂತೆಸೆದು ಓಡುತ್ತಿತ್ತು ಗುಂಪು.ಸರಿ, ಹಿರಿಯಪ್ಪ ಮುಂದಿನ ನಾಲ್ಕು ದಿನ ಎಲ್ಲ ಹುಡುಗರನ್ನು ಬೈಯ್ಯುತ್ತ ಓಡಾಡುತ್ತಿದ್ದರು. ಯಾರದೋ ಚಪ್ಪಲಿಯನ್ನೊಯ್ದು ಇನ್ನರದೋ ಮನೆಯ ಅಂಗಳದಲ್ಲಿ ಹಾಕುವುದು,ರಾತ್ರಿಯಿಡೀ ಶಿಳ್ಳೆ ಹೊಡೆಯುತ್ತಾ ಊರು ಸುತ್ತುವುದು ಮುಂತಾದ ಚೇಷ್ಟೆ ಮಾಡುತ್ತಿದ್ದ ಆ ಹುಡುಗರ ಅದೃಷ್ಟಕ್ಕೆ ನಾವೊಂದಿಷ್ಟು ಹುಡುಗಿಯರು ಕರುಬುತ್ತಿದ್ದೆವು.

ಮರುದಿನ ಅಂದರೆ ಬೂರೆ ಹಬ್ಬದ ದಿನ ಬೆಳಗಿನ ಜಾವದಲ್ಲಿ ನಡೆಯುವ ಗಂಗೆ ಪೂಜೆಗೆ ಜಾಗಟೆ ಹೊಡೆಯಲೆಂದು ಬೇಗ ಎಬ್ಬಿಸುತ್ತಿದ್ದರು.ಬಚ್ಚಲೊಲೆಯ ನಿಗಿನಿಗಿ ಉರಿಯುವ ಕುಂಟೆ, ಹಂಡೆಯಲ್ಲಿ ಮರಳುವ ಕುದಿನೀರು, ಕಹಿಹಿಂಡಲೆ ಬಳ್ಳಿಯ ನರುಗಂಪು,ನಂತರದ ಅಭ್ಯಂಜನಕ್ಕೆ ಮನಸ್ಸನ್ನು ಸಿದ್ಧವಾಗಿಸುತ್ತಿತ್ತು.ಹದವಾದ ಬಿಸಿನೀರ ತೊಟ್ಟಿಯಲ್ಲಿ ಕುಳಿತು ಹಗುರಾಗುವುದು ಇಷ್ಟವಾದರೂ ಅದಕ್ಕು ಮೊದಲು ಮೈಗೆಲ್ಲ ಎಣ್ಣೆ ಹಚ್ಚಿಕೊಳ್ಳುವುದು ಕಷ್ಟವಾಗುತ್ತಿತ್ತು. ಅಭ್ಯಂಜನದ ನಂತರ ಆಗುವ ಸುಸ್ತಿನ ಪರಿಹಾರಕ್ಕೆ ಹುಣಸೇಹಣ್ಣಿನ ಪಾನಕ ಕುಡಿದು ಮಲಗಿದರೆ ಹಗುರವಾಗಿ ತೇಲಿದ ಅನುಭವ. ನಂತರ ಕಡುಬು ,ಚಿತ್ರಾನ್ನದ ಊಟ.

ಮರುದಿನ ಪಚ್ಚೆತೆನೆ,ಅಡಿಕೆಕಾಯಿ ಸೇರಿಸಿ ಕಟ್ಟಿಡುವುದು,ಚೆಂಡುಹೂವುಗಳನ್ನು ಕೊಯ್ದು ಮಾಲೆ ಮಾಡುವುದು ಕೊಟ್ಟಿಗೆಯನ್ನು ಶೃಂಗರಿಸುವುದು ಮೊದಲಾದ ಕೆಲಸಗಳನ್ನು ನಾನು ಚಿಕ್ಕಪ್ಪ ಮಾಡುತ್ತಿದ್ದೆವು.

ನಂತರ ಗೋಪೂಜೆ. ಬೆಳಗ್ಗೆ ಬೇಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸುವ ಸಂಭ್ರಮ. ಅಡಿಗೆ ಮನೆಯಿಂದ ಹಬ್ಬದಡಿಗೆಯ ಘಮ. ಕೊಟ್ಟಿಗೆಯ ಎಲ್ಲ ಜಾನುವಾರುಗಳನ್ನು ಶೃಂಗರಿಸಿದರೂ ಅಗ್ರಪೂಜೆ ಸಲ್ಲುವುದು ಚಿಕ್ಕ ಕರುವಿರುವ ಹಾಲುಕರೆಯುವ ಹಸುವಿಗೇ. ಅವುಗಳನ್ನು ಅಂಗಳದಲ್ಲಿ ಶೃಂಗರಿಸಿದ ಕಲ್ಲುಕಂಬಕ್ಕೆ ಕಟ್ಟಿ!!! ಕುತ್ತಿಗೆಗೆ ಹೂವಿನ ಹಾರ ತುರಾರೊಟ್ಟಿಯ ಸರಗಳಿಂದ ಅಲಂಕರಿಸಿದರೆ ಅವು ನಿಮ್ಮ ಅಲಂಕಾರ ಪೂಜೆ ಯಾರಿಗೆ ಬೇಕು ಎಂಬ ಭಾವದಲ್ಲಿ ಒಂದರ ಹಾರವನ್ನು ಇನ್ನೊಂದು ತಿನ್ನುವುದರಲ್ಲಿ ಮಗ್ನವಾಗಿರುತ್ತಿದ್ದವು. ನಂತರ ಮನೆಯಲ್ಲಿದ್ದ ಏಕೈಕ ಬೀರುವಿನಿಂದ ಹಿಡಿದು, ತೋಟದ ಬಾವಿಯ ಬಳಿಯಿದ್ದ ಪಂಪ್ ಸೆಟ್ ವರೆಗೆ ಸಕಲ ಚರಾಚರ ವಸ್ತುಗಳಿಗೂ ಪೂಜೆಸಲ್ಲಿಸುತ್ತಿದ್ದ ಅಪ್ಪನ ಹಿಂದೆ ನೈವೇದ್ಯದ ಹೋಳಿಗೆಯನ್ನು ಹೊತ್ತೊಯ್ಯುವ ಕೆಲಸ. ದಿನಾ ಒಂದಲ್ಲ ಒಂದು ಪುಂಡಾಟ ನಡೆಸಿ ಎಲ್ಲರಿಂದ ಬಯ್ಯಿಸಿಕೊಳ್ಳುತ್ತಿದ್ದ ನಾಯಿ ಚೋಟುವಿಗೂ ಆ ದಿನ ಅಪ್ಪನ ಪೂಜೆ ಸಲ್ಲುತ್ತಿತ್ತು. ನಂತರ ಶೃಂಗರಿಸಿದ ಜಾನುವಾರುಗಳನ್ನು ಮೇಯಲು ಬಿಡುವುದು. ಊರಿನ ಎಲ್ಲ ದನಕರುಗಳು ಒಟ್ಟಿಗೇ ನಡೆಯುವಾಗ ಕೇಳುವ ಕೊರಳ ಗಂಟೆಯ ನಿನಾದ ,ಅವುಗಳ ಹಿಂದೆ ನಡೆಯುವ ಬಣ್ಣ ಬಣ್ಣದ ಬಟ್ಟೆತೊಟ್ಟ ಚಿಣ್ಣರು ,ಅವರಹಿಂದೆ ರಾಜಕೀಯ,ಕ್ರಿಕೆಟ್ ಮೊದಲಾದವುಗಳ ಬಗ್ಗೆ ಘನಗಂಭೀರ ಚರ್ಚೆ ನಡೆಸುತ್ತಾ ನಡೆಯುವ ಗಂಡಸರು , ಉಟ್ಟ ಹೊಸ ಸೀರೆ,ಮಾಡಲಿರುವ ಸಿಹಿತಿಂಡಿ,ಆಚೆಮನೆಯ ತುಂಗಕ್ಕನ ಸಣ್ಣಬುದ್ಧಿ,ಈಚೆಮನೆ ರುಕ್ಕುಣಕ್ಕನ ಹೊಸ ಬಳೆಗಳ ಬಗ್ಗೆ ಮಾತಾಡುತ್ತಾ ತಾವು ಏಕೆ ಹೊರಟಿದ್ದೆಂದೇ ಮರೆಯುವ ಹೆಂಗಸರು ಹೀಗೆ ನಡೆಯುವ ಮೆರವಣಿಗೆ ಮೈಸೂರಿನ ದಸರಾ ಮೆರವಣಿಗೆಗೇನೂ ಕಮ್ಮಿಯಿರಲಿಲ್ಲ ಬಿಡಿ.

ಮದ್ಯಾನ್ಹದ ಹೋಳಿಗೆ ಊಟದ ನಂತರ ಸಾಯಂಕಾಲ ದೇವಸ್ಥಾನದ ಬಳಿ ನಡೆಯುವ ಆಟಗಳ ತಯಾರಿ ಶುರು. ಆ ದಿನಕ್ಕೆಂದೇ ಸಂಗ್ರಹಿಸಿಟ್ಟಿರುತ್ತಿದ್ದ ಚಿಕ್ಕ ಚಿಕ್ಕ ತೆಂಗಿನಕಾಯಿಗಳು ೫,೧೦,೨೦ ಪೈಸೆ ನಾಣ್ಯಗಳನ್ನು ತೆಗೆದುಕೊಂಡು ಸಾಯಕಾಲದ ವೇಳೆಗೆ ದೇವಸ್ಥಾನದ ಬಳಿ ಓಡುತ್ತಿದ್ದೆವು. ಅಲ್ಲಿ "ಗುರಿಗಾಯಿ ಒಡೆಯುವುದು" ಮುಖ್ಯ ಆಟ. ಚಿಕ್ಕವರು ದೊಡ್ಡವರು ಹೆಂಗಸರು ಗಂಡಸರೆಂಬ ಭೇದವಿಲ್ಲದೆ ಎಲ್ಲರೂ ಕೂಡಿ ಈ ಆಟ ಆಡುತ್ತಿದ್ದೆವು. ಚಿಕ್ಕ ತೆಂಗಿನಕಾಯಿಯನ್ನು ನೆಲದ ಮೇಲಿಟ್ಟು ನಿಗದಿತ ದೂರದಿಂದ ಕಲ್ಲೆಸೆದು ಅದನ್ನು ಒಡೆಯಬೇಕು. ಐದೋ ಹತ್ತೋ ಪೈಸೆಯ ಲೆಕ್ಕದಲ್ಲಿ ಬಾಜಿ ಕಟ್ಟಿ ಆಡುವ ಈ ಆಟ ಎಲ್ಲರಲ್ಲೂ ಉತ್ಸಾಹ ತುಂಬುತ್ತಿತ್ತು.[ನನ್ನ ಮದುವೆಯಾದ ವರ್ಷ ಸುಧಾಕಿರಣ್ ನನ್ನ ಮೇಲೇ ಕಟ್ಟಿದ ನೂರು ರೂಪಾಯಿಗಳೆ ಇದರಲ್ಲಿ ಇದುವರೆಗಿನ ಅತೀಹೆಚ್ಚಿನ ಬಾಜೀ.ಯಾವಾಗಲೂ ತಪ್ಪುವ ನನ್ನ ಗುರಿ ಅವತ್ತು ಆಶ್ಛರ್ಯಕರವಾಗಿ ಸರಿಯಾಗಿ ತೆಂಗಿನಕಾಯಿ ಒಡೆದು ನೂರು ರೂ ಗಳನ್ನು ಬಿಡದೇ ವಸೂಲ್ ಮಾಡಿದ್ದೆ.]

ರಾತ್ರಿ ಮನೆಯನ್ನು ಮಣ್ಣಿನ ಹಣತೆಯ ದೀಪಗಳಿಂದ ಅಲಂಕರಿಸಿ ಬಲೀಂದ್ರನನ್ನು ವಿಸರ್ಜಿಸಿಸುವುದು. ನಂತರ ದೊಂದಿಗಳನ್ನು ಬೆಳಗಿಸಿ ಮನೆಯೆದುರಿನ ರಸ್ತೆಯುದ್ದಕ್ಕೂ ನೆಡುತ್ತಾ "ದೀಪ್ ದೀಪೋಳಿಗೆ ಹಬ್ಬಕ್ಕೆ ಮೂರು ಹೋಳಿಗೆ" ಎಂದು ಪೈಪೋಟಿಯಲ್ಲಿ ಕೂಗುತ್ತಾ ಹಬ್ಬ ಕಳಿಸುವುದು. ಆಗ ಮೂರು ದಿನಗಳ ಸಂಭ್ರಮಕ್ಕೆ ತೆರೆ ಬಿದ್ದಂತೆನಿಸಿ ಬೇಸರವಾಗುತ್ತಿತ್ತು.

ಊಟವಾಗಿ ಮಲಗುವಾಗ ಮಧ್ಯರಾತ್ರಿ "ಹಬ್ಬ ಹಾಡುವವರು "ಬಂದರೆ ಎಬ್ಬಿಸಿ ಎಂದು ಅಮ್ಮನಿಗೆ ಹೇಳೇ ಮಲಗುತ್ತಿದ್ದೆ. ”ದುಮ್ ಸೋಲ್ ಹೊಡಿರಣ್ಣ ದುಮ್ಸೊಲ್ ಹೊಡಿರೊ’ ಎನ್ನುತ್ತಾ ಅವರು ಬರುವಾಗ ಕಣ್ಣುಜ್ಜುತ್ತ ಎದ್ದು ಕುಳಿತರೆ "ಆ ಮನೆ ಬಾಗಿಲು ಚೆಂದ ಈ ಮನೆ ಬಾಗಿಲು ಚೆಂದ " ಎಂದು ರಾಗವಾಗಿ ಹಾಡುವ ಅವರ ಹಾಡುಗಳನ್ನು ಕೇಳುವುದೇ ಆನಂದ. ಕೆಲವೊಮ್ಮೆ ಊರಿನ ಗಂಡಸರೆ ಹಬ್ಬ ಹಾಡಲು ಬರುವುದೂ ಇತ್ತು. ಅವರ ದೀಪಕ್ಕೆ ಎಣ್ಣೆ ಹಾಕಿ , ಹೋಳಿಗೆ , ಅಕ್ಕಿ, ದುಡ್ಡು ನೀಡಿದ ಮೇಲೆ ಆಶೀರ್ವಾದಿಸಿ ಅವರು ಮುಂದಿನ ಮನೆಗೆ ತೆರಳಿದ ಮೇಲೆ ಪುನಃ ನಿದ್ದೆಗೆ ಜಾರಿದರೆ ಮುಗಿದ ಹಬ್ಬ ಕನಸಿನಲ್ಲಿ ಸಿನೆಮಾ ರೀಲಿನಂತೆ ಬಿಚ್ಚಿಕೊಳ್ಳುತ್ತಿತ್ತು.

ಈಗಲೂ ಹಬ್ಬಕ್ಕೆ ಊರಿಗೆ ಹೋಗುತ್ತೇವೆ. ಆದರೆ ಮೊದಲಿನ ವೈಭವ ಸಂಭ್ರಮ ಈಗಿಲ್ಲವೇನೊ ಎನ್ನಿಸಿ ಬೇಸರವಾಗುತ್ತದೆ.ಅಪ್ಪ,ಚಿಕ್ಕಪ್ಪಂದಿರ ಮನೆಗಳು ಈಗ ಬೇರೆ ಬೇರೆ.ಗೋಪೂಜೆಗೆ ಎಷ್ಟೋ ಮನೆಗಳಲ್ಲಿ ಗೋವುಗಳೆ ಇಲ್ಲ.ಈಗಿನ ಮಕ್ಕಳಿಗೆ ಗೋವಿನ ಹಿಂದೆ ಓಡುವುದಕ್ಕೆ ಸಮಯವಿಲ್ಲ. ಹೆಚ್ಚಿನ ಯುವಕರು ಪೇಟೆಗಳಲ್ಲಿರುವುದಿಂದ ಹಬ್ಬದ ದಿನ ಬಂದು ಮತ್ತೆ ಹೊರಡುವ ತರಾತುರಿ. ಗುರಿಗಾಯಿ ಆಟ,ಹಬ್ಬ ಹಾಡುವುದು ಇವಕ್ಕೆಲ್ಲ ಜನರೇ ಇಲ್ಲದಂತಾಗಿದೆ. ಬದಲಾವಣೆ ಜಗದ ನಿಯಮ ತಾನೆ.

ಅದೇನೆ ಆದರೂ ದೀಪಾವಳಿ ಇವತ್ತಿಗೂ ಉಳಿದೆಲ್ಲ ಹಬ್ಬಗಳಿಗಿಂತ ಹೆಚ್ಚಿನ ಸಂಭ್ರಮ ತರುವ ಹಬ್ಬವೇ .ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

12 comments:

  1. ದೊಡ್ದಹಬ್ಬದ ನೆನಪು ಮಾಡಿ ಕೊಟ್ರಿ,
    ಆ ಗೋಪೂಜೆ, ದೀಪಾವಳಿಯ ಬಲಿವೆಂದ್ರ,
    ಎಲ್ಲ ನೆನಪಿಗೆ ಬಂತು,
    ಹಬ್ಬದ ಶುಭಾಶಯಗಳು

    ReplyDelete
  2. ನಿಮಗೂ ಸಹ ದೀಪಾವಳಿಯ ಶುಭಾಶಯಗಳು.

    ReplyDelete
  3. ಆಹಾ! ಹಳ್ಳಿ ಹಬ್ಬಗಳಲ್ಲಿ ಇಷ್ಟೇಲ್ಲಾ ಇರುತ್ತಾ...ನನಗೆ ನಿಮ್ಮನ್ನು ಕಂಡರೆ ಹೊಟ್ಟೆಕಿಚ್ಚು ಬರುತ್ತೆ. ನಾನು ಬೆಂಗಳೂರಲ್ಲಿ ಹುಟ್ಟಿಬೆಳೆದವರು..ಇಲ್ಲೆಲ್ಲಾ ಬರಿ ಪಟಾಕಿ..ಪಟಾಕಿ..ದೀಪಾವಳಿ ದಿನಗಳಂದೂ ನನ್ನ ಕ್ಯಾಮೆರಾ ಜೊತೆಗೆ ಬೆಂಗಳೂರು ಬಿಟ್ಟು ದೂರದ ಯಾವುದೋ ಹಳ್ಳಿಗೋ, ಕಾಡಿಗೋ, ನಿಶ್ಯಬ್ದ ಜಾಗಕ್ಕೋ ಪರಾರಿಯಾಗಿಬಿಡುತ್ತೇನೆ..

    ಚಂದದ ಬರಹ...
    ದೀಪಾವಳಿ ಹಬ್ಬದ ಶುಭಾಶಯಗಳು.

    ReplyDelete
  4. ಸುಮ ನನಗೂ ನನ್ನ ಹಳ್ಳಿಯ ಬಾಲ್ಯದ ದಿನಗಳನ್ನು ನೆನಪಿಸಿದಿರಿ..ಮನೆಯಿಂದ ಬೆಳಿಗ್ಗೆ ತಿಂಡಿ ತಿಂದು ಹೊರ ಹೋದರೆ ಮದ್ಯಾನ್ಹದ ಊಟ ಕಜ್ಜಾಯ ತಿಂದು ಸಂಜೆ ಪಟಾಕಿ ಹೊಡೆಯೋಕೆ ಊರ ಚಾವಡಿ ಬಳಿ ಮೈದಾನದಲ್ಲಿ ಎಲ್ಲ ಸೇರುತ್ತಿದ್ದ ಎಲ್ಲ ವಯಸ್ಸಿನವರೂ(ಯುವಕ ಯುವತಿಯರು ನಮ್ಮಂತಹ ಮಕ್ಕಳಿಗೆ ಲೀಡರ್ಸು ಅಲ್ಲಿ) ಪಟಾಕಿ ಹಚ್ಚುವುದಕ್ಕೆ ಸೇರುತ್ತಿದ್ದುದು ನೆನಪಿಗೆ ತರಿಸಿದಿರಿ...
    ಅಂದಹಾಗೆ...ದೀಪಾವಳಿ ಶುಭಾಷಯಗಳು.

    ReplyDelete
  5. ಚೆಂದದ ಲೇಖನ... ದೀಪಾವಳಿ ಶುಭಾಶಯಗಳು.... ಬರೆಯುತ್ತಿರಿ...

    ReplyDelete
  6. ಬಾಲ್ಯದ ದೀಪಾವಳಿ ನೆನಪಾತು. ಈಗ ಹಳ್ಳಿ ಕಡೆನೂ ಹಬ್ಬದ ಸಂಭ್ರಮ ಕಡಿಮೆಯಾಯ್ದು.

    ReplyDelete
  7. ದೀಪಾವಳಿ ಚೆ೦ದದ ಹಬ್ಬ. ಹಳ್ಳಿಯಲ್ಲಿನ ಹಬ್ಬಗಳ ಆಚರಣೆಯ ಸೊಗಡನ್ನು ಸವಿಯಾಗಿ ಉಣಿಸಿದ್ದಿರಾ!. ಇಗಿನ ಹಬ್ಬ ಆಚರಣೆ ಪೂಜೆ ಮಾಡಿ, ಉಟ ಮಾಡಿ ಟಿವಿ ನೋಡೊದು.
    ಹಬ್ಬ ಆಚರಣೆ ಹೇಗೆ ಅನ್ನೊದು ಚೆನ್ನಾಗಿ ತಿಳಿಸಿದ್ದಿರಾ

    ReplyDelete
  8. nimma blog mana seleyithu..
    lokesh mosale

    www.lokeshmosale.com

    ReplyDelete
  9. istu dina gotte aagalilla nimma barahakkke manasotidene
    lokesh mosale
    www.lokeshmosale.com

    ReplyDelete
  10. ನಮ್ಮ ದೀಪಾವಳಿಯನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು..... ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ....

    ReplyDelete
  11. ನಿರೂಪಣೆ ತುಂಬಾ ಚೆನ್ನಾಗಿದೆ....

    ReplyDelete
  12. **ಸಂಜೆಯ ವೇಳೆಗೆ ಹಂಡೆಯನ್ನು ಕಹಿಹಿಂಡಲೆ ಬಳ್ಳಿ ಸುತ್ತಿ ಅಲಂಕರಿಸುತ್ತಇದ್ದರು

    ಇದು ಮಾಲಿಂಗನಬಳ್ಳಿ ಅನ್ಸುತ್ತೆ. ಇತ್ತೀಚಿಗೆ ಲಬ್ಯತೆ ಕಡಿಮೆ ಆಗಿರುವುದರಿಂದ ಕಹಿಹಿಂಡಲೆ ಉಪಯೋಗಿಸಬಹುದು.

    ನಿರೂಪಣೆ ತುಂಬಾ ಚೆನ್ನಾಗಿದೆ

    ReplyDelete