11 Feb 2010

ನೀನೊಮ್ಮೆ ಬಾಯ್ತುಂಬ ಬಯ್ದುಬಿಡು !!

ನಿನ್ನ ಅಮ್ಮ ನಿಜವಾಗ್ಲೂ ನಿನ್ನಮ್ಮನಲ್ಲ ಗೊತ್ತಾ?
..... ಆಚೆಮನೆ ಸುಭದ್ರಕ್ಕ ನಾನು ಸ್ಕೂಲಿಗೆ ಹೊರಟಾಗ ಕೇಳುವುದಿತ್ತು!
ನಿನ್ನ ಮಲತಾಯಿ ನಿನಗೆ ಊಟ, ತಿಂಡಿ ಸರಿಯಾಗಿ ಕೊಡ್ತಾಳೇನೆ?
.... ಈಚೆಮನೆ ವೆಂಕಜ್ಜಿ ನಾನು ಅವಳ ಮೊಮ್ಮಗಳೊಡನೆ ಆಡಲು ಹೋದಾಗ ಲೊಚಗುಡುತ್ತಿತ್ತು.
ಛೆ .. ನನ್ನಮ್ಮ ನಿಜವಾಗ್ಲೂ ನನ್ನಮ್ಮನೇ .. ಅವಳೆಷ್ಟು ಒಳ್ಳೆಯವಳು ಗೊತ್ತಾ!!
ಅವರೆದುರು ಕೂಗುತ್ತಾ ಓಡುತ್ತಿದ್ದೆ.

ಗೆಳತಿ ಕಲಾ ..ಮ್ಯಾತ್ಸ್ ಟೆಸ್ಟ್ ನಲ್ಲಿ ಮಾರ್ಕ್ಸ್ ಕಡಿಮೆ ಬಂದಾಗ ..ಅಮ್ಮ ಬಯ್ಯುತ್ತಾಳೆಂದು ಹೆದರಿದ್ದಳು. "ಏ ಹಾಗೆ ಬಯ್ಯುವವಳೆಂಥಾ ಅಮ್ಮ!" ನಾನೆಂದಂದಕ್ಕೆ , ಅವಳು ನನ್ನನ್ನು ವಿಚಿತ್ರವಾಗಿ ನೋಡುತ್ತಾ ನನ್ನ ಒಳ್ಳೆಯದಕ್ಕೇ ಬಯ್ಯುತ್ತಾಳೆ ಅಲ್ಲವಾ? .. ಎಂದಿಂದ್ದಳು . ನನಗೆ ಆಶ್ಚರ್ಯ. ನನಗೆ ಯಾವಾಗಲೂ ಕಮ್ಮಿ ಮಾರ್ಕ್ಸ್ ಬರುತ್ತಿತ್ತು . ಒಮ್ಮೆಯೂ ನೀನೆನ್ನ ಬಯ್ದಿರಲಿಲ್ಲ.

ಪಕ್ಕದ ಮನೆಯ ಅಮಿತಾಳ ಮನೆಯೆದುರಿನ ಮಾವಿನ ಮರದಲ್ಲಿ ಒಟ್ಟಿಗೇ ಜೋಕಾಲಿಯಾಡುತ್ತಾ ಬಿದ್ದು ಮೈ ಕೈ ತರಚಿಕೊಂಡೆವು. ಓಡಿ ಬಂದ ಅಮಿತಾಳ ಅಮ್ಮನ ಕಣ್ಣಿನಲ್ಲಿ ನೀರು . ಪೆಟ್ಟುಮಾಡಿಕೊಂಡೆಯಲ್ಲೇ ಪುಟ್ಟಾ ನೋಡಿಕೊಂಡು ಆಡಾಬಾರದಾ... ಬಾ .. ಗಾಯ ತೊಳೆದು ..ಔಷಧಿ ಹಚ್ಚುತ್ತೇನೆ , ಎಂದು ಗದರುತ್ತಾ ಒಳಹೊರಟರು . ನೀನೂ ಬಾ ಪುಟ್ಟ ಎಂದು ನನ್ನನ್ನು ಕರೆದರೂ ..ಇಲ್ಲ ಮನೆಗೆ ಹೋಗುತ್ತೇನೆ ..ಅಮ್ಮ ಔಷಧಿ ಹಚ್ಚುತ್ತಾರೆ.. ಎಂದು ಬಂದೆ.
ರಕ್ತ ಸುರಿಯುತ್ತಿದ್ದ ಮಂಡಿಯೊಡನೆ ಬಂದ ನನ್ನನ್ನು ನೋಡಿ ತಣ್ಣನೆಯ ಸ್ವರದಲ್ಲಿ "ಬಿದ್ದೆಯಾ" ಎಂದಷ್ಟೇ ಕೇಳಿದ ನೀನು ಗಾಯ ತೊಳೆದು , ಔಷಧಿ ಹಚ್ಚಿದೆ. ನಿನ್ನ ಮುಖ ಆಗ ಸರ್ಕಾರಿ ಆಸ್ಪತ್ರೆಯ ನರ್ಸ್ ಮುಖವನ್ನೇ ಹೋಲುತ್ತಿತ್ತು!!

ಹೀಗಿದ್ದಾಗಲೊಮ್ಮೆ .. ನಿನಗೆ ಪುಟ್ಟ ತಮ್ಮ ಬರುತ್ತಾನೆ ಎಂದು ಅಪ್ಪ ಹೇಳಿದರು . ಕಲಾಳ ತಮ್ಮ ಅವಳ ಚಾಕೊಲೇಟ್ ಕಸಿದುಕೊಂಡು ಓಡುತ್ತಿದ್ದುದು ನೆನಪಾಗಿ , ನನಗೆ ತಮ್ಮ ಬೇಡವೆಂದೆ. ಕೊನೆಗೆ ಅಪ್ಪ ನಿನ್ನ ಜೊತೆ ಆಡುತ್ತಾನೆ , ನಿನ್ನನ್ನು ಅಕ್ಕ ಎನ್ನುತ್ತಾನೆ ಎಂದೆಲ್ಲ ಹೇಳಿದಾಗ ... ಅರೆಮನಸ್ಸಿನಿಂದ ಒಪ್ಪಿದೆ.

ಸ್ವಲ್ಪ ದಿನಗಳಲ್ಲೇ ... ಪುಟ್ಟ ಗೊಂಬೆಯಂತಹ ಮಗುವೊಂದು ನಿನ್ನ ಮಡಿಲಲ್ಲಿ ಮಲಗಿತ್ತು. .. ನನಗೇ ಎತ್ತಿಕೊಳ್ಳಬೇಕೆಂಬಾಸೆ . ನಾನು ಹತ್ತಿರ ಬಂದರೆ ನೀನು ಮಗುವನ್ನು ಎತ್ತಿಕೊಂಡು ಹೋಗಿಬಿಡುತ್ತಿದ್ದೆ. "ನಂಗೆ ಕೊಡು" ನಾನೆಂದರೆ ... ಹಾಲು ಕುಡಿಸಿ ಕೊಡುವೆ , ಔಷಧಿ ಕುಡಿಸಿ ಕೊಡುವೆ ಎಂದೇನೊ ಹೇಳಿ ಕಳೆಯುತ್ತಿದ್ದೆ. ಕೊನೆಗೆ ನಾನೂ ಸುಮ್ಮನುಳಿದೆ.

ಆದರೆ ಅವನು ಬೆಳೆದಂತೆಲ್ಲ ನಿನ್ನ ಮುಖದಲ್ಲಿ ಭಾವನೆಗಳು ಅರಳುವುದನ್ನು ನಾನು ಗಮನಿಸಿದೆ.
ಅವ ಊಟ ಬೇಡವೆಂದರೆ ಚಂದಮಾಮನನ್ನು ತೋರಿಸಿ ಊಟ ಮಾಡಿಸುವುದನ್ನು ನೋಡಿದ್ದೆ. ಆಗ ನಿನ್ನ ಮುಖದಲ್ಲಿನ ಮಿನುಗು .. ನನಗಿಷ್ಟವಾಗುತ್ತಿತ್ತು. ನನಗೂ ನೀನು ಊಟ ಮಾಡಿಸುತ್ತಿದ್ದೆ. ಆದರೆ ನಿನ್ನ ಮುಖವೆಂದೂ ಹೀಗಿರುತ್ತಿರಲಿಲ್ಲ.
ಅವನು ಬಿದ್ದರೆ ನಿನ್ನ ಕಣ್ಣಲ್ಲಿ ನೀರು ಬರುತ್ತಿತ್ತು . ಅದನ್ನು ನೋಡಲೆಂದೇ ನಾನು ಅವನನ್ನು ತಳ್ಳಿ ಬೀಳಿಸುತ್ತಿದ್ದೆ !!
ಈಗ ಅವನಿಗೆ ಮ್ಯಾತ್ಸ್ ಮಾರ್ಕ್ ಕಮ್ಮಿ ಬಂದರೆ ನೀನು ಗದರುವುದು ಕೇಳುತ್ತಿತ್ತು.

ನಾನು ಟೆನ್ತ್ ಫೇಲಾದೆ . ಹೋಗಲಿ ಬಿಡು ಮತ್ತೆ ಬರೆಯುವಿಯಂತೆ , ಹೇಳಿದ ನಿನ್ನದು ಮತ್ತೆದೇ ನಿರ್ಲಿಪ್ತ ಮುಖ .
ಕಾಲೇಜ್ ಸೇರಿದ ಮೇಲೆ ನನ್ನ ಹಠಮಾರಿತನವೂ ಬೆಳೆಯಿತು. ಸ್ಕೂಟಿ ಬೇಕೆಂದೆ , ಅಪ್ಪನಿಗೆ ಆತಂಕ . ನೀನೆ ಅವರನ್ನೂ ಒಪ್ಪಿಸಿ ಕೊಡಿಸಿದೆ.

ಗೆಳತಿ ಅಮಿತಾಳನ್ನು ಹಿಂದೆ ಕೂರಿಸಿಕೊಂಡು ಹೊರಡುವಾಗ ಅವರಮ್ಮ ನೂರೆಂಟು ಉಪದೇಶ ನೀಡುತ್ತಿದ್ದರು .... ನಿಧಾನವಾಗಿ ಹೋಗಿ ... ಹುಡುಗರ ಸಹವಾಸ ಬೇಡ... ಒಬ್ಬೊಬ್ಬರೇ ತಿರುಗಬೇಡಿ....

ನನಗಾರೂ ಏನೂ ಹೇಳಲಿಲ್ಲ ... ಗೆಳೆಯನನ್ನು ಹಿಂದೆ ಕೂರಿಸಿಕೊಂಡು ನೀನು ತರಕಾರಿ ತರುವಾಗ ನಿನ್ನೆದುರೇ ಗಾಡಿ ಓಡಿಸಿದೆ. ಮನೆಗೆ ಬಂದ ಮೇಲೆ ನೀನೇನೂ ನೋಡೇ ಇಲ್ಲವೆಂಬಂತೆ ವರ್ತಿಸಿದೆಯಲ್ಲಾ......

ನನ್ನ ಗೆಳತಿಯರು ಹೇಳುವುದಿತ್ತು . ನೋಡು ನೀನು ಪುಣ್ಯ ಮಾಡಿದ್ದಿ , ಮಲತಾಯಿಯಾದರೂ ನಿನ್ನಮ್ಮ ನಿನಗಾವ ತೊಂದರೆಯನ್ನೂ ಕೊಡುವುದಿಲ್ಲ , ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ! ...

ನಿಜ ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ ನೀನು ಸಂಬಳಕ್ಕೆ ಕೆಲಸಮಾಡುವ ಆಯಾನಂತೆ ... ತಪ್ಪಿದಾಗ ತಿದ್ದಲಿಲ್ಲ ... ನೋವಾದಾಗ ಕಣ್ಣೊರೆಸಲಿಲ್ಲ ... ಸಂತೋಷವಾದಾಗ ನಿನ್ನ ಕಣ್ಣರಳಲಿಲ್ಲ. ನಾ ಬಯಸಿದ್ದೆ ಜೀವಂತ ಆಮ್ಮನನ್ನು . ಅಪ್ಪ ನನಗಿತ್ತಿದ್ದ ... ಕರ್ತವ್ಯಶಾಲಿ ಆಯಾನನ್ನು.

ಕೊನೆಗೆ ನನ್ನೆಲ್ಲ ಆಸೆಗಳನ್ನೂ ಕಟ್ಟಿ ಬದಿಗಿಟ್ಟು ಮನಸ್ಸಿಟ್ಟು ಓದಿ , ಕೆಲಸ ಸಂಪಾದಿಸಿದೆ ನಾನು . " ಕಂಗ್ರಾಟ್ಸ್ " ನಿನ್ನ ಕಣ್ಣಲ್ಲಿ ಅದೇ ನಿರ್ಲಿಪ್ತ ಭಾವ !!

ಇಷ್ಟಪಟ್ಟವನನ್ನು ವರಿಸಿ ನಿನ್ನ ನಿರ್ಜೀವ ಮುಖದಿಂದ ದೂರ ಹೊರಟೆ . ನನ್ನದೇ ಗೂಡಿನಲ್ಲಿ ನಾನಿಗ ಸುಖಿ.

ಈಗ ನಾನು ನಿನ್ನ ಮಗಳೆಂಬುದು ನಿನಗೆ ನೆನಪಾಗಿದೆ. ನಿನ್ನ ಗಂಡ ಅಂದರೆ ನನ್ನಪ್ಪ ಕಣ್ಮುಚ್ಚಿ ವರ್ಷ ಕಳೆದಿವೆ , ಮಗ ಸೊಸೆಗೀಗ ನೀನು ಕಾಲಕಸವಾಗಿದ್ದೀಯ ... ಈಗ ನಾನು ಮನೆಗೆ ಬಂದರೆ ..ನಿನ್ನ ಕಣ್ಣೂ ಮಿನುಗುತ್ತವೆ ... ಮಗಳೇ ಎಂದು ಪ್ರೀತಿಯಿಂದ ಕರೆಯುತ್ತೀಯ .....

ಈಗಲೂ ಕಾಲ ಮಿಂಚಿಲ್ಲವಮ್ಮಾ ನೀನೊಮ್ಮೆ ಬಾಯ್ತುಂಬ ನನ್ನನ್ನು ಬಯ್ದುಬಿಡು ... ನಾನು ಮಾಡದ ತಪ್ಪಿಗಾದರೂ ಸರಿ .. ಬಯ್ದುಬಿಡು ... ನಾನಿನ್ನ ಮನಸಾರೆ ಅಮ್ಮನೆಂದು ಒಪ್ಪಿಕೊಳ್ಳುತ್ತೇನೆ ... ನಿನಗೆ ಆಸರೆಯಾಗುತ್ತೇನೆ .... ನನ್ನ ಮಗನಿಗೆ ಪ್ರೀತಿಯ ಅಜ್ಜಿಯಾಗಿ .... ನನ್ನ ತಪ್ಪುಗಳನ್ನು ತಿದ್ದುವ ಅಮ್ಮನಾಗಿ ... ನನ್ನ ಗಂಡನ ಪ್ರೀತಿಯ ಅತ್ತೆಯಾಗಿ ನಮ್ಮೊಂದಿರುವೆಯಂತೆ.... ಅಮ್ಮ ...ಆದರೆ ಒಮ್ಮೆ ಬಾಯ್ತುಂಬ ಬಯ್ದುಬಿಡು !!!

17 comments:

  1. ’ಬೈದು ಹೇಳೋರು ಬದುಕೋದಕ್ಕೆ ಹೇಳ್ತಾರೆ ಅನ್ನೋ ಮಾತಿದೆ’...ಕಥೆಯ ವಿಷಯ ವಾಸ್ತವವೂ ಹೌದು...ಮನಸ್ಸಿನ ಸಂವೇದನೆಯನ್ನು ಚೆನ್ನಾಗಿ ಬಿಡಿಸಿಟ್ಟಿದ್ದೀರಿ...ಚೆನ್ನಾಗಿದೆ ಕಥೆ.

    ReplyDelete
  2. ಆಪ್ತವಾದ ಕಥಾ ಶೈಲಿ ಖುಷಿ ಕೊಟ್ಟಿತು.

    ReplyDelete
  3. helodakke enoo tochuttilla. manassina sarovaravannu kalakibittitu nimma baraha..

    ReplyDelete
  4. ಒಮ್ಮೆ ಕಣ್ಣಲ್ಲಿ ನಿರು ಬಂತು
    ತಾಯಿಯ ಬೈಗಳು ಯಾವಾಗಲು ಇಷ್ಟ
    ಹೆತ್ತವಳಿಗೆ ಹೊಡೆಯುವ ಹಕ್ಕೂ ಇದೆ
    ನಿರ್ಲಿಪ್ತ ಭಾವನೆ ಎಂಥವರನ್ನು ವಿಚಲಿತ ಗೊಳಿಸುತ್ತದೆ
    ಒಳ್ಳೆಯ ಬರಹ

    ReplyDelete
  5. oh! Great! Suma kaalakke entha taakattideyalla! ellavannu tiruchi maruchi haakibiduttade. baiydavarenna bandhugalembe nindisidavarenna tande taaygalembe...... aadare kelavomme baiyadeyoo mounavagi nirdeshisuvaduntalla adu namma anubhavavannu gattigolisuttade. baduku kalisuttade. amma hege irali yaavagaloo great! "tellagidroo majjige...malladroo tayi" emba gaade ideyalla!

    ReplyDelete
  6. ಬೈಯುವದೂ ಸಹ ಆಪ್ತತೆಯನ್ನೇ ತೋರಿಸುತ್ತದೆ, ಅಲ್ಲವೆ? ಮಲಮಗಳ ಅಳಲನ್ನು ತುಂಬ ಚೆನ್ನಾಗಿ ತೋರಿಸಿರುವಿರಿ.

    ReplyDelete
  7. ಅಮ್ಮನ ಬಗ್ಗೆ ಒಂದು ಕಥನ-ಕವನವನ್ನು ಬರೆದಿದ್ದೆ, ತಾವು ಓದಿರಬಹುದು, ಅದು ಮಕ್ಕಳು ಮರೆಯದ ಗೀತೆ, ಅದನ್ನು ನಾನೇ ಓದಿಕೊಂಡು ಗಂಟೆಗಟ್ಟಲೆ ಅತ್ತಿದ್ದೆ ಅಂದರೆ ನಿಮಗೆ ತಮಾಷೆ ಅನ್ನಿಸಬಹುದು, ತಾಯಿಗೆ ತನ್ನ ಮಗ/ಮಗಳು ಎಂದಷ್ಟೇ ಗೊತ್ತು ಬಿಟ್ರೆ, ಅವರು ರಾಜಕಾರಣಿಯೋ, ಎಂಜಿನೀಯರೋ,ಡಾಕ್ಟರೋ ಇದೆಲ್ಲ ಅಮ್ಮ ನೋಡುವುದಿಲ್ಲ, ಅಮ್ಮನಿಗೆ ತನ್ನ ಕಂದಮ್ಮ ಚೆನ್ನಾಗಿದ್ದರೆ ಸಾಕು! ಇದು ಸೃಷ್ಟಿಯ ನಿಯಮ, ಇದು ನನ್ನ ಬಾಷೆಯಲ್ಲಿ ಭರಿಸಲಾಗದ ಋಣ, ಹೀಗೇ ಅಮ್ಮ ಅಥವಾ ತಾಯಿ ನಮಗೆ ಏನೇ ಮಾಡಿದರೂ ಅದು ನಮ್ಮ ಉನ್ನತಿಗಾಗಿ, ಅದರಲ್ಲಿ ತಪ್ಪೂ ಇಲ್ಲ, ಅದನ್ನು ಪ್ರಶ್ನಿಸುವ ಅಗತ್ಯವೇ ಬರುವುದಿಲ್ಲ, ಒಳ್ಳೆಯ ಲೇಖನ ಕೊಟ್ಟಿದ್ದೀರಿ,ಧನ್ಯವಾದಗಳು

    ReplyDelete
  8. ಇಲ್ಲಿ ಮಲಮಗಳ ಬಗ್ಗೆ ಮರೆತೆ, ಅನೇಕ ಅಮ್ಮಂದಿರು ಮಲಮಕ್ಕಳನ್ನೂ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ, ಕೆಲವು ಮಾನವೀಯತೆ ಇಲ್ಲದವರು ತೊಂದರೆ ಕೊಡಬಹುದು!

    ReplyDelete
  9. ಸುಮ ಅವರೆ,

    ಹೃದಯಸ್ಪಶಿಯಾಗಿದೆ ಬರಹ. ಆದರೆ ಅಷ್ಟೊಂದು, ನಿರ್ಲಿಪ್ತತೆ, ನಿರ್ಮಮಕಾರ ತೋರಿದ ಮಲತಾಯಿಯ ಮೇಲೆ ಇನ್ನೂ ಪ್ರೀತಿ, ವಿಶ್ವಾಸವನ್ನು ಆಕೆ ಇಟ್ಟುಕೊಂಡಿರುವುದು ಮಾತ್ರ ಬಹು ಅಚ್ಚರಿಯೇ ಸರಿ.

    ReplyDelete
  10. ಆಪ್ತತೆಯ ಕಥೆ. ಮನ ಕಲಕಿತು. ಭಾವನೆಗಳಿಲ್ಲದ ನಿರ್ಲಿಪ್ತ ಬದುಕಿನಲ್ಲಿ ಬೇಕಾದುದೆಲ್ಲ ಇದ್ದರೂ ಸುಖದ ಸೆಲೆ ಇಲ್ಲ. ಪ್ರೀತಿ ಭಾವನೆಗಳ ಬಯ್ಗುಳಗಳೂ ಅಪ್ಯಾಯಮಾನ. ಒಳ್ಳೇ ಸ೦ದೇಶವಿದೆ.

    ReplyDelete
  11. ಸುಮಾ...

    ಪ್ರೀತಿ. ಪ್ರೇಮ
    ಬಾಂಧವ್ಯ ದಲ್ಲಿ
    ಬೈಯ್ಗಳನೂ ಇರಬೇಕು..
    ಸಣ್ಣ
    ಜಗಳನೂ ಆಗ ಬೇಕು..
    ಆಗ ಪ್ರೀತಿಗೊಂದು ಅರ್ಥ..
    ಅದರ ಬೇರುಗಳು ಆಳಕ್ಕಿಳಿಯತ್ತವೆ...

    ನಿಮ್ಮ ಲೇಖನ ಓದಿ ಕಣ್ಣಲ್ಲಿ ನೀರು ಜಿನುಗಿತು....

    ReplyDelete
  12. ಸುಮಾ ಇದು ಕಥೆನಾ....? ಭಾಳ ಛಲೋ ಅದ ಒಂದು ಹೊಸ ಆಯಾಮದ ಪರಿಚಯ ಮಾಡಿಸಿರುವಿರಿ...ತುಂಬಾ ಆಪ್ತ ವಿವರಣೆ.

    ReplyDelete
  13. 'ಸುಮಾ' ಅವ್ರೆ..,

    ತುಂಬಾ ಭಾವನಾತ್ಮಕವಾಗಿದೆ...

    ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.com

    ReplyDelete
  14. ಆತ್ಮೀಯ
    ಮನಮುಟ್ಟುವ೦ಥ ಕಥೆ
    ಮಲತಾಯಿಯ ಬಗ್ಗೆ ಕ್ರೂರವಾಗಿ ಬರೆಯೋದನ್ನ ಕ೦ಡಿದೀನಿ ರೋದನೆಗಳನ್ನ ಓದಿದೀನಿ ಆದರೆ ತಣ್ಣನೆಯ
    ಹಿ೦ಸೆ ಹೀಗೂ ಇರುತ್ತೆ ಅನ್ನೋದನ್ನ ತೋರಿಸಿಕೊಟ್ರಿ.ಹೆತ್ತವರು ಬೈದರೆ ಅಸಹನೆಯನ್ನ ತೋರಿಸೋ ಮಕ್ಕಳು ಇದಾರೆ
    ಅದರೆ ಬೈಯುವಿಕೆ ಆತ್ಮೀಯತೆಯನ್ನ ತೋರಿಸುತ್ತೆ ಅನ್ನೋದನ್ನ ತೋರಿಸಿದ್ರೆ ಹ್ಯಾಟ್ಸಾಫ್
    ಹರಿ

    ReplyDelete
  15. ಎಲ್ಲದಕ್ಕಿಂತ ದೊಡ್ಡ ಹಿಂಸೆ ಅಂದ್ರೆ ತಾತ್ಸಾರ ಮಾಡೋದು ಅಂತಾರೆ. ಅದನ್ನೇ ನೀನು ಎಷ್ಟು ಚೆನ್ನಾಗಿ ಹೇಳಿದೀಯಾ.. ನಾವು ಜಗಳ ಮಾಡೋದು, ಬೈಯ್ಯೋದು ಎಲ್ಲ ನಮ್ಮ 'ಹತ್ತಿರದವರ' ಜೊತೇನೆ. ಬೈದು ಹಕ್ಕನ್ನು ಸ್ತಾಪಿಸಿದ್ರೆ ಖುಷಿ ಅನ್ನೋದು ನಿಜ ಅಲ್ವಾ???

    ReplyDelete
  16. ಆಪ್ತವಾಗುವ ಕಥಾಶೈಲಿ..
    ಚೆನ್ನಾಗಿದೆ..ಭಾವನೆಗಳನ್ನು

    ಸುಂದರವಾಗಿ ಹಿಡಿದಿದ್ದೀರಿ.
    ಅಭಿನಂದನೆಗಳು.ಮೇಡಂ.

    ReplyDelete
  17. ಮಲತಾಯಿಯ ಬಗ್ಗೆ ಇನ್ನೊಂದು ರೂಪ ಕೊಟ್ಟ ಕಥಾಶೈಲಿ ಚೆನ್ನಾಗಿದೆ.
    ಮಾಲಾ

    ReplyDelete