25 Apr 2011

ಏಕವ್ಯಕ್ತಿ ಯಕ್ಷಗಾನವೆಂಬ ಅದ್ಭುತ ರಸಕಾವ್ಯ

ಯಕ್ಷಗಾನ ಮಲೆನಾಡು ಮತ್ತು ಕರಾವಳಿ ಭಾಗದ ಜನರ ಅಚ್ಚುಮೆಚ್ಚಿನ ಪ್ರದರ್ಶನ ಕಲೆ. "ನರ್ತನ , ಗಾಯನ , ಮಾತುಗಾರಿಕೆ , ರಂಗಸಜ್ಜಿಕೆ , ಎಲ್ಲವನ್ನು ಒಳಗೊಂಡಂತಹ ಪರಿಪೂರ್ಣ ರಂಗ ಕಲೆಯಾದ ಯಕ್ಷಗಾನ ಒಮ್ಮೆ ನೋಡಿದವರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಹೀಗೆ ಯಕ್ಷಗಾನೇತರ ಪ್ರಾಂತ್ಯದವರಾದರೂ ಅದರೆಡೆಗೆ ಆಕರ್ಷಿತರಾಗಿ ಆ ಕಲೆಯನ್ನು ಸಂಪೂರ್ಣವಾಗಿ ಅಭ್ಯಾಸಿಸಿ ಅದರಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವವರು ನಮ್ಮ ನಾಡಿನ ಹೆಮ್ಮೆಯ ವಿದ್ವಾಂಸರಾದ ಶತಾವಧಾನಿ ಗಣೇಶ್ ಅವರು.
"ಏಕವ್ಯಕ್ತಿ ಯಕ್ಷಗಾನ " ಎಂಬುದು ಗಣೇಶರ ಪರಿಕಲ್ಪನೆಯಲ್ಲಿ ಮಂಟಪ ಪ್ರಭಾಕರ ಉಪಾಧ್ಯರ ಮೂಲಕ ಅರಳಿದ ಕೂಸು.
ಒಂದೇ ಪಾತ್ರದ ಮೂಲಕ ಒಂದೀಡೀ ಆಖ್ಯಾನವನ್ನು ಪ್ರದರ್ಶಿಸುವುದು, ಇದರ ವಿಶೇಷ.
"ಜಾನಕೀ ಜೀವನ" ಇವರ ಒಂದು ಪ್ರಯೋಗ. ರಾಮಾಯಣದ ಸೀತೆಯ ಜೀವನವನ್ನು ಆಧರಿಸಿ ಗಣೇಶರು ರಚಿಸಿದ ರೂಪಕ.
ಗಣೇಶರ ಅದ್ಭುತವಾದ ಸಾಹಿತ್ಯ ...ಮಂಟಪರ ಮನಮುಟ್ಟುವ ಅಭಿನಯ ...ಭಾಗವತರಾದ ಗಣಪತಿ ಭಟ್ ಅವರ ಕಿವಿಗಿಂಪೆನಿಸುವ ಹಾಡುಗಾರಿಕೆ ... ಹಿಮ್ಮೇಳದವರ ಸಮರ್ಥ ಬೆಂಬಲವಿರುವ ಇದು ನೋಡುಗರನ್ನು ಎರಡು ಗಂಟೆಗಳ ಕಾಲ ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತದೆ."ಇದರಲ್ಲಿ ಹಾಸ್ಯವಿಲ್ಲ.... ಅಹಾ ಎನ್ನಿಸುವಂಥಹ ನೃತ್ಯವಿಲ್ಲ.... ಇರುವುದು ಸಾಂದ್ರವಾದ ಭಾವವಷ್ಟೇ " ಪ್ರಾರಂಭದಲ್ಲೆ ನಿರೂಪಕ ಗಣೇಶರು ಹೇಳಿ , ನಮ್ಮನ್ನು ಸಿದ್ಧಗೊಳಿಸುತ್ತಾರೆ. ನಂತರ ಪ್ರಾರಂಭವಾಗುವ ಮಂಟಪರ ಅಭಿನಯದ ಮೋಡಿಯನ್ನು ಶಬ್ದಗಳಲ್ಲಿ ಕಟ್ಟಿಕೊಡುವುದು ಕಷ್ಟ.


ರಾಮಾಯಣ ಕರುಣ ರಸ ಪ್ರಧಾನವಾದ ಮಹಾಕಾವ್ಯ. ಅದರ ನಾಯಕಿ ಸೀತೆಯದಂತೂ ಕಷ್ಟಕೋಟಲೆಗಳಲ್ಲೆ ಮುಳುಗಿ, ಶೋಕವನ್ನೇ ಹಾಸಿಹೊದೆದಂತಹ ಪಾತ್ರ. ಅಂತಹ ಪಾತ್ರಕ್ಕೂ ಜೀವತುಂಬಿ ಆಕರ್ಷಕವಾಗಿಸುತ್ತಾರೆ , ಗಣೇಶ್ ಹಾಗೂ ತಂಡ.


ಮಂಟಪರ ಅಭಿನಯನಯವಂತೂ ಅದ್ಭುತ. ತರುಣಿ ಸೀತೆಯ ಉತ್ಸಾಹಭರಿತ ಭಾವಭಂಗಿ ... ಗಂಡನೊಂದಿಗೆ ತನ್ನನ್ನೂ ಕಾಡಿಗೆ ಕರೆದೊಯ್ಯಬೇಕೆನ್ನುವಾಗಿನ ಹಠ , ಹುಸಿಮುನಿಸು ...... ಕಾಡಿನಲ್ಲಿ ಗಂಡನ ಸಾನಿಧ್ಯದಲ್ಲಿ ಸ್ವರ್ಗ ಕಾಣುವಾಗಿನ ಸಂತೃಪ್ತ ಗೃಹಿಣಿಯ ಭಾವ ..... ಮಾಯಾಜಿಂಕೆಗೆ ಮನಸೋತು ಅದು ಬೇಕೆ ಬೇಕೆಂದು ಆಸೆಪಡುವ ಸ್ತ್ರೀಸಹಜ ಗುಣದ ಪ್ರದರ್ಶನ .....ರಾವಣನನ್ನು ಕೊಂದು ತನ್ನನ್ನು ಗೆದ್ದ ಗಂಡನ ಬಳಿ ನಿರೀಕ್ಷೆ , ಕಾತರಗಳಿಂದ ಬಂದರೆ , ಆಸರೆಗೆ ಬದಲಾಗಿ ಅಗ್ನಿಪರೀಕ್ಷೆಗೊಡ್ಡಿದ ಆತನ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡು , ಅದನ್ನು ಧೈರ್ಯದಿಂದ ಎದುರಿಸಿ ಗೆದ್ದುಬಂದು , ಅವನನ್ನು ಕ್ಷಮಿಸಿದ ಉದಾತ್ತಭಾವ ....... ಗರ್ಭಿಣಿಯಾದಾಗ ರುಷಿಪತ್ನಿಯರಿಗೆ ಬಾಗಿನ ನೀಡಲು ಲಕ್ಷ್ಮಣನೊಡನೆ ಕಾಡಿಗೆ ಬಂದವಳು ಅದರ ಸೌಂದರ್ಯವನ್ನು ಸವಿಯುತ್ತಾ ಹಳೆಯದಿನಗಳಿಗೆ ಜಾರಿದವಳ ಸಂತೋಷ ..... ಲಕ್ಷ್ಮಣನಿಂದ ರಾಮ ತನ್ನನ್ನು ತ್ಯಜಿಸುತ್ತಾನೆಂಬ ಸುದ್ದಿ ತಿಳಿದು ತನ್ನ ತಪ್ಪೇನೆಂದಾದರೂ ತಿಳಿಸಬಹುದಿತ್ತು ಎಂದು ಗೋಳಿಡುವಾಗಿನ ದುಖಃ .....ತನ್ನ ಗರ್ಭದಲ್ಲಿನ ಮಗುವನ್ನು ಸತ್ಪ್ರಜೆಯನ್ನಾಗಿಸುವ ಸಂಕಲ್ಪ ತೊಡುವ ಧೀರಭಾವ.....ಎಲ್ಲವುಗಳನ್ನು ಕಣ್ಣಿಗೆ ಕಟ್ಟುವಂತೆ ನಾವೇ ಆ ಪಾತ್ರವಾಗುವಂತೆ ಅಭಿನಯಿಸುತ್ತಾರೆ ಮಂಟಪರು.

ಕಲೆಯೆಡೆಗಿನ ಮಂಟಪರ ಅದಮ್ಯ ತುಡಿತ ಎಷ್ಟೆಂದರೆ ಒಂದು ರೂಪಾಯಿಗಳನ್ನೂ ತೆಗೆದುಕೊಳ್ಳದೇ ಸುಮಾರು ಸಾವಿರದ ಐವತ್ತು ಪ್ರದರ್ಶನಗಳನ್ನು ನೀಡುವಷ್ಟು !!
ಗುರು ಗಣೇಶರಂತೂ ಸಾವಿರದ ಐವತ್ತೊಂದನೇ ಪ್ರದರ್ಶನದಲ್ಲೂ , ಪ್ರಥಮ ಬಾರಿಗೆ ಮಗುವೊಂದನ್ನು ಸ್ಟೇಜಿನ ಮೇಲೆ ಬಿಟ್ಟು ಕಾತರದಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡುವ ತಾಯಿಯಂತೆ ಕುಳಿತಿದ್ದರು .
ಶಿಷ್ಯರನ್ನು ಇನ್ನಷ್ಟು ಔನ್ನತ್ಯ ಸಾಧಿಸಲು ಪ್ರೇರೇಪಿಸುವ ಇಂತಹ ಗುರುಗಳು ತುಂಬ ವಿರಳ.

ಗಣೇಶರ ಸುಂದರ ಸಾಹಿತ್ಯ ನಮ್ಮೊಳಗಿಳಿಯುವಂತೆ ಮಾಡುವ ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆ ಈ ಪ್ರದರ್ಶನದ ಇನ್ನೊಂದು ಪ್ಲಸ್ ಪಾಯಿಂಟ್.
ಸ್ಪಷ್ಟ ಉಚ್ಚಾರಣೆ , ರಾಗ ಶುದ್ಧತೆ ಇವರ ಭಾಗವತಿಕೆಯ ವಿಶೇಷ.

ಮದ್ದಳೆಯಲ್ಲಿ ಮಾಂತ್ರಿಕತೆ ತೋರಿಸುವವರು ಅನಂತಪದ್ಭನಾಭ ಪಾಟಕರು, ಕೆಲವೊಮ್ಮೆ ನಿರೂಪಕನಾಗಿಯೂ ಕಾರ್ಯ ನಿರ್ವಹಿಸುತ್ತಾರೆ.

ಕೃಷ್ಣಯಾಜಿಯವರ ಚಂಡೆ ಗಮನಸೆಳುತ್ತದೆ.

ಈ ಹಿಮ್ಮೇಳದೊಡನೆ ಕೊಳಲನ್ನೂ ಸೇರಿಸಿರುವುದು ಈ ಪ್ರಯೋಗದ ಇನ್ನೊಂದು ವಿಶೇಷ. ಮಂಟಪರ ತೀವ್ರಭಾವಾಭಿವ್ಯಕ್ತಿಗೆ ಕೊಳಲು ಉತ್ತಮ ಸಹಕಾರ ನೀಡುತ್ತದೆ .


ಏಕವ್ಯಕ್ತಿ ಯಕ್ಷಗಾನ ಮತ್ತು ಮಂಟಪರ ಬಗ್ಗೆ ಹೆಚ್ಚಿನ ವಿಷಯಗಳನ್ನು ಅವರ ವೆಬ್ ಸೈಟ್ http://mantapaupadhya.com/index.html ಇಲ್ಲಿ ತಿಳಿದುಕೊಳ್ಳಬಹುದು.

6 comments:

 1. ಒಳ್ಳೆಯ ಮಾಹಿತಿಯುಕ್ತ ಪರಿಚಯ.....ಸುಮ ಲೇಖನ ಇಷ್ಟ ಆಯ್ತು.

  ReplyDelete
 2. hey.. Mantapara halavu pradashanagalannu nodida nanage idu hosa 'parichaya'.. jaanaki yannu nodabekemba hambala huttuttide! Ganesharu, ganapathi bhattaru namma 'all time fav'!! thanks for the lovely narration Suma.

  ReplyDelete
 3. pradarshanavannu noduva avakasha nanagu sikkittu. uttama niroopanege mattu chitragalige vandanegalu.

  ananth

  ReplyDelete
 4. olleya lekhana sumakka. Nange Neenasam alli mahaabhaaratada ekavyakti nrutya roopaka nodida nenapaaytu..

  ReplyDelete