16 May 2011

ಕೊಕ್ಕರೆ ಬೆಳ್ಳೂರು

ಒಂದು ಭಾನುವಾರದ ಬೆಳಿಗ್ಗೆ ಕೊಕ್ಕರೆ ಬೆಳ್ಳೂರಿಗೆ ಹೋಗೋಣವೆಂದು ಹೊರಟೆವು. ಮೈಸೂರು ರಸ್ತೆ ಯಥಾಪ್ರಕಾರ ವಾಹನಗಳಿಂದ ತುಂಬಿ ತುಳುಕುತ್ತಿತ್ತು. ಅಂತೂ ಮದ್ದೂರಿನ ಹತ್ತಿರವಿದ್ದಾಗ ಎಡಕ್ಕೆ " ಕೊಕ್ಕರೆ ಬೆಳ್ಳೂರು - ೧೨ ಕಿಮಿ" ಎಂಬ ನಾಮಫಲಕವಿದ್ದ ರಸ್ತೆ ತಿರುಗಿದೆವು. ಚಿಕ್ಕ ರಸ್ತೆಯಲ್ಲಿ ಸುಮಾರು ಹೊತ್ತು ಪ್ರಯಾಣಿಸಿದರೂ ಕೊಕ್ಕರೆ ಬೆಳ್ಳೂರು ಸಿಗಲಿಲ್ಲ. ಕೊನೆಗೊಂದು ಊರಲ್ಲಿ ನಿಲ್ಲಿಸಿ ಕೇಳಿದಾಗ ಮುಂದೆ ಬಂದುಬಿಟ್ಟಿದ್ದೀರಿ , ಕೊಕ್ಕರೆಬೆಳ್ಳೂರು ನಾಲ್ಕು ಕಿಮೀ ಹಿಂದೇ ಇದೆ ಎಂದರು ! ವಾಪಾಸ್ ಅದೇ ದಾರಿಯಲ್ಲಿ ಬಂದಾಗ ಕಾಣಿಸಿತ್ತು ಊರು. ಆದರೂ ಯಾವುದೇ ಕೆರೆ , ನದಿಗಳ ಸುಳಿವಿಲ್ಲ ....ಕೊಕ್ಕರೆ ನೀರಿನಲ್ಲೇ ಅಲ್ಲವೆ ಇರುವುದು?
ಅನುಮಾನ ಪರಿಹಾರಕ್ಕೆಂದು ಗೂಡಂಗಡಿಯಲ್ಲಿ ಕುಳಿತಿದ್ದ ನಾಲ್ವರು ಅಜ್ಜಂದಿರಲ್ಲಿ ಕೇಳಿದೆವು. "ಹೂನ್ರವ್ವಾ ಇದೇಯ ಕೊಕ್ಕರೆ ಬೆಳ್ಳೂರು ... ಇಲ್ಲಿ ಯಾವ ಕೆರೆ, ನದಿ ಇಲ್ಲ . ಮ್ಯಾಲೆ ಮರಗಳನ್ನು ನೋಡಿ ಅಲ್ಲೇ ಗೂಡುಕಟ್ಟಿಕೊಂಡು ಇರ್ತವೆ ಹಕ್ಕಿಗಳು . ಊರೊಳಗೆ ಹೋಗಿ ....ಬೇಕಾದಷ್ಟು ಹಕ್ಕಿಗಳೈತೆ ...ಈ ಊರು ಹುಟ್ಟೋಕು ಮೊದಲಿಂದ ಇವು ಇಲ್ಲಿಗೆ ಬರ್ತಿದ್ವಂತೆ....ಪ್ರತೀ ವರ್ಷ ತೌರಿಗೆ ಬರೋ ಹೆಣ್ಣುಮಗಳಂಗೆ ಬತ್ತವೆ ... ಮೊಟ್ಟೆಯಿಟ್ಟು ಮರಿ ಮಾಡಿಕೊಂಡು ಹೋಗ್ತವೆ .... ಅವುಗಳ ಕಚಪಿಚ ಸದ್ದು , ಹಿಕ್ಕೆಗಳ ವಾಸನೆ ಎಲ್ಲ ನಮ್ಗೆ ಅಭ್ಯಾಸವಾಗೈತೆ "ಮುಂದುವರಿದಂತೆ ಹಕ್ಕಿಗಳ ಕಲರವ ಹೆಚ್ಚಾಗಿ ಕೇಳತೊಡಗಿತು. ಊರಿನ ಮರಗಳ ಮೇಲೆಲ್ಲ ಹಕ್ಕಿಗಳ ಹಿಂಡು! ಮನೆಯಂಗಳದ ಚಿಕ್ಕ ಪುಟ್ಟ ಮರಗಳಲ್ಲೂ ದೊಡ್ಡ ಗಾತ್ರದ ಐದಾರು ಹಕ್ಕಿಗಳು ಆರಾಮವಾಗಿ ಕುಳಿತು ಮರಿಗಳೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದವು.
ಪೇಂಟೆಡ್ ಸ್ಟಾರ್ಕ್ (ರಂಗುಕೊಕ್ಕರೆ) , ಪೆಲಿಕನ್ ( ಹೆಜ್ಜಾರ್ಲೆ ) ಎಂಬ ಎರಡು ವಿಧದ ನೀರುಹಕ್ಕಿಗಳು ಇಲ್ಲಿ ಹೆಚ್ಚಾಗಿವೆ.
ಹೆಚ್ಚಾಗಿ ಜನವಸತಿ ಇಲ್ಲದ ನೀರಿನಿಂದ ಸುತ್ತುವರೆದ ಪುಟ್ಟ ದ್ವೀಪಗಳಲ್ಲಿರುವ ಮರಗಳಲ್ಲಿ , ಗೂಡು ಕಟ್ಟಿ ವಾಸಿಸುವ ಈ ಹಕ್ಕಿಗಳು , ಕೊಕ್ಕರೆ ಬೆಳ್ಳೂರಿನಲ್ಲಿ ಮಾತ್ರ ಊರಿನ ನಡುವೆಯೆ ಮನೆಯಂಗಳದ ಮರಗಳಲ್ಲೇ ಪ್ರತೀ ವರ್ಷ ಬಂದು ಗೂಡು ಕಟ್ಟುತ್ತವೆ! ಇಲ್ಲಿಯ ಜನರಿಗೂ ಈ ಹಕ್ಕಿಗಳ ಜೊತೆ ಸಹಜೀವನ ಅಭ್ಯಾಸವಾಗಿದೆ. ಅಲ್ಲದೇ ಅವುಗಳ ವಿಸರ್ಜನೆಯಿಂದ ಸುತ್ತಮುತ್ತಲ ಭೂಮಿ ಫಲವತ್ತಾಗುತ್ತದೆ. ಅವುಗಳ ಕಲರವದಲ್ಲೆ ಸಂತೋಷಪಡುವ ಈ ಊರಿನ ಜನರ ಸಹಬಾಳ್ವೆ ನಿಜಕ್ಕೂ ಮಾದರಿ.


ಪೈಂಟೆಡ್ ಸ್ಟಾರ್ಕ್ ಅಥವಾ ರಂಗು ಕೊಕ್ಕರೆಯೆಂಬ ದೊಡ್ಡ ಗಾತ್ರದ ಈ ಹಕ್ಕಿ ದಕ್ಷಿಣ ಮತ್ತು ಪೂರ್ವ ಏಷ್ಯದಲ್ಲಿ ಕಂಡುಬರುವ ಹಕ್ಕಿ. ಉದ್ದ ಕೊಕ್ಕು , ಬಿಳಿ ಬಣ್ಣದ ದೇಹ , ರೆಕ್ಕೆಯ ತುದಿ ಪೈಂಟ್ ಮಾಡಿದ್ದಾರೋ ಎಂಬಂತೆ ಕಾಣುವುದರಿಂದ ಈ ಹೆಸರಿದೆ. ಗುಂಪಾಗಿ ವಾಸಿಸುತ್ತವೆ. ಮೀನು ಮುಖ್ಯ ಆಹಾರ. ಕೆರೆ ನದಿಗಳ ಕೆಸರು ಮಣ್ಣಿನಲ್ಲಿ ನಿಂತು ವಿಶಿಷ್ಟವಾದ ಕೊಕ್ಕಿನಿಂದ ಮೀನು ಹಿಡಿಯುತ್ತದೆ. ರಗಳ ಮೇಲೆ ಗೂಡು ಕಟ್ಟುತ್ತವೆ . ಒಮ್ಮೆ ೨ರಿಂದ ೫ ಮೊಟ್ಟೆಗಳನ್ನಿಡುತ್ತದೆ. ಉಗ್ರ ಬಿಸಿಲಿನಿಂದ ತನ್ನ ಮರಿಗಳನ್ನು ರಕ್ಷಿಸಲು ರೆಕ್ಕೆಯನ್ನು ಬಿಚ್ಚಿ ಗೂಡಿಗೆ ಮರೆಮಾಡುತ್ತವೆ.


ಪೆಲಿಕನ್ ಅಥವಾ ಹೆಜ್ಜಾರ್ಲೆ ಕೂಡ ಭಾರತ ,
ಶ್ರೀಲಂಕಾ , ಕಾಂಬೋಡಿಯಾಗಳಲ್ಲಿ ಕಂಡುಬರುವ ದೊಡ್ಡ ಗಾತ್ರದ ಪಕ್ಷಿ. ಕೊಕ್ಕಿನ ಕೆಳಗಿರುವ ಚೀಲದಂತಹ ರಚನೆಯಿಂದ ನೀರನ್ನು ಸೋಸಿ ತನ್ನ ಆಹಾರವಾದ ಮೀನನ್ನು ಹಿಡಿದು ತಿನ್ನುತ್ತದೆ. ಹೆಚ್ಚಾಗಿ ಇತರ ನೀರು ಹಕ್ಕಿಗಳ ಜೊತೆ ಮರಗಳಲ್ಲಿ ಗೂಡು ಕಟ್ಟುತ್ತದೆ.
{"ಟೀಚರ್ ಇಲ್ಲಿ ಬನ್ನಿ ಟೀಚರ್ .... ಇಲ್ಲಿ ಹಕ್ಕಿ , ಮೊಟ್ಟೆ , ಮರಿ ಎಲ್ಲ ಐತೆ ತೋರಿಸ್ತೀನಿ ಬನ್ನಿ " ಹತ್ತು ಹನ್ನೊಂದು ವರ್ಷದವರಿರಬಹುದಾದ ಆ ಪೋರರು ಕರೆಯುತ್ತಿದ್ದರು. ಹತ್ತಿರ ಹೋಗಿ ನೋಡಿದಾಗ ಮನೆಯಂಗಳದ ಹುಣಸೇ ಮರವೊಂದರಲ್ಲಿ ಹತ್ತಿಪ್ಪತ್ತು ದೊಡ್ಡ ಹಕ್ಕಿಗಳು ಮತ್ತು ಅವುಗಳ ಗೂಡು ಕಾಣಿಸಿತು. ತಮ್ಮ ಮನೆಯಂಗಳದ ಈ ಅತಿಥಿಗಳ ಬಗ್ಗೆ ಅನೇಕ ವಿಷಯಗಳನ್ನು ತಿಳಿದುಕೊಂಡಿರುವ ಆ ಚಿಣ್ಣರು ಆ ಹಕ್ಕಿಗಳ ಹೆಸರು , ಅವುಗಳ ಜೀವನ ವಿಧಾನ ಎಲ್ಲ ವಿವರಿಸಿದ್ದನ್ನು ಕಂಡು ಆಶ್ಚರ್ಯವಾಯಿತು . " ಇವು ಡಿಸೆಂಬರ್ ಹೊತ್ತಿಗೆ ನಮ್ಮೂರಿಗೆ ಗುಂಪಾಗಿ ಬತ್ತವೆ ... ಸುತ್ತಮುತ್ತಲಿನ ಹೊಲಗಳಿಂದ ಒಣ ಹುಲ್ಲು, ಕಡ್ಡಿಗಳನ್ನು ತಂದು ಗೂಡು ಕಟ್ತವೆ. ಪ್ರತೀ ವರ್ಷನೂ ಹೊಸದಾಗೇ ಗೂಡು ಕಟ್ತವೆ. ಆಮ್ಯಾಕೆ ನಾಕೈದು ಮೊಟ್ಟೆ ಇಡತವೆ..... ಅವು ಮೀನು ಮಾತ್ರ ತಿಂತವೆ .....ಸುತ್ತಮುತ್ತಲ ಕೆರೆ , ಕಾವೇರಿ ನದಿಯಲ್ಲಿ ಮೀನು ಹಿಡಿದು ತಿಂತವೆ. ಹೆಣ್ಣು ಹಕ್ಕಿ ಕಾವು ಕೊಡುವಾಗ ಗಂಡು ತಿನ್ನಕ್ಕೆ ಹೋಯ್ತದೆ.... ಹೆಣ್ಣು ತಿನ್ನಕ್ಕೆ ಹೋಯ್ತು ಅಂದರೆ ಗಂಡು ಕೂತು ಕಾವು ಕೊಡ್ತವೆ....ಮರಿಗಳಿಗೂ ಸಣ್ಣ ಮೀನು ಹಿಡಿದು ತಂಡು ಕೊಡ್ತವೆ. ಮರಿ ಬೆಳೆದು ದೊಡ್ಡಾಗ್ತಿದ್ದಂಗೆ ಅವನ್ನೂ ಕರೆದುಕೊಂಡು ಹಾರಿಹೋಗಿಬಿಡ್ತವೆ .ಅಕಸ್ಮಾತ್ ಮರಿಗಳೇನಾದ್ರು ಕೆಳಿಕ್ಕೆ ಬಿದ್ರೆ ಅವು ನೋಡಕಿಲ್ಲ. ಅಂತಹ ಮರಿಗಳನ್ನು ಅಲ್ಲಿ ಕಾಣ್ತದಲ್ಲ ಆ ಬೇಲಿಯೊಳಗೆ ಫಾರೆಸ್ಟವ್ರು ಸಾಕ್ತಾರೆ." ಚಿಣ್ಣನೊಬ್ಬ ವಿವರಿಸಿದ. ಇಲ್ಲಿ ಬನ್ನಿ ಫೋಟೊ ಚೆನ್ನಾಗಿ ಬತ್ತದೆ ಅಂತ ಒಂದು ಹಕ್ಕಿ ತೋರಿಸಿದ. ನಾವು ಆ ಮರದ ಬಳಿಯಿಂದ ಹೊರಡುತ್ತಿದ್ದಂತೆ "ಟೀಚರ್ ಪೆನ್ನಿದ್ರೆ ಕೊಡ್ತೀರಾ?" ಎಂದ . ಪಾಪ ಹುಡುಗ ಪೆನ್ನು ಕೇಳ್ತಿದ್ದಾನಲ್ಲ ಅಂತ ಪೆನ್ನಿನ ಜೊತೆ ಹತ್ತು ರೂ ಸೇರಿಸಿ ಕೊಟ್ಟೆ. ಕಣ್ಣರಳಿಸಿದ ಹುಡುಗ ಓಡಿದ.

ಹೊರಡಲನುವಾಗುವಾಗ ಇನ್ನಷ್ಟು ಹುಡುಗರು ನಮ್ಮ ಬಳಿ ಪೆನ್ನು ಕೇಳಿದ್ದರು ! ಅವರನ್ನೆಲ್ಲಾ ಕರೆದುಕೊಂಡು ಅಂಗಡಿಗೆ ಹೊರಟ ಭಾವನವರಿಗೆ ಅಂಗಡಿಯ ಬಳಿ ಹೋಗುತ್ತಿದ್ದಂತೆ ನಾಲ್ಕಾರಿದ್ದ ಹುಡುಗರ ಸಂಖ್ಯೆ ಹತ್ತಾರಾಗಿದ್ದು ಕಂಡಿತಂತೆ .... ಹೋಗಲಿ ಪಾಪ ಎಂದು ಅಂಗಡಿಯವನಿಗೆ ಎಲ್ಲರಿಗೂ ಒಂದು ಪೆನ್ನು ಕೊಡಲು ಹೇಳಿದಾಗ ಆ ಅಂಗಡಿಯಾತ "ಈ ಮಕ್ಕಳದ್ದು ದಿನಾ ಇದೇ ಗೋಳು ಸರ್ , ಬಂದ ಟೂರಿಸ್ಟ್ ಬಳಿಯೆಲ್ಲಾ ಪೆನ್ನು ಕೇಳ್ತಾರೆ " ಎಂದನಂತೆ !
ಈ ವಯಸ್ಸಿಗೇ ಇಂತಹ ಚಾಲೂಕು ಬುದ್ಧಿ ಕಲಿತಿರುವ ಆ ಮಕ್ಕಳನ್ನು ಕಂಡು ನಗಬೇಕೋ ಸಿಟ್ಟಾಗಬೇಕೋ ತಿಳಿಯಲಿಲ್ಲ. }

7 comments:

 1. This comment has been removed by the author.

  ReplyDelete
 2. nice article...makkaLa bagge tiLidu ascharyavaayitu

  ReplyDelete
 3. nice one ! i wonder kokkare belluru only village without tank. i hada similara understanding earlier.

  ReplyDelete
 4. last time mysore ge hogiddaaga illige hogalaagalilla... nimma lekhana nODi enthahaddanna miss maaDikonDe enisitu...
  next time khanDita hOguttene...

  ReplyDelete
 5. Nice snaps and article...i am wondering to see this place..
  @Suguna madam:This is the common thing in almost all the tourist place,that some children will come and ask for pen or anything..

  ReplyDelete
 6. ಮೇಡಮ್,
  ಕೊಕ್ಕರೆ ಬೆಳ್ಳೂರಿಗೆ ನಾನು ಹತ್ತಾರು ಬಾರಿ ಬೇಟಿಕೊಟ್ಟಿದ್ದೇನೆ. ನೀವು ತೆಗೆದ ಫೋಟೊಗಳು ಚೆನ್ನಾಗಿವೆ. ಮಕ್ಕಳ ಬಗ್ಗೆ ಬರೆದ ವಿಚಾರ ಚೆನ್ನಾಗಿದೆ.

  ReplyDelete
 7. ಸುಂದರ ಚಿತ್ರಗಳೊಂದಿಗೆ ಮಾಹಿತಿಪೂರ್ಣ ಲೇಖನ...

  ReplyDelete