10 Apr 2013

ಯುಗಾದಿ


ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ....ಬೆಳಗಿನ ವಾಕಿಂಗ್ ಹೋಗುತ್ತಿರುವಾಗ ದಾರಿಯಲ್ಲಿ ಸಿಗುವ ಪುಟ್ಟ ಕ್ಯಾಂಟೀನ್  ಹೊರಗೆ ಪಾತ್ರೆ ತೊಳೆಯುತ್ತಾ ಒಬ್ಬ ಹಾಡುತ್ತಿದ್ದ .  ಆ ಹಾಡು ಒಮ್ಮೆಲೆ ಇಪ್ಪತ್ತು ವರ್ಷ  ಹಿಂದಿನ ನಮ್ಮ ಬಾಲ್ಯದ ದಿನಗಳ ನಮ್ಮೂರಿನ ಯುಗಾದಿ ಹಬ್ಬಕ್ಕೆ ಕೊಂಡೊಯ್ದುಬಿಟ್ಟಿತ್ತು.

   ಗಣಪತಿ ಹಬ್ಬದಷ್ಟು ಆಸಕ್ತಿ, ಲವಲವಿಕೆಯಾಗಲೀ , ದೀಪಾವಳಿ ಹಬ್ಬದ ಸಂಭ್ರಮ ಆಚರಣೆಗಳಾಗಲೀ ಇಲ್ಲದ ಸರಳ ಹಬ್ಬವಾಗಿತ್ತು ನಮಗೆ ಈ ಯುಗಾದಿ  . ಹೊಸ ವರ್ಷದ ಪ್ರಾರಂಭ ಈ ದಿನ ಅಂತ ದೊಡ್ಡವರೆಲ್ಲ ಹೇಳಿದರೂ ನಮಗೆ ಇದು ಹೇಗೆ ಹೊಸ ವರ್ಷವಾಗತ್ತೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ಜನವರಿಯಲ್ಲಿ  ಹೊಸ ವರ್ಷ ಪ್ರಾರಂಭವಾಗಿರುವಾಗ  ಮತ್ತೆ ಇದೇನು ಎಂಬ ಗೊಂದಲ.  ಸ್ಕೂಲಿನ ದೃಷ್ಟಿಯಲ್ಲಿ ನೋಡಿದರೂ ಜೂನ್ ಹೊಸವರ್ಷದ ಪ್ರಾರಂಭವಾಗಬೇಕಿತ್ತು ಎಂಬುದು ನನ್ನ ವಾದವಾಗಿತ್ತು.

ಕೆಲವೊಮ್ಮೆ ಪರೀಕ್ಷೆಗಳು ಮುಗಿದ ಮೇಲೆ , ಕೆಲವೊಮ್ಮೆ ಇನ್ನೂ ಪರೀಕ್ಷೆಗಳು ನಡೆಯುತ್ತಿರುವಾಗಲೆ ಬರುತ್ತಿದ್ದ ಈ ಹಬ್ಬ ನನಗಂತೂ ಹೆಚ್ಚು ಇಷ್ಟವಾಗುತ್ತಿರಲಿಲ್ಲ. ಅದಕ್ಕೆ ಕಾರಣ ಹಬ್ಬದ ದಿನ ಬೆಳಿಗ್ಗೆ ತಲೆಗೆ ಸ್ನಾನ ಮಾಡಿಕೊಂಡು ಬರುತ್ತಿದ್ದಂತೆ ಅಮ್ಮ ಕೊಡುತ್ತಿದ್ದ ಬೇವು-ಬೆಲ್ಲದ ಮಿಶ್ರಣವೇ ...ಆದರೆ ಇದನ್ನು ನನ್ನ ಮಗಳ ಎದುರು ಮಾತ್ರ ನಾನಿದುವರೆಗೂ ಹೇಳಿಲ್ಲ . ಹೇಳಿದರೆ ನಾನು ಕೊಡುವ ಬೇವು-ಬೆಲ್ಲವನ್ನು ತಿನ್ನಲು ನಾನಾ ಸರ್ಕಸ್ ಮಾಡುವ ಅವಳು ಸುಮ್ಮನಿದ್ದಾಳೆಯೆ ?

ಈ ಹಬ್ಬಕ್ಕೆ ಇದ್ದ ಒಂದೇ ಆಕರ್ಷಣೆಯೆಂದರೆ ಹಬ್ಬಕ್ಕೆಂದು ಅಪ್ಪ ತರುತ್ತಿದ್ದ ಹೊಸ ಬಟ್ಟೆ ಮತ್ತು ಅದನ್ನು ಹಾಕಿಕೊಂಡು ಗೆಳತಿಯರೆದುರು ಪ್ರದರ್ಶನ ಮಾಡಲು ಸಾಯಂಕಾಲ ಊರ ದೇವಸ್ಥಾನಕ್ಕೆ ಹೋಗುವ ಸಂಭ್ರಮ .

ಯುಗಾದಿ ಹಬ್ಬದ ದಿನ ಸಾಯಂಕಾಲ ದೇವಸ್ಥಾನದಲ್ಲಿ  ನಮ್ಮೂರಿನ ಏಕೈಕ ಜ್ಯೋತಿಷಿಯಾಗಿದ್ದ ನೀಲಕಂಠಜ್ಜನ ಪಂಚಾಂಗಶ್ರವಣ ಕಾರ್ಯಕ್ರಮ ಇರುತ್ತಿತ್ತು. ಜೋಳಿಗೆಯಂತಹ ತನ್ನ ಚೀಲದಿಂದ ಹೊಸ ಪಂಚಾಂಗ ತೆಗೆದು ದಪ್ಪ ಗಾಜಿನ ಕನ್ನಡಕವನ್ನು ಮೂಗಿನ ಮೇಲೆ ಏರಿಸಿ ದೊಡ್ದ ಧ್ವನಿಯಲ್ಲಿ ಆತ ಪಂಚಾಂಗ ಓದುತ್ತಿದ್ದರೆ ಅದೇನೆಂದು ಸ್ವಲ್ಪವೂ ಅರ್ಥವಾಗದೆ ನಿದ್ರೆ ಬಂದಂತಾಗುತ್ತಿತ್ತು ನಮಗೆ. ಹೇಗೋ ಅಂತೂ ಅದು ಮುಗಿದ ಮೇಲೆ  ಚಂದ್ರನನ್ನು ನೋಡಲು ಹೋಗುವ ಕಾರ್ಯಕ್ರಮವಿತ್ತು .
ಕಾಣಿಸುವ ದಿನಗಳಲ್ಲಿ ನಮ್ಮ ನಮ್ಮ ಮನೆಯಂಗಳದಲ್ಲೇ ನಿಂತು ತಲೆ ಎತ್ತಿದರೂ ಕಾಣಿಸುವ ಚಂದ್ರನನ್ನು ನೋಡಲು ಊರ ತುದಿಯವರೆಗೂ ಹೋಗುತ್ತಿದ್ದೆವು !!  ಹಬ್ಬಕ್ಕೆಂದು ಹೊಸ ಬಟ್ಟೆ ಧರಿಸಿ ಬಗೆಬಗೆಯ ಜಡೆ ಹೆಣೆದು , ಆ ಜಡೆಗೆ ತರತರದಲ್ಲಿ ಪೋಣಿಸಿದ   ಹೂವು ಮುಡಿದು ತಯಾರಾಗಿದ್ದನ್ನು ನಾಲ್ಕು ಜನ ನೋಡಬೇಡವೇ? ಅದಕ್ಕೊಂದು ನೆಪ . ಆದರೆ ಆ ನೆಪಕ್ಕೊಂದು ಕತೆಯೂ ಇದ್ದದ್ದು ನಮ್ಮ ಸಂಸ್ಕೃತಿಯ ಹಿರಿಮೆ.

 ಯುಗಾದಿಯ ದಿನ ಚಂದ್ರನನ್ನು ಏಕೆ ನೋಡಬೇಕು ? ಅದಕ್ಕೊಂದು ಕತೆ ಹೇಳುತ್ತಿದ್ದರು ಅಜ್ಜ.
ಭಾದ್ರಪದ ಮಾಸದ ಶುಕ್ಲ ಚತುರ್ಥಿಯಂದು ತನ್ನ ಹುಟ್ಟುಹಬ್ಬದ ದಿನ ನಮ್ಮ ಗಣಪ ಭಕ್ತರ ಪ್ರಾರ್ಥನೆಗೊಲಿದು ಭೂಲೋಕಕ್ಕೆ ಬಂದಿದ್ದ. ಭೂಲೋಕದಲ್ಲಿ ಗಣಪನಿಗೆ ಅಸಂಖ್ಯಾತ ಭಕ್ತರು ..ಎಲ್ಲರೂ ಮೋದಕ , ಉಂಡೆ , ಕಡುಬು , ಚಕ್ಕುಲಿ ಎಂದು ಅವನಿಗೆ ನೇವೇದ್ಯ ಮಾಡುವವರೇ ...ಹೇಳಿಕೇಳಿ ಡೊಳ್ಳು ಹೊಟ್ಟೆ ಅವನದು ...ಭಕ್ತರು ಕೊಟ್ಟದ್ದನ್ನೆಲ್ಲ ತಿಂದು ಇನ್ನಷ್ಟು ಡುಮ್ಮಗಾಯಿತು ಅವನ ಹೊಟ್ಟೆ . ಹಬ್ಬವನ್ನೆಲ್ಲ ಮುಗಿಸಿ  ತನ್ನ ವಾಹನ ಇಲಿಯ ಮೇಲೆ ಕುಳಿತು ಗಣಪ ವಾಪಾಸ್ ಹೊರುಡುವಾಗ   ಆಕಾಶದಲ್ಲಿ ಚಂದ್ರ ಉದಯಿಸಿದ್ದ . ಸ್ವಲ್ಪ ದೂರ ಹೋಗುತ್ತಿದ್ದಂತೆ  ಅಲ್ಲೇ ದಾರಿಯ ಪಕ್ಕದ ಹುತ್ತದಲ್ಲಿ ಇದ್ದ ಸರ್ಪವೊಂದು ಗಣಪನ ಈ ವಾಹನವನ್ನು ನೋಡಿತು . ಮೊದಲೇ ಹಸಿವಾಗಿದ್ದ ಅದು ಸರ್ರನೆ ಹೊರಬಂದು ಇಲಿಯನ್ನು ಹಿಂಬಾಲಿಸಿತು. ಅದನ್ನು ನೋಡಿದ ಇಲಿ ಹೆದರಿ ಒಮ್ಮೆಲೆ ಟಣ್ಣನೆ ನೆಗೆದುಬಿಟ್ಟಿತು ...ಮೇಲೆ ಕುಳಿತ ಗಣಪ ಬಿದ್ದುಬಿಟ್ಟ . ಬಿದ್ದ ರಭಸಕ್ಕೆ ಮೊದಲೇ ತುಂಬಿ ಬಿರಿವಂತಿದ್ದ ಆತನ ಹೊಟ್ಟೆ ಒಡೆದುಹೋಯಿತು. ಗಣಪ ತಲೆಕೆಡಿಸಿಕೊಳ್ಳಲಿಲ್ಲ ಅಲ್ಲೇ ಹರಿಯುತ್ತಿದ್ದ ಆ ಸರ್ಪವನ್ನು ಹಿಡಿದು ಹಗ್ಗದಂತೆ ತನ್ನ ಹೊಟ್ಟೆಯ ಸುತ್ತ ಬಿಗಿದ . ಇದನ್ನೆಲ್ಲ ಮೇಲಿನಿಂದ ನೋಡುತ್ತಿದ್ದ ಚಂದ್ರನಿಗೆ ನಗು ತಡೆಯಾಗಲಿಲ್ಲ . ಆತ ಜೋರಾಗಿ ನಕ್ಕುಬಿಟ್ಟ. ಹೀಗೆ ಅವ ನಕ್ಕದ್ದನ್ನು ನೋಡಿ ಗಣಪನಿಗೆ ಭಯಂಕರ ಸಿಟ್ಟು ಬಂತು . "ನೀನು ತುಂಬ ಸುಂದರನೆಂಬ ಜಂಬ ಅಲ್ಲವೆ ನಿನಗೆ , ಇನ್ಯಾರೂ   ನಿನ್ನನ್ನು ನೋಡದಂತಾಗಲಿ ..ಯಾರಾದರೂ ನಿನ್ನನ್ನು ನೋಡಿದರೆ ಅವರಿಗೆ ಕೆಟ್ಟ ಅಪವಾದ ಸುತ್ತಿಕೊಳ್ಳಲಿ" ಎಂದು ಚಂದ್ರನಿಗೆ ಶಾಪಕೊಟ್ಟುಬಿಟ್ಟ ಗಣಪ . ಈಗ ಚಂದ್ರನಿಗೆ ಪಶ್ಚಾತ್ತಾಪವಾಯಿತು. ಯಾರೂ ತನ್ನನ್ನು ನೋಡದೇ ಇದ್ದರೆ ತನ್ನ ಸೌಂದರ್ಯಕ್ಕೆ ಬೆಲೆಯೇನು? ...ಎಷ್ಟೋ ಅಮ್ಮಂದಿರು ಮಕ್ಕಳಿಗೆ ತನ್ನನ್ನು ತೋರಿಸುತ್ತಾ ಊಟ ಮಾಡಿಸುವಾಗ ಆ ಪುಟ್ಟ ಮುದ್ದು ಮಕ್ಕಳು ತನ್ನನ್ನು ಚಂದಮಾಮ ಬಾ ಎಂದು ಕರೆಯುತ್ತಾ ತುತ್ತು ನುಂಗುವ ದೃಶ್ಯ ಇನ್ನು ಮುಂದೆ ಕಾಣದೇ ಇದ್ದರೆ .... ಕವಿಗಳು ತನ್ನನ್ನು ನೋಡದೇ ಹೇಗೆ ತಾನೆ ಸೌಂದರ್ಯಕ್ಕೆ ಉಪಮೆ ಕೊಟ್ಟಾರು? ...ಚಂದ್ರನಿಗೆ ಅಳು ಬಂದುಬಿಟ್ಟಿತು . ಅವನು ಅಳುತ್ತಲೇ ಗಣಪನನ್ನು ತನ್ನ ತಪ್ಪನ್ನು ಕ್ಷಮಿಸೆಂದು ಬೇಡಿಕೊಂಡ ...ಚಂದ್ರನ ಕಣ್ಣೀರನ್ನು ನೋಡಿದ ಗಣಪನಿಗೂ ಕನಿಕರವಾಯಿತು. " ಶಾಪವನ್ನು ಒಮ್ಮೆ ಕೊಟ್ಟ ಮೇಲೆ ವಾಪಾಸ್ ಪಡೆಯಲು ಸಾದ್ಯವಿಲ್ಲ . ಆದರೆ ಅದರ ಪರಿಣಾಮವನ್ನು ಕಡಿಮೆ ಮಾಡಬಹುದು . ಭಾದ್ರಪದ ಶುಕ್ಲ ಚೌತಿಯಂದು ಮಾತ್ರ ನಿನ್ನನ್ನು ಯಾರು ನೋಡಿದರೂ ಅವರಿಗೆ ಅಪವಾದ ಸುತ್ತಿಕೊಳ್ಳುತ್ತದೆ. ಆದರೆ ಅವರು ಯುಗಾದಿಯ ದಿನ ನಿನ್ನನ್ನು ನೋಡಿದರೆ ಅವರಿಗೆ ಸುತ್ತಿಕೊಂಡ ಅಪವಾದ ಪರಿಹಾರವಾಗುತ್ತದೆ " ಎಂದು ಹೇಳಿದ ಗಣಪ. ಆದ್ದರಿಂದಲೇ ಚೌತಿ ಹಬ್ಬದ ದಿನ ಚಂದ್ರನನ್ನು ನೋಡಬಾರದು ...ಅಕಸ್ಮಾತ್ ನೋಡಿದರೆ ಯುಗಾದಿಯಂದು ಚಂದ್ರನನ್ನು ನೋಡಲೇ ಬೇಕು .

ಇಂತಹ ಕತೆಗಳನ್ನು ಹೆಚ್ಚು ತರ್ಕಕ್ಕೆ ಒಡ್ಡದೆ ಸುಮ್ಮನೇ ಕೇಳಿ ಖುಷಿಪಡಲು ಎಷ್ಟು ಚೆನ್ನವಲ್ಲವೇ.  ಹೀಗೆ ಯುಗಾದಿಯ ದಿನ ಚಂದ್ರನನ್ನು ಹುಡುಕಿ ಎಲ್ಲೋ ಒಮ್ಮೆಮ್ಮೆ ಕಂಡರೆ ಖುಷಿಪಟ್ಟು ಮನೆಗೆ ವಾಪಾಸ್ಸಾಗುತ್ತಿದ್ದೆವು . 

ಈಗಿನ ಮಕ್ಕಳು ಚಂದ್ರನನ್ನು ನೋಡಲು ಹೋಗೋಣವಾ ಅಂತ ಕೇಳಿದರೆ ...ಯಾಕೆ ಹೋಗಬೇಕು? ಇವತ್ತಲ್ಲದ್ದಿದ್ದರೆ ನಾಳೆ ಇಲ್ಲೇ ಕಾಣಿಸುತ್ತಾನೆ ಬಿಡು ಎನ್ನುತ್ತವೆ . ನಾವು ಹಬ್ಬವನ್ನು ಹಾಗೆ ಎಂಜಾಯ್ ಮಾಡ್ತಿದ್ದೆವು ಹೀಗೆ ಎಂಜಾಯ್ ಮಾಡ್ತಿದ್ದೆವು ಎಂದರೆ ನಾವು ಎಂಜಾಯ್ ಮಾಡ್ತಿಲ್ಲ ಎಂದು ಯಾರು ಹೇಳಿದ್ದು ನಿಮಗೆ ಅಂತ ಕೇಳುತ್ತವೆ . ನಮಗೆ ಹಬ್ಬದಲ್ಲಿ ಮಾತ್ರ ಹೊಸಬಟ್ಟೆ ತರುತ್ತಿದ್ದುದರಿಂದ ಆ ದಿನ ಅದನ್ನು ಹಾಕಿಕೊಂಡು ಸಂಭ್ರಮ ಪಡುತ್ತಿದ್ದೆವು. ಈಗಿನ ಮಕ್ಕಳಿಗೆ ಬೇಕೆಂದಾಗಲೆಲ್ಲ ಬಟ್ಟೆ ಕೊಡಿಸುತ್ತೇವೆ , ಬೇಕಾದ ತಿಂಡಿ ಬೇಕೆಂದಾಗ ಮಾಡಿ ಹಾಕುವುದರಿಂದ ಅದರ ಬೆಲೆಯೂ ತಿಳಿಯುವುದಿಲ್ಲ . ಇದನ್ನೆಲ್ಲ ಯೋಚಿಸಿದರೆ ಹಬ್ಬಗಳ ಸಂಭ್ರಮವೇ ಕಡಿಮೆಯಾಗಿಬಿಟ್ಟಿದೆಯೆಂದು ಅನ್ನಿಸದಿರದು. ಆದರೂ ಬದಲಾವಣೆ ಜಗದ ನಿಯಮ .  ನಮ್ಮ ಹಿಂದಿನ ತಲೆಮಾರಿನವರು ತಮ್ಮ ಕಾಲದ ವೈಭವವೇ ಹೆಚ್ಚೆಂದು ಹೇಳುತ್ತಾರೆ ..ನಾವು ನಮ್ಮ ಕಾಲದ್ದು.....ಹೀಗೆ ಮುಂದಿನ ತಲೆಮಾರಿನವರಿಗೆ ಹೇಳಿಕೊಳ್ಳಲು ಅವರದ್ದೇ ಆದ ಇನ್ನಾವುದೋ ಅನುಭವಗಳಿರುತ್ತವೆ ಅಷ್ಟೇ .
 ಎಲ್ಲರಿಗೂ ಯುಗಾದಿಯ ಶುಭಾಶಯಗಳು.


3 comments:

 1. ಪೌರಾಣಿಕ ಹಿನ್ನೆಲೆಯನ್ನು ಕೊಡುತ್ತಲೇ, ಹಬ್ಬದ ಸುಂದರವಾತವರಣಕ್ಕೆ ನಮ್ಮನ್ನು ಕೊಂಡೊಯ್ದ ನಿಮ್ಮ ಲೇಖನ ಸೂಪರ್ ಮೇಡಂ. ನಮ್ಮ ಅಪ್ಪ ಅಮ್ಮ ಅಜ್ಜ ಅಜ್ಜಿ ಬಿತ್ತಿದ ಹಬ್ಬಗಳ ಮಹಿಮೆಯನ್ನು, ಅದರ ಪ್ರಾಮುಖ್ಯತೆಯನ್ನು ನೆನಪಿಸುವ ಹಾಗೂ ಅದನ್ನು ಪರಿಚಯಿಸಿ ಕೊಡುವ ಪರಿ ಇಷ್ಟವಾಯಿತು. ಯುಗಾದಿ ಹಬ್ಬದ ಶುಭಾಶಯಗಳು.

  ReplyDelete
 2. ನಿಮ್ಮ ಬ್ಲಾಗಿನಲ್ಲಿ ಬರಹಗಳು ತುಂಬಾ ಚೆನ್ನಾಗಿ, ಸರಳವಾಗಿ ಬರುತ್ತಿವೆ. ನಿಮ್ಮ ಪ್ರಾಣಿಪ್ರಪಂಚದ ಲೇಖನಗಳು ಚನ್ನಾಗಿವೆ. ನನ್ನ ಅಭಿಪ್ರಾಯವೆಂದರೆ, ಪ್ರಾಣಿ ಪ್ರಪಂಚದ ಬರಹಗಳು ಇನ್ನೂ ಹೆಚ್ಚಿನ ವಿವರಗಳನ್ನು ಹೊಂದಿದ್ದರೆ ಚೆನ್ನ.

  sridahrasn.blogspot.in

  ReplyDelete
 3. ಮೇಡಮ್,
  ಯುಗಾದಿ ಹಬ್ಬದ ಬರವಣಿಗೆ ನನ್ನ ಬಾಲ್ಯದ ನೆನಪುಗಳನ್ನು ಮೆಲುಕುಹಾಕುವಂತೆ ಮಾಡಿತು.

  ReplyDelete