21 May 2013

ನನಗೆ ಕಂಡಂತೆ ಮದುಮಗಳು

ಮಲೆಗಳಲ್ಲಿ ಮದುಮಗಳು  ಕುವೆಂಪು ಅವರ ಈ ಕಾದಂಬರಿಯನ್ನು ನಾನು ಓದಿದ್ದು ಏಳೆಂಟು ವರ್ಷಗಳ ಹಿಂದೆ. ಮಲೆನಾಡಿನವಳಾಗಿ ಅಲ್ಲಿಯ ಪರಿಸರವನ್ನು ಅತಿಯಾಗಿ ಪ್ರೀತಿಸುವ  ನನಗೆ ಈ ಕಾದಂಬರಿ ಸ್ವಲ್ಪ ಹೆಚ್ಚೇ ಇಷ್ಟವಾಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.

ಸಂಕ್ಷೇಪವಾಗಿ ಹೇಳಲು ಹೊರಟರೆ ಒಂದೇ ಸಾಲಿನಲ್ಲಿ ಮುಗಿಸಿಬಿಡಬಹುದಾದ ಕತೆಯಂತೆ ಇದರಲ್ಲಿನ ಕಥಾವಸ್ತು ತೋರಿದರೂ ,   ವಿಶಾಲವಾದ ಕಾದಂಬರಿಯ ಹರವಿನಲ್ಲಿ ಬಿಡಿಸಿಕೊಳ್ಳುವ ಅವ್ಯಕ್ತವಾದ  ಕತೆಗಳು ಲೆಕ್ಕವಿಲ್ಲದಷ್ಟು . ಈ ಕಾದಂಬರಿಯ ಅತ್ಯಂತ ಮುಖ್ಯಪಾತ್ರ ಮಲೆನಾಡಿನ ಪ್ರಕೃತಿ .  ಅದೂ ನೂರು ವರ್ಷಗಳ ಹಿಂದಿನ ದಟ್ಟವಾದ ಅರಣ್ಯ,ಗಿರಿ ಕಾನನ , ಜೀವಜಾಲಗಳು ಕಾದಂಬರಿಯ ಜೀವಾಳ.


 ಇಂತಹ ಕಾದಂಬರಿಯೊಂದು ನಾಟಕರೂಪದಲ್ಲಿ ಬರುತ್ತಿದೆಯೆಂಬ ಸುದ್ದಿ ತಿಳಿದಾಗ ಆಶ್ಚರ್ಯವಾಗಿತ್ತು. ಒಮ್ಮೆ ನೋಡಲೇಬೇಕೆಂಬ ಕುತೂಹಲ ಮೂಡಿತ್ತು.
ಬೆಂಗಳೂರಿನಲ್ಲೇ ಇದು ನಡೆಯುತ್ತದೆ ಎಂದಾಗ , ನೋಡಬೇಕೆಂದು ತೀರ್ಮಾನಿಸಿದರೂ ಮನವನ್ನು ಕಾಡುತ್ತಿದ್ದ ಶಂಕೆಗಳು ಹಲವಾರು.
ಮಲೆನಾಡಿಗರ ಸಹಜವಾದ ನಿಧಾನಗತಿಯ ಜೀವನಕ್ರಮದಂತೆಯೆ ಸಾಗುವ ಈ ಕಾದಂಬರಿಯ ನಾಟಕರೂಪವನ್ನು  ಒಂಬತ್ತು ಘಂಟೆಗಳಷ್ಟು ದೀರ್ಘಕಾಲ ಬೇಸರವಾಗದಂತೆ ಕುಳಿತು ನೋಡಲು ಸಾಧ್ಯವೆ?
ರಾತ್ರೆಯಿಂದ ಬೆಳಗಿನವರೆಗೆ ಯಕ್ಷಗಾನವನ್ನು ನಿದ್ದೆಗೆಟ್ಟು ನೋಡಿ ಅಭ್ಯಾಸವಿದ್ದರೂ ಅದು ಮುಚ್ಚಿದ ರಂಗಮಂದಿರಗಳಲ್ಲಿ ಅಥವಾ ಟೆಂಟ್ ಗಳಲ್ಲಿ ಸುಖಾಸೀನದಲ್ಲಿ ಕುಳಿತು ನೋಡಿದ್ದು. ಇಲ್ಲಿ ತೆರೆದಬಯಲಿನಂತಹ ರಂಗದಲ್ಲಿ ಕಲ್ಲಿನಮೇಲೆ ಕುಳಿತು ಅಷ್ಟು ದೀರ್ಘಕಾಲ ನೋಡಲು ಸಾಧ್ಯವೆ?

ಮನದಲ್ಲಿ ಪ್ರಶ್ನೆಗಳಿದ್ದರೂ ಏನಾದರೂ ಸರಿ ನೋಡೇಬಿಡೋಣವೆಂದು ಹೊರಟಿದ್ದಾಯಿತು. ಆದರೆ ಮನೆ ಬಿಡುತ್ತಿದ್ದಂತೆ ಪ್ರಾರಂಭವಾದ ಜಿನುಗು ಮಳೆ  ಕಲಾಗ್ರಾಮ ತಲುಪುವಷ್ಟರಲ್ಲಿ   ಜೋರಾಗಿತ್ತು. ಟಿಕೆಟ್ ಪಡೆದು ಸ್ಟೇಜ್ ಬಳಿ ಹೋಗುತ್ತಿದ್ದಂತೆ ಜಡಿಮಳೆಯಂತೆ ಸುರಿಯಲು ತೊಡಗಿತ್ತು. ವಾಪಾಸ್ ಮನೆಗೆ ಹೋಗಲೂ ಮನಸ್ಸಿಲ್ಲದೆ , ಮಳೆ ಈಗ ನಿಲ್ಲಬಹುದೆಂಬ ಆಶಯದಲ್ಲಿ ಒಂದು ಗಂಟೆ ಕಾದ ನಂತರ , ಮಳೆ ನಿಂತು ನಾಟಕ ಪ್ರಾರಂಭವಾಗುವ ಲಕ್ಷಣ ಗೋಚರಿಸಿತು. ಒದ್ದೆಯಾದ ನೆಲದಲ್ಲಿ ಕುಳಿತುಕೊಳ್ಳಲು ಮೊದಮೊದಲು ಕಸಿವಿಸಿಯಾದರೂ ಒಮ್ಮೆ ನಾಟಕ ಪ್ರಾರಂಭವಾದ ನಂತರ ನಾವೆಲ್ಲಿ ಕುಳಿತಿದ್ದೇವೆಂಬುದೇ ಮರೆತು ಹೋಗಿ ಅಲ್ಲಿನ ದೃಶ್ಯಗಳಲ್ಲಿ ತಲ್ಲೀನರಾದೆವು. ಯಾವಾಗ ಬೆಳಗಾಯಿತೆಂಬುದೂ ಅರಿವಾಗದಂತೆ ಒಂಬತ್ತು ಘಂಟೆಗಳು ಕಳೆದುಹೋಗಿತ್ತು.

ನಾಲ್ಕು  ವೇದಿಕೆಗಳಲ್ಲಿ ನಾಲ್ಕುಹಂತಗಳಲ್ಲಿ ನಡೆವ ನಾಟಕವು ಕಾದಂಬರಿಯನ್ನು ಕಟ್ಟಿಕೊಡುವುದರಲ್ಲಿ ಸಂಪೂರ್ಣವಾಗಲ್ಲದಿದ್ದರೂ  ಬಹುಮಟ್ಟಿಗೆ ಯಶಸ್ವಿಯಾಗಿದೆಯೆನ್ನಿಸಿತು.
ಅಲ್ಲೊಂದು ಕೆರೆ , ಇಲ್ಲೆಲ್ಲೊ ಒಂದು ಕಾಲು ಸಂಕ , ಹಿಂದೆಲ್ಲೊ ಎತ್ತರದ ದಿಬ್ಬ ,ಅಡಿಕೆ ಮರಗಳು , ಸೋಗೆ ಮಾಡಿನ ಮಣ್ಣಿನ ಮನೆಗಳು , ಮರದ ಕಂಭಗಳು , ಎತ್ತರದಲ್ಲಿ ಅಟ್ಟಳಿಗೆಗಳಿಂದ ನಿರ್ಮಿಸಿದ ಹುಲಿಕಲ್ ನೆತ್ತಿ , ಸುತ್ತಮುತ್ತಲ ಮರಗಿಡಗಳೇ ದಟ್ಟ ಕಾಡೆಂಬ ಭ್ರಮೆ ಹುಟ್ಟಿಸುವಂತೆ ಸೃಷ್ಟಿಸಿದ ಬೆಳಕಿನ ವಿನ್ಯಾಸ, ಗೊರಬು , ಕಂಬಳಿಗಳು , ಪಾತ್ರಧಾರಿಗಳ ವೇಷಭೂಷಣಗಳು , ಮಲೆನಾಡನ್ನು ಕಣ್ಣ ಮುಂದೆ ನಿಲ್ಲಿಸುತ್ತವೆ. ( ನಾವು ನೋಡಿದ ದಿನವಂತೂ ಮಳೆ ಸುರಿದು ನೆಲವೆಲ್ಲ ಕೆಸರಾಗಿ , ವಾತಾವರಣವೂ ತಂಪಾಗಿ ಸ್ವಲ್ಪ ಹೆಚ್ಚೇ ಮಲೆನಾಡಿನ ಎಫೆಕ್ಟ್ ಉಂಟಾಗಿತ್ತು :) )
ಜೋಗಪ್ಪಗಳು , ಸುಡುಗಾಡುಸಿದ್ಧರು ,  ನಿರೂಪಕರಾಗಿರುವುದು ಕತೆಗೊಂದು ಓಟ ಕೊಟ್ಟಿದೆ.
ಕಾದಂಬರಿಯ ಜೀವಾಳವಾಗಿರುವ ಗುತ್ತಿ ಮತ್ತು ಆತನ ನಾಯಿಯ  ಪಾತ್ರಗಳು ಅದ್ಭುತವಾಗಿದೆ. ನಾಯಿಯ ಪಾತ್ರಧಾರಿಯ ಚುರುಕುತನವಂತೂ ನಿಜವಾದ ನಾಯಿಯನ್ನೂ ಮೀರಿಸುವಂತಿದೆ !
ಸಗಣಿಹುಳ , ಇಂಬುಳ , ಹಂದಿ , ಸಾಬರ ಕುದುರೆ  ನಗು ಅರಳಿಸುವುದರಲ್ಲಿ ಯಶಸ್ವಿಯಾಗುತ್ತವೆ .

ಒಟ್ಟಿನಲ್ಲಿ ಹೇಳಬೇಕೆಂದರೆ ಸಾಹಿತ್ಯಾಸಕ್ತರು, ರಂಗಾಸಕ್ತರು ಒಮ್ಮೆ ನೋಡಲೇಬೇಕಾದ ನಾಟಕವಿದು .  ಬೆಳಗಿನವರೆಗೂ ಸಂತೋಷದಿಂದ ಕುಳಿತು ನೋಡುತ್ತಿದ್ದ ಅನೇಕ ಮಕ್ಕಳು ( ನನ್ನ ಮಗಳೂ ಸೇರಿದಂತೆ )  ನಾಟಕ ಅವರನ್ನೂ ಸೆಳೆದಿದ್ದಕ್ಕೆ ಸಾಕ್ಷಿಯಾಗಿದ್ದರು. ಒಂದು ವೇದಿಕೆಯಿಂದ ಇನ್ನೊಂದು ವೇದಿಕೆಗೆ  ಸಾಕಷ್ಟು ದೂರ ನಡೆಯಬೇಕಾಗಿದ್ದರೂ ಲೆಕ್ಕಿಸದೇ ಉತ್ಸಾಹದಿಂದ ನಡೆದು ನೋಡುತ್ತಿದ್ದ ಹಿರಿಯ ಜೀವಗಳ ಮುಖದಲ್ಲಿ ಸಾರ್ಥಕಭಾವ.

ಕೆಲವೊಂದು ಓರೆಕೋರೆಗಳು ನನಗೆ ಕಂಡಂತೆ -
ಕೆಲ ಪಾತ್ರಧಾರಿಗಳು ಭಾಷೆಯ ಬಗ್ಗೆ ಇನ್ನಷ್ಟು ಎಚ್ಚರ ವಹಿಸಬೇಕು. ಮಲೆನಾಡಿನ ಆಡುಭಾಷೆ ಮತ್ತು ಘಟ್ಟದ ಕೆಳಗಿನ ಆಳುಗಳ ಆಡುಭಾಷೆ ಸಮರ್ಪಕವಾಗಿಲ್ಲ .  ಸಂಪೂರ್ಣವಾಗಿ ಅಲ್ಲಿಯ ಆಡುಭಾಷೆ ಬಳಸುವುದು ಕಷ್ಟ ನಿಜ , ಆದರೆ ಮಧ್ಯೆ ಮಧ್ಯೆ ಬೆಂಗಳೂರಿನ ಆಡುಭಾಷೆ ನುಸುಳುವುದನ್ನು ಸಹಿಸುವುದು ಕಷ್ಟವಾಗುತ್ತದೆ.
ಅಂತಕ್ಕ , ಮುಕುಂದಯ್ಯ , ಚಿನ್ನಕ್ಕ , ನಾಗಕ್ಕ.. ಮುಂತಾದ ತುಂಬ ಮುಖ್ಯವಾದ ಕೆಲ ಪಾತ್ರಗಳ , ಅಭಿನಯದಲ್ಲಿ ಇನ್ನೂ ಹೆಚ್ಚಿನ ಪಕ್ವತೆ ಇರಬೇಕಿತ್ತೆಂಬುದು ನನ್ನ ಅಭಿಪ್ರಾಯ.

 ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಓದುವುದು ಒಂದು ಸುಂದರ ಅನುಭೂತಿ ...ಅದನ್ನು ಓದಿಯೇ ತಿಳಿಯಬೇಕು . ಈ ನಾಟಕರೂಪವು ಕಾದಂಬರಿಯನ್ನು ಓದುವಂತೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗುತ್ತದೆ .

6 comments:

 1. ಸುಂದರ ಸವಿವರ ಲೇಖನ... ನಾನೂ ಈ ವಾರಂತ್ಯವೇ ಹೋಗಿ ಬರುತ್ತೇನೆ. ನಾಟಕ ನೋಡಲು ಆಸಕ್ತಿ ಹೆಚ್ಚಿಸಿದ್ದಕೆ ಧನ್ಯವಾದಗಳು!

  ReplyDelete
 2. ನಾನೂ ನಾಟಕ ನೋಡಲು ಪ್ರೇರೇಪಿಸಿದ ನಿಮಗೆ ಶರಣು.

  ReplyDelete
 3. hu, ello ondu kade innoo swalpa pakvate beku annisidaroo adbhuta endu enisuva naataka idu. nimagantoo ma'L'egaLalli madumagaLu kaaNisirabeku :D :) thumba ishta aada rangaprayoga :)

  ReplyDelete
 4. ಈ ನಾಟಕದಲ್ಲಿ ಅಭಿನಯಿಸಿದವರು ಬಹುತೇಕರು ಹೊಸಬರು .... ಮೊದಲ ಬಾರಿಗೆ ಬಣ್ಣ ಹಚ್ಚಿದವರು .. ಇಂಥವರು ಬಹಳ ಜನ ಇರುವಾಗ ಇದು ಒಂದು ಅಧ್ಬುತ ಪ್ರಯತ್ನ ಎಂದೇ ಹೇಳಬಹುದು .. ಇದು ಒಂದು ವಿಶಿಷ್ಟ ಪ್ರಯೋಗ ಅಂದಷ್ಟೇ ಹೇಳಬಹುದು .. ನಿರ್ದೇಶಕರ ಕಾರ್ಯ ಮೆಚ್ಚ ಬೇಕಾದ್ದು .. ನಾನು ಬಹಳ ದಿನಗಳ ನಂತರ ರಾತ್ರಿಯಿಡಿ ನಾಟಕ ನೋಡಿದ್ದು .. ಮಲೆಗಳಲ್ಲಿ ಮದುಮಗಳು ಒಂದು ರೀತಿಯಲ್ಲಿ ಇಷ್ಟ ಆಯಿತು ..

  ReplyDelete
 5. ಒಂದೇ ಸೂರಿನಡಿ ಬಗೆ ಬಗೆಯ ರುಚಿಕರ ತಿನಿಸು ಸಿಗುವಂತೆ... ಒಂದಕ್ಕಿಂತ ಒಂದು ವೇದಿಕೆ ವಿಭಿನ್ನ ಗಮನ ಸೆಳೆಯುತ್ತದೆ. ನಿನ್ನೆ ರಾತ್ರಿ ನೋಡಿಬಂದೆ . ಒಂದು ರೀತಿಯಲ್ಲಿ ಹೊಸ ಅನುಭವ ಕೊಡುತ್ತದೆ. ನಿಮ್ಮ ಬರಹ ಕಾದಂಬರಿಯನ್ನು ಓದುವ ಹಂಬಲ ಹೆಚ್ಚಿಸುತ್ತಿದೆ .. ಹಾಗೂ ಕಾದಂಬರಿ ಓದಿದವರಿಗೆ ನಾಟಕವನ್ನು ನೋಡಲು ಉತ್ತೇಜಿಸುವುದು ಖಂಡಿತವಾದ ಮಾತು. ಸುಂದರ ಬರಹ.

  ReplyDelete
 6. ತುಂಬಾ ಇಷ್ಟವಾದ ನಾಟಕವಿದು ...ನಾನೂ ೯ ತಾಸು ಹೇಗಪ್ಪಾ ನೋಡೋದು ಅಂದುಕೊಂಡೇ ಹೋಗಿದ್ದೆ ..ಆದರೆ ವಾಪಾಸ್ ಬರೋವಾಗ ಒಂಭತ್ತು ತಾಸು ಕುಳಿತಿದ್ವಾ ನಾವಿಲ್ಲಿ ಅನ್ನಿಸ್ಸೋ ಅಷ್ಟು ಚೆನ್ನಾಗಿತ್ತು :)
  ಮಲೆಗಳಲ್ಲಿ ಮದುಮಗಳು ನಂಗಂತೂ ಇಷ್ಟವಾಯ್ತು ...
  ನೀವ್ ನೋಡಿದ ,ಇಲ್ಲಿ ಹೇಳಿರೋ ಮದುಮಗಳೂ ಇಷ್ಟ ಆದ್ಲು :)

  ReplyDelete