ಬ್ಲಾಗ್ ಪ್ರಾರಂಭಿಸಿ ನಾಲ್ಕು ವರ್ಷಗಳು. ನಾಲ್ಕು ವರ್ಷಗಳಲ್ಲಿ ಬರೆದ ಲೇಖನಗಳ ಸಂಖ್ಯೆ ಕೇವಲ ೯೫ . ನಿಜ ಹೆಚ್ಚೇನೂ ಬರೆದಿಲ್ಲ . ಆದರೆ ಈ ಬ್ಲಾಗ್ ನನ್ನನ್ನು ಅನೇಕ ರೀತಿಯಲ್ಲಿ ಬೆಳೆಸಿದೆ. ಸುಮ್ಮನೆ ಮನಸ್ಸಿಗೆ ಅನ್ನಿಸಿದ್ದನ್ನು ಬರೆದಾಗ ಮನ ನಿರಾಳವಾದಂತೆಯೆ , ಪ್ರಕೃತಿಯ ವಿಸ್ಮಯಗಳ ಬಗ್ಗೆ , ಜೀವವೈವಿಧ್ಯದ ಬಗ್ಗೆ ಬರೆದಾಗ ಅತೀವ ಸಂತೋಷ ಅನುಭವಿಸಿದ್ದೇನೆ . ಕೆಲ ತಮ್ಮಂದಿರು , ತಂಗಿಯರು , ಮಕ್ಕಳು, ಓದುಗರು ಯಾವ್ಯಾವುದೋ ಜೀವಿಗಳ ಫೋಟೋ ತೋರಿಸಿ ಇದರ ಬಗ್ಗೆ ಹೇಳು ಎಂದಾಗ ಸಾರ್ಥಕಭಾವ ಉಂಟಾಗಿದೆ.
ಇದೆಲ್ಲದರೊಂದಿಗೆ ಈ ವರ್ಷ ಹೇಳಿಕೊಳ್ಳಲು ಚಿಕ್ಕದೊಂದು ಖುಷಿಯ ವಿಚಾರವಿದೆ. ಸುಮಾರು ಎಂಟು ತಿಂಗಳಿನಿಂದ
ವಿಜಯಕರ್ನಾಟಕ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಮಕ್ಕಳಪುಟ " ಆಟಂ ಪಾಠಂ " ಗೆ ಪ್ರತೀ ವಾರ ಒಂದೊಂದು ಕೀಟ ಮತ್ತು ಪಕ್ಷಿಯ ಬಗ್ಗೆ ನಾಲ್ಕು ಸಾಲು ಬರೆಯುತ್ತಿದ್ದೇನೆ . ಈ ಚಿಕ್ಕ ಅಂಕಣದಿಂದ ಜೀವಜಾಲದೊಂದಿಗೆ , ಪ್ರಕೃತಿಯೊಂದಿಗೆ ಇನ್ನಷ್ಟು ಹತ್ತಿರವಾದಂತೆ ಭಾಸವಾಗಿದೆ ನನಗೆ. ಪ್ರತೀ ವಾರ ಸಮಯಕ್ಕೆ ಸರಿಯಾಗಿ ಕಳಿಸುವ ಶಿಸ್ತು ಅಭ್ಯಾಸವಾಗಿದೆ. ಅಲ್ಲದೆ ಜೀವಲೋಕದ ಅದ್ಭುತ ಜೀವಿಗಳಾದ ಪಕ್ಷಿಲೋಕದ ಬಗ್ಗೆ ನಾನು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವಂತಾಗಿದ್ದು ಈ ಪುಟ್ಟ ಅಂಕಣಕ್ಕೆ ಬರೆಯಲು ಪ್ರಾರಂಭಿಸಿದ್ದರಿಂದಾಗಿ .
ಬ್ಯಾಕ್ಟೀರಿಯಾದಿಂದ ಹಿಡಿದು ಹುಲಿಗಳವರೆಗೆ ಪ್ರಾಣಿಲೋಕದ ಎಲ್ಲ ಜೀವಿಗಳೂ ನನ್ನಲ್ಲಿ
ಕುತೂಹಲ ಹುಟ್ಟಿಸುತ್ತಿದ್ದವು ಅವುಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ
ಉಂಟುಮಾಡುತ್ತಿದ್ದವು ....ಆದರೂ ಪಕ್ಷಿಲೋಕವನ್ನು ನಾನು ಗಮನಿಸಿದ್ದು ಕಡಿಮೆ. ಓಡುವ , ಹರಿಯುವ ,ಅಲೆಯುವ
ತೆವಳುವ ಅನೇಕ ಜೀವಿಗಳನ್ನು ಗುರುತಿಸಬಲ್ಲವಳಾಗಿದ್ದೆ . ಆದರೆ ತಲೆಯೆತ್ತಿದರೆ
ಕಾಣುವ ಈ ಅದ್ಭುತ ಹಾರುವಜೀವಿಗಳಲ್ಲಿ ಬೆರಳೆಣಿಕೆಯಷ್ಟರ ಬಗ್ಗೆ ಮಾತ್ರ ಅರಿತಿದ್ದೆ .
ಕಾರಣ ಅದಕ್ಕಿದ್ದ ಜನಪ್ರಿಯತೆಯೆ ಇರಬಹುದೇನೋ ...ಬಹುಶಃ ಪಕ್ಷಿಗಳನ್ನು ಇಷ್ಟಪಡದಿದ್ದವರು
ಕಡಿಮೆಯೇನೋ...ಯಾವ ಪತ್ರಿಕೆ, ಕ್ಯಾಲೆಂಡರ್ , ಮನೆಯ ಗೋಡೆ , ಮಕ್ಕಳ ಚಿತ್ರದ ಪುಸ್ತಕ
ಹೀಗೆ ಎಲ್ಲಿ ನೋಡಿದರೂ ಸುಂದರವಾದ ಪಕ್ಷಿಗಳ ಚಿತ್ರಗಳು ಇರುತ್ತವೆ. ಅವುಗಳ ಬಗ್ಗೆ
ಲೇಖನಗಳು ಬರುತ್ತವೆ.
ಅದ್ದರಿಂದಲೇ ಇಂತಹ ಜನಪ್ರಿಯ ಜೀವಿಗಳ ಬಗ್ಗೆ ತಿಳಿಯಲು
ಹೊಸದೇನಿರುತ್ತದೆ ಎಂಬ ಉದಾಸೀನಭಾವವಿತ್ತು .ಆದರೀಗ ಈ ಸುಂದರ ಲೋಕದ ಅಭಿಮಾನಿಯಾಗಿಬಿಟ್ಟಿದ್ದೇನೆ. ಮೊದಲೆಲ್ಲ ನಡೆಯುವಾಗ ನೆಲ , ಅಕ್ಕ ಪಕ್ಕದ ಗಿಡ,ಪೊದೆಗಳಲ್ಲಿನ ಜೀವಜಾಲಗಳನ್ನು ಗಮನಿಸುತ್ತಿದ್ದವಳೀಗ ಮರದತುದಿ ,ಆಕಾಶ ನೋಡಿಕೊಂಡು ನಡೆಯುತ್ತಿದ್ದೇನೆ . ಇದನ್ನು ಸಾಧ್ಯವಾಗಿಸಿದ ವಿಕೆ ಬಳಗಕ್ಕೆ , ಶ್ರೀದೇವಿಯವರಿಗೆ ತುಂಬ ತುಂಬ ಥ್ಯಾಂಕ್ಸುಗಳು .
ಎಂದಿನಂತೆ ನನ್ನ ಬ್ಲಾಗ್ ಓದುವ, ಪ್ರೋತ್ಸಾಹಿಸುವ ಎಲ್ಲರಿಗೂ ಧನ್ಯವಾದಗಳು .
ನಿಮ್ಮ ಬ್ಲಾಗ್ ಬರಹ ಹೀಗೆ ಮುಂದುವರೆಯಲಿ .
ReplyDeleteಸಂಗ್ರಹ ಯೋಗ್ಯ ಬ್ಲಾಗ್ ನಿಮ್ಮದು, 4ನೇ ವಸಂತದ ಶುಭಾಷಯಗಳು.
ReplyDeleteಶುಭಾಶಯಗಳು ಸುಮ... ನೀವು ಸದಾ ಮಾಹಿಯುಕ್ತ ಲೇಖನಗಳನ್ನೇ ನೀಡುತ್ತ ಬಂದಿದ್ದೀರಿ ಹೀಗೆ ಮುಂದುವರಿಸಿ.
ReplyDeleteಹುಟ್ಟುಹಬ್ಬದ ಶುಭಾಶಯಗಳು. ಅನೇಕ ವಸಂತಗಳನ್ನು ಕಾಣಿರಿ ಎಂದು ಹಾರೈಸುತ್ತೇನೆ.
ReplyDeleteನಮಗೂ ಅಧ್ಬುತ ಪಕ್ಷಿಲೋಕದ ಪರಿಚಯ ಮಾಡಿಸುತ್ತಿದ್ದೀರಿ . ಅಭಿನಂದನೆಗಳು .
ReplyDeleteಶುಭಾಷಯಗಳು
ReplyDeleteನಾಲ್ಕು ವಸಂತಗಳನ್ನು ಕಂಡಿರುವ ನಿಮ್ಮ ಬ್ಲಾಗ್ ನಾಲ್ಕು ದಿಕ್ಕುಗಳಿಗೂ ಪಸರಿಸಲಿ ಇನ್ನಷ್ಟು ಮತ್ತಷ್ಟು ಜೀವಜಾಲಗಳನ್ನು ಪರಿಚಯಿಸುವ ಲೇಖನಗಳ ಓದುವ ಭಾಗ್ಯ ನಮ್ಮದಾಗಲಿ.ಅಭಿನಂದನೆಗಳು ಮೇಡಂ
ReplyDeleteಶುಭಾಶಯಗಳು . ಭೂರಮೆ ನನಗೆ ಇಷ್ಟದ ಬ್ಲಾಗ್. ಬರೆಯುತ್ತಿರಿ..... ಬ್ಲಾಗ್ನಲ್ಲೂ ಮತ್ತು ಪತ್ರಿಕೆ/ಮ್ಯಾಗಜೀನುಗಳಲ್ಲೂ..
ReplyDelete