ಪ್ರತೀ ವರ್ಷ ಎಪ್ರಿಲ್ - ಮೇ ತಿಂಗಳಲ್ಲಿ ಹತ್ತನೇ ತರಗತಿಯ ಬೋರ್ಡ್ ಎಕ್ಸಾಮ್ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬೆಂಗಳೂರಿನ ಶಾಲೆಗಳು , ಟ್ಯೂಷನ್
ಸೆಂಟರ್ ಗಳ ಹೊರಭಾಗದಲ್ಲಿ ದೊಡ್ಡದೊಂದು ಬೋರ್ಡ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ
ತಮ್ಮ ಶಾಲೆಗೆ 100% ರಿಸಲ್ಟ್ ಅಂತ ದೊಡ್ಡದಾಗಿ ಬರೆದಿರುತ್ತದೆ . ಜೊತೆಗೊಂದಿಷ್ಟು ಮಕ್ಕಳ ಫೋಟೊಗಳು ಅದರ ಕೆಳಗೆ ಅವರು ತೆಗೆದ ಶೇಕಡಾವಾರು ಅಂಕಗಳನ್ನು
ನಮೂದಿಸಿರುತ್ತಾರೆ. ನಲವತ್ತು - ಐವತ್ತು ಮಕ್ಕಳಿದ್ದರೆ
ಎಲ್ಲರೂ 90% ಮೇಲೆಯೆ ತೆಗೆದಿರುತ್ತಾರೆ
. ಪೇಪರ್ ಗಳಲ್ಲಿ ಕೂಡ ಕೆಲವು ಶಾಲೆಗಳು ಲಿಸ್ಟ್
ಕೊಡುತ್ತಾರೆ , ಪರಿಚಯದ ಮಕ್ಕಳನ್ನು ಕೇಳಿದಾಗಲೂ ಎಲ್ಲರದೂ 85% ಮೇಲೆಯೆ ಇರುತ್ತದೆ.
ಇದನ್ನೆಲ್ಲಾ ಪ್ರತೀ ವರ್ಷ ನೋಡುತ್ತಿದ್ದಾಗ ನನಗೆ ತುಂಬ ಆಶ್ಚರ್ಯವಾಗುತ್ತಿತ್ತು.
ನಾವೆಲ್ಲ ಓದುವಾಗ ಅಂದರೆ ಸುಮಾರು ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದೆ ಎಸ್ ಎಸ್ ಎಲ್ ಸಿ ಯಲ್ಲಿ
ಎಪ್ಪತ್ತರ ಮೇಲೆ ಅಂಕಗಳನ್ನು ತೆಗೆಯುವವರು ಬುದ್ಧಿವಂತರ ಸಾಲಿನಲ್ಲಿರುತ್ತಿದ್ದರು . ಎಂಬತ್ತು ಎಂಬತ್ತೈದು ಅಂಕಗಳನ್ನು ತೆಗೆಯುವವರು ಸಿಕ್ಕಾಪಟ್ಟೆ
ಬುದ್ಧಿವಂತರು , ಅಂತವರು ಇಡೀ ಸ್ಕೂಲಿಗೆ ನಾಲ್ಕು ಜನರಿದ್ದರೆ ಹೆಚ್ಚು . ಇನ್ನು ತೊಂಬತ್ತರ
ಮೇಲೆ ಅಂಕಗಳನ್ನುತೆಗೆಯುವವರಂತೂ ಜೀನಿಯಸ್ ಅಂತಲೇ ಗುರುತಿಸಲ್ಪಡುತ್ತಿದ್ದರು , ಅಂತವರು ಒಂದು ತಾಲ್ಲೂಕಿಗೆ
ನಾಲ್ಕಾರು ಜನ ಇದ್ದರೆ ಹೆಚ್ಚು .
ಆದರೆ ಈಗಿನ ಹೆಚ್ಚಿನ ಮಕ್ಕಳ ಮಾರ್ಕ್ಸ್ 90ರ ಮೇಲೆಯೆ ಇರಲು ಕಾರಣವೇನು? ಅವರು ಅಷ್ಟೆಲ್ಲ ಬುದ್ಧಿವಂತರಾಗಿದ್ದಾರೆಯೆ? ಕಾಲ ಮುಂದುವರೆದಂತೆಲ್ಲ ಮಕ್ಕಳ ಐಕ್ಯೂ ಹೆಚ್ಚುವುದು
ಸಹಜ. ಬೆರಳತುದಿಯಲ್ಲೇ ಮಾಹಿತಿ ದೊರಕುವ ಕಾಲದಲ್ಲಿರುವ ಮಕ್ಕಳು ನಮಗಿಂತ ಚುರುಕಿರಬಹುದು , ಆದರೂ
ಅಂಕಗಳನ್ನು ಗಳಿಸುವಲ್ಲಿ ಆಗಿರುವ ಈ ಅತಿ ಪ್ರಗತಿ ಸಹಜವೇ? ಪಾಠಗಳು ಅಷ್ಟು
ಸುಲಭವಾಗಿವೆಯೆ ಅಥವಾ ಪರೀಕ್ಷಾ ವಿಧಾನವೇ ಸರಳೀಕೃತಗೊಂಡಿದೆಯೆ? ಇದಕ್ಕೆ ಉತ್ತರ ಸಿಕ್ಕಿದ್ದು ನನ್ನ ಮಗಳು ಹೈಸ್ಕೂಲ್ ಮೆಟ್ಟಿಲೇರಿದಾಗ .
ಈಗ ಅನೇಕ ಶಾಲೆಗಳು ಒಂಬತ್ತನೆಯ ತರಗತಿಯಲ್ಲಿ ಅರ್ಧ ವರ್ಷ
ಕಳೆಯುತ್ತಿದ್ದಂತೆಯೆ ಹತ್ತನೆಯ ತರಗತಿಯ ಪಾಠಗಳನ್ನು ಪ್ರಾರಂಭಿಸಿಬಿಡುತ್ತವೆ . ಬೇಸಿಗೆ ರಜೆಯಲ್ಲೂ ಸ್ಪೆಷಲ್
ಕ್ಲಾಸ್ ತೆಗೆದುಕೊಳ್ಳುತ್ತಾರೆ , ಇದೇ ಸಮಯಕ್ಕೇ ಪ್ರೈವೇಟ್ ಟ್ಯೂಷನ್ ಕೂಡ ಪ್ರಾರಂಭವಾಗುತ್ತವೆ ಮತ್ತು
ಹೆಚ್ಚಿನ ಮಕ್ಕಳು ಟ್ಯೂಷನ್ನಿಗೆ ಹೋಗುತ್ತಾರೆ. ಜೂನ್ ತಿಂಗಳಲ್ಲಿ ಶಾಲೆ ಪ್ರಾರಂಭವಾಗುವ ವೇಳೆಗೆ ಅರ್ಧದಷ್ಟು
ಪಾಠಗಳು ಮುಗಿದಿರುತ್ತವೆ. ಪ್ರತೀ ವಾರವೂ ಟೆಸ್ಟ್ ಗಳು ನಡೆಯುತ್ತವೆ. ಸೆಪ್ಟೆಂಬರ್ ಸಮಯದಲ್ಲಿ ಅರ್ಧವಾರ್ಷಿಕ ಪರೀಕ್ಷೆ
ನಡೆಯುವ ವೇಳೆಗಾಗಲೇ ಎಲ್ಲಾ ಪಾಠಗಳನ್ನೂ ಮುಗಿಸಿರುತ್ತಾರೆ. ಹಾಗಾಗಿ ಅರ್ಧವಾರ್ಷಿಕ ಪರೀಕ್ಷೆಯು ಮೊದಲನೇ
ಸಿದ್ಧತಾ ಪರೀಕ್ಷೆಯಾಗುತ್ತದೆ. ಅಕ್ಟೋಬರ್ ನಿಂದ ಜನವರಿ ವರೆಗೆ ಮತ್ತೆರಡು ಬಾರಿ ಸಿದ್ಧತಾ ಪರೀಕ್ಷೆಗಳು
ನಡೆಯುತ್ತವೆ. ಈ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ತೆಗೆದವರಿಗೆ ವಿಶೇಷ ತರಗತಿಗಳನ್ನು ಸಾಯಂಕಾಲ
ಆರರವರೆಗೂ ನಡೆಸಲಾಗುತ್ತದೆ.
ಒಟ್ಟಿನಲ್ಲಿ ಮಾರ್ಚ್ ವೇಳೆಗೆ ಸ್ವಲ್ಪ ಬುದ್ಧಿವಂತ ಮಕ್ಕಳಿಗೆ
ಪುಸ್ತಕ ತೆಗೆಯದೆಯೆ ಅದರೊಳಗಿರುವುದನ್ನು ಹೇಳುವಷ್ಟು ಬಾರಿ ಪುನರಾವರ್ತನೆ ನಡೆದಿರುತ್ತದೆ. ಸಾಮಾನ್ಯ
ಮಕ್ಕಳಿಗೂ ಕೂಡ ಪಾಠ ಬಾಯಿಗೇ ಬರುವಂತೆ ಟ್ರೈನಿಂಗ್ ಕೊಡುತ್ತಾರೆ. ಹೆಚ್ಚಿನ ಶಾಲೆಗಳಲ್ಲಿ ವಿಧ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಉಪಾಯಗಳನ್ನು ಹೇಳಿಕೊಡುತ್ತಾರೆಯೆ
ಹೊರತು ಅವರ ಬೌದ್ಧಿಕ ಬೆಳವಣಿಗೆಗೆ ಸಹಾಯವಾಗುವಂತೆ , ಯಾವುದೆ ವಿಷಯದಲ್ಲಿ ಆಸಕ್ತಿ ಕೆರಳುವಂತೆ ಪಾಠ
ಹೇಳುವವರು ಕಡಿಮೆಯೆ. ಹೆಚ್ಚಿನ ಪೋಷಕರಿಗೂ ಕೂಡ ಮಕ್ಕಳು
ಹೆಚ್ಚು ಅಂಕ ಗಳಿಸುವುದಷ್ಟೇ ಮುಖ್ಯ . ಹೀಗಾಗಿ ಪರೀಕ್ಷೆಯ ವೇಳೆಗೆ ಮಕ್ಕಳು ಅತ್ಯಂತ ಒತ್ತಡಕ್ಕೊಳಗಾಗುತ್ತಾರೆ.
ಇದರಿಂದಾಗಿ ಉಳಿದೆಲ್ಲ ಚಟವಟಿಕೆಗಳೂ ಗೌಣವಾಗುತ್ತವೆ. ಮಕ್ಕಳಲ್ಲಿ ಅನೇಕ ಮಾನಸಿಕ ಸಮಸ್ಯೆಗಳೂ ತಲೆದೋರಬಹುದು.
ಓದಿದ್ದನ್ನೇ ಓದಿ ಬೇಸರವಾಗಿ , ಓದಿನ ಬಗ್ಗೆಯೆ ಜಿಗುಪ್ಸೆ ಬರಬಹುದು.
ಶಾಲೆಗಳು
ತಮ್ಮ ಬಿಸಿನೆಸ್ ಹೆಚ್ಚಿಸಿಕೊಳ್ಳಲು , ಪೋಷಕರು ಮಕ್ಕಳಿಗೆ ಒಳ್ಳೆಯ ಕಾಲೇಜಿನಲ್ಲಿ ಅಡ್ಮಿಷನ್
ಸಿಗಲು ಅನುಕೂಲವಾಗಲಿ ಎಂದೋ , ತಮ್ಮ ಪ್ರತಿಷ್ಟೆ ಹೆಚ್ಚಿಸಿಕೊಳ್ಳಲಾಗಿಯೋ ಮಕ್ಕಳನ್ನು ಅಂಕ ಗಳಿಸುವ
ಯಂತ್ರಗಳನ್ನಾಗಿಸಿರುವ ಈ ವ್ಯವಸ್ಥೆಯಿಂದ ಏನಾದರೂ ಉದ್ಧಾರವಾಗುತ್ತದೆಯೆ?
ಎಂದಾದರೂ ಮಕ್ಕಳಿಗೆ ನಿಜವಾದ ಶಿಕ್ಷಣ ನೀಡುವ ವ್ಯವಧಾನ
ಮತ್ತೆ ಶಾಲೆಗಳಿಗೆ ಪೋಷಕರಿಗೆ ಬರುತ್ತದೆಯೆ?
ತೀರಾ ಶಿಕ್ಷಣವೂ ವ್ಯಾಪಾರದ ಮೂಲವಾಗುತ್ತಿರುವ ಈ ಕೇಡುಗಾಲದಲ್ಲಿ ಶೇ.೧೦೦ ಫಲಿತಾಂಶದ ಅಸಲೀಯತ್ತು ಬಿಚ್ಚಿಟ್ಟ ಬರಹವಿದು.
ReplyDeleteತುರುಕುವ ಸರಕು ತಾಳಿಕೊಳ್ಳಲಾರದ ಮಕ್ಕಳ ಮೆದಳುಗಳ ಗತಿ?
ಸಕಾಲೀಕ ಸದಾಶಯಯುಕ್ತ ಬರಹ :)
ReplyDeleteಮಕ್ಕಳು ಯಂತ್ರವಾಗುತ್ತಿರುವುದು, ಶಾಲೆ ಪ್ಯಾಕ್ಟ್ರಿಯಾಗುತ್ತಿರುವುದು ದುರಂತ!
ಹೂಂ. ಮಕ್ಕಳನ್ನು ಅಂಕ ತೆಗೆಯೋ ಯಂತ್ರಗಳಾಗಿಸುತ್ತಿರೋ ಈ ಕ್ರಮದಿಂದ ನಿಜಕ್ಕೂ ಅವರ ಸರ್ವಾಂಗೀಣ ಬೆಳವಣಿಗೆಯಾಗುತ್ಯೆ ? ನಿಜಕ್ಕೂ ಗೊತ್ತಿಲ್ಲ. ಆ ಕಾಲನೇ ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಅನಿಸುತ್ತೆ...ಅಂದಂಗೆ ಸುಷ್ಮಕ್ಕನ ಫ್ಯಾಕ್ಟ್ರಿ ಕಮೆಂಟ್ ನೋಡಿ ನನ್ನ ಜೂನಿಯರೊಬ್ಬ ಹೇಳ್ತಿದ್ದ ಮಾತು ನೆನಪಾಗುತ್ತೆ. ಐ.ಐ.ಟಿಯಲ್ಲಿ ಓದೋಕೆ ಹೋಗಿದ್ದ ಅವನಿಗೆ ಮೊದಲ ದಿನ ನೀನು ಯಾವ ಫ್ಯಾಕ್ಟ್ರಿ ಅಂತ ಕೇಳ್ತಿದ್ದರಂತೆ. ಉತ್ತರದ ಕಡೆಯೆಲ್ಲ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ತರಬೇತಿ ಮಾಡೋದನ್ನೇ ಉದ್ಯೋಗವಾಗಿಸಿಕೊಂಡಿರೋ ಕೇಂದ್ರಗಳನ್ನ ಫ್ಯಾಕ್ಟ್ರಿಗಳಂತ ಕರೀತಾರಂತೆ. ಅಲ್ಲಿ ಹುಡುಗ್ರು ನಾನು ಈ ಫ್ಯಾಕ್ಟ್ರಿಯವ ಅಂತ ಯಾವುದೇ ಸಂಕೋಚವಿಲ್ಲದೇ ಹೇಳಿಕೊಳ್ಳುತ್ತಾರಂತೆ !! ಕಾಲಾಯ ತಸ್ಮೈ ನಮಃ
ReplyDelete