8 Mar 2015

ನನ್ನ ಅಮ್ಮಮ್ಮ


 

ಇಂದು ಮಾರ್ಚ್ ಎಂಟು , ಮಹಿಳಾ ದಿನಾಚರಣೆಯಂತೆ .   ಮಹಿಳೆ ಎಂದೊಡನೆ ನನಗೆ ನೆನಪಾಗುವುದು ನನ್ನ ಈ  ಅಮ್ಮಮ್ಮ  ( ನನ್ನ ತಾಯಿಯ ತಾಯಿ  ) .

ಅಮ್ಮಮ್ಮನೆಂದರೆ ಬೆಳಗಿನ ಜಾವಕ್ಕೆದ್ದು ಅಂಗಳ ಸಾರಿಸಿ ಅವರು ಹಾಕುತ್ತಿದ್ದ ಸುಂದರವಾದ ರಂಗೋಲಿಯ ಕೌಶಲ್ಯ . ಅಮ್ಮಮ್ಮನೆಂದರೆ  ಒರಳುಕಲ್ಲಿನಲ್ಲಿ ರುಬ್ಬಿ , ಅವರು ಮಾಡುತ್ತಿದ್ದ  ಹದವಾದ ಸಾರು , ಗೊಜ್ಜು , ದೋಸೆ ಇಡ್ಲಿಗಳು , ಗರಿಗರಿಯಾದ ಚಕ್ಕುಲಿ , ಕೋಡುಬಳೆಗಳ ರುಚಿಯ ನೆನಪು   . 
ಅಮ್ಮಮ್ಮನೆಂದರೆ ಸ್ನಾನ ಮಾಡಿ , ಕನ್ನಡಿಯನ್ನು ಎದುರಿಗಿಟ್ಟುಕೊಂಡು ಬಲಗೈನ ಒಂದು ಬೆರಳಲ್ಲಿ ಜೇನುಮೇಣವನ್ನೂ ,ಇನ್ನೊಂದು ಬೆರಳಲ್ಲಿ ಕುಂಕುಮವನ್ನೂ ತೆಗೆದುಕೊಂಡು ಸ್ವಲ್ಪವೂ ಊನವಿಲ್ಲದಂತೆ  ಹಣೆಯಮೇಲಿಟ್ಟುಕೊಳ್ಳುತ್ತಿದ್ದ ಗುಂಡನೆಯ ಬೊಟ್ಟಿನ ಶಿಸ್ತು.
ಅಮ್ಮಮ್ಮನೆಂದರೆ ಗೌರಿ ದನದೊಂದಿಗೆ ಗೆಳತಿಯಂತೆ ನಡೆಸುತ್ತಿದ್ದ ಮಾತುಕತೆಯ ಆತ್ಮೀಯತೆ . 
ಅಮ್ಮಮ್ಮನೆಂದರೆ ಬಾವಿಯ ನೀರು ಸೇದಿ , ಹಂಡೆ ತುಂಬಿಸಿ , ಬಿಸಿಯಾಗಿ ಕಾಯಿಸಿ , ತಲೆಗೆ ಎಣ್ಣೆ ತಟ್ಟಿ ಮೀಯಿಸುವಾಗಿನ ವಾತ್ಸಲ್ಯ .
 ಅಮ್ಮಮ್ಮನೆಂದರೆ ಮನೆಯ ಸುತ್ತಲೂ ಅವರೇ ಬೆಳೆಸಿದ ಬಸಳೆ , ಬೆಂಡೆ , ತೊಂಡೆ , ಅವರೆ , ನಿಂಬೆಗಿಡಗಳ ತಾಜಾತನ , ಮಲ್ಲಿಗೆ , ಕನಕಾಂಬರ , ಜಾಜಿ , ಕಾಬಾಳೆ ಹೂವುಗಳ ಸೌಂದರ್ಯ. 
ಅಮ್ಮಮ್ಮನೆಂದರೆ  ದಿನಪತ್ರಿಕೆಗಳು ವಾರಪತ್ರಿಕೆಗಳು ಕತೆ ಕಾದಂಬರಿಗಳನ್ನು ಓದುವಾಗಿನ ತಾದ್ಯಾತ್ಮ , ಅದು ಅವರಿಗೆ ನೀಡಿದ್ದ ಲೋಕಜ್ಞಾನ. 
ಅಮ್ಮಮ್ಮನೆಂದರೆ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಸುಶ್ರ್ಯಾವ್ಯವಾಗಿ ಹಾಡಿಕೊಳ್ಳುತ್ತಿದ್ದ ಹಾಡುಗಳು. 
ಅಮ್ಮಮ್ಮನೆಂದರೆ ಸಾಯಂಕಾಲದ ದೇವರ ದೀಪದೆದುರಿನ ಬೆಳಕು , ಭಜನೆಯಲ್ಲಿನ ಭಕ್ತಿ. 
ಅಮ್ಮಮ್ಮನೆಂದರೆ ದಿನವಿಡೀ ಕೆಲಸದ ನಂತರವೂ ರಾತ್ರಿಯಲ್ಲೂ ಉಳಿಯುತ್ತಿದ್ದ ನಗುಮುಖದ ಉಲ್ಲಾಸ . 
ಅಮ್ಮಮ್ಮನೆಂದರೆ ಮಕ್ಕಳು ಮೊಮ್ಮಕ್ಕಳನ್ನು ಸುಸಂಸ್ಕೃತರಾಗಿಸಿದ ಶಿಕ್ಷಕಿ.

ಅಮ್ಮಮ್ಮ - ಅಜ್ಜನಿಜ,  ಅವರೇನೂ ವಿಶೇಷ ಸಾಧನೆಗೈದ ಮಹಿಳೆಯರ ಸಾಲಿನಲ್ಲಿ ನಿಲ್ಲುವಂತವರಲ್ಲ ಅಥವಾ ಯಾವುದೇ ರೀತಿಯ ಮಹಿಳಾವಾದದ ಅರಿವಿದ್ದ ಚಿಂತಕಿಯಲ್ಲ . ಗಂಡ ಮನೆ ಮಕ್ಕಳು ಮೊಮ್ಮಕ್ಕಳು ಎಂದು ಸಂಸಾರ ನೆಡೆಸಿಕೊಂಡು ಹೋಗುತ್ತಿದ್ದ ಸಾಮಾನ್ಯ ಮಹಿಳೆಯಾಕೆ.  ಆದರೆ ಅವರ ವ್ಯಕ್ತಿತ್ವ, ಅವರ ಸಂಪರ್ಕಕ್ಕೆ ಬಂದವರಿಗೆಲ್ಲ ಪ್ರಭಾವ ಬೀರುವಂತದ್ದಾಗಿತ್ತು.  

ಬಾಲ್ಯದ ಕೆಲವರ್ಷಗಳನ್ನು ಇಂತಹ ಅಮ್ಮಮ್ಮನೊಡನೆ ಕಳೆದ ನನ್ನ ಮನದಲ್ಲಿ ಅವರ ನೆನಪು ಹೀಗೆಯೆ ಉಳಿದಿದೆ, ಅವರಲ್ಲಿದ್ದ ಧನಾತ್ಮಕ ಚಿಂತನೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ.
ನಾಲ್ಕು ತಲೆಮಾರುಗಳು - ಅಮ್ಮಮ್ಮ , ಅಮ್ಮ , ನಾನು . ನನ್ನ ಮಗಳು (ಹತ್ತು ವರ್ಷದ ಹಿಂದಿನ ಫೋಟೊ)


 ಅಜ್ಜ ಮತ್ತು ಅಮ್ಮಮ್ಮನದು ಸುಮಾರು ಐವತ್ತೇಳು ವರ್ಷಗಳ ಸುದೀರ್ಘ ದಾಂಪತ್ಯ .  ಮುಂಗೋಪದಿಂದಾಗಿ ಅಜ್ಜ ಬೈಯ್ದರೂ ಅದನ್ನ ಮನಸ್ಸಿನಲ್ಲಿಟ್ಟುಕೊಳ್ಳದೆ ಇಬ್ಬರೂ ಮರುಕ್ಷಣವೇ ಸಹಜವಾಗಿರುತ್ತಿದ್ದುದು ,  ಗಂಡನ ಪ್ರತಿಯೊಂದು ಅವಶ್ಯಕತೆಗಳನ್ನೂ ಅವರು ಹೇಳುವುದರೊಳಗೇ ಪೂರೈಸುತ್ತಿದ್ದ  ಹೆಂಡತಿ , ಯಾವುದೇ ಚಿಕ್ಕ ವಿಷಯವನ್ನೂ ಹೆಂಡತಿಗೆ ಹೇಳಿ , ಚರ್ಚಿಸಿಯೇ ಮುಂದುವರೆಯುವ ಗಂಡ , ಇಳಿವಯಸ್ಸಿನಲ್ಲಿ ಒಬ್ಬರಿಗೊಬ್ಬರು ಒಳ್ಳೆಯ ಗೆಳಯರಂತಾಗಿದ್ದುದು , ಎಲ್ಲವುಗಳಿಂದ ಇಂದಿನ ಯುವಪೀಳಿಗೆ ಕಲಿಯಬೇಕಾದದ್ದು  ಬಹಳವಿದೆ.

ಕರೆಂಟ್ ಇಲ್ಲದ ಕಾಲದಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ , ಅದರೊಡನೆ ತನ್ನ ಆಸಕ್ತಿಯ ವಿಷಯಗಳಾದ ಓದು , ಸಂಗೀತಕ್ಕೂ ಸಮಯ ಹೊಂದಿಸಿಕೊಂಡು , ಚಟುವಟಿಕೆಯಿಂದ ಬಾಳಿದ್ದರು ಅಮ್ಮಮ್ಮ. ಆದರೆ ಕಾಲ ಎಷ್ಟು ಕ್ರೂರಿಯೆಂದರೆ ವಯಸ್ಸಾದಂತೆ ಅವರು ತಮ್ಮ ವ್ಯಕ್ತಿತ್ವದಲ್ಲಿದ್ದ ಧನಾತ್ಮಕ ಚಿಂತನೆಯನ್ನೇ ಕಳೆದುಕೊಂಡಿದ್ದರು.  ಬೇಡದ ವಿಷಯಗಳಿಗೆ ಚಿಂತಿಸುತ್ತಿದ್ದರು , ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳಿಗೆ ದುಖ್ಖಿಸುತ್ತಿದ್ದರು.  ಕೊನೆಗಾಲದಲ್ಲಂತೂ  ಹಾಸಿಗೆ ಹಿಡಿದು  ಯಾವುದರ ಅರಿವೂ ಇಲ್ಲದೆ ಮಗುವಿನಂತಾಗಿಬಿಟ್ಟಿದ್ದರು . ಇಂದಿಗೆ ಅವರನ್ನು  ಕಳೆದುಕೊಂಡು ಒಂಬತ್ತು ದಿನಗಳು. ಅವರು ನಮ್ಮ ನೆನಪುಗಳಲ್ಲಿ ಶಾಶ್ವತ.
ಈ ಮಹಿಳಾದಿನದಂದು ಅವರಿಗೊಂದು ನಮನ.

2 comments:

 1. This comment has been removed by the author.

  ReplyDelete
 2. ಮೊದಲಿಗೆ ಸಮಸ್ತ ಸ್ರೀ ಮೂರ್ತಿಗಳಿಗೆಲ್ಲ ಮಹಿಳಾ ದಿನಾಚರಣೆಯ ಶುಭಾಶಯಗಳು.

  ತಮ್ಮ ಅಜ್ಜಿಯವರ ಆತ್ಮಕ್ಕೆ ಭಗವಂತನು ಶಾಂತಿಯನು ಕೊಡಲಿ. ಅವರ ನೆನಪು ಬದುಕೆಲ್ಲ ಬೆಳಗಲಿ.

  ನಾಲ್ಕು ತಲೆಮಾರುಗಳ ಚಿತ್ರವು ultimate.

  ಹೆಣ್ಣಿಗಿಂತಲೂ ನಮಗೆ ಬೇರೆಯ ಮಾದರಿ ವ್ಯಕ್ತಿತ್ವ ಜಗದಲ್ಲೇ ದೊರೆಯಲಾರದು. ಆಕೆ ಒಮ್ಮೆಲೆ ಹರೆಯುವ ನದಿಯೂ ಹೌದು, ಮತ್ತೊಮ್ಮೆ ಶರಧಿಯಷ್ಟೇ ಶಾಂತ!

  ReplyDelete