5 May 2016

ಆನೆಪ್ರಿಯರು ನೋಡಲೇಬೇಕಾದ ಸಕ್ಕರೆಬೈಲು

ಸಕ್ಕರೆಬೈಲು,  ಶಿವಮೊಗ್ಗದಿಂದ ೧೪ ಕಿ ಮೀ ದೂರದಲ್ಲಿ ತುಂಗಾನದಿಯ ದಡದಲ್ಲಿರುವ ಪುಟ್ಟ ಹಳ್ಳಿ.  ಇಲ್ಲಿ ಕರ್ನಾಟಕದಲ್ಲೇ ಅತ್ಯುತ್ತಮವೆನ್ನಿಸಿರುವ ಸಾಕಾನೆಗಳ ಟ್ರೈನಿಂಗ್ ಕ್ಯಾಂಪ್ ಇದೆ.  ತಂಟೆಕೋರ ಸಲಗಗಳು, ಯಾವುದೋ ಕಾರಣದಿಂದ ಗುಂಪಿನಿಂದ ಹೊರದಬ್ಬಲ್ಪಟ್ಟ ಒಂಟಿ ಆನೆಗಳು, ಗಾಯಗೊಂಡ ಕಾಡಾನೆಗಳು, ವೃದ್ಧ ಕಾಡಾನೆಗಳು, ಗರ್ಭಿಣಿ ಆನೆಗಳನ್ನು ಇಲ್ಲಿ ಸಾಕಲಾಗುತ್ತದೆ. ಇಲ್ಲಿರುವ ಅತ್ಯುತ್ತಮ ಮಾವುತರು ಅಂತಹ ಆನೆಗಳನ್ನು ಪಳಗಿಸಿ ಸಾಕಾನೆಗಳನ್ನಾಗಿಸುತ್ತಾರೆ. ಆದ್ದರಿಂದಲೇ ಎಲ್ಲ ವಯಸ್ಸಿನ ಆನೆಗಳನ್ನು ಇಲ್ಲಿ ನೋಡಬಹುದು.

ಪ್ರವೇಶ ದ್ವಾರ


ಸಾಲಾಗಿ ಕಟ್ಟಿ ಹಾಕಿರುವ ಆನೆಗಳು, ಕೆಲವು ಆನೆಗಳ ಮಧ್ಯದಲ್ಲಿ ಪುಟ್ಟ ಮರಿಗಳು, ಪ್ರತೀ ಆನೆಯ ಬಳಿ ಇಬ್ಬರು ಮಾವುತರು ಇದು ಸಕ್ಕರೆಬಯಲಿನ ಆನೆ ಕ್ಯಾಂಪಿಗೆ ಬೆಳಗಿನ ಹೊತ್ತು ಭೇಟಿ ನೀಡಿದಾಗ ಕಾಣಿಸಿದ ದೃಶ್ಯ.  ಬನ್ನಿ ಹತ್ತಿರ ಬನ್ನಿ ಮೇಡಂ ಇವನ ಹೆಸರು ಕರಣ್ , ಏ ಕರಣ್ ಈ ಮೇಡಂಗೆ ನಮಸ್ಕಾರ ಮಾಡು ಎಂದ ಮಾವುತನ ಧ್ವನಿಯನ್ನನುಸರಿಸಿ ಸೊಂಡಿಲೆತ್ತಿ ತಲೆಯಮೇಲಿಡುವ, ಹಾರ ಹಾಕಿ ಸ್ವಾಗತಿಸುವ, ಎರಡು ವರ್ಷದ ಮುದ್ದಾದ ಆನೆ ಮರಿ ಇಲ್ಲಿ ಮಕ್ಕಳ ಪ್ರಧಾನ ಆಕರ್ಷಣೆ.

ಎರಡು ವರ್ಷದ ಕರಣ್


ಪ್ರತೀ ಆನೆಗೆ ಇಬ್ಬರು ಮಾವುತರು ಇರುತ್ತಾರೆ. ಬೆಳಗಿನ ವೇಳೆಯಲ್ಲಿ ಇವುಗಳಿಗೆ ಇಲ್ಲಿ ಸ್ನಾನ ಮಾಡಿಸಿ, ಆಹಾರ ನೀಡಿ, ಆರೋಗ್ಯ ತಪಾಸಣೆ ನಡೆಸಿ ನಂತರ ಕಾಡಿನಲ್ಲಿ ಬಿಡಲಾಗುತ್ತದೆ. ಅವುಗಳನ್ನು ಮಾರನೆಯ ದಿನ ಬೆಳಗಿನ ಜಾವದಲ್ಲಿ ಮತ್ತೆ ಇಲ್ಲಿಗೆ ಕರೆತರಲಾಗುತ್ತದೆ.  ತಮ್ಮ ಆನೆಯ ಸಂಪೂರ್ಣ ಜವಾಬ್ದಾರಿ ಅವುಗಳ ಮಾವುತರದ್ದು, ಏನೇ ಆದರೂ ಅವರೇ ಹೊಣೆ. ಒಂದು ಆನೆಯ ಮಾವುತ ಬೇರೆ ಆನೆಗಳ ಬಳಿ ಹೋಗುವಂತಿಲ್ಲ ಏಕೆಂದರೆ ಅವು ಇವರ ಧ್ವನಿಗೆ ಹೊಂದಿಕೊಂಡಿರದೇ ಇದ್ದರೆ ಇವರ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುತ್ತದೆ

ಸಲಾಮ್ ಮಾಡುವ ದೈತ್ಯ ದೇಹಿ


ಹೆಣ್ಣಾನೆಗಳು ಋತುಸಮಯದಲ್ಲಿ ಕಾಡಿನ ಗಂಡು ಸಲಗಗಳ ಆಕರ್ಷಣೆಗೊಳಗಾಗಿ ನಾಲ್ಕಾರು ದಿನ ವಾಪಾಸ್ ಬರುವುದಿಲ್ಲ. ಒಮ್ಮೆ ಫಲವತಿಯಾದ ನಂತರ ವಾಪಾಸ್ ಬರುತ್ತವೆ ಎನ್ನುತ್ತಾರೆ ಇಲ್ಲಿನ ಮಾವುತರೊಬ್ಬರು. ಸುಮಾರು ಮೂರು ತಲೆಮಾರುಗಳಿಂದ ಇಲ್ಲಿ ಆನೆಗಳನ್ನು ನೋಡಿಕೊಳ್ಳುತ್ತಿರುವ ಮಾವುತರು ತಮ್ಮ ನಂತರದ ತಲೆಮಾರಿಗೂ ಇದನ್ನು ವರ್ಗಾಯಿಸುತ್ತಿದ್ದುದಕ್ಕೆ ಸಾಕ್ಷಿಯಾಗಿ ಅಲ್ಲಿ ಅವರ  ೧೦-೧೨ ವರ್ಷದ ಮಕ್ಕಳು ಆನೆಗಳೊಂದಿಗೆ ಆತ್ಮೀಯವಾಗಿ ಆಡುತ್ತಿದ್ದುದು ಕಾಣುತ್ತಿತ್ತು.

ಪ್ರೀತಿಯ ಬಂಧ


 ಇಲ್ಲಿ ಬೆಳಗಿನ ಸಮಯದಲ್ಲಿ ಈ ಮಾವುತರು ತಮ್ಮ ಮಕ್ಕಳನ್ನು ನೋಡಿಕೊಳ್ಳುವಂತೆಯೆ ಈ ಆನೆಗಳಿಗೆ ಸ್ನಾನ ಮಾಡಿಸಿ, ತಲೆಗೆ ಎಣ್ಣೆ ತಿಕ್ಕಿ, ನಂತರ ಒಂದಿಷ್ಟು ಬಿಳಿಹುಲ್ಲು, ಬೆಲ್ಲ, ತೆಂಗಿನ ಕಾಯಿಯ ಮಿಶ್ರಣವನ್ನು ತಿನ್ನಿಸುತ್ತಾರೆ.  ಅಮ್ಮನಿಗೆ, ಅಜ್ಜಿಗೆ ಹೀಗೆ ತಿನ್ನಿಸುವುದನ್ನು ನೋಡುತ್ತಾ ತಾನೂ ತಿಂದೇಬಿಡುತ್ತೇನೆ ಎಂಬ ಭ್ರಮೆಯಲ್ಲಿ ಹುಲ್ಲಿನ ಬುಟ್ಟಿಗೆ ಬಾಯಿ ಹಾಕುತ್ತಿದ್ದ ಪುಟಾಣಿ ಮರಿಯೊಂದು ನಮ್ಮ ಕೊಟ್ಟಿಗೆಯಲ್ಲಿ ಹೀಗೆ ಮಾಡುತ್ತಿದ್ದ ಗೌರಿ ದನದ ಕರುವನ್ನು ನೆನಪಿಸಿತು.
 ಹೀಗೆ ತಿನ್ನಿಸುತ್ತಿದ್ದ ಮಾವುತನೊಬ್ಬ ಬುಟ್ಟಿಯಲ್ಲಿದ್ದ ತೆಂಗಿನಕಾಯಿಯನ್ನು ತನ್ನ ಬಾಯಲ್ಲಿ ಹಾಕಿಕೊಂಡು ಜಗಿದ. “ಛಿ ಇದನ್ನೂ ಬಿಡದೆ ನುಂಗುತ್ತಾರಲ್ಲಪ್ಪ” ಎಂದುಕೊಳ್ಳುವಷ್ಟರಲ್ಲಿ ಅರ್ಧಮರ್ಧ ಜಗಿದ ಕಾಯಿಚೂರಿನ್ನು ಬಾಯಿಂದ ಹೊರತೆಗೆದು ಅದರೊಂದಿಗೆ ಬೆಲ್ಲ ಸೇರಿಸಿ ಪುಟಾಣಿ ಮರಿಯ ಬಾಯಿಯಲ್ಲಿಟ್ಟದ್ದು ನೋಡಿ ಕಣ್ಣಂಚು ಒದ್ದೊದ್ದೆ.

ಒಲಿಸಿಕೊಳ್ಳಲು ಹುಲ್ಲು, ಬೆಲ್ಲಗಳ ಲಂಚ


ಆನೆಗಳು ಮರಿಗಳನ್ನು ತುಂಬಾ ಜತನದಿಂದ ಸಾಕುತ್ತವೆ.  ತಾಯಿಯೊಂದೇ ಅಲ್ಲದೆ ಅಜ್ಜಿ, ಗುಂಪಿನ ಇತರೆ ಹೆಣ್ಣಾನೆಗಳೂ ಕೂಡ ಮರಿಗಳನ್ನು ಕಾಪಾಡುತ್ತವೆ.  ಕಾಡಾನೆಗಳ ಗುಂಪಿನಲ್ಲಿ ಮರಿಗಳಿಗೆ ಸುಮಾರು ಎಂಟು ವರ್ಷ ಆಗುವವರೆಗೂ ಪ್ರತೀ ಹಂತದಲ್ಲೂ ಅವುಗಳಿಗೆ ಹಿರಿಯಾನೆಗಳು ಶಿಕ್ಷಣ ನೀಡುತ್ತವೆ.

ಅಜ್ಜಿ, ಅಮ್ಮನ ನಡುವೆ ಸುರಕ್ಷಿತ ಮರಿ

ಸಕ್ಕರೆಬೈಲಿನಲ್ಲಿ ಈ ವಿಷಯ ಸ್ಪಷ್ಟವಾಗಿ ಅರ್ಥವಾಗುತ್ತದೆ.  ಇಲ್ಲಿ ಮರಿಗಳಿರುವ ಆನೆಗಳ ಪಕ್ಕದಲ್ಲೇ ಅವುಗಳ ತಾಯಿಯನ್ನೂ(ಮರಿಯ ಅಜ್ಜಿ) ಕಟ್ಟಲಾಗುತ್ತದೆ.  ಅಂದರೆ ಪ್ರತೀ ಮರಿಯೂ ತಾಯಿ ಮತ್ತು ಅಜ್ಜಿಯ ಮಧ್ಯೆ ಓಡಾಡಿಕೊಂಡಿರುತ್ತದೆ.  ಇಲ್ಲಿ ೧೫ ದಿನಗಳಷ್ಟೇ ಆಗಿದ್ದ ಮರಿಯನ್ನು  ಅಜ್ಜಿ ಮತ್ತು ತಾಯಿ ತಮ್ಮನ್ನು ದಾಟಿ ಆಚೀಚೆ ಹೊಗದಂತೆ ತಡೆಯುತ್ತಿದ್ದವು.  ಎರಡು ತಿಂಗಳ ಮರಿಯೊಂದು ತುಂಟಾಟವಾಡುತ್ತಾ ಓಡಾಡಿಕೊಂಡಿದ್ದರೂ ತಾಯಿ, ಅಜ್ಜಿ ಗಮನಿಸುತ್ತಲೇ ಇದ್ದವು.  ಅದೇನಾದರೂ ಸ್ವಲ್ಪ ದೂರಾದರೆ ಸೊಂಡಿಲನ್ನು ಚಾಚಿ ಕರೆಯುತ್ತಿದ್ದವು. 

ಅಮ್ಮ ಮಡಿಲು


 ಮಾವುತನನ್ನು ಓಡಿಸಿಕೊಂಡು ಹೋಗಿ ಗುದ್ದುವುದು, ಸರಪಳಿ ಕಟ್ಟಲು ಹಾಕಿದ್ದ ಗೂಟವನ್ನು ಗುದ್ದುವುದು, ಅದರಲ್ಲಿದ್ದ ರಿಂಗನ್ನು ಎಳೆದು ಕೀಳಲು ಪ್ರಯತ್ನಿಸುವುದು ಮುಂತಾದ ಕೀಟಲೆ ಮಾಡಿಕೊಂಡು ತರಲೆ ಪುಟ್ಟನಂತೆ ಓಡಾಡುತ್ತಿದ್ದ ಮರಿಯೊಂದು ನಂತರ ಅವುಗಳನ್ನು ಕಾಡಿಗೆ ಬಿಡಲು ಕರೆದೊಯ್ಯುವುವಾಗ, ಗಂಭೀರವಾಗಿ ಸ್ವಲ್ಪವೂ ಆಚೀಚೆ ನೋಡದೆ ಅಜ್ಜಿ ಮತ್ತು ಅಮ್ಮನ ಮಧ್ಯೆ ವಿಧೇಯ ವಿದ್ಯಾರ್ಥಿಯಂತೆ ನಡೆಯುತ್ತಿದ್ದುದು ನೋಡಿದಾಗ ಆಶ್ಚರ್ಯವಾಯಿತು.  ಕಾಡಿನಲ್ಲಿ ಮರಿಗಳು ಹುಲಿ, ಸೀಳುನಾಯಿಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚಿರುವುದರಿಂದ ದೊಡ್ದ ಆನೆಗಳು ಮರಿಗಳನ್ನು ಈ ರೀತಿ ರಕ್ಷಿಸುತ್ತವೆ.



 ಮಾವುತನ ಒಂದು ಚಿಕ್ಕ ಅಣತಿಗೆ ತನ್ನ ಕಾಲುಗಳನ್ನೇ ಮೆಟ್ಟಿಲಂತೆ ಮಡಚಿ ಆತನಿಗೆ ತನ್ನ ಕಾಲು ಸೊಂಡಿಲುಗಳ ಮುಖಾಂತರ ತನ್ನ ಮೇಲೇರಲು ಬಿಡುವ ದೈತ್ಯ ದೇಹಿ, ಅಂತಹ ದೈತ್ಯ ದೇಹಿಯನ್ನು ಸಂಪೂರ್ಣ ನಂಬಿಕೆಯೊಂದಿಗೆ ಮೇಲೇರುವ, ತನ್ನ ಮಗುವಂತೆ ನೆತ್ತಿಗೆ ಎಣ್ಣೆ ತಿಕ್ಕಿ ಮಾಲೀಷು ಮಾಡುವ ಮಾವುತರ ಅನುಭಂದ ನೋಡಿ ಮನ ತುಂಬಿ ಬರುತ್ತದೆ.



ಆನೆಗಳು ನಮ್ಮ ಕರ್ನಾಟಕದ ಜನತೆಗೆ ಅಪರೂಪವಲ್ಲ. ಎಲ್ಲರೂ ಯಾವುದೋ ದೇವಸ್ಥಾನಗಳಲ್ಲೋಮೃಗಾಲಯಗಳಲ್ಲೋ, ನೋಡಿಯೇ ಇರುತ್ತಾರೆ.  ಕಾಡಿನಂಚಿನಲ್ಲಿರುವ ಊರುಗಳ ಜನರಿಗಂತೂ ಇವುಗಳ ಹೆಸರೆತ್ತಿದರೆ ಕೋಪ ಬರುವಷ್ಟು ಇವುಗಳ ಉಪಟಳ ಹೆಚ್ಚಿದೆ.  ಆದರೂ ಇವುಗಳ ಜೀವನಕ್ರಮವನ್ನು, ಮರಿಗಳೊಂದಿಗಿನ ಅವುಗಳ ಬಾಂಧವ್ಯವನ್ನು ಸ್ವಲ್ಪ ಮಟ್ಟಿಗಾದರೂ ತಿಳಿಯಬೇಕೆಂದರೆ ಸಕ್ಕರೆಬೈಲಿಗೆ ಭೇಟಿ ನೀಡಬೇಕು. 


ಕೆಳಗಿನ ಲಿಂಕಿನಲ್ಲಿ ತುಂಟ ಆನೆಮರಿಯ ವಿಡಿಯೋ ಇದೆ.

3 comments:

  1. nice ..cute narration Suma. :)

    ReplyDelete
  2. ನಿಮ್ಮ ಲೇಖನ ಓದುತ್ತಿದ್ದಂತೆ, ಸಕ್ಕರೆಬೈಲಿನಲ್ಲಿ ಸಕ್ಕರೆ ಮೆದ್ದಂತಹ ಅನುಭವವಾಯಿತು!

    ReplyDelete