19 Sept 2016

ವಿಚಿತ್ರ ಜೀವಿಗಳು - ೧ - ಜರ್ಬೋವಾ

ಜರ್ಬೋವಾ, ಇದೊಂದು ಸಸ್ತನಿಗಳ ವರ್ಗಕ್ಕೆ ಸೇರಿದ ಪುಟ್ಟ ಜೀವಿ. ಇಲಿಗಳ ಗಣವಾದ ರೋಡೆನ್ಸಿಯಾಕ್ಕೆ ಇದೂ ಸಹ ಸೇರಿದ್ದರೂ ಇಲಿಗಳಿಗಿಂತ ಭಿನ್ನವಾದ ದೇಹರಚನೆಯಿದೆ. ಕಾಂಗರೂಗಳಂತೆ ಗಿಡ್ಡನೆಯ ಮುಂಗಾಲುಗಳು ಉದ್ದವಾದ ಹಿಂಗಾಲುಗಳು, ದೇಹದ ಮೂರು ಪಟ್ಟು ಉದ್ದವಾದ ಬಾಲ ಇವುಗಳಿಗಿದೆ.

ಜರ್ಬೋವಾ - ಚಿತ್ರಕೃಪೆ ಅಂತರ್ಜಾಲ


ಕಾಂಗರೂ ಗಳಂತೆಯೇ ಹಿಂಗಾಲುಗಳಲ್ಲಿ ಕುಪ್ಪಳಿಸುವ ಜರ್ಬೋವಾಗಳ ಉದ್ದ ಬಾಲ ದೇಹದ ಸಮತೋಲನವನ್ನು ಕಾಪಾಡುತ್ತದೆ. ಅಡ್ಡಡ್ಡವಾಗಿಯೂ ಕುಪ್ಪಳಿಸಬಲ್ಲ ಸಾಮರ್ಥ್ಯ ಇವುಗಳ ವಿಶೇಷ.
ಅತ್ಯಂತ ತೀಕ್ಷ್ಣವಾದ ಶ್ರವಣ ಸಾಮರ್ಥ್ಯ ಇವುಗಳನ್ನು ಶತ್ರುಗಳಿಂದ ರಕ್ಷಿಸುತ್ತದೆ. 
 ಮರಳುಗಾಡು ಇವುಗಳ ವಾಸಸ್ಥಾನವಾದ್ದರಿಂದ ಚರ್ಮದ ಬಣ್ಣವೂ ಮರಳಿನಂತಿದೆ.

ಉತ್ತರ ಆಫ್ರಿಕಾ ಖಂಡ, ಏಷಿಯಾದ ಚೀನಾ, ಮಂಚೂರಿಯಾ ಮೊದಲಾದ ದೇಶಗಳ ಮರುಭೂಮಿಗಳಲ್ಲಿ ವಾಸಿಸುವ ಜರ್ಬೋವಾ ನಿಶಾಚರಿ. ಹಗಲು ಹೊತ್ತಿನಲ್ಲಿ ಬಿಸಿಲಿನ ಝಳ ತಪ್ಪಿಸಿಕೊಳ್ಳಲು ನೆಲದಲ್ಲಿ ನಿರ್ಮಿಸಿಕೊಂಡ ಬಿಲಗಳಲ್ಲಿ ಅಡಗುತ್ತದೆ.

ಅತ್ಯಂತ ಕುತೂಹಲಕಾರಿಯಾದ ಸಂಗತಿಯೆಂದರೆ ಜರ್ಬೋವಾಗಳು ನಾಲ್ಕು ರೀತಿಯ ಬಿಲಗಳನ್ನು ನಿರ್ಮಿಸಿಕೊಳ್ಳುತ್ತವೆ.
ಎರಡು ತತ್ಕಾಲಿಕ ಬಿಲಗಳು ಮತ್ತು ಎರಡು ಶಾಶ್ವತವಾದ ಬಿಲಗಳು. 
೧. ಬೇಸಿಗೆಯಲ್ಲಿ ಹಗಲು ಹೊತ್ತಿನಲ್ಲಿ ಅಡಗಲು ಚಿಕ್ಕದಾದ ತತ್ಕಾಲಿಕ ಬಿಲಗಳು
೨. ಬೇಸಿಗೆಯಲ್ಲಿ ರಾತ್ರಿ ಬೇಟೆಯಾಡಲು ತತ್ಕಾಲಿಕ ಬಿಲಗಳು.
೩. ಶಾಶ್ವತವಾದ ಬೇಸಿಗೆಯ ಬಿಲಗಳು. ಈ ಬಿಲಗಳಲ್ಲಿ ಅವುಗಳ ಸಂಸಾರವಿರುತ್ತದೆ. ಮರಿಗಳನ್ನು ಬೆಳೆಸುವುದು ಇದೇ ಬಿಲಗಳಲ್ಲಿ.
೪. ಚಳಿಗಾಲದ ದೀರ್ಘನಿದ್ದೆಗೆ ಜಾರುವ ಶಾಶ್ವತ ಬಿಲಗಳು.
ತತ್ಕಾಲಿಕ ಬಿಲಗಳು ಶಾಶ್ವತ ಬಿಲಗಳಿಗಿಂತ ಕಡಿಮೆ ಉದ್ದವಾಗಿರುತ್ತವೆ.
ಇಷ್ಟು ಚಿಕ್ಕ ಜೀವಿಯೂ ವಾತಾವರಣಕ್ಕೆ   ತಕ್ಕಂತೆ ವಾಸಸ್ಥಾನ ನಿರ್ಮಿಸಿಕೊಳ್ಳುವುದರ ಮುಂದೆ ಮಾನವ ಬೇಸಿಗೆಯ ಗಿರಿಧಾಮಗಳಿಗೆ ತೆರಳುವುದು, ರಾಜ ಮಹಾರಾಜರು ಬೇಸಿಗೆ ಅರಮನೆಗಳನ್ನು ನಿರ್ಮಿಸಿಕೊಳ್ಳುವುದು ಯಾವ ಮಹಾ ವಿಷಯ ಅಲ್ಲವೇ? 

ಹೆಚ್ಚಿನ ಜರ್ಬೋವಾಗಳು ಸಸ್ಯಾಹಾರಿಗಳಾದರೂ ಕೆಲವೊಂದು ಪ್ರಭೇದದ ಜರ್ಬೋವಾಗಳು ಕೀಟಗಳನ್ನೂ ತಿನ್ನುತ್ತವೆ.
ಹೆಣ್ಣು ಜರ್ಬೋವಾಗಳು ಬೇಸಿಗೆಯಲ್ಲಿ ಎರಡು ಬಾರಿ ಮರಿ ಹಾಕುತ್ತವೆ. ಹೆಚ್ಚಿನ ಸಸ್ತನಿಗಳಂತೆ ಮರಿಗಳನ್ನು ದೊಡ್ಡದಾಗುವವರೆಗೆ ಹೆಣ್ಣುಗಳೇ ಸಾಕುತ್ತವೆ.


ಬಲೂಚಿಸ್ತಾನ ಪಿಗ್ಮಿ ಜರ್ಬೋವಾ ಎಂಬ ಪ್ರಭೇದದ ಜರ್ಬೋವಾಗಳನ್ನು "ಪ್ರಪಂಚದ ಅತ್ಯಂತ ಚಿಕ್ಕ ಗಾತ್ರದ ರೋಡೆಂಟ್" ಎಂದು ಜೀವವಿಜ್ಞಾನಿಗಳು ಗುರುತಿಸುತ್ತಾರೆ.

ಈ ವಿಡಿಯೋ ಲಿಂಕ್ ನಲ್ಲಿ ಜರ್ಬೋವಾಗಳ ಕುಪ್ಪಳಿಸುವ ಸಾಮರ್ಥ್ಯದ ಬಗ್ಗೆ ಮಾಹಿತಿ ಇದೆ.
https://www.youtube.com/watch?v=nuM8kqayIrY

ಮಾಹಿತಿ ಹಾಗೂ ಚಿತ್ರ ಕೃಪೆ - ಅಂತರ್ಜಾಲ.



3 comments:

  1. ವಿಚಿತ್ರ ವಿಶ್ವ! ಪರಿಚಯ ಮಾಡಿಕೊಡುತ್ತಿರುವ ನಿಮಗೆ ಧನ್ಯವಾದಗಳು.

    ReplyDelete
  2. ಅಬ್ಬಬ್ಬಾ ಎನ್ನಿಸುತ್ತದೆ.. ಜೀವಜಗತ್ತಿನಲ್ಲಿ ಏನೆಲ್ಲಾ ವಿಶಿಷ್ಟತೆ ತುಂಬಿದ್ದಾನೆ ಆ ಸೃಷ್ಟಿಕರ್ತ
    ಅಣು ಅಣುವಾಗಿ ಪರಿಚಯಿಸುವ ನಿಮ್ಮ ಬರಹದ ಶೈಲಿ ಮತ್ತು ನಿಮ್ಮ ಕುತೂಹಲ ಭರಿತ ಮನಸ್ಸಿಗೆ ಪ್ರಣಾಮಗಳು

    ಸುಂದರ ಲೇಖನ ಮೇಡಂ

    ReplyDelete
  3. ಜೀವ ವೈವಿಧ್ಯತೆಗೆ ಒಂದು ಉತ್ತಮ ಉದಾಹರಣೆ.ದ್ವಿತೀಯ ಪಿ ಯು ಸಿ ಜೀವಶಾಸ್ತ್ರ ಪುಸ್ತಕದಲ್ಲಿ ಕಾಂಗರೂ ಇಲಿಯ ಉದಾಹರಣೆ ಇದೆ.ಉತ್ತಮವಾದ ಲೇಖನ

    ReplyDelete