24 Jan 2017

"ಉತ್ತರಕಾಂಡ" - ನನ್ನ ಅನಿಸಿಕೆಗಳು

ನನಗ್ಯಾವಾಗಲೂ ಮಹಾಭಾರತಕ್ಕೆ ಹೋಲಿಸಿದಾಗ ರಾಮಾಯಣ ಸ್ವಲ್ಪ ನೀರಸವೆನ್ನಿಸುತ್ತದೆ. ಮಹಾಭಾರತದಲ್ಲಿ ನವರಸಗಳೂ ತುಂಬಿದೆ. ಸಮಾಜದಲ್ಲಿ ಅತ್ಯಂತ ಸಹಜವಾಗಿ ನಡೆಯುವ ಘಟನೆಗಳೇ ಕತೆಯಾಗಿದೆ. ಮುಖ್ಯ ಪಾತ್ರಗಳೂ ಸಹ ಮಾನವ ಸಹಜ ರಾಗ ದ್ವೇಷಗಳಿಂದ, ಸ್ನೇಹ, ಪ್ರೀತಿಗಳಿಂದ ಕೂಡಿ ಜೀವಂತವೆನ್ನಿಸುತ್ತವೆ.
 ಆದರೆ ರಾಮಾಯಣ ಕರುಣರಸ ಪ್ರಧಾನವಾದದ್ದು.  ರಾಮಾಯಣದಲ್ಲಿ  ಕೆಲವು ಪಾತ್ರಗಳನ್ನು ಅತಿಯಾಗಿ ವೈಭವೀಕರಿದರೆ ಇನ್ನು ಕೆಲವು ಪಾತ್ರಗಳ ಪೋಷಣೆಯೆ ಸರಿಯಾಗಿಲ್ಲ.  ಮುಖ್ಯ ಪಾತ್ರವಾದ ರಾಮನ ವ್ಯಕ್ತಿತ್ವವೇ ದ್ವಂದ್ವಮಯವಾಗಿದೆ. ಇನ್ನು ಹೆಸರಿಗೆ ನಾಯಕಿಯಾದರೂ ಸೀತೆಯ ಪಾತ್ರಪೋಷಣೆ ಕೂಡ ಪೇಲವವಾಗಿದೆ. ಲಕ್ಷ್ಮಣನನ್ನು ಸ್ವತಂತ್ರ ವ್ಯಕ್ತಿತ್ವವೇ ಇಲ್ಲದ ಆಜ್ಞಾನುವರ್ತಿಯಂತೆ ಚಿತ್ರಿಸಲಾಗಿದೆ. ಲಕ್ಷಣನ ಹೆಂಡತಿ ಊರ್ಮಿಳೆಯದಂತೂ ಅತ್ಯಂತ ನಿರ್ಲಕ್ಷಿತ ಪಾತ್ರ.  ಮದುವೆಯಾದ ಕೆಲವೇ ದಿನಗಳಲ್ಲಿ ತನ್ನನ್ನು ಬಿಟ್ಟು ಅಣ್ಣನ ಸೇವೆಗೆಂದು ಹೊರಡುವ ಗಂಡನನ್ನು ಪಡೆದ ಹೆಂಡತಿಯಾಗಿ, ಅತ್ಯಂತ ಮನಮುಟ್ಟುವ ಪಾತ್ರವನ್ನಾಗಿ ಕಟ್ಟಿಕೊಡಬಲ್ಲ ಅವಕಾಶವಿದ್ದರೂ ಊರ್ಮಿಳೆಯ ಬಗ್ಗೆ ಕವಿ ಹೆಚ್ಚೇನೂ ಹೇಳಿಲ್ಲ.
ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಎರಡೇ ವಿಧಧ ಪಾತ್ರಗಳು, ಒಳ್ಳೆಯ ಪಾತ್ರಗಳು ಅತಿಯಾದ ಆದರ್ಶಗಳ ಭಾರ ಹೊತ್ತು ಬಳಲಿದರೆ ಕೆಟ್ಟ ಪಾತ್ರಗಳು ಒಳ್ಳೆಯವರ ಒಳ್ಳೆಯತನವನ್ನು ಎತ್ತಿಹಿಡಿಯಲೆಂದೇ ಸೃಷ್ಟಿಸಿದಂತೆ ತೋರಿ ಬೇಸರ ಹುಟ್ಟಿಸುತ್ತವೆ. ಈ ದೃಷ್ಟಿಯಿಂದ ರಾಮಾಯಣ ಯಾವ ಕಾಲದಲ್ಲೂ ಇರದ, ಹೀಗಿದ್ದರೆ ಸುಂದರವೆಂಬ, ಕಲ್ಪನೆಯ, ಆದರ್ಶ ಸಮಾಜವೊಂದರ ಕತೆಯಾಗಿಬಿಡುತ್ತದೆ.

ರಾಮಾಯಣದಲ್ಲಿನ ಈ ಕೊರತೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಕೆಲವೊಂದು ಪಾತ್ರಗಳಿಗೆ ನ್ಯಾಯ ಒದಗಿಸಲೆಂದೇ ಭೈರಪ್ಪನವರು ಉತ್ತರಕಾಂಡವನ್ನು ಸೃಷ್ಟಿಸಿದಂತೆನ್ನಿಸುತ್ತದೆ,

ಭೈರಪ್ಪನವರ ಪರ್ವ, ದಾಟು, ಸಾರ್ಥ, ಗೃಹಭಂಗ ಮೊದಲಾದ ಕಾದಂಬರಿಗಳಷ್ಟು ಆಳವಾಗಿ ಇಲ್ಲವಾದರೂ,"ಉತ್ತರಕಾಂಡ"ವು ರಾಮಾಯಣದಲ್ಲಿ ಅವ್ಯಕ್ತವಾಗಿರುವ ಸೀತೆ, ಊರ್ಮಿಳೆ, ಕೌಸಲ್ಯ, ಸುಮಿತ್ರ ಮೊದಲಾದ ಸ್ತ್ರೀ ಪಾತ್ರಗಳ ಕತೆಯನ್ನು ಹೇಳುತ್ತದೆ.

ಮೂಲ ವಾಲ್ಮೀಕಿ ರಾಮಾಯಣದ ಪಾತ್ರಗಳ ವ್ಯಕ್ತಿತ್ವವನ್ನು ಹೆಚ್ಚು ಬದಲಾಯಿಸದೇ, ಅದರಲ್ಲಿ ಹೇಳದೇ ಅವ್ಯಕ್ತವಾಗಿರುವ ಅಂಶಗಳನ್ನು ಎತ್ತಿ ಹಿಡಿವಂತೆ ಇಡೀ ಕಾದಂಬರಿಯನ್ನು ರಚಿಸಿದ ರೀತಿ ಹೆಚ್ಚು ಇಷ್ಟವಾಯಿತು.

 ಸೀತೆಯ ಮುಖಾಂತರ ನಾವಿಲ್ಲಿ ಎರಡು ರೀತಿಯ ರಾಮನನ್ನು ನೋಡುತ್ತೇವೆ. ಪಶ್ಚಾತ್ತಾಪದಲ್ಲಿ ನೊಂದಿರುವ ಅಹಲ್ಯೆಯನ್ನು, ಗೌತಮರೊಡನೆ ಒಂದುಗೂಡಿಸುವ ಮೃದು ಹೃದಯಿ, ಬೇಡರ ಜಾತಿಯ ಗುಹನನ್ನು ಆತ್ಮೀಯ ಗೆಳೆಯನೆನ್ನುವ, ಬೇಡರ ಜಾತಿಯ ತಪಸ್ವಿನಿಯಂತಿರುವ, ಶಬರಿಯ ಆತಿಥ್ಯವನ್ನು ಸ್ವೀಕರಿಸುವ ಮೇರು ವ್ಯಕ್ತಿತ್ವದ ರಾಮ, ರಾಜನಾಗಿ ಅಧಿಕಾರಕ್ಕೇರಿದೊಡನೆ ರಾಜಧರ್ಮಕ್ಕಾಗಿ,  ಸೀತೆಯನ್ನು ತೊರೆಯುವ, ಶೂದ್ರ ತಪಸ್ವಿ ಶಂಭೂಕನನ್ನು ಕೊಲ್ಲುವಷ್ಟು ಕಠೋರ ಹೃದಯಿಯಾಗಿಬಿಡುವ ಧರ್ಮದ ಮತ್ತೇರಿದ ರಾಮ.

 ತನ್ನ ಅನಿಸಿಕೆಗಳನ್ನು ನೇರಾನೇರವಾಗಿ ಹೇಳುವ,  ಅತ್ಯಂತ ವಾಸ್ತವಿಕ ನೆಲೆಯಲ್ಲಿ ಚಿಂತಿಸುವ ಊರ್ಮಿಳೆ ಹತ್ತಿರವಾಗುತ್ತಾಳೆ. ಅಕ್ಕ ಸೀತೆ, ತನ್ನ ಗಂಡನಿಗೆ ಬಿರುನುಡಿಗಳನ್ನಾಡಿದ್ದರೂ, ಅವಳಿದ್ದ ಪರಿಸ್ಥಿತಿಯಲ್ಲಿ ಅದು ಅತ್ಯಂತ ಸಹಜ ವರ್ತನೆ ಎಂದು ತೀರ್ಮಾನಿಸುವ  ವಿವೇಕ ಅವಳಲ್ಲಿರುವುದು ಅವಳ ವ್ಯಕ್ತಿತ್ವವನ್ನು ಎತ್ತರಕ್ಕೊಯ್ಯುತ್ತದೆ.

ಅಣ್ಣನ ಬಗ್ಗೆ ಅಪಾರ ಪ್ರೀತಿ ಗೌರವಗಳಿದ್ದರೂ ಅವನು ತಪ್ಪಿದಾಗ, ಬುದ್ಧಿ ಹೇಳುವ, ಹೊರನೋಟಕ್ಕೆ ಒರಟನಾದರೂ ಮೃದು ಹೃದಯಿಯಾದ,  ಲಕ್ಷ್ಮಣ  ಆಪ್ತನಾಗುತ್ತಾನೆ.   ಸೀತೆ ಮತ್ತು ಲಕ್ಷ್ಮಣನ ನಡುವೆ ಇದ್ದರಬಹುದಾದ ಗೆಳೆತನವೇ, ಮೂಲ ರಾಮಾಯಣದಲ್ಲಿ ಬಿಂಬಿತವಾದ ಪೂಜ್ಯಭಾವಕ್ಕಿಂತ ಹೆಚ್ಚು ವಾಸ್ತವ ಎನ್ನಿಸುತ್ತದೆ.

ಮೂಲ ರಾಮಾಯಣದಲ್ಲಿ, ರಾವಣನ ಹೆಂಡತಿ ಮಂಡೋದರಿ ಉತ್ತಮ ಗುಣವುಳ್ಳ ಪತಿವ್ರತೆ. ಆದರೆ "ಉತ್ತರಕಾಂಡ"ದಲ್ಲಿ   ಮಂಡೋದರಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವುದಿಲ್ಲ. ವಿಭೀಷಣನ ಹೆಂಡತಿ ಸರಮೆ ಮಂಡೋದರಿಯ ಇನ್ನೊಂದು ಚಿತ್ರವನ್ನು ಕಟ್ಟಿಕೊಡುತ್ತಾಳೆ.
ಪತಿವ್ರತೆಯರಲ್ಲೊಬ್ಬಳೆಂದೇ ಗುರುತಿಸಲ್ಪಡುವ ತಾರೆ ಇಲ್ಲಿ, ವಾಲಿ, ಸುಗ್ರೀವರಿಬ್ಬರನ್ನೂ ತನ್ನ ವಶಾನುವರ್ತಿಗಳನ್ನಾಗಿಸಿಕೊಂಡು ಅಧಿಕಾರ ಚಲಾಯಿಸುವ ಚಾಲಾಕಿ ಹೆಂಗಸಾಗಿ  ಚಿತ್ರಿತವಾಗಿದ್ದಾಳೆ.

ರಾವಣ ವಧೆಯ ನಂತರ, ಕುಲದ ಮರ್ಯಾದೆಗಾಗಿ ಹೋರಾಡಿದೆನೆ ಹೊರತು ನಿನಗಾಗಿ ಅಲ್ಲ ಎನ್ನುವ ರಾಮ ಸೀತೆಯ ಮನದಿಂದ ದೂರವಾಗುತ್ತಾನೆ. ಅಯೋಧ್ಯೆಗೆ ಬಂದ ನಂತರವೂ ಅವರಿಬ್ಬರ ನಡುವಿನ ಅಂತರ ಹಾಗೇ ಉಳಿದಿರುತ್ತದೆ. ಆದರೆ  ಗರ್ಭಿಣಿಯಾಗಿ ನಂತರ ತ್ಯಜಿಸಲ್ಪಡುತ್ತಾಳೆ. ಆ ನಡುವಿನ ಕಾಲದಲ್ಲಿಯ ಸೀತೆಯ ಅಂತರಂಗ ಎಲ್ಲೂ ವ್ಯಕ್ತವಾಗದಿರುವುದು   ಒಂದು ಮಿಸ್ಸಿಂಗ್ ಲಿಂಕ್ ಆಗಿ ಉಳಿದುಬಿಟ್ಟಿದೆ ಎನ್ನಿಸಿತು.

ಈ ಕಾದಂಬರಿಯನ್ನು ಓದಿದಾಗ ನನಗೆ ನೆನಪಿಗೆ ಬಂದಿದ್ದು ನಮ್ಮ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ ತಾಳಮದ್ದಲೆ. ಹೀಗೆ ಪೌರಾಣಿಕ ಪಾತ್ರಗಳ ಮನಮಂಥನ ನಡೆಸಿ ಹೊಸ ಹೊಸ ಹೊಳಹು ಕೊಡುವುದು ತಾಳಮದ್ದಲೆಯ ಕಲಾವಿದರಿಗೆ ಹೊಸದಲ್ಲ. ಮೂಲ ಕೃತಿಯಲ್ಲಿ ಅಲಕ್ಷಿತ ಪಾತ್ರವಾದರೂ , ಅವರ ಚಿಂತನೆ, ಮಾತುಗಾರಿಕೆಯಲ್ಲಿ ಅದನ್ನೇ ಮುಖ್ಯಪಾತ್ರವನ್ನಾಗಿಬಿಡಬಲ್ಲ ಶಕ್ತಿ ಈ ಕಲಾವಿದರದ್ದು.  ಆದ್ದರಿಂದ ಯಕ್ಷಗಾನ ತಾಳಮದ್ದಲೆಗಳನ್ನು ನೋಡುವ ಅಭ್ಯಾಸವಿದ್ದವರಿಗೆ ಈ ಕೃತಿ ತೀರಾ ವಿಶೇಷವಾದದ್ದನ್ನು ಹೇಳಿದಂತೇನೂ ಅನ್ನಿಸುವುದಿಲ್ಲ.
   










No comments:

Post a Comment