3 Mar 2017

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ



ನಮ್ಮ ದಿನನಿತ್ಯದ ಬದುಕಿನಲ್ಲಿನ ಜಂಜಾಟಗಳಿಂದ ಮುಕ್ತಿ ಹೊಂದಿ ಮನಸ್ಸನ್ನು ಸಂತೋಷವಾಗಿಡಬಲ್ಲ ಯಾವುದೇ ಸಂಗತಿಯನೊಡನೆ ತಾದ್ಯಾತ್ಮ ಸಾಧಿಸುವುದು ಆಧ್ಯಾತ್ಮಿಯೊಬ್ಬನ ಕನಸಾಗಿರುತ್ತದೆ. ಕೆಲವರಿಗೆ ದೇವರ, ಗುರುವಿನ ಧ್ಯಾನ ಆಧ್ಯಾತ್ಮವಾದರೆ, ಕೆಲವರಿಗೆ ತನ್ನಿಷ್ಟದ ಹವ್ಯಾಸದಲ್ಲಿ ತೊಡಗುವುದು ಆಧ್ಯಾತ್ಮವಾಗುತ್ತದೆ. ಪ್ರಕೃತಿಪ್ರಿಯನೊಬ್ಬ ಸುಂದರ ಪರಿಸರದಲ್ಲಿ ಆಧ್ಯಾತ್ಮಿಕ ಅನುಭೂತಿಗೊಳಗಾದರೆ, ಕಲಾಸಕ್ತನೊಬ್ಬ ಕಲೋಪಾಸನೆಯಲ್ಲಿ ಆಧ್ಯಾತ್ಮಿಕ ಅನುಭೂತಿ ಪಡೆಯುತ್ತಾನೆ.    ಈ ಒಂದು ಆಧ್ಯಾತ್ಮಿಕ ಅನುಭೂತಿಗಾಗಿ ಇರುವುದೆಲ್ಲವನ್ನೂ ಬಿಟ್ಟು ಇನ್ನೇನನ್ನೋ ಅರಸಿ ಹೊರಡುವವರೂ ಇದ್ದಾರೆ, ತಮ್ಮ ಕರ್ತವ್ಯವದಲ್ಲೇ ಇದನ್ನು ಪಡೆದವರೂ ಇದ್ದಾರೆ.

ಇಂತಹ ಆಧ್ಯಾತ್ಮಕ್ಕೂ ಪ್ರಾಣಿಜಗತ್ತಿಗೂ ಎತ್ತಲ ನೆಂಟು? ಜೀವಜಗತ್ತಿನಲ್ಲಿ ತುಂಬಾ ಉನ್ನತ ಸ್ಥಾನದಲ್ಲಿದ್ದೇವೆ ಎಂದುಕೊಂಡಿರುವ, ಉಳಿದೆಲ್ಲ ಪ್ರಾಣಿಗಳಿಗಿಂತ ಬುದ್ಧಿವಂತರೆಂದುಕೊಂಡಿರುವ ನಾವು, ಪ್ರಾಣಿಗಳು ಯಾವುದೇ ಸಂಸ್ಕಾರವಿಲ್ಲದ, ಆಧ್ಯಾತ್ಮಿಕ ಪ್ರಜ್ಞೆ ಇಲ್ಲದ ಜೀವಿಗಳು ಎಂದುಕೊಂಡಿದ್ದೇವೆ. ಆದರೆ ನಿಜ ಅರ್ಥದಲ್ಲಿ  ಪ್ರಕೃತಿಯೆಂಬ ಮಾಹಾಶಕ್ತಿಯೊಡನೆ ತಾದ್ಯಾತ್ಮ ಸಾಧಿಸಿ ಬದುಕುತ್ತಿರುವ ಪ್ರಾಣಿಗಳು ನಮಗಿಂತ ಹೆಚ್ಚಿನ ಆಧ್ಯಾತ್ಮಿಗಳೆನ್ನಬಹುದು.
ಬಾಲ್ಯ
 ಪ್ರಾಣಿ, ಪಕ್ಷಿ, ಕೀಟಗಳು ಬಾಲ್ಯದಿಂದಲೆ ಬದುಕಿಗೆ ಬೇಕಾದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕಾದುದದ್ದು ಅನಿವಾರ್ಯ. ಪಕ್ಷಿಜಗತ್ತಿನಲ್ಲಿ ಬಲಹೀನ ಮರಿಗಳನ್ನು ಬಲಶಾಲಿಯಾದ ಸೋದರ ಮರಿಗಳೇ ಕೊಂದುಬಿಡುತ್ತವೆ. ಆದ್ದರಿಂದ ಕಣ್ಣೂ ಸಹ ಕಾಣದ ಪುಟ್ಟ ಹಕ್ಕಿ ಮರಿಯೊಂದು ಹತ್ತಿರದಲ್ಲಿ ತಾಯಿ ಅಥವಾ ತಂದೆಯ ಇರುವಿನ ಸುಳಿವು ದೊರಕುತ್ತಿದ್ದಂತೆಯೆ ಹೆಚ್ಚು ಹೆಚ್ಚು ಕೂಗುತ್ತದೆ, ಹೀಗೆ ಹೆಚ್ಚು ಕೂಗುವ ಮರಿಗಳಿಗೇ ಹೆಚ್ಚಿನ ಆಹಾರ ದೊರಕುತ್ತದೆ. ಬೇಗ ದೊಡ್ಡದಾಗಿ ಹಾರಲು ಕಲಿತಷ್ಟೂ ಅದು ಬದುಕುವ ಸಾಧ್ಯತೆ ಹೆಚ್ಚುತ್ತದೆ.
ಚಿಟ್ಟೆಗಳ ಬಾಲ್ಯಾವಸ್ಥೆಯಾದ ಕಂಬಳಿಹುಳುವೊಂದು ತನ್ನ ಗಾತ್ರಕ್ಕೆ ಅತೀ ಎನ್ನುವಷ್ಟು ತಿಂದು ಶಕ್ತಿ ಸಂಚಯಿಸಿಕೊಳ್ಳುತ್ತದೆ. ಹೀಗೆ ಸಂಚಯಗೊಂಡ ಶಕ್ತಿಯಿಂದ ಮುಂದೆ ಕೋಶಾವಸ್ಥೆಯಲ್ಲಿ ಕುಳಿತು ರೆಕ್ಕೆ ಗಳಿಸಿ ಚಿಟ್ಟೆಯಾಗಿ ಬದಲಾಗುತ್ತದೆ.
 ಮನೆಯ ಬೆಕ್ಕಿನ ಮರಿಗಳು, ಮಲಗಿರುವ ಅಮ್ಮನ ಬಾಲದಲ್ಲಿ ಚಿನ್ನಾಟವಾಡುತ್ತಿರುವುದನ್ನು ಗಮನಿಸಿರಬಹುದು. ತಾಯಿ ತನ್ನ ಬಾಲವನ್ನು ಆಕಡೆ ಈಕಡೆ ಆಡಿಸುತ್ತಿರುತ್ತದೆ, ಅತ್ಯಂತ ತಲ್ಲೀನತೆಯಿಂದ ಮರಿಗಳು ಅದನ್ನು ಹಿಡಿದು ಕಚ್ಚಲು ಪ್ರಯತ್ನಿಸುತ್ತಿರುತ್ತವೆ. ಇದು ಆ ಸಮಯದಲ್ಲಿ ಆಟದಂತೆ ಕಂಡರೂ ಮರಿಗಳಿಗೆ ಬೇಟೆಯಾಡುವುದನ್ನು ಕಲಿಸುವ ವಿಧಾನವಾಗಿರುತ್ತದೆ.  

ಈ ಎಲ್ಲ ಉದಾಹರಣೆಗಳಲ್ಲಿ ಕಾಣಿಸುವಂತೆ ಬಾಲ್ಯವೆಂಬುದು ಶಕ್ತಿ ಸಂಚಯನದ ಕಾಲ. ದೈಹಿಕ ಶಕ್ತಿ, ಬೌದ್ಧಿಕ ಶಕ್ತಿಗಳನ್ನು ಹೆಚ್ಚು ಗಳಿಸಿದಷ್ಟೂ ಮುಂದಿನ ಜೀವನ ಸುಗಮ.  ಪ್ರಾಣಿಗಳ ಮರಿಗಳು ಅತ್ಯಂತ ಉತ್ಕಂಟಿತವಾಗಿ ಇದನ್ನು ಸಾಧಿಸುತ್ತವೆ.
ಇದು ಮಾನವನ ಜೀವನಕ್ಕೂ ಅನ್ವಯಿಸುತ್ತದೆ. ಬಾಲ್ಯದಲ್ಲಿನ ಕಲಿಕೆ ಮುಂದಿನ ಜೀವನವನ್ನು ನಡೆಸುವ ದಾರಿದೀಪ. ಬದುಕಿನ ಆ ಕಾಲಘಟ್ಟದಲ್ಲಿ ದೈಹಿಕ ಸಾಮರ್ಥ್ಯ, ಬೌದ್ಧಿಕ ಸಾಮರ್ಥ್ಯ ಎರಡನ್ನೂ ಗಳಿಸುವ ಪ್ರಾಮಾಣಿಕ ಪ್ರಯತ್ನವೇ ಆಧ್ಯಾತ್ಮ.
ಯೌವ್ವನ
ಹುಲಿ, ಸಿಂಹ ಮೊದಲಾದ ಬೇಟೆಯಾಡುವ ಪ್ರಾಣಿಗಳು ತಮ್ಮ ಉಗುರುಗಳನ್ನು ಒರಟಾದ ಮರದ ಕಾಂಡಕ್ಕೆ ತಿಕ್ಕಿ ಚೂಪಾಗಿರಿಸಿಕೊಳ್ಳುತ್ತವೆ. ಇದು ಅವುಗಳು ಬೇಟೆಯಾಡಲು ಅತೀ ಅವಶ್ಯಕ. ಹಕ್ಕಿಗಳು ತಮ್ಮ ರೆಕ್ಕೆಗಳ ನಡುವೆ ಒಂದಿನಿತೂ ಕೊಳೆ ಕಸ ಕೂರದಂತೆ ಆಗಾಗ ಶುಚಿಗೊಳಿಸಿಕೊಳ್ಳುತ್ತಲೇ ಇರುತ್ತವೆ. ಇದರಿಂದ ಹಾರುವಾಗ ರೆಕ್ಕೆಗಳ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.
ಪ್ರತಿಯೊಂದು ಪ್ರಾಣಿ ಪಕ್ಷಿಯೂ ತನ್ನದೇ ಆದ ಒಂದಿಷ್ಟು ಜಾಗವನ್ನು ಗುರುತಿಸಿಕೊಂಡಿರುತ್ತದೆ. ಆ ಜಾಗವನ್ನು ಅತ್ಯಂತ ಕೆಚ್ಚಿನಿಂದ ಕಾಪಾಡಿಕೊಳ್ಳುತ್ತದೆ. ಹೀಗೆ ತನ್ನದೇ ಆದ ನೆಲೆ ಹೊಂದುವುದು ವಾಸ, ಆಹಾರ, ರಕ್ಷಣೆಗೆ ಅತ್ಯಂತ ಉಪಯುಕ್ತ.
ಆಕ್ಟೋಪಸ್ ಅಕಶೇರುಕಗಳಲ್ಲೇ ಅತೀ ಬುದ್ಧಿವಂತ ಪ್ರಾಣಿ ಎನ್ನಿಸಿಕೊಂಡಿದೆ. ಇದು ತನ್ನನ್ನು ಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಅನೇಕ ಉಪಾಯ ಹೂಡುತ್ತದೆ.ಬೆನ್ನಟ್ಟಿದ ವೈರಿಯ ಮೇಲೆ ಕಣ್ಣು ಕಾಣಿಸದಿರುವಂತೆ, ವಾಸನೆ ತಿಳಿಯದಿರುವಂತೆ ಮಾಡುವ ಇಂಕಿನಂತಹ ದಟ್ಟ ಬಣ್ಣದ, ಕೆಟ್ಟ ವಾಸನೆಯ ದ್ರವವನ್ನು ಎರಚಿಬಿಡುವುದು, ವೈರಿಯನ್ನು  ಭಯಪಡಿಸುವಂತೆ  ದೇಹವನ್ನು ಹಾವಿನ ಆಕಾರಕ್ಕೆ ಬದಲಿಸಿಕೊಳ್ಳುವುದು, ಬಣ್ಣ ಬದಲಿಸಿಕೊಳ್ಳುವುದು, ತನ್ನ ಎಂಟು ಬಾಹುಗಳಲ್ಲಿ ಒಂದನ್ನು ದೇಹದಿಂದ ಕಳಿಚಿಕೊಂಡು ವೈರಿಯನ್ನು ಗೊಂದಲಗೊಳಿಸುವುದು ಅವುಗಳಲ್ಲಿ ಮುಖ್ಯವಾದವು.

ಹೀಗೆ ಪ್ರಾಣಿಗಳಿಗೆ ಯೌವ್ವನವೆಂಬುದು ಕೌಶಲ್ಯವನ್ನು ವೃದ್ದಿಗೊಳಿಸಿಕೊಳ್ಳುವ ಮೂಲಕ ಆಹಾರ ಪಡೆದುಕೊಳ್ಳುವ, ತನ್ನ ಸಾಮ್ರಾಜ್ಯವನ್ನು ಗುರುತಿಸಿಕೊಳ್ಳುವ, ತನ್ನನ್ನು ತಾನು ರಕ್ಷಿಸಿಕೊಳ್ಳುವ ಕಾಲ.
ನಮ್ಮ ಯೌವ್ವನವನ್ನೂ ಇದರಲ್ಲಿ ಸಮೀಕರಿಸಿಕೊಳ್ಳಬಹುದು. ನಾವು ಬಾಲ್ಯದಲ್ಲಿ ಕಲಿತ ವಿದ್ಯೆಯಿಂದ ನಮ್ಮ ಮತ್ತು ಸಮಾಜದ ಉನ್ನತಿಗೆ ಶ್ರಮಿಸುವುದು, ನಮ್ಮ ಕೌಶ್ಯಲ್ಯ ವೃದ್ದಿಗೆ ಬೇಕಾದ ಪ್ರಯತ್ನಗಳನ್ನು ಮನವಿಟ್ಟು ಮಾಡುವುದು, ನಮ್ಮದೆ ನಕಾರಾತ್ಮಕ ಗುಣಗಳೆಂಬ ವೈರಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಈ ವಯಸ್ಸಿನಲ್ಲಿ ಅತೀ ಮುಖ್ಯ.
ಸಂತತಿ
Oophaga pumilio ಮಧ್ಯ ಅಮೆರಿಕಾದ ಮಳೆ ಕಾಡುಗಳಲ್ಲಿ ವಾಸಿಸುವ ಕೆಂಪು ಬಣ್ಣದ ವಿಷಕಪ್ಪೆ. ಇದು ತನ್ನ ಮೊಟ್ಟೆ, ಮರಿಗಳನ್ನು ರಕ್ಷಿಸುವ ವಿಧಾನ ಅತ್ಯಂತ ವಿಶಿಷ್ಟವಾದದ್ದು.  ಮಳೆಕಾಡುಗಳ ದಟ್ಟ ಮರಗಳ ಬಳಿ ಇದರ ವಾಸ. ಹೆಣ್ಣು ಕಪ್ಪೆಯು ಸಂಗಾತಿಯ ಜೊತೆಗೂಡಿ, ಒಟ್ಟಿಗೆ ನಾಲ್ಕಾರು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳನ್ನು ಭಕ್ಷಕಗಳಿಂದ ರಕ್ಷಿಸುವ ಕೆಲಸ ಗಂಡಿನದು. ಮೊಟ್ಟೆಗಳ ಬೆಳವಣಿಗೆಗೆ ತೇವಾಂಶ ಅವಶ್ಯಕವಾದ್ದರಿಂದ ಗಂಡು ಕಪ್ಪೆ ತನ್ನ ಮೂತ್ರವನ್ನೇ ಸಿಂಪಡಿಸಿ ಮೊಟ್ಟೆಗಳ ತೇವಾಂಶವನ್ನು ಕಾಪಾಡುತ್ತದೆ.೧೦-೧೪ ದಿನಗಳ ನಂತರ ಮೊಟ್ಟೆಗಳು ಒಡೆದು ಮರಿಗಳು(ಗೊದಮೊಟ್ಟೆ) ಹೊರಬರುತ್ತವೆ. ಕಪ್ಪೆಯ ಮರಿಗಳು ಬೆಳೆಯಲು ನೀರಿನ ಅವಶ್ಯಕತೆ ಇದೆ. ಆದ್ದರಿಂದ ಈಗ ಹೆಣ್ಣು ಕಪ್ಪೆ ಒಂದೊಂದೇ ಮರಿಗಳನ್ನು ತನ್ನ ಬೆನ್ನ ಮೇಲೆ ಹೊತ್ತು ಮಳೆಕಾಡುಗಳ ದೈತ್ಯ ಮರವನ್ನೇರುತ್ತದೆ. ನೀರು ಬೇಕಾದರೆ ಮರವನ್ನೇರುವುದೇಕೆಂದಿರಾ? ಆ ದೈತ್ಯ ಮರಗಳ ಮೇಲೆ ಬೆಳೆದಿರುವ ಬಂದಳಿಕೆ ಸಸ್ಯಗಳು ತಮ್ಮ ಎಲೆಗಳ ನಡುವೆ ಮಳೆನೀರನ್ನು ಹಿಡಿದಿಟ್ಟುಕೊಂಡಿರುತ್ತವೆ.  ಇಂತಹ ಒಂದೊಂದು ಪುಟ್ಟ ನೀರಿನ ಕೊಳದಲ್ಲಿ ತನ್ನ ಒಂದೊಂದು ಮರಿಗಳನ್ನು ಹೊತ್ತೊಯ್ದು ಬಿಡುತ್ತದೆ ಈ ತಾಯಿಕಪ್ಪೆ. ಇಲ್ಲಿ ಅವುಗಳಿಗೆ ಭಕ್ಷಕಗಳ ಕಾಟ ಕಡಿಮೆಯೆಂಬುದು ಬಹುಶಃ ಈ ವಿಧಾನ ಅಳವಡಿಸಿಕೊಳ್ಳಲು ಕಾರಣವಿರಬಹುದು. ಆದರೆ ಹೀಗೆ ಬಿಟ್ಟೊಡನೆ ತಾಯಿ ಕಪ್ಪೆಯ ಕರ್ತವ್ಯ ಮುಗಿಯುವುದಿಲ್ಲ. ಆ ಮರಿಗಳು ಬೆಳೆದು ದೊಡ್ದದಾಗುವವರೆಗೂ ಅಂದರೆ ಸುಮಾರು ಒಂದು ತಿಂಗಳವರೆಗೂ ಪ್ರತಿಯೊಂದು ಮರಿಗಳಿರುವಲ್ಲಿಯೂ ಹೋಗಿ ತನ್ನದೇ  ಅಂಡಾಣುಗಳನ್ನು ಆಹಾರವಾಗಿ ಕೊಡುತ್ತದೆ.
ಕಪ್ಪೆಯಂತಹ ಪುಟ್ಟ ಜೀವಿಯೊಂದು ತಿಂಗಳುಗಳ ಕಾಲ ಅಪಾರ ಶಕ್ತಿ ಬೇಡುವ ಈ ಕೆಲಸಗಳನ್ನು ಮಾಡುವುದು ಒಂದು ರೀತಿಯ ಧ್ಯಾನವೇ ಅಲ್ಲವೆ?
ಮಳೆಕಾಡುಗಳಲ್ಲಿ ವಾಸಿಸುವ ಮಂಗಟ್ಟೆ ಹಕ್ಕಿಗಳಲ್ಲಿ ಹೆಣ್ಣು ಹಕ್ಕಿ ಮರದ ಪೊಟರೆಯೊಳಗೆ ಮೊಟ್ಟೆಗಳನ್ನಿಟ್ಟು ತಾನೂ ಅಲ್ಲೇ ಕುಳಿತು ಕಾವು ಕೊಡುತ್ತದೆ. ಈ ಗೂಡಿಗೆ ಚಿಕ್ಕದೊಂದು ರಂದ್ರವನ್ನು ಬಿಟ್ಟು ಗೂಡನ್ನು ಮುಚ್ಚಿಬಿಡುತ್ತದೆ. ಮುಂದೆ ಮರಿ ಹೊರಬರುವವರೆಗೂ ತಿಂಗಳುಗಳ ಕಾಲ ಅಲ್ಲೇ ಉಳಿಯುವ ಹೆಣ್ಣುಹಕ್ಕಿಗೆ ಆಹಾರವನ್ನು ತಂದು ಕೊಡುವ ಕೆಲಸ ಗಂಡು ಮಂಗಟ್ಟೆ ಹಕ್ಕಿಯದು. ತಮ್ಮ ಸಂತತಿಯನ್ನು ಬೆಳೆಸುವುದಕ್ಕಾಗಿ ಮಂಗಟ್ಟೆ ದಂಪತಿಗಳು ತಮ್ಮ ಬದುಕನ್ನೇ ಮುಡಿಪಾಗಿಡುತ್ತವೆ.

ಆಸ್ಟ್ರೇಲಿಯಾದ ಸಸ್ತನಿ ಕಾಂಗರು ತನ್ನ ಮರಿಗಳನ್ನು ಬೆಳೆಸುವ ರೀತಿಯೆ ಅನನ್ಯ. ಅದರ ಮರಿಗಳು ಹುಟ್ಟುವಾಗ ಅತ್ಯಂತ ಚಿಕ್ಕದಾಗಿರುತ್ತವೆ. ಕಣ್ಣೂ ಸಹ ಕಾಣದ ಮರಿ ಹುಟ್ಟಿದ ತಕ್ಷಣ ಹೇಗೋ ತೆವಳಿಕೊಂಡು ತಾಯಿಯ ಹೊಟ್ಟೆಯಲ್ಲಿರುವ ಚೀಲದೊಳಕ್ಕೆ ನುಸುಳುತ್ತದೆ. ಈ ಚೀಲದಲ್ಲಿರುವ ಮೊಲೆಗಳಲ್ಲಿ ಒಂದನ್ನು ಕಚ್ಚಿ ಹಾಲು ಹೀರುತ್ತಾ ಮುಂದಿನ ಒಂಬತ್ತು ತಿಂಗಳುಗಳ ಕಾಲ ಅಲ್ಲೇ ಬೆಳೆಯುತ್ತವೆ. ಈ ಮರಿ ಸ್ವಲ್ಪ ದೊಡ್ಡದಾಗುತ್ತಿರುವಂತೆಯೆ ತಾಯಿ ಕಾಂಗರೂ ತನ್ನಲ್ಲಿದ್ದ ಇನ್ನೊಂದು ಭ್ರೂಣವನ್ನು ಬೆಳೆಸತೊಡಗುತ್ತದೆ. ಆ ಮರಿ ಹೊರಬಂದ ನಂತರ ತಾಯಿಯ ಚೀಲದಲ್ಲಿ ಇನ್ನೊಂದು ಮೊಲೆಯನ್ನು ಕಚ್ಚಿ ಬೆಳೆಯುತ್ತದೆ. ಹೀಗೆ ಏಕಕಾಲದಲ್ಲಿ ತಾಯಿ ಕಾಂಗರೂ ಒಂದು ದೊಡ್ಡ ಮರಿಯನ್ನೂ ಇನ್ನೊಂದು ಚಿಕ್ಕ ಮರಿಯನ್ನೂ ಬೆಳೆಸುತ್ತದೆ. ಅದರ ಎರಡು ಮೊಲೆಗಳಲ್ಲಿ ಆಯಾ ಮರಿಗಳಿಗೆ ಬೇಕಾದ ಪೋಷಕಾಂಶವಿರುವ ಹಾಲು ಉತ್ಪತ್ತಿಯಾಗುವುದು ವಿಶೇಷ.

ಹೀಗೆ ತಮ್ಮ ಸಂತತಿಯನ್ನು ಬೆಳೆಸಲು ತಮ್ಮೆಲ್ಲ ಶಕ್ತಿ ವ್ಯಯಿಸುವ ಪ್ರಾಣಿಗಳು ಮರಿಗಳು ಬದುಕಲು ಬೇಕಾದ ಕೌಶಲ್ಯ ಬೆಳೆಸಿಕೊಳ್ಳುತ್ತಿದ್ದಂತೆಯೆ ಅವುಗಳನ್ನು ಅವುಗಳ ಪಾಡಿಗೆ ಸ್ವತಂತ್ರವಾಗಿ ಬಿಟ್ಟುಬಿಡುತ್ತವೆ. ನಂತರ ಪರಸ್ಪರರಲ್ಲಿ ಯಾವುದೇ ಹಕ್ಕೊತ್ತಾಯ ಪ್ರಾಣಿಜಗತ್ತಿನಲ್ಲಿಲ್ಲ.

ನಮ್ಮ ಸಂತತಿಯನ್ನು ಬೆಳೆಸುವುದರಲ್ಲಿ ನಾವು ಮಾನವರೂ ನಮ್ಮೆಲ್ಲ ಶಕ್ತಿಯನ್ನೂ ವ್ಯಯಿಸುತ್ತೇವೆ, ನಿಜ. ಮಕ್ಕಳ ಕೌಶಲ್ಯಾಭಿವೃದ್ದಿಗೆ ಗಮನ ಹರಿಸುವುದಕ್ಕಿಂತ ಅವರಿಗೆ ಆಸ್ತಿ ಮಾಡಿಡುವ ಬಗ್ಗೆ ಯೋಚಿಸುವವರು, ತಮ್ಮ ಮುಪ್ಪಿನ ಕಾಲದಲ್ಲಿ ತಮ್ಮನ್ನು ನೋಡಿಕೊಳ್ಳಲೆಂದೇ  ಮಕ್ಕಳನ್ನು ಬೆಳೆಸುವವರು, ಅಪ್ಪ ಅಮ್ಮ ಮಾಡಿಟ್ಟ ಆಸ್ತಿಯಲ್ಲೇ ಜೀವನ ಕಳೆಯುವವರು, ಆಸ್ತಿ ಕೊಡಲಿಲ್ಲವೆಂದು ಅಪ್ಪ ಅಮ್ಮನನ್ನೇ ಸಾಯಿಸುವವರು...ಒಹ್ ಮಾನವರಲ್ಲಿ ಪೋಷಕರ ಮತ್ತು ಮಕ್ಕಳ ಸಂಭಂದಕ್ಕೆ ಎಷ್ಟೊಂದು ಮುಖಗಳು.....ಅದರಿಂದಾಗಿಯೆ ಎಷ್ಟೊಂದು ನೋವುಗಳು ಅಲ್ಲವೆ?

ಸಾವು
ಬಹುಶಃ ಮಾನವ ಸಾವಿಗೆ ಹೆದರುವಷ್ಟು ಬೇರಾವ ಜೀವಿಯೂ ಹೆದರುವುದಿಲ್ಲ. ಸಾವನ್ನು ಮುಂದೂಡಲು, ಚಿರಂಜೀವಿಯಾಗಿ ಬದುಕಿಬಿಡಲು ಶತಶತಮಾನಗಳಿಂದ ಮಾನವ ಪ್ರಯತ್ನಿಸುತ್ತಲೇ ಇದ್ದಾನೆ.  ಹುಟ್ಟು ಬದುಕು ತನ್ನ ಸಂತತಿಗೆ ತನ್ನೆಲ್ಲ ಕೌಶಲ್ಯ ವರ್ಗಾವಣೆಯ ನಂತರ ಹೆಚ್ಚಿನ ಜೀವಿಗಳು ಸಹಜವಾಗಿ ಸಾವನ್ನಪ್ಪುತ್ತವೆ. ವಯಸ್ಸಿಗನುಗುಣವಾಗಿ ಬರುವ ಸಾವನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಮಾನವನಿಗೆ ಬಂದರೆ ಅವನ ಅರ್ಧ ಮನಃಕ್ಲೇಶ ತಪ್ಪುತ್ತದೆ.
ಮರುಹುಟ್ಟು
“Energy can neither be created nor be destroyed” ಎಂದು ಹೇಳುತ್ತದೆ ವಿಜ್ಞಾನ. "ಭೌತಿಕ ದೇಹಕ್ಕೆ ಸಾವುಂಟು ಆದರೆ ಆತ್ಮಕ್ಕೆ ಸಾವಿಲ್ಲ" ಆಧ್ಯಾತ್ಮದ ಮಾತು. ಮರುಹುಟ್ಟು ಪ್ರಕೃತಿಯಲ್ಲಿ ಅತ್ಯಂತ ಸಹಜವಾಗಿ ನಡೆಯುವ ಪ್ರಕ್ರಿಯೆ. ಮನೆಯ ಅಡಿಗೆ ಕೋಣೆಯಲ್ಲಿ ರಾತ್ರಿ ಸತ್ತು ಬಿದ್ದ ಜಿರಲೆಯೊಂದು ಮಾರನೆಯ ದಿನ ಸಾವಿರಾರು ಇರುವೆಗಳ ದೇಹದ್ರವವಾಗಿ ಜೀವ ಪಡೆದಿರುತ್ತದೆ. ಗಿಡಮರಗಳ ಒಣಗಿ ಬಿದ್ದ ತರಗಲೆಗಳು ಲಕ್ಷಾಂತರ ಸೂಕ್ಷಾಣುಗಳ ಆಹಾರವಾಗಿ ಮತ್ತೆ ಮೂಲ ಧಾತುಗಳಾಗಿ ಬದಲಾಗಿ ಇನ್ನಷ್ಟು ಹೊಸ ಗಿಡಮರಗಳಲ್ಲಿ ಬದುಕು ಕಂಡುಕೊಳ್ಳುತ್ತವೆ.  ಹುಲಿಗೆ ಬಲಿಯಾದ ಜಿಂಕೆಯೊಂದು ಕೇವಲ ಹುಲಿಗಷ್ಟೇ ಅಲ್ಲದೆ, ಉಳಿದ ಮಾಂಸ ತಿನ್ನುವ ಹೈನಾ, ರಣಹದ್ದು, ಕಾಗೆ ಮೊದಲಾದ ಪ್ರಾಣಿಗಳಿಗೆ, ಸೂಕ್ಷ್ಮಾಣುಗಳಿಗೂ ಆಹಾರವಾಗಿ ಅವುಗಳಲ್ಲಿ ಬದುಕುತ್ತದೆ. ಜೀವಚಕ್ರ ಹೀಗೆ ನಿರಂತರವಾಗಿ ತಿರುಗುತ್ತಲೇ ಇರುತ್ತದೆ.
ಕೊನೇಹನಿ

ಪ್ರಾಣಿಗಳಂತೆ ಬದುಕನ್ನು ಉತ್ಕಟವಾಗಿ ಪ್ರೀತಿಸಿ, ಆಯಾ ಕಾಲಘಟ್ಟದಲ್ಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಕೊನೆಕಾಲದಲ್ಲಿ ಎಲ್ಲಾ ಮೋಹಗಳಿಂದ ಕಳಚಿಕೊಂಡು ಮುಕ್ತರಾಗುವುದು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಆಧ್ಯಾತ್ಮಿಕ ಬದುಕಿಲ್ಲ.  

3 comments:

  1. ಕೆಲವೊಂದು ಪ್ರಾಣಿಗಳ ಸಂತಾನಪೋಷಣೆಯ ವಿಶಿಷ್ಟತೆಯನ್ನು ಓದಿ ಬೆರಗಾದೆ. ಒಳ್ಳೆ ಮಾಹಿತಿಗಾಗಿ ಧನ್ಯವಾದಗಳು.

    ReplyDelete
    Replies
    1. ನಿಮ್ಮ ನಿರಂತರ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಕಾಕ.

      Delete
  2. ಉತ್ತಮ ಮಾಹಿತಿ..
    ಪ್ರಾಣಿ ಪಕ್ಷಿಗಳು ಮಾನವನಿಗೆ ಬುದ್ಧಿಯುಳ್ಳವು..
    ಅವುಗಳು ಗೂಡು ಕಟ್ಟಿಕೊಳ್ಳುವ ಪರಿಯೂ ವಿಶೇಷ...
    ಪ್ರಕೃತಿ ಧರ್ಮ ಮರೆಯದೆ ಪ್ರಕೃತಿಗೆ ಹಾನಿ ಮಾಡದಂತೆ ಅದರಂತೆ ನಡೆಯುತ್ತವೆ, ನಮ್ಮಂತಲ್ಲ.
    ಪ್ರತಿ ಪ್ರಾಣಿ-ಪಕ್ಷಿ-ಕೀಟ,... ಕುರಿತೂ ಪುಟಗಟ್ಟಲೆ ಬರೆಯಬಹುದು.
    ಕೆಲವೊಮ್ಮೆ ಅವುಗಳ ಕಾರ್ಯಶೀಲತೆ ನಾಚಿಸುತ್ತದೆ, ಮೂಕವಾಗಿಸುತ್ತದೆ.

    ReplyDelete