ಬಾಲ್ಯದಲ್ಲಿ ನಾನು ಅತಿಯಾಗಿ ಹೆದರುತ್ತಿದ್ದ ವಸ್ತುಗಳಲ್ಲಿ ಹರಳೆಣ್ಣೆಯೂ ಒಂದು. ನಮ್ಮ ಮನೆಯಲ್ಲಿ ಅದನ್ನ ಉಪಯೋಗಿಸುತ್ತಿದ್ದುದು ತುಂಬಾ ಕಡಿಮೆ. ಅದರೆ ಅಜ್ಜನ ಮನೆಯಲ್ಲಿ ಈ ಹರಳೆಣ್ಣೆಯನ್ನು ಹೆಚ್ಚು ಉಪಯೋಗಿಸುತ್ತಿದ್ದರು. ಅಜ್ಜಿ ಪ್ರತೀದಿನ ರಾತ್ರಿ ಮಲಗುವಾಗ ಒಡೆದು ಬಿರುಕು ಬಿಟ್ಟಿರುತ್ತಿದ್ದ ತಮ್ಮ ಅಂಗಾಲುಗಳಿಗೆ ಈ ಎಣ್ಣೆಯನ್ನು ಸವರಿಕೊಳ್ಳುತ್ತಿದ್ದರು. ವಾರಕ್ಕೊಮ್ಮೆಯಾದರೂ ಮನೆಯ ಸದಸ್ಯರೆಲ್ಲರೂ ಹರಳೆಣ್ಣೆಯನ್ನು ತಲೆಗೆ ಹಚ್ಚಿ ಸ್ನಾನ ಮಾಡುವ ಪದ್ಧತಿಯಿತ್ತು. ಅಲ್ಲದೆ ಯಾರಿಗಾದರೂ ಮಲಬದ್ಧತೆಯಾದರೆ ಒಂದೆರಡು ಚಮಚ ಈ ಎಣ್ಣೆಯನ್ನು ಕುಡಿಸುತ್ತಿದ್ದರು. ಹರಳೆಣ್ಣೆಯನ್ನು ಶೇಖರಿಸಿಡುತ್ತಿದ್ದ ಗಾಜಿನ ಬಾಟಲಿಯ ಮುಚ್ಚುಳ ತೆಗೆದರೆ ಸಾಕು ಅದರ ಘಮಟು ವಾಸನೆ ಮೂಗಿಗೆ ಬಡಿಯುತ್ತಿತು. ತಕ್ಷಣ ಅಲ್ಲಿಂದ ಜಾಗ ಖಾಲಿಮಾಡಿದರೆ ಸರಿ ಇಲ್ಲವಾದರೆ ಕೀಟಲೆಗೆ ಇನ್ನೊಂದು ಹೆಸರೆಂಬಂತೆಯೇ ಇದ್ದ ನನ್ನ ಅಜ್ಜ ಅಥವಾ ಮಾವಂದಿರು ಒಂದಿಷ್ಟು ಎಣ್ಣೆಯನ್ನು ಮೂಗಿಗೇ ಸವರಿಬಿಡುತ್ತಿದ್ದರು! ಅತ್ಯಂತ ಜಿಡ್ಡು ಜಿಡ್ಡಾದ ಅದರ ಘಾಟು ವಾಸನೆಗೆ ಓಕರಿಸುತ್ತಿದ್ದ ನನ್ನನ್ನು ನೋಡಿ ಅಜ್ಜಿ ಅವರನ್ನೆಲ್ಲಾ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಸೋಪು ಹಾಕಿ ತೊಳೆದರೂ ಅದರ ಜಿಡ್ಡು, ವಾಸನೆ ಕಡಿಮೆಯಾಗುತ್ತಿರಲಿಲ್ಲ!
ಹರಳೆಣ್ಣೆಯನ್ನು
ಒಂದು ಜಾತಿಯ ಗಿಡದ ಬೀಜದಿಂದ ತಯಾರಿಸುತ್ತಾರೆ. ಎಣ್ಣೆ ಭಯಂಕರವಾಗಿದ್ದರೂ ಈ ಗಿಡ ಮಾತ್ರ ನೋಡಲು ಸೊಗಸು. ಚಿಕ್ಕ ಗಾತ್ರದ ಮರದಷ್ಟು ಎತ್ತರ ಬೆಳೆಯುವ ಹರಳು ಗಿಡದ ದಟ್ಟ
ಹಸಿರು ಬಣ್ಣದ
ಎಲೆಗಳು ಅಗಲವಾಗಿವೆ.
ಎಲೆಯ ಅಂಚುಗಳು ನಮ್ಮ ಹಸ್ತಗಳಲ್ಲಿ ಬೆರಳಿರುವಂತೆಯೆ ನಾಲ್ಕಾರು ಉದ್ದನೆಯ ಬೆರಳಿನಂತಹ ರಚನೆ ಹೊಂದಿದ್ದು
ಆಕರ್ಷಕವಾಗಿರುವುದರಿಂದ ಕೈತೋಟಗಳ ಉದ್ಯಾನವನಗಳ ಅಂದ ಹೆಚ್ಚಿಸಲು ಈ ಗಿಡವನ್ನು ಬೆಳೆಸುತ್ತಾರೆ!! ಆಫ್ರಿಕಾ,
ಏಷಿಯಾ ಖಂಡಗಳ ಉಷ್ಣವಯಲದ ಮೂಲ ಹೊಂದಿರುವ ಹರಳು ಗಿಡ ಶೀತಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯಲಾರದು.
ಇದರ ಹೂಗುಚ್ಛವು
(inflorescence)
ವಿಶಿಷ್ಟವಾಗಿದ್ದು ಕೋನ್ ಆಕಾರದಲ್ಲಿರುತ್ತದೆ. ಸಂಖ್ಯೆಯಲ್ಲಿ ಜಾಸ್ತಿ ಇರುವ, ಹಳದಿ ಬಣ್ಣದ
ಪರಾಗರೇಣುವನ್ನು ಹೊಂದಿರುವ ಗಂಡು ಹೂವುಗಳು ಹೂಗುಚ್ಛದ ಕೆಳಭಾಗದಲ್ಲಿರುತ್ತವೆ. ಸಂಖ್ಯೆಯಲ್ಲಿ
ಕಡಿಮೆಯಿರುವ ಹೆಣ್ಣು ಹೂವುಗಳು ಹೂಗುಚ್ಛದ ಮೇಲ್ಭಾಗದಲ್ಲಿ ಇವೆ. ಇನ್ನೂ ಸರಿಯಾಗಿ ಬೆಳವಣಿಗೆ ಹೊಂದದ, ಮುಂದೆ ಕಾಯಿಯಾಗಿ
ಬೆಳೆಯುವ ಮುಳ್ಳುಮುಳ್ಳಾದ ಕಾಯಿಯ ಒಳಗಂಟಿಕೊಂಡಂತೆ ಈ ಅನಾಕರ್ಷಕವಾದ ಸಣ್ಣ ಹೆಣ್ಣು
ಹೂವುಗಳಿರುತ್ತವೆ. ಅದರ ಕೆಂಪು ಬಣ್ಣದ ಸ್ಟಿಗ್ಮಾ ಮಾತ್ರ ಹೊರಚಾಚಿದ್ದು ಪರಾಗವನ್ನು ಸಂಗ್ರಹಿಸಲು
ಅನುಕೂಲಕರವಾಗಿರುತ್ತವೆ. ಒಂದೇ ಹೂಗುಚ್ಛದಲ್ಲಿ ಈ ಎರಡೂ ಜಾತಿಯ ಹೂವುಗಳಿರುವುದರಿಂದ ಇವುಗಳಲ್ಲೇ ಪರಾಗಸ್ಪರ್ಶ
ಕ್ರಿಯೆ ನಡೆಯುವುದು ಹೆಚ್ಚು!! ಅಂದರೆ self fertilisation ಹೆಚ್ಚು. ಮುಖ್ಯವಾಗಿ ಜೇನುನೊಣದಂತಹ ಕೀಟಗಳು ಮತ್ತು ಗಾಳಿ, ಪರಾಗಸ್ಪರ್ಶ ನಡೆಸುವ ಪುರೋಹಿತರುಗಳು.
ಚೂಪಾದ ಮುಳ್ಳುಗಳಿರುವ
ಹಣ್ಣಿನ ಒಳಭಾಗದಲ್ಲಿ ಗಟ್ಟಿಯಾದ ಬೀಜಗಳಿವೆ. ಹಣ್ಣು ಒಣಗುತ್ತಿದ್ದಂತೆಯೆ ಮೂರು ಭಾಗಗಳಾಗಿ ಒಡೆದು
ಬೀಜಗಳನ್ನು ಸಾಧ್ಯವಾದಷ್ಟು ದೂರ ಸಿಡಿಸುತ್ತವೆ. ಆ ಬೀಜಗಳಿಗೆ ಅಂಟಿಕೊಂಡಂತೆ ಸಿಹಿಯಾದ ಮಾಂಸಲ
ಭಾಗವಿದ್ದು ಇದನ್ನು ಇರುವೆಗಳು ತಮ್ಮ ಗೂಡಿಗೆ ಒಯ್ದು ಮರಿಗಳಿಗೆ ತಿನ್ನಿಸುತ್ತವೆ. ಉಳಿದ ಬೀಜವನ್ನು
ಬೇಡದ ಸಾವಯವ ವಸ್ತುಗಳಿಂದ ತುಂಬಿರುವ ತಮ್ಮ ಗೂಡಿನ ಕಸದಗುಂಡಿಗೆ ಹಾಕುತ್ತವೆ!! ಅಲ್ಲಿ ಈ ಬೀಜ
ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತದೆ. ಆದರೆ ಎಣ್ಣೆಗಾಗಿ ಈ ಸಸ್ಯದ ಕೃಷಿ ಮಾಡುವವರು ಬೇರೆ
ವಿಧಾನಗಳನ್ನು ಅನುಸರಿಸುತ್ತಾರೆ.
“ರಿಸಿನ್” ಎಂಬ
ವಿಷ ರಾಸಾಯನಿಕವನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿರುವುದರಿಂದ ಈ ಸಸ್ಯದ ಬೀಜಗಳು ಅತ್ಯಂತ
ವಿಷಯುಕ್ತವಾಗಿವೆ. ನಾಲ್ಕಾರು ಬೀಜಗಳು ಮಾನವರ ಸಾವಿಗೆ ಕಾರಣವಾಗಬಲ್ಲವು!! ಆದರೆ ಈ ಬೀಜದಿಂದ
ತೆಗೆಯುವ ಎಣ್ಣೆಯು ಅನೇಕ ರೀತಿಯಲ್ಲಿ ಉಪಯೋಗಕರವಾಗಿದೆ. ತುಂಬ ಹಿಂದಿನ ಕಾಲದಿಂದಲೂ ಈ
ಎಣ್ಣೆಯನ್ನು ಚರ್ಮದ ಸೌಂದರ್ಯಕ್ಕಾಗಿ ಬಳಸುವ ಪದ್ಧತಿಯಿತ್ತು. ಈಗಲೂ ಅನೇಕ ಸೌಂದರ್ಯವರ್ಧಕಗಳಲ್ಲಿ, ಬ್ಯಾಕ್ಟೀರಿಯಾ, ಫಂಗಸ್ ನಿರೋಧಕ್ ಆಯಿಂಟ್ಮೆಂಟ್
ಗಳಲ್ಲಿ ಇದನ್ನು ಉಪಯೋಗಿಸುತ್ತಾರೆ. ಮಲಬದ್ಧತೆಗೆ ಔಷಿಧಿಯಾಗಿಯೂ ಬಳಸುವ ಸಂಪ್ರದಾಯವಿದೆ.
ಇದಲ್ಲದೆ ಆಫ್ರಿಕಾದಲ್ಲಿ ಬಯೋಡೀಸೆಲ್
ತಯಾರಿಕೆಯಲ್ಲಿ ಹರಳೆಣ್ಣೆಯನ್ನು ಉಪಯೋಗಿಸುತ್ತಾರೆ. ಅನೇಕ ಯಂತ್ರಗಳ ಜಾರುಕಗಳಲ್ಲಿ ಉಪಯೋಗಿಸುತ್ತಾರೆ.
ಈ ಸಸ್ಯಗಳ ಎಲೆಗಳು ಎರ್ರಿ ಜಾತಿಯ ರೇಷ್ಮೆ ಹುಳುಗಳಿಗೆ ಆಹಾರ.
ನೋಡಲು
ಸುಂದರವಾಗಿದ್ದರೂ, ಬೀಜಗಳಲ್ಲಿ ಹೆಚ್ಚಿನ ವಿಷದ ಅಂಶವಿರುವುದರಿಂದಲೂ, ಗಿಡದ ಎಲ್ಲ ಭಾಗಗಳಲ್ಲೂ
ಸ್ವಲ್ಪ ಮಟ್ಟಿಗೆ ವಿಷದ ಅಂಶ ಇರುವುದರಿಂದಲೂ ಈ ಗಿಡವನ್ನು ಚಿಕ್ಕಮಕ್ಕಳು ಇರುವ ಮನೆಗಳಲ್ಲಿ
ಬೆಳೆಸುವುದು ಒಳ್ಳೆಯದಲ್ಲ.
ಹರಳು ಗಿಡದ ಮಾಹಿತಿಯು ಅತ್ಯಂತ ಅನುಕೂಲಕರವಾಗಿದೆ. ಲುಬ್ರಿಕಂಟ ಎನ್ನುವ ಪದವನ್ನು ನೀವು ಜಾರುಕ ಎಂದು ಕನ್ನಡೀಕರಿಸಿದ್ದು ಓದಿ ಖುಶಿಯಾಯಿತು.
ReplyDeleteThank you kaka
Deleteಈ ಗಿಡದ ಕೃಷಿ ಮಾಡಬೇಕು ಅನಿಸುತಿದೆ.
ReplyDeleteಹೇಗೆ ಎಂದು ತಿಳಿಸುವಿರಾ