Sloth (ಚಿತ್ರಕೃಪೆ -ಅಂತರ್ಜಾಲ) |
"ಏ ಡುಮ್ಮೂಸ್ ಬಾ
ಇಲ್ಲಿ ನಿನ್ನ ವಂಶದವರು ಟಿವಿಯಲ್ಲಿ ಬರ್ತಾ ಇದ್ದಾರೆ ನೋಡು" ಟಿವಿ ಎದುರು ಕುಳಿತಿದ್ದ ಗಂಡ
ಕೂಗಿಕೊಂಡರು. ನನಗೆ ಸಖೇದಾಶ್ಚರ್ಯವಾಗಿಬಿಟ್ಟಿತು.
ಪಕ್ಕಾ ಕಲಹಪ್ರಿಯರಾದ ನನ್ನ ಗಂಡ ಟಿವಿ ಹಚ್ಚಿದಾಕ್ಷಣ ನೋಡೋದು ನ್ಯೂಸ್ ಚಾನಲ್‍ಗಳನ್ನ ಮಾತ್ರ. ಅದರಲ್ಲೂ
ಚರ್ಚೆಯೆಂಬ ಹೆಸರಿನಲ್ಲಿ ಯಾರಾದ್ರೂ ನಾಲ್ಕು ಜನ ಕುಳಿತು ಒಬ್ಬರ ಮಾತೂ ಕೇಳದಂತೆ ಕೂಗಾಡುವ ಕಾರ್ಯಕ್ರಮಗಳು
ಮತ್ತು "ನಾಲ್ಕು ದಿನಗಳ ಹಿಂದೆ ಅಕಾರಾಂತನು ಇಕಾರಾಂತನಿಗೆ ಮಧ್ಯರಾತ್ರಿಯಲ್ಲಿ ಹೊಡೆದದ್ದಕ್ಕೆ
ಕಾರಣವೇನು ಗೊತ್ತಾ" ಎಂಬ ಒಂದೇ ಸಾಲಿನ ಸುದ್ದಿಯನ್ನು ಅರ್ಧಗಂಟೆಯವರೆಗೂ ವಿಚಿತ್ರ ಶೈಲಿಯಲ್ಲಿ
ನಿರೂಪಿಸುವಂತಹ ಕಾರ್ಯಕ್ರಮಗಳೆಂದರೆ ತನ್ನನ್ನೇ ಮರೆತು ನೋಡುವ ಸ್ವಭಾವ ಅವರದು.
ಯಾರಾದ್ರೂ ಸ್ವಲ್ಪ ದೊಡ್ಡದಾಗಿ ಮಾತನಾಡುತ್ತಿದ್ದಾರೆಂದರೆ
ಆ ಕಡೆ ತಲೆ ಹಾಕಿಯೂ ಮಲಗದ ನನ್ನ ತವರುಮನೆಯವರು ಇಂತಹ ಕಾರ್ಯಕ್ರಮಗಳಲ್ಲಿ ಬರುವಂತದ್ದೇನನ್ನು ಮಾಡಿರಬಹುದೆಂಬ
ಗಾಭರಿಯಲ್ಲಿ ಹಾಲ್‍ಗೆ ಓಡಿಬಂದೆ.
ಕೆಲವೊಮ್ಮೆ ಎಲ್ಲಾ
ನ್ಯೂಸ್ ಚಾನಲ್‍ಗಳೂ ಸಾಂಕ್ರಾಮಿಕವೆಂಬಂತೆ
"ಸಿನೆಮಾ ಸ್ಟಾರ್ ರಾಕೇಶ್ ಕುಮಾರ್ ಬೆಳಿಗ್ಗೆ ಉಪ್ಪಿಟ್ಟು ತಿಂದದ್ದು ಯಾಕೆ"
ಎಂಬ ಬಗ್ಗೆ ಚರ್ಚೆಯಲ್ಲಿ ಮುಳುಗುವುದುಂಟಲ್ಲ! ಆಗ ನನ್ನ ಗಂಡನಿಗೆ ಅವುಗಳ ಮೇಲೆ ವೈರಾಗ್ಯ
ಉಂಟಾಗಿ ಅನಿಮಲ್ ಪ್ಲಾನೆಟ್ ಅಥವಾ ಡಿಸ್ಕವರಿ ಹಾಕುವ ಅಭ್ಯಾಸವಿದೆ. ಪಾಪ ಇಂದು ಹಾಗೆಯೇ ಏನೋ ಆಗಿರಬೇಕು
ಆದ್ದರಿಂದ ಅನಿಮಲ್ ಪ್ಲಾನೆಟ್ ಹಾಕಿದ್ದಾರೆ. ಆ ಚಾನಲ್‍ನಲ್ಲಿ ಸ್ಲಾಥ್ ಬಗ್ಗೆ ತೋರಿಸುತ್ತಿದ್ದಾರೆ.
ದಕ್ಷಿಣ ಮತ್ತು ಮಧ್ಯ ಅಮೇರಿಕಾದ ಮಳೆಕಾಡುಗಳಲ್ಲಿ ವಾಸಿಸುವ ಈ ವಿಶಿಷ್ಟ ಜೀವಿ ನಿಧಾನವಾಗಿ ಚಲಿಸುವುದರಲ್ಲಿ
ಬಸವನಹುಳುವಿಗೇ ಸ್ಫರ್ಧೆಯೊಡ್ಡಬಲ್ಲದು. ತನ್ನ ಉದ್ದನೆಯ
ಕೈಗಳಿಂದ ಮರದ ಕೊಂಬೆಯನ್ನು ಹಿಡಿದುಕೊಂಡು ಸ್ಲೋ ಮೋಷನ್ನಲ್ಲಿ ಇದು ಮರವೇರುವುದನ್ನು ನೋಡುವಾಗ ನಾವೇ
ಅದನ್ನ ಎತ್ತಿ ಮರದ ಮೇಲೆ ಬಿಟ್ಟುಬಿಡೋಣ ಎನ್ನಿಸಿಬಿಡುತ್ತದೆ. ಇದನ್ನು ನೋಡಿ ನನ್ನವರಿಗೆ ನನ್ನನ್ನೇ ಟಿವಿಯಲ್ಲಿ ನೋಡಿದಷ್ಟು
ಖುಷಿಯಾಗಿಬಿಟ್ಟಿದೆ. ಎಲ್ಲಾ ಕೆಲಸಗಳನ್ನು ಸ್ವಲ್ಪ ನಿಧಾನಗತಿಯಲ್ಲೇ ಮಾಡುವ ನನ್ನನ್ನು ಇಷ್ಟು ದಿನ
ಕೇವಲ ಬಸವನಹುಳುವಿಗಷ್ಟೇ ಹೋಲಿಸುತ್ತಿದ್ದರು, ಈಗ ಇನ್ನೊಂದು ಅದಕ್ಕಿಂತ
ಸಶಕ್ತವಾದ ಉದಾಹರಣೆ ಸಿಕ್ಕಿಬಿಟ್ಟಿತ್ತು, ಈ ಸ್ಲಾತ್ ನಿಧಾನವಷ್ಟೇ ಅಲ್ಲ
ದಿನದಲ್ಲಿ ಹೆಚ್ಚಿನ ಸಮಯ ಮರದ ಕೊಂಬೆಯಲ್ಲಿ ಬೇತಾಳನಂತೆ ಉಲ್ಟಾ ಜೋತಾಡುತ್ತಾ ನಿದ್ರಿಸುತ್ತಿರುತ್ತದೆ.
ಏನೋ ನಾನು ಸ್ವಲ್ಪ
ನಿಧಾನವಾಗಿ ಕೆಲಸಕಾರ್ಯಗಳನ್ನ ಮಾಡುತ್ತೇನೆ, ಅಲ್ಪ ಸ್ವಲ್ಪ ಸೋಮಾರಿತನವೂ ಇದೆ ಎಂದ ಮಾತ್ರಕ್ಕೆ ಹೀಗೆ
ಇದಕ್ಕೆ ಹೋಲಿಸುವುದೇ? ಅದೂ ಅಲ್ಲದೆ ಹೀಗೆ ವಂಶದ ಸುದ್ದಿಗೆಲ್ಲಾ ಬಂದಾಗ ಸುಮ್ಮನಿರಲಾಗುತ್ತದೆಯೇ!
ಶುರುವಾಯ್ತು ಮಹಾಭಾರತ. "ಹೂಂ ನಿಜ ಕಣ್ರೀ ಇದು ನಾನೇ ಅಂದ್ಕೊಳ್ಳಿ, ಸುಮ್ಮನೇ
ಗಡಿಬಿಡಿ, ಗಾಭರಿ ಮಾಡಿಕೊಂಡು ನಮ್ಮ ಶಕ್ತಿ ಖಾಲಿಮಾಡಿಕೊಂಡು ಕೆಲಸವನ್ನೂ
ಹಾಳು ಮಾಡಿಕೊಳ್ಳುವುದರ ಬದಲು ಇದರಂತೆ ಬುದ್ಧಿವಂತಿಕೆಯಿಂದ ಬೇಕಾದಷ್ಟೇ ಶಕ್ತಿ ಉಪಯೋಗಿಸೋದು ಒಳ್ಳೆಯದು.
ನನ್ನ ವಂಶದ ಸುದ್ದಿ ಬೇಡ ಇಷ್ಟಕ್ಕೂ ನನ್ನ ಮನೆಯವರ್ಯಾರು ಇಷ್ಟು ಸ್ಲೋ ಇಲ್ಲ ಗೊತ್ತಾ! ನನ್ನ ಅಜ್ಜ
ನಿಮ್ಮಂತೆಯೇ ಹತ್ತು ಗಂಟೆಯ ಬಸ್ಸಿಗೆಂದು ಎಂಟು ಗಂಟೆಗೇ ಬಸ್ ಸ್ಟಾಂಡ್‍ಗೆ ಹೋಗಿ ಕಾಯುವ ಜಾತಿ...ವಂಶದ
ಸುದ್ದಿಗೆ ಬರಬೇಡಿ"
“ನಾವೇನಾದ್ರೂ ಮಾತನಾಡಿದರೆ
ನೀನು ಹಾಂ, ಹೂಂ ಎನ್ನಲೂ ಅರ್ಧ ದಿನ ತೆಗೆದುಕೊಳ್ಳುತ್ತೀ” ಎಂಬುದು ನನ್ನ ಮೇಲಿರುವ ಇನ್ನೊಂದು ಅಪವಾದವಾದರೂ
ಯಾವ ಸಮಯಕ್ಕೆ ಎಲ್ಲಿ ಎಷ್ಟು ಚುರುಕಾಗಿ ಏಟು ಕೊಡಬೇಕೆಂಬುದು ನಮಗೆ ಅಂದರೆ ಹೆಣ್ಣುಜಾತಿಗೆ ಜನ್ಮಜಾತ
ವಿದ್ಯೆಯಾಗಿರುತ್ತದೆ ನೋಡಿ ಹಾಗಾಗಿ ರಾಯರು ಗಪ್‍ಚಿಪ್.
ಪ್ರತೀ ಬಾರಿ ರಾತ್ರಿ
ಬಸ್‍ನಲ್ಲಿ ಊರಿಗೆ ಹೊರಡುವಾಗಲೂ, ಟ್ರಾಫಿಕ್ ಕಾರಣ ಕೊಟ್ಟು ಕನಿಷ್ಟ ಎರಡು ತಾಸು ಮೊದಲು ಬಸ್ ಸ್ಟ್ಯಾಂಡ್ ತಲುಪುವಂತೆ ಮಾಡಿ ಅಲ್ಲಿ ಸೊಳ್ಳೆ ಹೊಡೆಯುವ
ಕೆಲಸ ಕೊಡುತ್ತಾರಲ್ಲ ಹಾಗಾಗಿ ಈ ಶರಣಾಗತಿ.
"ಹಾ ಹಾ ಗೊತ್ತು
ಮಾರಾಯ್ತಿ ಸುಮ್ಮನೇ ತಮಾಷೆಗೆ ಹೇಳಿದ್ನಪ್ಪಾ" ಕಲಹಪ್ರಿಯರ ಧ್ವನಿ ರಾಜೀಸೂಚಕವಾಗಿದ್ದರಿಂದ ಕದನವಿರಾಮ
ಬಿತ್ತು.
ನಾನು ಸ್ವಲ್ಪ ನಿಧಾನ ಎನ್ನಿಸೋದಿಕ್ಕೆ ನನ್ನ ಸುತ್ತಮುತ್ತ
ಇರುವವರೆಲ್ಲಾ ತೀರಾ ಗಡಿಬಿಡಿಯ ಮನುಷ್ಯರಾಗಿರೋದು ಕಾರಣವೇ ಹೊರತು ನಾನು ಸರಿಯಾಗೇ ಇದ್ದೀನಿ ಎಂಬುದು
ನನ್ನ ಬಲವಾದ ಪ್ರತಿಪಾದನೆ.
ಮೊಟ್ಟಮೊದಲು ನಾನು
ಸ್ವಲ್ಪ ನಿಧಾನ ಎಂಬ ಹೆಸರು ಬರಲು ಕಾರಣ ನನ್ನ ತಂಗಿ. ನಾನು ಒಂದು ಮಾತನಾಡುವಷ್ಟರಲ್ಲಿ ಅವಳು ನಾಲ್ಕು
ಮಾತು ಆಡಿರುತ್ತಿದ್ದಳು. ವಾಲಿಸುಗ್ರೀವರ ಫೀಮೇಲ್ ವರ್ಷನ್ ತರಹ ಇದ್ದ ನಾವು ಜಗಳ ಆಡುವಾಗಲೂ ಸಹ, ನಾನು
ಒಂದು ಹೊಡೆದರೆ ಅವಳು ತಿರುಗಿ ನಾಲ್ಕು ಕೊಟ್ಟು ನಾನಿನ್ನೇನು ಅಳಬೇಕೆಂದು ಯೋಚಿಸುವಷ್ಟರಲ್ಲಿ ತಾನು
ಜೋರಾಗಿ ಅತ್ತು ದೊಡ್ಡವರೆದುರು ನನ್ನನ್ನು ಕೆಟ್ಟವಳನ್ನಾಗಿಸುತ್ತಿದ್ದಳು. ಎಲ್ಲದಕ್ಕೂ ಕಲಶವಿಟ್ಟಂತೆ ಪ್ರತೀದಿನ ನಾನಿನ್ನೂ ಸ್ನಾನ
ಮಾಡುತ್ತಿರುವಾಗಲೇ ಅವಳು ಸ್ಕೂಲಿಗೆ ಹೊರಟುಬಿಡುತ್ತಿದ್ದಳು. ಇದರಿಂದ ಮನೆಯಲ್ಲಿ ಎಲ್ಲರೂ ನಾನು ಸ್ಲೋ
ಎಂಬ ತೀರ್ಮಾನಕ್ಕೆ ಬಂದುಬಿಡುತ್ತಿದ್ದರು. ಆದರೆ ನಾನು
ಸ್ನಾನ ಮುಗಿಸಿ, ತಿಂಡಿ ತಿಂದು, ತಲೆಬಾಚಿಕೊಂಡು, ಹೊರಟು ಒಂದು ಕಿಮೀ ದೂರದಲ್ಲಿದ್ದ ಬಸ್ ಸ್ಟ್ಯಾಂಡ್
ತಲುಪುವ ಎರಡು ನಿಮಿಷ ಮೊದಲಷ್ಟೇ ಅವಳು ಅಲ್ಲಿ ತಲುಪಿರುತ್ತಿದ್ದಳು. ಎರಡು ತಿಂಗಳಿಂದ ಹಿಡಿದು ಎಂಬತ್ತು ವರ್ಷದವರೆಗಿನ ವಯೋಮಾನದ
ಊರಿನ ಜನರನ್ನೆಲ್ಲಾ ಮಾತನಾಡಿಸಿಕೊಂಡು ಜಗಳಗಿಗಳ ಮುಗಿಸಿ ಬರಬೇಕಿದ್ದುದರಿಂದ ಅವಳು ಬೇಗ ಹೊರಡುತ್ತಿದ್ದಳಷ್ಟೇ.
ಇದನ್ನ ಹೇಳಿದರೂ ಮನೆಯಲ್ಲಿ ನಾನು ನಿಧಾನಿ ಎಂಬ ಪಟ್ಟ ತಪ್ಪಿಸಲಾಗಲಿಲ್ಲ.
ಚಿನಕುರಳಿ ಪಟಾಕಿಯಂತೆ
ಪಟಪಟ ಮಾತನಾಡುತ್ತಾ ಅಲ್ಲಿಂದಿಲ್ಲಿಗೆ ಓಡಾಡುತ್ತಾ ಇರುತ್ತಿದ್ದ ತಂಗಿಯನ್ನೂ, ಎಲ್ಲಾದರೊಂದು ಮೂಲೆಯಲ್ಲಿ
ಕೈಯಲ್ಲೊಂದು ಪುಸ್ತಕ ಹಿಡಿದೋ ಅಥವಾ ಕಟ್ಟಿದ ಜೇಡರ ಬಲೆಯನ್ನೋ ಹರಿಯುತ್ತಿದ್ದ ಇರುವೆಯನ್ನೋ ನೋಡುತ್ತಾ
ಗಂಟೆಗಟ್ಟಲೇ ಕೂರುತ್ತಿದ್ದ ನನ್ನನ್ನೂ ನೋಡಿ ಕೆಲವರು “ಎರಡನೆಯವಳು ಇಷ್ಟು ಚುರುಕು, ಮೊದಲನೆಯವಳ್ಯಾಕೆ
ಹಾಗಿದ್ದಾಳೆ?” ಅಂತ ಅಮ್ಮನಲ್ಲಿ ಕೇಳುವುದಿತ್ತು!!
ಕೂಡು ಕುಟುಂಬದಲ್ಲಿದ್ದ
ನಮ್ಮ ಮನೆಯಲ್ಲಿ ಮೊದಲು ಉಳಿದವರಿಗೆಲ್ಲಾ ಬಡಿಸಿ ನಂತರ ಅಮ್ಮ, ಚಿಕ್ಕಮ್ಮ, ಅಜ್ಜಿ ಊಟಕ್ಕೆ ಕೂರುತ್ತಿದ್ದರು.
ನಾನು ಊಟಕ್ಕೆ ಕೂರುತ್ತಿದ್ದುದು ಮೊದಲ ಪಂಕ್ತಿಯಲ್ಲಿ ಅಜ್ಜನ ಜೊತೆಗೆ ಆದರೆ ಏಳುತ್ತಿದ್ದುದು ಮಾತ್ರ
ಎರಡನೆಯ ಪಂಕ್ತಿಯ ಅಜ್ಜಿಯ ಜೊತೆಗೆ. ಇದು ನಾನು ಸ್ವಲ್ಪ ಸ್ಲೋ ಎಂಬ ತಪ್ಪು ಕಲ್ಪನೆ ಬರಲು ಇನ್ನೊಂದು
ದೊಡ್ಡ ಕಾರಣ. ಆದರೆ ಅಜ್ಜ ಕಲೆಸಿಕೊಡುವ ಉಪ್ಪಿನಕಾಯಿ ಅನ್ನದ ಜೊತೆಗೆ ಅಜ್ಜಿ ಕಲೆಸಿಕೊಡುವ ಮೊಸರನ್ನವನ್ನು
ಸವಿಯುವ ಆಸೆಗಾಗಿಯಷ್ಟೇ ನಾನು ಅಷ್ಟು ನಿಧಾನ ಊಟಮಾಡುತ್ತಿದ್ದು ಎಂಬುದನ್ನು ಯಾರೂ ಗಮನಿಸಲಿಲ್ಲ.
ಕೂಡು ಕುಟುಂಬದಲ್ಲಿದ್ದುದು,
ಅಜ್ಜಿಯ ಮುದ್ದಿನ ಮೊಮ್ಮಗಳಾಗಿದ್ದುದು ಮನೆಯಲ್ಲಿ ಯಾವುದೇ ಕೆಲಸಗಳನ್ನು ಮಾಡದೇ ಬೆಳೆಯಲು ಕಾರಣವಾಯ್ತೇ
ಹೊರತು ನನ್ನ ಸೋಮಾರಿತನದಿಂದಲ್ಲವೇ ಅಲ್ಲ.
ಊರಿನಲ್ಲಿ ನನ್ನ
ಓರಗೆಯ ಗೆಳತಿಯರೂ ಅದೇನೋ ಚುರುಕುತನದ ಗುಳಿಗೆ ನುಂಗಿಯೇ ಹುಟ್ಟಿದವರಂತಿದ್ದರು. ಊರೊಟ್ಟಿನ ಕಾರ್ಯಕ್ರಮಗಳಲ್ಲಿ
ರಂಗೋಲಿ ಬಿಡಿಸುವುದರಿಂದ ಹಿಡಿದು, ಊಟ ಬಡಿಸುವವರೆಗೆ ಮುನ್ನುಗ್ಗಿ ಎಲ್ಲಾ ಕೆಲಸ ಮಾಡುತ್ತಿದ್ದರು.
ಮನೆಯಲ್ಲೇ ಒಂದೂ ಕೆಲಸ ಮಾಡದ ನಾನು ಇನ್ನು ಬೇರೆ ಕಡೆ ಮಾಡುವುದುಂಟೆ, ಹಾಗಾಗಿ ಇಂತಹ ಸಮಯದಲ್ಲೆಲ್ಲಾ
ನಾನು ಮತ್ತು ನನ್ನಷ್ಟೇ ಸೋಮಾರಿಯಾದ ಇನ್ನೊಬ್ಬ ಗೆಳತಿಯೂ ಭೂಗತರಾಗಿಬಿಡುತ್ತಿದ್ದೆವು.
ಅವರೆಲ್ಲಾ ಹಾಡು
ಡ್ಯಾನ್ಸ್ ಎಂದು ಹಲವುಹತ್ತು ಹವ್ಯಾಸಗಳನ್ನೂ ರೂಢಿಸಿಕೊಂಡು ನೋಡುವವರ ಎದುರು ಸಿಕ್ಕಾಪಟ್ಟೆ ಚುರುಕು
ಹುಡುಗಿಯರು ಎನ್ನಿಸಿಕೊಂಡಿದ್ದರೆ, ನಾನು ನನ್ನ ಹವ್ಯಾಸವನ್ನೂ ಎಚ್ಚರಿಕೆಯಿಂದ ರೂಢಿಸಿಕೊಂಡಿದ್ದೆ.
ಯಾವುದೇ ರೀತಿಯಲ್ಲಿ ಮೈಕೈ ನೋವಾಗುವ ಪ್ರಮೇಯವೇ ಇಲ್ಲದಂತದ್ದು ಈ ಹವ್ಯಾಸ. ಕೈಯಲ್ಲೊಂದು ಪುಸ್ತಕ ಹಿಡಿದು
ಸುಮ್ಮನೇ ಒಂದು ಕಡೆ ಕುಳಿತುಕೊಂಡರಾಯಿತು. ನೋಡುವವರಿಗೆ ಇವಳು ಸಿಕ್ಕಾಪಟ್ಟೆ “ಇಂಟೆಲೆಕ್ಚುಯಲ್” ಎಂಬ ಭ್ರಮೆಯನ್ನೂ ಉಂಟುಮಾಡಬಹುದು. ಹಾಂ ಕೆಲವರು ಇದನ್ನ
ಸೋಮಾರಿತನ ಎಂದು ಹೇಳಬಹುದು; ಅದಕ್ಕೆ ಕಿವಿಗೊಡದಿದ್ದರಾಯಿತು ಅಷ್ಟೇ!
ಊರಿನಲ್ಲಿ ಗಡಿಬಿಡಿಯ
ಮನೆತನವೆಂದೇ ಹೆಸರಾಗಿದ್ದ ಮನೆಯಲ್ಲಿ ಹುಟ್ಟಿದ ನಾನು ಸೇರಿದ್ದು ಕೂಡ ಇಂತಹದ್ದೇ ಇನ್ನೊಂದು ಮನೆಗೆ.
ನೋಡಿದೊಡನೆಯೆ ಒಪ್ಪಿಯಾಯ್ತು,
ಒಂದೇ ವಾರದಲ್ಲಿ ವರನ ಮನೆಗೆ ಹೋಗಿ ಬಂದದ್ದಾಯ್ತು, ತಿಂಗಳೊಳಗೆ ನಿಶ್ಚಿತಾರ್ಥ, ಇನ್ನೊಂದು ತಿಂಗಳೊಳಗೆ
ಮದುವೆಯೂ ನಡೆದಾಯ್ತು.
ಎರಡೂ ಕಡೆಯವರಿಗೂ
ಗಡಿಬಿಡಿ, ಮದುವೆ ದಿನವಂತೂ ಇವರುಗಳ ಗಡಿಬಿಡಿಗೆ ಪುರೋಹಿತರೇ ಸುಸ್ತುಹೊಡೆದರು, ಒಂಬತ್ತು ಗಂಟೆಯ ಮುಹೂರ್ಥಕ್ಕೆ
ಆರು ಗಂಟೆಗೇ ವಧೂವರರು ಸಿದ್ಧರಾಗಿ ಕುಳಿತಿದ್ದೆವು ಎಂಬಲ್ಲಿಗೆ ಉಳಿದುದನ್ನು ಊಹಿಸಿಕೊಳ್ಳಿ. (ಅಂದು
ನನ್ನನ್ನೂ ಬೇಗನೇ ಎಬ್ಬಿಸಿ ಸಿದ್ಧಪಡಿಸುವ ಜವಾಬ್ದಾರಿ ಅಮ್ಮನದೇ ಆಗಿತ್ತಾದ್ದರಿಂದ ನನ್ನ ಬಣ್ಣ ಬಯಲಾಗುವ
ಪ್ರಸಂಗ ಇರಲಿಲ್ಲ)
ಬೆಳಗ್ಗೆ ಏಳೂವರೆ-ಎಂಟು
ಗಂಟೆಗೆ ತಿಂಡಿ ತಿನ್ನುವ ಅಭ್ಯಾಸ ಗಂಡನ ಮನೆಯವರದ್ದು. ಬೆಳಿಗ್ಗೆ ಏಳುಗಂಟೆಯ ಒಳಗೆ ಎದ್ದು ಅಭ್ಯಾಸವೇ
ಇರದಿದ್ದ ನಾನು ಕಷ್ಟಪಟ್ಟು ಆರೂವರೆಗೇ ಎದ್ದು ಏನಾದರೂ ಸ್ವಲ್ಪ ಕೆಲಸ ಮಾಡೋಣವೆಂದು ನೋಡಿದರೆ ಅಷ್ಟರಲ್ಲಿ
ಚಟ್ನಿ ಪಲ್ಯ ಎಲ್ಲವನ್ನೂ ರೆಡಿ ಮಾಡಿ ದೋಸೆ ಎರೆಯಲು ಕಾವಲಿಯನ್ನೂ ಸಿದ್ಧಪಡಿಸಿ ಇಟ್ಟಿರುತ್ತಿದ್ದರು
ಅತ್ತೆ. ಇನ್ನು ಅಡಿಗೆಗೆಂದು ನಾನು ತರಕಾರಿ ಹೆಚ್ಚುವಷ್ಟರಲ್ಲಿ
ಅತ್ತೆಗೆ ಮಸಾಲೆಗೆಲ್ಲಾ ಸಿದ್ಧಪಡಿಸಿ, ಕಾಯಿ ತುರಿದು, ಮಿಕ್ಸಿ ಹಾಕಿ ಎಲ್ಲವನ್ನೂ ತಯಾರಿಸಿ ಆಗುತ್ತಿತ್ತು.
ನೋಡಿದವರಿಗೆ ನಾನು ನಿಧಾನ ಎನ್ನಿಸಿಬಿಡಲು ಇಷ್ಟು
ಸಾಕಲ್ಲವೇ?
ಮಾವನವರು ನೋಡಲು
ನಿಧಾನಿಯಂತೆ ಕಾಣಿಸಿದರೂ ಗಡಿಬಿಡಿಗೇನೂ ಕೊರತೆಯಿರಲಿಲ್ಲ. ಯಾವುದಾದರೂ ವಿಷಯ ತಲೆಗೆ ಬಂತೆಂದರೆ ತಕ್ಷಣದಲ್ಲಿ
ಕಾರ್ಯಪ್ರವೃತ್ತರಾಗುವ ಸ್ವಭಾವ ಅವರದು.
ಇನ್ನು ನನ್ನ ಗಂಡನಂತೂ
ಗಾಳಿವೇಗದ ಸರದಾರ ಅಂತೇನೋ ಹೇಳುತ್ತಾರಲ್ಲ ಅಂತಹ ಜನ.
ನಾವಿಬ್ಬರೂ ಒಟ್ಟಿಗೇ ವಾಕಿಂಗ್ ಹೋಗುವುದುಂಟು. ಅವರು
ತೀರಾ ಕಷ್ಟಪಟ್ಟು ನಿಧಾನವಾಗಿ ನಡೆಯುವ ವೇಗ ನನ್ನ
ಓಡುವ ವೇಗಕ್ಕೆ ಸಮನಾಗಿರುತ್ತದೆ ಎಂದರೆ ನಾವಿಬ್ಬರೂ ಹೋಗುವಾಗ ಹೇಗೆ ಕಾಣುತ್ತೇವೆಂಬುದನ್ನು
ವಿವರಿಸಬೇಕಾದ ಅಗತ್ಯವಿಲ್ಲ ಅಲ್ಲವೇ? ರಸ್ತೆಯಲ್ಲಿ
ಜನ ನಿಂತು ನೋಡಿ ಬಾಯಿಗೆ ಕೈ ಅಡ್ದ ಇಟ್ಟು ನಗುವುದಕ್ಕೆಲ್ಲಾ ನಾವು ತಲೆಕೆಡಿಸಿಕೊಂಡಿಲ್ಲ ಬಿಡಿ.
ಬರ್ಥ್‍ಡೇ, ಆರತಾಕ್ಷತೆ
ಇತ್ಯಾದಿ ಫಕ್ಷನ್‍ಗಳಿಗೆ ಹೋಗುವಾಗ ನನ್ನ ಮಗಳೂ ನಾನೂ ಇಬ್ಬರೂ ಒಂದು ಪುಸ್ತಕ ಜೊತೆಗೊಯ್ದುಬಿಡುತ್ತೇವೆ.
ನಾವು ಹೋಗುವ ವೇಳೆಗೆ ಎಷ್ಟೋ ಕಡೆ ಇನ್ನೂ ಆ ಕಾರ್ಯಕ್ರಮ ನಡೆಸಲಿರುವ ಮನೆಯ ಜನರೇ ಬಂದಿರುವುದಿಲ್ಲವಲ್ಲ,
ಆಗ ಓದುತ್ತಾ ಕುಳಿತುಕೊಳ್ಳಲು ಈ ವ್ಯವಸ್ಥೆ.
ಯಜಮಾನರು ಕವಿಯಾಗಿರುವುದರಿಂದ
ಕೆಲವು ಸಮಾರಂಭಗಳಿಗೆ ಅಧ್ಯಕ್ಷರಾಗಲು ಕರೆಯುತ್ತಾರೆ. ಇವರು ಕಾರ್ಯಕ್ರಮಕ್ಕೆ ಎಷ್ಟು ಬೇಗ ಹೋಗಿಬಿಡುತ್ತಾರೆಂದರೆ
ಇವರು ಹೋಗುವ ವೇಳೆಗಿನ್ನೂ ಸಂಘಟಕರು ಕುರ್ಚಿಗಳನ್ನು ಹಾಕಿಸುತ್ತಿರುತ್ತಾರೆ. ಅಷ್ಟು ಬೇಗ ಬಂದ ಈ ಅಧ್ಯಕ್ಷರನ್ನು
ನೋಡಿ ಸಂಘಟಕರು ಗೊಂದಲಕ್ಕೊಳಗಾಗಿ ಬಿಡುತ್ತಾರೆ. ಒಮ್ಮೆ ಒಬ್ಬ ಸಂಘಟಕರು “ಸರ್ ಸಭೆ ಪ್ರಾರಂಭವಾಗಲು
ಇನ್ನೂ ಎರಡು ತಾಸು ಸಮಯವಿದೆ, ನಿಮಗೆಲ್ಲೋ ನಾನು ತಪ್ಪಿ ಸಮಯ ಹೇಳಿಬಿಟ್ಟಿರಬೇಕು ಸಾರಿ ಸರ್” ಎಂದು
ಕ್ಷಮೆ ಕೂಡ ಕೇಳಿಬಿಟ್ಟಿದ್ದರು ಪಾಪ!! ಅಧ್ಯಕ್ಷರೆಂದರೆ ಸ್ವಲ್ಪವಾದರೂ ಮರ್ಯಾದೆ ಬೇಡವೆ?
“ತೀರಾ ಅಷ್ಟು ಬೇಗ ಹೋದರೆ ಸುಮ್ಮನೇ ಕೆಲಸವಿಲ್ಲದೇ ಖಾಲಿ ಇದ್ದೀರಿ ಎಂದುಕೊಳ್ಳುತ್ತಾರೆ ಸಮಯಕ್ಕೆ
ಸರಿಯಾಗಿ ಹೋಗಿ” ಎಂಬ ನನ್ನ ಮಾತನ್ನು ಇವರು ಕೇಳುವುದೇ ಇಲ್ಲ. ಇಂತಹ ಗಂಡನೆದುರು ನಾನು ಸ್ಲೋ ಅನ್ನಿಸೋದು
ಸಹಜ ಅಲ್ವಾ?
ಆಫೀಸ್‍ನಲ್ಲಿಯೂ
ನನ್ನ ಬಾಸ್ ಆಗಾಗ ನನಗೆ “ನೀವು ತುಂಬಾ ಸ್ಲೋ ಮೇಡಂ ಹೀಗಾದರೆ ಹೇಗೆ? ಚುರುಕಾಗಬೇಕು” ಎಂದು ಕ್ಲಾಸ್ ತೆಗೆದುಕೊಳ್ಳುವುದುಂಟು. ಕೆಲಸಗಾರದ ಅತೀ ಚಿಕ್ಕ
ತಪ್ಪನ್ನೂ ಭೂತಕನ್ನಡಿಯಿಟ್ಟು ಎತ್ತಿ ತೋರಿಸದಿದ್ದಲ್ಲಿ ಆತ “ಬಾಸ್” ಆಗಲು ಸಾಧ್ಯವೆ? ಹಾಗಾಗಿ ನಾನು ಹೆಚ್ಚು ತಲೆ ಕೆಡಿಸಿಕೊಳ್ಳದೆ
ಆಯ್ತು ಬಿಡಿ ಸರ್ ಆಗ್ತೇನೆ ಎಂದುಬಿಡುವೆ.
ಒಟ್ಟಾರೆ ಈ ಮೂಲಕ
ನಾನು ಸ್ಪಷ್ಟ ಪಡಿಸುವುದೇನೆಂದರೆ ನನ್ನ ಗಂಡ ಹೇಳಿದಂತೆ ನಾನೇನು ಸ್ಲಾತ್ ಎಂಬ ಪ್ರಾಣಿಯಷ್ಟು ನಿಧಾನವೂ ಅಲ್ಲ, ಸೋಮಾರಿಯೂ ಅಲ್ಲ.
ತಮ್ಮ ಚುರುಕುತನದಿಂದ
ನನ್ನಲ್ಲಿ ಅನಾವಶ್ಯಕವಾದ ಕೀಳರಿಮೆ ಹುಟ್ಟುಹಾಕುವ ಈ ನಶ್ವರ ಪ್ರಪಂಚದಲ್ಲಿ ನನ್ನ ಮಗಳೊಬ್ಬಳು ಥೇಟ್
ನನ್ನನ್ನೇ ಹೋಲುವ ಮೂಲಕ ನನಗೆ ಸಾಂತ್ವಾನ ನೀಡುತ್ತಿದ್ದಾಳೆ.
ಒಂದು ಸಣ್ಣ ಒರತೆ ಝರಿಯಾಗಿ, ನದಿಯಾಗಿ, ಕಡಲು ಸೇರುವ ಪರಿ ನೋಡಲು ಚಂದ
ReplyDeleteದೇವನ ಸೃಷ್ಟಿಯಲ್ಲಿನ ಒಂದು ಜೀವಿಯನ್ನು ಕಂಡು... ಅದರ ಜೊತೆಯಲ್ಲಿ ಹೆಣೆದ ನಿಮ್ಮ ಲೇಖನ ಹಾಸ್ಯ ಉಕ್ಕಿಸುತ್ತದೆ ಜೊತೆಯಲ್ಲಿಯೇ ನಮ್ಮ ಗುಣ ನಮಗೆ ನಿಮ್ಮ ಗುಣ ನಿಮಗೆ ಎನ್ನುವ ಸಿದ್ಧಾಂತವನ್ನು ತೋರುತ್ತದೆ..
ಸೊಗಸಾದ ಬರಹ ಮೇಡಂ
Thank you Srikanth
Delete