2 Apr 2018

ವಿಚಿತ್ರ ಜೀವಿಗಳು ೩ - ತುರಾಯಿ ಜಿಂಕೆ

ಜಿಂಕೆ ಎಂದೊಡನೆ ನಮ್ಮ ಕಣ್ಣಿಗೆ ಕಾಣುವುದು ಆಕರ್ಷಕ ಬಣ್ಣಗಳ, ಸೌಮ್ಯ ಮುಖದ ಸುಂದರವಾದ ಪ್ರಾಣಿ. ನಮ್ಮ ಕವಿಗಳಂತೂ  ಚಿಕ್ಕ ಶಬ್ದಕ್ಕೂ ಬೆದರುವ, ಅಸಹಾಯಕತೆಯೇ ಮೂರ್ತಿವೆತ್ತಂತಹ, ಸೌಮ್ಯ ಸ್ವಾಭಾವ, ಸಾತ್ವಿಕ ಗುಣಗಳಿಗೆ ರೂಪಕವಾಗಿ ಜಿಂಕೆಯನ್ನು ಬಳಸುತ್ತಾರೆ.
"ಕೋರೆಹಲ್ಲುಗಳು" ಎಂದೊಡನೆ ನಮಗೆ ಕಲ್ಪನೆ ಬರುವುದು ಬೇಟೆಯಾಡಿ ಬೇರೆ ಪ್ರಾಣಿಗಳನ್ನು ಭಕ್ಷಿಸುವ ಮಾಂಸಾಹಾರಿ ಪ್ರಾಣಿಗಳು, ಅಥವಾ ತನ್ನ ಕೋರೆಹಲ್ಲು ಕಿರಿದು ಬೆದರಿಸುವ ದುಷ್ಟ ರಾಕ್ಷಸ,ದೆವ್ವ ಭೂತ  ಮೊದಲಾದವುಗಳು. ಅಂದರೆ ಕ್ರೂರತನಕ್ಕೆ ರೂಪಕವಾಗಿ ಕೋರೆಹಲ್ಲುಗಳನ್ನು ಕಲ್ಪಿಸಿಕೊಳ್ಳಬಹುದು.

ಆದರೆ ಒಂದು ಜಿಂಕೆಗೆ ಕೋರೆಹಲ್ಲುಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ? ಕಲ್ಪಿಸಿಕೊಳ್ಳಬೇಕಾಗಿಲ್ಲ ಇಂತಹುದೊಂದು ಪ್ರಾಣಿ ನಿಜವಾಗಿಯೂ ಇದೆ. "ತುರಾಯಿ ಜಿಂಕೆ"( tufted deer) ಎಂಬ ಹೆಸರಿನ ಈ ಜಿಂಕೆಗೆ ಉದ್ದನೆಯ ಕೋರೆಹಲ್ಲುಗಳಿವೆ!! ನಮ್ಮ ಮಾಮೂಲಿ ಜಿಂಕೆಯಷ್ಟು ಸುಂದರವಾಗಿಲ್ಲದಿದ್ದರೂ ಇದು ಅದೇ ಜಾತಿಗೆ ಸೇರಿದೆ!!


ಗಂಡು ತುರಾಯಿ-ಜಿಂಕೆ
ಚಿತ್ರಕೃಪೆ - ವಿಕಿಪಿಡಿಯಾ

ತುರಾಯಿ ಜಿಂಕೆ ಅಥವಾ ಜುಟ್ಟು ಜಿಂಕೆಯು ಮ್ಯಾನ್ಮಾರ್ ಮತ್ತು ದಕ್ಷಿಣ ಮತ್ತು ಮಧ್ಯ ಚೀನಾ ದೇಶಗಳಲ್ಲಿ ಕಂಡುಬರುತ್ತದೆ.  ನಾಲ್ಕು ಸಾವಿರ ಮೀಟರ್ ಎತ್ತರದ ಪರ್ವತ ಪ್ರದೇಶಗಳ ದಟ್ಟ ಕಾಡುಗಳಲ್ಲಿ ವಾಸ. ಸಂತಾನೋತ್ಪತ್ತಿ ಸಮಯದಲ್ಲಿ ಜೋಡಿಯಾಗಿರುವುದು ಬಿಟ್ಟರೆ ಬೇರೆ ಸಮಯದಲ್ಲಿ ಒಂಟಿಯಾಗಿರುತ್ತವೆ. ಪ್ರತಿಯೊಂದೂ ಜಿಂಕೆಯೂ ತನ್ನದೇ ಆದ ವಾಸಸ್ಥಾನವನ್ನು ಗುರುತಿಸಿಕೊಂಡು , ಕಾಪಾಡಿಕೊಳ್ಳುತ್ತದೆ. 


ಹೆಣ್ಣು ತುರಾಯಿ-ಜಿಂಕೆ
ಚಿತ್ರಕೃಪೆ - ವಿಕಿಪಿಡಿಯಾ

ನಾವು ಮಾಮೂಲಿಯಾಗಿ ನೋಡುವ ಜಿಂಕೆಗಿಂತ ಸಣ್ಣ ಗಾತ್ರ, ತುರಾಯಿ ಜಿಂಕೆಯದ್ದು. ಬೂದು ಮಿಶ್ರಿತ ಕಂದು ಮೈಬಣ್ಣವಿದೆ. ಹಣೆಯ ಮೇಲ್ಭಾಗದಲ್ಲಿ ತುರಾಯಿಯಂತೆ ಕಾಣುವ ಕಂದು ಮಿಶ್ರಿತ ಕಪ್ಪು ಬಣ್ಣದ ದಟ್ಟ ಕೂದಲುಗಳ ಗುಚ್ಛವಿದೆ. ಆದ್ದರಿಂದಲೇ ಇದಕ್ಕೆ ತುರಾಯಿ ಜಿಂಕೆ ಎಂಬ ಹೆಸರು. ಗಂಡು ತುರಾಯಿ ಜಿಂಕೆಗಳಿಗೆ ಚಿಕ್ಕ ಕೊಂಬು ಕೂಡ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಗಂಡಿಗೆ ಮೇಲ್ಭಾಗದ ಕೋರೆಹಲ್ಲುಗಳು ಉದ್ದವಾಗಿದ್ದು ಬಾಯಿಯಿಂದ ಹೊರಚಾಚಿಕೊಂಡಿವೆ. ಹುಲ್ಲು, ಚಿಗುರು ಸೊಪ್ಪುಗಳನ್ನು ತಿನ್ನುವ ಈ ಜಿಂಕೆಗೆ ಇಷ್ಟುದ್ದದ ಕೋರೆಹಲ್ಲುಗಳ ಅವಶ್ಯಕತೆ ಏನಿರಬಹುದು? ಸಂತಾನೋತ್ಪತ್ತಿ ಸಮಯದಲ್ಲಿ ಬೇರೆ ಗಂಡುಗಳೊಡನೆ ಪೈಪೋಟಿಗಿಳಿಯಲು ಇವು ಸಹಾಯಕವಾಗಿವೆ. 

ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಇವುಗಳ ಸಂತಾನೋತ್ಪತ್ತಿ ಕಾಲ. ಈ ಕಾಲದಲ್ಲಿ ಗಂಡುಗಳ ದೊಡ್ಡ ಧ್ವನಿಯಲ್ಲಿ ಕೂಗುತ್ತವೆ! ಆರು ತಿಂಗಳ ಕಾಲ ಮರಿಗಳನ್ನು ಹೊರುವ ಹೆಣ್ಣು ಜಿಂಕೆ ಒಂದು ಬಾರಿಗೆ ಒಂದು ಅಥವಾ ಎರಡು ಮರಿಗಳನ್ನು ಹೆರುತ್ತದೆ. 

ಎತ್ತರದ ಪರ್ವತಪ್ರದೇಶಗಳ ದಟ್ಟ ಕಾಡುಗಳಲ್ಲಿ ವಾಸಿಸುವ ಈ ಜಿಂಕೆ ಮಾನವನ ಕಣ್ಣಿಗೆ ಬೀಳುವುದು ಅಪರೂಪವಾದ್ದರಿಂದ ಇದರ ಜೀವನಕ್ರಮದ ಬಗ್ಗೆ ಇನ್ನೂ ಸರಿಯಾಗಿ ತಿಳಿಯಲಾಗಿಲ್ಲವಂತೆ! ಆದರೆ ವಾಸಸ್ಥಾನಗಳು ಕಣ್ಮರೆಯಾಗುತ್ತಿರುವುದು, ವಿಪರೀತವಾಗಿ ಬೇಟೆಗೆ ಬಲಿಯಾಗಿರುವುದು ಇತ್ಯಾದಿ ಕಾರಣಗಳಿಂದ ಅಳಿವಿನಂಚಿನಲ್ಲಿದೆಯಂತೆ ಈ ಪ್ರಾಣಿ.


4 comments:

  1. ಕೋರೆಹಲ್ಲುಗಳು ಉಳ್ಳ ಜಿಂಕೆ! ಗೊತ್ತಿರಲಿಲ್ಲ. ಇದೀಗ ಓದಿ ಹಾಗು ಚಿತ್ರಗಳನ್ನು ನೋಡಿ, ಖುಶಿಯಾಯಿತು.

    ReplyDelete
  2. ಉತ್ಪ್ರೇಕ್ಷೆಯಲ್ಲ.. ಕೆಲವೊಮ್ಮೆ ನನಗೆ ಅನ್ನಿಸುತ್ತದೆ.. ಸೃಷ್ಟಿಕರ್ತ ಬ್ರಹ್ಮ ತಾನು ಮಾಡಿದ ಸೃಷ್ಟಿಗಳಿಗೆ ಒಂದು ಕೈಪಿಡಿ ಮಾಡಲು ನಿಮ್ಮನ್ನು ಧರೆಗೆ ಕಳಿಸಿದ್ದಾನಾ ಅಂತ..

    ಸೊಗಸಾದ ಮಾಹಿತಿ.. ಜಿಂಕೆ ಅಂದರೆ ಮಾಯಾಜಿಂಕೆಯಿಂದ ಹಿಡಿದು ಇಂದಿನ ಮೃಗಾಲಯದಲ್ಲಿ ಕಾಣುವ ಮುದ್ದಾದ ಜಿಂಕೆ ಕಣ್ಣ ಮುಂದೆ ಬರುತ್ತದೆ...

    ತುರಾಯಿ ಜಿಂಕೆಯ ಜೀವನದ ಬಗ್ಗೆ ಹೇಳಿರುವ ಮಾಹಿತಿ ಸೊಗಸಾಗಿದೆ.. ಈ ಭೂರಮೆಯಲ್ಲಿರುವ ವೈವಿಧ್ಯತೆಯ ಬಗ್ಗೆ ಪುಟ ಪುಟಗಳಲ್ಲಿ ಹೇಳುತ್ತಿರುವ ನಿಮ್ಮ ಬರಹಗಳಿಗೆ ಒಂದು ಸಲಾಂ

    ReplyDelete
  3. ತುಂಬಾ ದೊಡ್ಡ ಮಾತು ಶ್ರೀಕಾಂತ್, ಸುಮ್ಮನೇ ನನ್ನ ಆಸಕ್ತಿಯ ವಿಷಯಗಳ ಬಗ್ಗೆ ನಾನು ಓದಿದ್ದು, ಕಂಡಿದ್ದು, ಕೇಳಿದ್ದು ಹಂಚಿಕೊಳ್ಳುವ ಲೇಖನಗಳಷ್ಟೇ. ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.

    ReplyDelete