1 Jan 2026

ಅತ್ತೆಯೆಂಬ ಆಲದಮರ

 


ನಿಮ್ಮ ಅತ್ತೆಯವರ ಶ್ವಾಸಕೋಶಗಳಲ್ಲಿ ಶಕ್ತಿ ಕುಂದಿದೆ, ಇನ್ನು ವರ್ಷದಿಂದ ವರ್ಷಕ್ಕೆ ಮಳೆಗಾಲ, ಚಳಿಗಾಲ ಕಷ್ಟವಾಗುತ್ತದೆ, ಈ ಆಕ್ಸಿಜನ್‌ ಕಾನ್ಸಂಟ್ರೇಷನ್‌ ಬಲದಿಂದ ಇನ್ನು ಮೂರ್ನಾಲ್ಕು ವರ್ಷ ದೂಡಬಹುದು ಎಂದು ಡಾಕ್ಟರ್‌ ನನ್ನ ಬಳಿ ಹೇಳಿ ಈಗ ಎಂಟು ವರ್ಷಗಳಾಯಿತು. ಅವರ ಆತ್ಮಬಲ, ಡಾಕ್ಟರ್‌ಗಳ ಮೇಲಿನ ಅಗಾಧ ನಂಬಿಕೆ, ಜೀವನಾಸಕ್ತಿ ಅವರನ್ನು ಇಲ್ಲಿಯವರೆಗೆ ಬದುಕಿಸಿತ್ತು. ಈ ಬಾರಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆ ಸೇರಿದಾಗಲೂ ಪ್ರತೀ ಬಾರಿಯ ಹಾಗೆ ಚೇತರಿಸಿಕೊಂಡು ವಾಪಾಸಾಗುತ್ತಾರೆ ಎಂದೇ ನಾವೆಲ್ಲರೂ ಭಾವಿಸಿದ್ದೆವು. ಆದರೆ ಅವರು ಈ ಬಾರಿ ಸಣ್ಣ ಸೂಚನೆಯನ್ನೂ ಕೊಡದೆ, ಹೇಳದೆ ಕೇಳದೆ ಹೊರಟೇಹೋದರು. ಶರಾವತಿ ಬ್ಯಾಕ್‌ವಾಟರ್‌ ಕಾರಣದಿಂದಾಗಿ ದ್ವೀಪವಾಗಿದ್ದ ಮಣಗೋಡು ಎಂಬ ಕುಗ್ರಾಮದಲ್ಲಿ ಹುಟ್ಟಿ ಬೆಳೆದು, ದೂರದ ಸಾಗರದ ಬಳಿಯ ಕಲ್ಮನೆಯ ಸೂರ್ಯನಾರಾಯಣರ ಮಡದಿಯಾಗಿ ನಿಟ್ಟೂರಿನ ಬಳಿಯ ಅಡಿಕೆಶನಿಯಲ್ಲಿ ವಾಸವಾಗಿ, ತನ್ನ ಸಂಪರ್ಕಕ್ಕೆ ಬಂದ ಎಲ್ಲರ ಮೇಲೆ ಅಳಿಸಲಾಗದ ಪ್ರಭಾವ ಬೀರಿದ, ಪದ್ಮಾವತಮ್ಮ ೮೭ ವರ್ಷಗಳ ತಮ್ಮ ಸಾರ್ಥಕ ಜೀವನಯಾತ್ರೆಯನ್ನು ಮುಗಿಸಿ ತಿಂಗಳಾಯಿತು.

ಹಲವಾರು ಊರುಗಳಲ್ಲಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಹೊಸನಗರದ ಬಳಿಯ ನಿಟ್ಟೂರಿನ ಹತ್ತಿರದ ಹಳ್ಳಿಯಲ್ಲಿ ಜಮೀನು ಖರೀದಿಸಿ ಅಲ್ಲಿ ನೆಲೆನಿಂತ ಮಾವನವರದು ಆ ಭಾಗದಲ್ಲಿ ಅತ್ಯಂತ ಪ್ರಸಿದ್ಧ ಹೆಸರು. ಅವರು ಪಾಠ ಮಾಡುವ ವಿಧಾನವನ್ನಾಗಲಿ, ಕತೆ ಹೇಳುವ ವಿಧಾನವನ್ನಾಗಲೀ ಇಂದಿಗೂ ನೆನಪಿಸಿಕೊಂಡು ಅಭಿಮಾನದಿಂದ ಮಾತನಾಡುವ ಶಿಷ್ಯರು ಇದ್ದಾರೆ. ವೈಯಕ್ತಿಕ ಜೀವನದಲ್ಲೂ ಮನೆಮಂದಿಗಳಲ್ಲಿ, ನೆಂಟರಿಷ್ಟರಲ್ಲಿ ತನ್ನ ಜ್ಞಾನ, ಪರೋಪಕಾರ, ಎಲ್ಲರೆಡೆಗೆ ಅವರು ತೋರುತ್ತಿದ್ದ ಪ್ರೀತಿ ವಿಶ್ವಾಸ ಮೊದಲಾದ ಗುಣಗಳಿಂದ ಅಪಾರ ಗೌರವ ಪಡೆದಂತಹ ವ್ಯಕ್ತಿ ಅವರು.  ಅಂತವರ ಪತ್ನಿಯಾಗಿ ಅವರ ಜನಪ್ರಿಯತೆ, ಗೌರವಕ್ಕೆ ಸರಿಸಮನಾದ ಜನಪ್ರಿಯತೆ, ಗೌರವವನ್ನು ತನ್ನ ವ್ಯಕ್ತಿತ್ವದಿಂದ ಗಳಿಸಿದಾಕೆ ಪದ್ಮಾವತಮ್ಮ.  ಹುಟ್ಟಿದ ಕುಟುಂಬದ ಮೂರು ತಲೆಮಾರು ಹಾಗೂ ಸೇರಿದ ಕುಟುಂಬದ ಮೂರು ತಲೆಮಾರುಗಳ ಪ್ರೀತಿವಿಶ್ವಾಸ ಗಳಿಸಿಕೊಳ್ಳುವುದು ಸಾಧಾರಣ ಸಾಧನೆಯಲ್ಲ.

ಶಾಲೆಯ ಮುಖವನ್ನು ಕಂಡವರಲ್ಲ. ಆದರೆ ಅಪಾರವಾದ ಆತ್ಮವಿಶ್ವಾಸ, ನೆನಪಿನ ಶಕ್ತಿ, ಚುರುಕು ಬುದ್ಧಿಯಿಂದಾಗಿ ಎಂತಹ ವಿದ್ಯಾವಂತರಿಗೂ ಕಡಿಮೆಯಿಲ್ಲದಂತೆ ಬದುಕಿದರು. ಬದುಕಿನ ಕೊನೆಯವರೆಗೂ ಅವರ ಬುದ್ದಿಯ ಆ ಚುರುಕುತನ ಕಡಿಮೆಯಾಗಿರಲಿಲ್ಲ.

ನಾನು ಮದುವೆಯಾಗಿ ಅವರ ಕಿರಿಸೊಸೆಯಾಗಿ ಬಂದಾಗ ಅವರಿಗೆ ಸುಮಾರು ೬೦ ವರ್ಷಗಳಾಗಿತ್ತು, ಮಾವನವರಿಗೆ ಸುಮಾರು ೬೮-೬೯.  ನನ್ನ ಅಜ್ಜಿ-ಅಜ್ಜನ ವಯಸ್ಸು ಕೂಡ ಹೆಚ್ಚುಕಡಿಮೆ ಅದೇ ಆಗಿದ್ದರಿಂದಲೋ ಏನೋ ನಾನು ಅವರಿಬ್ಬರಲ್ಲಿ ನನ್ನ ಅಜ್ಜ-ಅಜ್ಜಿಯರನ್ನೇ ಕಾಣುತ್ತಿದ್ದೆ.  ೧೩ ಜನರಿದ್ದ ಮಧ್ಯಮವರ್ಗದ ಕೂಡುಕುಟುಂಬವಾಗಿದ್ದ ನಮ್ಮ ಮನೆಯಲ್ಲಿ ಊಟ-ತಿಂಡಿಗಳಲ್ಲಿ ವ್ಯಕ್ತಿಗತ ಆಯ್ಕೆಗೆ (ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ) ಹೆಚ್ಚಿನ ಅವಕಾಶವಿರಲಿಲ್ಲ. ಎಲ್ಲರಿಗೂ ಒಂದೇ ರೀತಿಯ ತಿಂಡಿ, ಊಟ. ಆದರೆ ಇಲ್ಲಿ ಅತ್ತೆ ಪ್ರತಿಯೊಬ್ಬರಿಗೂ ಅವರಿಷ್ಟದಂತೆ ಸ್ವಲ್ಪವೂ ಬೇಸರವಿಲ್ಲದೆ  ಮಾಡಿಕೊಡುತ್ತಿದ್ದರು! ದೋಸೆ ಮಾಡಿದರೆ ಯಾರಿಗೆ ಅದು ಗರಿಗರಿಯಾಗಿ ಇರಬೇಕು, ಯಾರಿಗೆ ಮೆದುವಾಗಿರಬೇಕು, ಕಾಫಿ ಯಾರಿಗೆ ಎಷ್ಟು ಬಿಸಿ ಬೇಕು, ಎಷ್ಟು ಸಕ್ಕರೆ ಬೇಕು ಇತ್ಯಾದಿ ವಿವರಗಳೆಲ್ಲ ಒಮ್ಮೆ ಅವರ ತಲೆಗೆ ಹೋದರೆ ಮತ್ತೆಂದೂ ಮರೆಯುವ ಪ್ರಶ್ನೆಯೆ ಇರಲಿಲ್ಲ! ಮನೆಯವರಷ್ಟೇ ಅಲ್ಲದೆ, ಅಪರೂಪಕ್ಕೆ ಬರುವ ಅತಿಥಿಗಳ ಇಷ್ಟಾನಿಷ್ಟಗಳ ವಿವರಗಳನ್ನೂ ನೆನಪಿಟ್ಟುಕೊಂಡು ಹಾಗೆಯೆ ಮಾಡಿಕೊಡುತ್ತಿದ್ದರು! ಮನೆ ಹಾಗೂ ತೋಟದ ಕೆಲಸಕ್ಕೆ ಬರುವ ಆಳುಗಳಿಗೂ ಇದೇ ರೀತಿಯ ಸತ್ಕಾರ ಮಾಡುತ್ತಿದ್ದರು. ಊರಿನಿಂದ ಬೆಂಗಳೂರಿಗೆ ಬರುವಾಗ ಆಯಾ ಕಾಲದಲ್ಲಿ ದೊರಕುವ ಎಲ್ಲರೀತಿಯ ಸೊಪ್ಪುತರಕಾರಿಗಳನ್ನು, ಚಟ್ನಿ ಉಪ್ಪಿನಕಾಯಿಗಳನ್ನೂ ನಮಗೆ ಇಷ್ಟವೆಂದು ತರುತ್ತಿದ್ದ ಹಾಗೆಯೆ ಇಲ್ಲಿಂದ ವಾಪಾಸಾಗುವಾಗ ಅಲ್ಲಿರುವ ಮಗಸೊಸೆಗೆ ಇಷ್ಟವೆಂದು ಇಲ್ಲಿ ಸಿಗುವ ಅಪರೂಪದ ಹಣ್ಣುತರಕಾರಿಗಳನ್ನೂ, ಸಿಹಿತಿಂಡಿಗಳನ್ನೂ ತೆಗೆದುಕೊಂಡುಹೋಗುತ್ತಿದ್ದರು.

 ಸಾಮಾನ್ಯವಾಗಿ ಆ ಕಾಲದಲ್ಲಿ ನಾನು ಸುತ್ತಮುತ್ತಲೂ ನೋಡಿದ ಆ ವಯಸ್ಸಿನ ಹೆಂಗಸರಿಗೆ ದೇವರು ದಿಂಡಿರು, ಶಾಸ್ತ್ರ ಸಂಪ್ರದಾಯ, ಮಡಿ, ಮೈಲಿಗೆ ಮೊದಲಾದವುಗಳ ಬಗೆಗೆ ನಂಬಿಕೆ ಹೆಚ್ಚಾಗಿರುತ್ತಿತ್ತು. ನನ್ನ ಅಜ್ಜಿಯರಿಬ್ಬರೂ ಅತಿಯಾಗಲ್ಲದಿದ್ದರೂ, ಬೇರೆಯವರು ಮಾಡಬೇಕೆಂದು ಬಯಸದಿದ್ದರೂ ಅವರ ಮಟ್ಟಿಗೆ  ದೇವರುದಿಂಡಿರು, ಶಾಸ್ತ್ರ ಸಂಪ್ರದಾಯಗಳ ಮೇಲೆ ನಂಬಿಕೆಯಿದ್ದವರಾಗಿದ್ದರು. ಆದರೆ ಅತ್ತೆಯವರಿಗೆ ಇದ್ಯಾವುದರ ಮೇಲೂ ಆಸಕ್ತಿ ಇರಲಿಲ್ಲ. ಮಾವನವರ ಪೂಜೆಗೂ ಮೊದಲು ಸ್ನಾನ ಮಾಡಿಕೊಂಡು, ದೇವರಿಗೊಂದು ದೀಪ ಹಚ್ಚಿ ನಮಸ್ಕರಿಸಿ, ಶ್ರದ್ಧೆಯಿಂದ ಪೂಜೆಗೆ ಗಂಧ ತೇಯ್ದು  ಕೊಟ್ಟರೆ ಮುಗಿಯಿತು, ಮತ್ತೆ ಇಡೀ ದಿನ ಕೆಲಸವೇ ಅವರ ದೇವರು. ಸುಮಾರು ೭೫-೭೬ ವರ್ಷಗಳವರೆಗೂ ಅಡುಗೆಮನೆ, ಆಳುಕಾಳುಗಳಿಂದ ಆಗಬೇಕಾದ ತೋಟ, ಮನೆಯ ಕೆಲಸಗಳ ಮೇಲ್ವಿಚಾರಣೆ, ಮಕ್ಕಳು ಮೊಮ್ಮಕ್ಕಳ ಬೇಕುಬೇಡಗಳನ್ನು ವಿಚಾರಿಸಿಕೊಳ್ಳುವುದು ಹೀಗೆ ಸದಾ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರುತ್ತಿದ್ದರು. ನಂತರ ಮಂಡಿನೋವು ಹಾಗೂ ಶ್ವಾಸಕೋಶದ ಸಮಸ್ಯೆಗಳಿಂದಾಗಿ ಹೆಚ್ಚು ಕೆಲಸ ಮಾಡಲಾಗದಿದ್ದರೂ ಕೊನೆಯವರೆಗೂ ಮನೆಯ ಕೆಲಸಕಾರ್ಯಗಳನ್ನು ಕುಳಿತಲ್ಲೇ ನಿರ್ದೇಶಿಸುತ್ತಿದ್ದರು.

ನಾಳಿನ ಬಗೆಗೆ ಚಿಂತೆಯಿಲ್ಲದ ಧಾರಾಳತನ ಅತ್ತೆಯದು. ಹಾಗಂತ ಬಹಳ ಶ್ರೀಮಂತಿಕೆಯನ್ನೇನೂ ಕಂಡವರಲ್ಲ, ಆದರೂ ಇದ್ದುದರಲ್ಲೇ ಹಂಚಿ ತಿನ್ನೋಣ ಎಂಬ ಮನೋಭಾವ. ದೂರದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ, ದೂರದ ಊರಿಂದ ಶಾಲೆಗೆ ವರ್ಗವಾಗಿ ಬರುವ ಉಪಾಧ್ಯಾಯರುಗಳಿಗೆ, ಕುಗ್ರಾಮಗಳಿಂದ ನಿಟ್ಟೂರಿನ ಆಸ್ಪತ್ರೆಗಳಿಗೆ ಬರುವ ನೆಂಟರಿಷ್ಟರಿಗೆ  ಅತ್ತೆ, ಮಾವನವರ ಆಶ್ರಯ ಸದಾ ಇರುತ್ತಿತ್ತು. ಮನೆಯಲ್ಲಿ ವಿಶೇಷ ತಿಂಡಿ ಮಾಡಿ ಊರವರನ್ನೆಲ್ಲ ಕರೆದು ಬಡಿಸುವುದಿರಲಿ, ಆಳುಕಾಳುಗಳಿಗೆ ಕೊಡುವುದಿರಲಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಿರಲಿ ಲೆಕ್ಕಾಚಾರವಿಡದ ಧಾರಾಳತನ ಅವರದು.  ವರ್ಷಕ್ಕೆರಡು ಹೊಸಸೀರೆ ಕೊಂಡರೆ ಅದನ್ನು  ಮುಂದಿನ ವರ್ಷ ಬರುವುದರೊಳಗೆ ನಾಲ್ಕಾರು ಬಾರಿ ಉಟ್ಟು ನಂತರ ಯಾರಿಗಾದರೂ ಕೊಟ್ಟುಬಿಡುತ್ತಿದ್ದರು. ಮುಂದೆ ಬೇಕಾಗಬಹುದು ಎಂದು ಸಂಗ್ರಹಿಸಿ ಇಡುವ ಅಭ್ಯಾಸ ಅವರಿಗಿರಲಿಲ್ಲ. ಅವರು ಚಿಂತೆಯಿಂದ ಕುಳಿತದ್ದನ್ನೆಂದೂ ನಾವು ನೋಡಿರಲಿಲ್ಲ. ಇಂದಿನ ಲೈಫ್ ಕೋಚ್ ಗಳ ಜೀವನಮಂತ್ರವಾಗಿರುವ “ವರ್ತಮಾನದಲ್ಲಿ ಜೀವಿಸುವುದು” ಆತ್ತೆಯ ಸ್ವಭಾವದಲ್ಲಿಯೇ ಇತ್ತು. 

ತಾನು ಸತ್ತ ನಂತರ ತನ್ನಲ್ಲಿ ಇರುವ ಅಲ್ಪಸ್ಪಲ್ಪ ಬಂಗಾರ ಹಾಗು ಹಣದಲ್ಲಿ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳಿಗೆ ಯಾರಿಗೆ ಯಾವುದು ಸೇರಬೇಕು ಎಂಬುದನ್ನು ವಿಲ್ ಬರೆಸಿಟ್ಟಿದ್ದರು! ತನ್ನ ಮರಣಾನಂತರದ ಕಾರ್ಯಗಳನ್ನು ಯಾವುದಾದರೂ ಕ್ಷೇತ್ರದಲ್ಲಿ ನಡೆಸಬೇಕು, ಮನೆಯವರಿಗೆ ಅದು ಹೊರೆಯಾಗಬಾರದು ಎಂಬ ತನ್ನ ಇಚ್ಛೆಯನ್ನೂ ಅದರಲ್ಲಿ ಬರೆಸಿದ್ದರು! ಆಕೆ ಅನಕ್ಷರಸ್ಥೆಯಾದರೂ ವಿದ್ಯಾವಂತೆ ಎಂಬುದಕ್ಕೆ ಅವರ ಈ ನಡೆ ಸಾಕ್ಷಿಯಾಗಿದೆ.

ಅವರಿಗೆ ಇದ್ದ ಇನ್ನೊಂದು ಅದ್ಭುತ ಗುಣವೆಂದರೆ ಕಮ್ಯುನಿಕೇಷನ್ ಸ್ಕಿಲ್, ಎದುರಿಗಿರುವ ವ್ಯಕ್ತಿ ಯಾವ ವಯಸ್ಸಿನವರಾಗಿರಲಿ, ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, ಶ್ರೀಮಂತ, ಬಡವ ಏನೇ ಆಗಿರಲಿ, ಕನ್ನಡವೇ ಬಾರದಿದ್ದವರಾಗಿರಲಿ ಅವರನ್ನು ಮಾತಿಗೆಳೆದು ಅವರ ಬಗೆಗೆ ತಿಳಿದುಕೊಂಡು ಒಂದಿಷ್ಟು ತನಗೆ ತಿಳಿದದ್ದು ಹೇಳಿ ಸ್ನೇಹ ಸಂಪಾದಿಸುತ್ತಿದ್ದರು.   ಹೊಸಬರನ್ನು ಮಾತನಾಡಿಸಬೇಕೆಂದರೆ ಶಬ್ದಗಳಿಗಾಗಿ ತಡಕಾಡುವಂತಾಗುವ ನನಗೆ ಎಲ್ಲರೊಡನೆ ತಮ್ಮ ದೊಡ್ಡ ಧ್ವನಿಯಲ್ಲಿ ಹರಟುತ್ತಾ, ಮಾತೇ ನಮ್ಮ ಬಂಡವಾಳ ಎನ್ನುತ್ತಿದ್ದ  ಅವರೊಂದು ಅಚ್ಚರಿಯೆ ಆಗಿತ್ತು.

ಕೊನೆಯವರೆಗೂ ಬತ್ತದ ಜೀವನೋತ್ಸಾಹ ಅವರಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ ಆಗಾಗ ಕೈಕೊಡುತ್ತಿದ್ದ ಆರೋಗ್ಯ, ಉಸಿರಾಟದ ಸಮಸ್ಯೆ, ಬಲಹೀನವಾಗಿದ್ದ ಕಾಲುಗಳು ಮೊದಲಾದವುಗಳಿಂದ ಅಪರೂಪಕ್ಕೆಲ್ಲಾದರೂ ಬೇಸರ ಪಟ್ಟುಕೊಳ್ಳುತ್ತಿದ್ದರಾದರೂ, ವಾಕರ್ ಹಿಡಿದುಕೊಂಡೇ ಮನೆಯ ತುಂಬ ಓಡಾಡುತ್ತಾ ಕೆಲಸಗಳು ಹೇಗಾಗಬೇಕೆಂದು ಹೇಳುತ್ತಿದ್ದರು. ಇತ್ತೀಚಿನವರೆಗೂ ಯಾವುದಾದರೂ ಹೊಸ ಅಡುಗೆ ರುಚಿ ನೋಡಿದರೆ ಹೇಗೆ ಮಾಡುವುದೆಂದು ಕೇಳಿ ತಿಳಿದುಕೊಳ್ಳುತ್ತಿದ್ದರು! “ನನಗೆ ಮಾಡಲು ಆಗದಿದ್ದರೂ ಮಾಡುವವರಿಗೆ ಹೇಳಿಕೊಡುತ್ತೇನೆ” ಎಂದು ನಗುತ್ತಿದ್ದರು. ಮೊಮ್ಮಕ್ಕಳು ಕೊಡಿಸುತ್ತಿದ್ದ ಪಿಜ್ಜಾ, ಬರ್ಗರ್, ಪಾಸ್ತಾ, ನೂಡಲ್ಸ್ ಮೊದಲಾದ ನವಕಾಲದ ಅಡುಗೆಗಳನ್ನು ಖುಷಿಯಿಂದ ಸವಿಯುತ್ತಿದ್ದರು.

ಅತ್ತೆಯ ವೈಕುಂಠಸಮಾರಾಧನೆಯ ದಿನ ಬಂದ ದೂರದ ಬಂಧುವೊಬ್ಬರು ಅತ್ತೆಯ ಗುಣಗಳನ್ನು ನೆನೆಸಿಕೊಂಡು ಕೊನೆಗೆ "ಅವರ ಪರಂಪರೆಯನ್ನು ಇನ್ನು ನೀವು ಸೊಸೆಯಂದಿರು ಮುಂದುವರೆಸಿಕೊಂಡು ಹೋಗಬೇಕು" ಎಂದರು. ಹೂಂ ಎಂದು ನಕ್ಕು ಸುಮ್ಮನಾದೆ.

ಆಲದಮರದ ಬಳಿ ಬೇರೆ ಸಸ್ಯಗಳು ಬೆಳೆಯುವುದಿಲ್ಲ ಎನ್ನುತ್ತಾರೆ. ಅಷ್ಟು ಬೃಹತ್ತಾಗಿರುವುದು ಆಲದಮರದ ತಪ್ಪಲ್ಲ. ಅದರ ಬಳಿ ಹುಟ್ಟಿದ ಸಸ್ಯಗಳದೂ ತಪ್ಪಿಲ್ಲ, ಆ ಸಸ್ಯಗಳು ಆಲದಮರದ ಹಾಗೆಯೇ ಇರಬೇಕೆಂದು ನಿರೀಕ್ಷಿಸುವುದು ತಪ್ಪಾಗುತ್ತದೆ ಏಕೆಂದರೆ ಆಲದಮರದ ಹಾಗೆ ಬೆಳೆಯುವ ಆಸಕ್ತಿ, ಅವಶ್ಯಕತೆ, ಅನಿವಾರ್ಯ, ಸಾಮರ್ಥ್ಯ ಯಾವುದೂ ಆ ಸಸ್ಯಗಳಿಗೆ ಇಲ್ಲದಿರಬಹುದು.

1 comment:

  1. ಹಿರಿಯ ಜೀವದ ಬಗ್ಗೆ ಬರೆದ ಬರಹ ಅವರ ಬದುಕಿನ ಸ್ಟೇ ಅರ್ಥಪೂರ್ಣ.

    ReplyDelete