ಭುವನೇಶ್ವರದಲ್ಲಿ ಒಂದು ದಿನ ಕಳೆದ ನಂತರ ಮಾರನೆಯ ದಿನ ನಾವು ಈ ಗೋಲ್ಡನ್ ಟ್ರೈಯಾಂಗಲ್ನ ಎರಡನೆಯ ಮುಖ್ಯಬಿಂದು ಪುರಿಗೆ ಪಯಣಿಸಿದೆವು. ಜಗನ್ನಾಥನ ದರ್ಶನಕ್ಕೂ ಮೊದಲು ಪುರಿಯಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿರುವ, ಪ್ರಪಂಚದ ಎರಡನೆಯ ಅತೀ ದೊಡ್ಡ ಉಪ್ಪುಮಿಶ್ರಿತ ನೀರಿನ( brackish water) ಸರೋವರವೆಂದೇ ಹೆಸರಾಗಿರುವ “ಚಿಲ್ಕಾ ಲೇಕ್” ನೋಡಲೆಂದು ಹೊರಟೆವು.
ಚಿಲ್ಕಾ ಲೇಕ್ಚಿಲ್ಕಾ ಲೇಕ್ ಸುಮಾರು 1000 ಚದರ ಕಿ ಮೀ ಗಳಷ್ಟು ವಿಶಾಲವಾಗಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಸರೋವರ. ಇದು “ರಾಮ್ಸರ್ ಕನ್ಸರ್ವೇಷನ್ ಸೈಟ್” ಅಂದರೆ ಅಂತರರಾಷ್ಟ್ರೀಯ ಮಹತ್ವವಿರುವ ಜೌಗು ಪ್ರದೇಶ. ಸುಮಾರು 50 ಕ್ಕೂ ಹೆಚ್ಚು ನದಿಗಳು ಬಂದು ಬಂಗಾಳಕೊಲ್ಲಿಯನ್ನು ಸೇರುವ ಪ್ರದೇಶವಿದು. ನದಿಗಳ ಸಿಹಿನೀರು ಮತ್ತು ಹಿಮ್ಮುಖವಾಗಿ ನುಗ್ಗುವ ಸಮುದ್ರದ ಉಪ್ಪುನೀರಿನೊಂದಿಗೆ ಬೆರೆತು ಈ ವಿಶಾಲವಾದ ಉಪ್ಪು-ಮಿಶ್ರಿತ ನೀರಿನ ಸರೋವರವಾಗಿದೆ. ಇಲ್ಲಿನ ನೀರು ಅನೇಕ ವಿಧದ ಜೀವಿಗಳಿಗೆ ಬದುಕಲು ಸೂಕ್ತವಾಗಿದೆಯಾದ್ದರಿಂದ ಈ ಪ್ರದೇಶ ವಿವಿಧ ಜೀವಿಗಳಿಂದ ಶ್ರೀಮಂತವಾಗಿದೆ. ಆಗ್ನೇಯ ಏಷಿಯಾದ ನದಿ, ಸಮುದ್ರ, ಉಪ್ಪು-ಮಿಶ್ರಿತ ಸರೋವರಗಳಲ್ಲಿ ಮಾತ್ರವೇ ಕಂಡುಬರುವ ಅಳಿವಿನಂಚಿನಲ್ಲಿರುವ ವಿಶಿಷ್ಟವಾದ ಇರವಡ್ಡಿ ಡಾಲ್ಫಿನ್ ಗಳ ಆವಾಸಸ್ಥಾನವಿದು. ಜೊತೆಗೆ ವಿಶೇಷವಾದ ಕೆಂಪು ಏಡಿಗಳ ಆವಾಸಸ್ಥಾನವೂ ಹೌದು. ವಿವಿಧ ಜಾತಿಯ ಮೀನುಗಳು, ಸಿಗಡಿಗಳು ಹೇರಳವಾಗಿವೆಯಾದ್ದರಿಂದ ಇಲ್ಲಿನ ಜನರ ಮುಖ್ಯ ಕಸುಬು ಮೀನುಗಾರಿಕೆ. ಅನೇಕ ವಲಸೆ ಪಕ್ಷಿಗಳಿಗೆ ಇದು ಆಶ್ರಯದಾತ. ನವೆಂಬರ್ ನಿಂದ ಫೆಬ್ರವರಿ ವರೆಗೆ ದೂರದ ಸೈಬೀರಿಯಾವೆ ಮೊದಲಾದ ಪ್ರದೇಶಗಳಿಂದ ಇಲ್ಲಿಗೆ ವಲಸೆ ಹಕ್ಕಿಗಳು ಬಂದು ಗೂಡು ನಿರ್ಮಿಸಿಕೊಂಡು, ಮೊಟ್ಟೆಯಿಟ್ಟು ಮರಿ ಮಾಡಿ, ಅವುಗಳನ್ನು ಕರೆದುಕೊಂಡು ವಾಪಾಸಾಗುತ್ತವೆ.
ಆಗ್ಗಾಗ್ಗೆ ಉಂಟಾಗುವ ಚಂಡಮಾರುತ, ವಿಪರೀತ ಮಳೆ ಇವುಗಳಿಂದಾಗಿ ಸರೋವರದ ಹರವು ಸದಾ ಹೆಚ್ಚುಕಡಿಮೆಯಾಗುತ್ತಿರುತ್ತದೆ. ಹಾಗಾಗಿಯೇ ಇದರ ಆಸುಪಾಸಿನಲ್ಲಿ ವಾಸಿಸುವ ಜನಗಳ ಜನಜೀವನವೂ ಅಸ್ತವ್ಯಸ್ತಗೊಳ್ಳುವುದು ಹೊಸತಲ್ಲ. ಕೆಲವೊಂದು ಪ್ರದೇಶಗಳಂತೂ ನೀರಿನಿಂದ ಆವೃತವಾಗಿ ನಡುಗಡ್ಡೆಗಳಾಗುತ್ತವೆ! ಭುವನೇಶ್ವರದಿಂದ ಕಾರಿನಲ್ಲಿ ಸುಮಾರು ಎರಡೂವರೆ ತಾಸು ಸಮಯ ತೆಗೆದುಕೊಳ್ಳುವ ಪ್ರಯಾಣದಲ್ಲಿ ಕೊನೆಯ ಒಂದು ಗಂಟೆ ನಾವು ಕೆರೆಯ ಜಲಾನಯನ ಪ್ರದೇಶವನ್ನು ನೋಡುತ್ತಲೇ ಸಾಗುತ್ತೇವೆ. ದಾರಿಯಲ್ಲಿ ಪುಟ್ಟಪುಟ್ಟ ಹಳ್ಳಿಗಳಲ್ಲಿ ಸ್ವಲ್ಪ ಎತ್ತರ ಪ್ರದೇಶಗಳಲ್ಲಿ ಸೈಕ್ಲೋನ್ ಪೀಡಿತರಿಗೆ ಗಂಜಿಕೇಂದ್ರಗಳಾಗಿ ಕೆಲಸ ಮಾಡುವ ಎತ್ತರದ ಪಿಲ್ಲರ್ ಗಳ ಮೇಲೆ ನಿರ್ಮಿಸಿರುವ ಮನೆಗಳು ಕಾಣಿಸುತ್ತವೆ. ಇಲ್ಲಿಯ ಜನರು ಎಂತಹ ಅನಿಶ್ಚಿತ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಸಾರುವ ಸಂಕೇತಗಳಂತೆ ಆ ಕಟ್ಟಡಗಳು ತೋರುತ್ತವೆ.
ದೊಡ್ಡ ವಿಸ್ತೀರ್ಣವಿರುವುದರಿಂದ ಮೂರೋ,ನಾಲ್ಕೋ ದಾರಿಗಳಿಂದ ಚಿಲ್ಕಾ ಲೇಕ್ ತಲುಪಬಹುದು. ನಾವು ಆಯ್ದುಕೊಂಡದ್ದು ಸತಪದ ಎಂಬ ಸ್ಥಳವನ್ನು. ಇಲ್ಲಿ ಸರೋವರದಲ್ಲಿ ದೋಣಿಯಾನ ಮಾಡಲು ಅವಕಾಶವಿದೆ. ವಿಶಾಲ ಸರೋವರದಲ್ಲಿ ನಮ್ಮ ಆಯ್ಕೆಗೆ ತಕ್ಕ ಹಾಗೆ 1.30ಯಿಂದ 3 ತಾಸಿನವರೆಗೂ ವಿಹರಿಸಬಹುದು. ಬೋಟ್ ರೈಡ್ ನಲ್ಲಿ ಸಾಗುವಾಗ ಇರವಡ್ಡಿ ಡಾಲ್ಫಿನ್ಗಳನ್ನು ನೋಡಬಹುದು. ಎರಡು ಮೂರರ ಗುಂಪುಗಳಲ್ಲಿ ಚಲಿಸುವ ಅವುಗಳು ಆಗಾಗ್ಗೆ ನೀರಿನ ಮೇಲ್ಮೈಗೆ ಬಂದು ಉಸಿರು ತೆಗೆದುಕೊಂಡು ಸುತ್ತಮುತ್ತಲೂ ಗಮನಿಸಿ ಮತ್ತೆ ಮುಳುಕು ಹಾಕುತ್ತವೆ. ಅದೃಷ್ಟ ಚೆನ್ನಾಗಿದ್ದರೆ ಅವುಗಳು ಮೀನುಗಳನ್ನು ಬೇಟೆಯಾಡುವುದನ್ನು ಕೂಡ ನೋಡಬಹುದಂತೆ.
ಇರವಡ್ಡಿ ಎಂಬುದು ಮ್ಯಾನ್ಮಾರ್ ದೇಶದಲ್ಲಿರುವ ಒಂದು ನದಿಯ ಹೆಸರು. ಆ ನದಿಯ ಮೀನುಗಾರರು ಮೊದಲಬಾರಿಗೆ ಈ ಡಾಲ್ಫಿನ್ ಗಳ ಇರುವಿಕೆಯನ್ನು ಗಮನಕ್ಕೆ ತಂದರು. ಈ ಡಾಲ್ಫಿನ್ ಗಳು ತಮಗೆ ಮೀನು ಹಿಡಿಯಲು ಸಹಾಯ ಮಾಡುತ್ತವೆ ಎಂದು ಅವರು ಸಾರಿದರು. ಅವುಗಳ ವೈಜ್ಞಾನಿಕ ನಾಮಧೇಯ Orcaella brevirostris. ಕಾಂಬೋಡಿಯಾದ ಮೀನುಗಾರರು ಈ ಡಾಲ್ಫಿನ್ ಗಳು ತಮ್ಮ ಪೂರ್ವಜರ ಅವತಾರವೆಂದು ನಂಬುತ್ತಾರಂತೆ. ಆಗ್ನೇಯ ಏಷಿಯಾದ ಅನೇಕ ದೇಶಗಳಲ್ಲಿ ಇವುಗಳನ್ನು ಪಳಗಿಸಿ, “ಡಾಲ್ಫಿನ್ ಶೋ” ನಡೆಸಲಾಗುತ್ತದೆ.
2021 ರಲ್ಲಿ ನಡೆದ ಸರ್ವೆ ಪ್ರಕಾರ ಚಿಲ್ಕಾ ಲೇಕ್ನಲ್ಲಿ, 156 ಡಾಲ್ಫಿನ್ಗಳಿವೆಯಂತೆ. ಮೊದಲಬಾರಿಗೆ ಡಾಲ್ಫಿನ್ಗಳನ್ನು ಅವುಗಳ ಸ್ವಾಭಾವಿಕ ಪರಿಸರದಲ್ಲಿ ನೋಡಿ ನಾನು ರೋಮಾಂಚನಗೊಂಡಿದ್ದೆ. ಹತ್ತಿರದಲ್ಲೇ ವಿಶಾಲವಾದ ಸಮುದ್ರವಿದೆ, ಅಲ್ಲಿ ಇವುಗಳಿಗೆ ಕಾಟ ಕೊಡುವ, ದೋಣಿಗಳಲ್ಲಿ ತುಂಬಿಕೊಂಡು ಬರುವ ಪ್ರವಾಸಿಗರಿಲ್ಲ, ಮೀನಿಗಾಗಿ ಬಲೆ ಹಾಕುವ ಬೆಸ್ತರಿಲ್ಲ. ಆದರೂ ಈ ಡಾಲ್ಫಿನ್ಗಳು ಇಲ್ಲೇಕಿವೆ? ಸಮುದ್ರದಲ್ಲಿ ಇದಕ್ಕೆ ಶಾರ್ಕ್ನಂತಹ ಭಕ್ಷಕಗಳ ಕಾಟ ಹೆಚ್ಚು, ಇಲ್ಲಿ ಆ ತೊಂದರೆಯಿಲ್ಲ. ಜೊತೆಗೆ ನದಿಯ ಜೊತೆಗೆ ಬರುವ ಸಿಹಿನೀರಿನ ಮೀನುಗಳು, ಸಮುದ್ರದ ಉಪ್ಪುನೀರಿನ ಮೀನುಗಳು ಎಲ್ಲವೂ ಇಲ್ಲಿ ಸಿಗುವುದು ಸುಲಭವಾದ್ದರಿಂದ ಆಹಾರದ ಕೊರೆತೆ ಎಂದಿಗೂ ಕಾಡುವುದಿಲ್ಲ. ಮೀನು ಹಿಡಿಯಲೆಂದು ಸರೋವರದ ಮಧ್ಯೆ ಮಧ್ಯೆ ಕಂಬಗಳನ್ನು ಹುಗಿದು ಬಲೆ ಬಿಗಿಯುವ ಮೀನುಗಾರರೊಂದಿಗೆ ಇವು ಸಹಜೀವನ ನಡೆಸುತ್ತವಂತೆ. ಅಂದರೆ ಮೀನುಗಳ ಗುಂಪನ್ನು ಬಲೆಯೆಡೆಗೆ ಅಟ್ಟಿಕೊಂಡು ಬರುತ್ತವಂತೆ, ಅಲ್ಲಿ ಅವುಗಳನ್ನು ಬೇಟೆಯಾಡುವುದು ಸುಲಭ, ಜೊತೆಗೆ ಮೀನುಗಾರರಿಗೂ ಬಲೆಗೆ ಮೀನು ಬೀಳುವ ಸಾಧ್ಯತೆ ಜಾಸ್ತಿ. ಇದರಿಂದ ಮೀನುಗಾರರಿಗೂ ಸಹ ಲಾಭವೇ. ತಾವು ದೋಣಿಯ ಅಂಚನ್ನು ಕುಟ್ಟಿ ಮಾಡುವ ನಿರ್ದಿಷ್ಟ ಶಬ್ದಗಳಿಗೆ ಪ್ರತಿಕ್ರಿಯೆಯಾಗಿ ಮೀನುಗಳನ್ನು ಬಲೆಯೆಡೆ ಅಟ್ಟಿಕೊಂಡು ಬರುತ್ತವೆ, ಹಾಗೂ ಇದಕ್ಕೆ ಕಾಣಿಕೆಯಾಗಿ ಹಿಡಿದ ಮೀನುಗಳಲ್ಲಿ ಕೆಲವನ್ನ ನೀಡುತ್ತೇವೆ ಎನ್ನುತಾರೆ ಕೆಲವು ಮೀನುಗಾರರು.
ಆಗ್ನೇಯಏಷ್ಯಾದ ಅನೇಕ ದೇಶಗಳ ತೀರಪ್ರದೇಶಗಳಲ್ಲಿ ಹಿಂದೊಮ್ಮೆ ಸಾಕಷ್ಟು ಸಂಖ್ಯೆಯಲ್ಲಿದ್ದ ಇವುಗಳು ಬೇಟೆಯಾಡುವಿಕೆ, ಬದಲಾದ ತೀರಪ್ರದೇಶದ ಹವಾಮಾನ, ಅತಿಯಾದ ಪ್ರವಾಸಿಗರ ಕಾಟ, ಶಬ್ದಮಾಲಿನ್ಯ ಮೊದಲಾದ ಅನೇಕ ಕಾರಣಗಳಿಂದಾಗಿ ಅಳಿವಿನಂಚಿಗೆ ಬಂದು ತಲುಪಿವೆ. ಎಚ್ಚೆತ್ತ ಜನರಿಂದಾಗಿ ಈಗ ಇವುಗಳ ರಕ್ಷಣೆಗೆ ಎಲ್ಲ ದೇಶಗಳ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ.
ಸಾಕಷ್ಟು ಬಾರಿ ಡಾಲ್ಫಿನ್ನ ಝಲಕ್ ನೋಡಿದ ಮೇಲೆ ನಮ್ಮ ದೋಣಿ ನಾವಿಕ ಈಗ ಕೆಂಪು ಏಡಿಗಳನ್ನು ತೋರಿಸುತ್ತೇನೆ ಎಂದ. ನಮ್ಮ ನಿರೀಕ್ಷೆ ನೀರಿನ ದಡದ ಮರಳಿನಲ್ಲಿ ಗೂಡುಗಳನ್ನು ಮಾಡಿಕೊಂಡಿರುವ ಏಡಿಗಳನ್ನು ತೋರಿಸಬಹುದು ಅದೃಷ್ಟವಿದ್ದರೆ ಗೂಡಿನಿಂದ ಹೊರಬಂದ ಕೆಲವಾದರೂ ಏಡಿಗಳನ್ನು ನೋಡಬಹುದು ಎಂದಿತ್ತು. ಆದರೆ ಒಂದು ಪುಟ್ಟ ದ್ವೀಪದ ದಡದ ಬಳಿ ದೋಣಿ ನಡೆಸಿದ ನಾವಿಕ ಅಲ್ಲಿ ನಿಲ್ಲಿಸಿ, ಈಗ ಉಬ್ಬರವಿರುವುದರಿಂದ ನಿಮಗೆ ಸ್ವಾಭಾವಿಕವಾಗಿ ಏಡಿ ಮತ್ತು ಅವುಗಳ ಗೂಡು ಕಾಣಿಸುವುದಿಲ್ಲ, ಅವು ಇರುವ ಜಾಗ ನೀರಿನಲ್ಲಿ ಮುಳುಗಿದೆ, ಆದರೆ ನಿಮಗೆ ನಿರಾಶೆಯಾಗಬಾರದೆಂದು ಹಿಡಿದಿಟ್ಟುಕೊಂಡಿರುವ ಏಡಿ ತೋರಿಸುತ್ತೇವೆ ಎಂದು ದಡದಲ್ಲಿದ್ದ ಯಾರನ್ನೋ ಸನ್ನೆ ಮಾಡಿ ಕರೆದ. ಆದ ತನ್ನ ಕೈಯಲ್ಲಿರುವ ಪುಟ್ಟ ಪ್ಲಾಸ್ಟಿಕ್ ಬೋಗುಣಿಯನ್ನು ತೋರಿಸಿದ. ಬೋಗುಣಿಯ ಬಾಯಿಗೆ ಬಲೆಯನ್ನು ಅಳವಡಿಸಲಾಗಿತ್ತು. ಒಳಗೆ ಹತ್ತಾರು ಕೆಂಪು ಏಡಿಗಳು ಮೇಲೆ ಬರಲು ಪ್ರಯತ್ನಿಸುತ್ತಾ ಇದ್ದವು. ನಿರಾಶೆಯಾದರೂ ಇಷ್ಟಾದರೂ ದರ್ಶನಭಾಗ್ಯ ಸಿಕ್ಕಿತಲ್ಲ ಎನ್ನಿಸಿತು.
ಕ್ರಿಸ್ಮಸ್ ದ್ವೀಪದ ಮಳೆಕಾಡುಗಳಲ್ಲಿ ವಾಸಿಸುವ ಕೆಂಪು ಏಡಿಗಳು ಬಹಳ ವಿಶಿಷ್ಟವಾದವು. ಅವುಗಳ ವೈಜ್ಞಾನಿಕ ನಾಮಧೇಯ Gecarcoidea natalis . ಸಂತಾನೋತ್ಪತ್ತಿ ಕಾಲದಲ್ಲಿ ಅವು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಹಿಂದೂಮಹಾಸಾಗರಕ್ಕೆ ವಲಸೆ ಬರುತ್ತವೆ. ಪ್ರತಿವರ್ಷ ನಡೆಯುವ ಈ ವಿದ್ಯಮಾನವನ್ನು ನೋಡಲು ಪರಿಸರಾಸಕ್ತರ ದಂಡೇ ನೆರೆಯುತ್ತದೆ. ಹಿಂದೂ ಮಹಾಸಾಗರದ ದಡದಲ್ಲಿ ಉಬ್ಬರ ಉಂಟಾಗುವ ಸಮಯದಲ್ಲಿ ಒಂದೊಂದು ಏಡಿಯೂ ಮಿಲಿಯನ್ಗಟ್ಟಲೆ ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳು ಉಬ್ಬರದ ನೀರಿನೊಂದಿಗೆ ಸಾಗರ ತಲುಪಿ, ನೀರಿನಲ್ಲಿಯೇ ಒಡೆದು, ಮರಿಯಾಗಿ, ಬೆಳೆದು ಮತ್ತೆ ತಾವೆಂದೂ ನೋಡದ ತಾಯ್ನಾಡು, ಮಳೆಕಾಡಿಗೆ ಮರಳುತ್ತವೆ.
ಆದರೆ ಚಿಲ್ಕಾ ಲೇಕ್ನ ಕೆಂಪು ಏಡಿಗಳ ವೈಜ್ಞಾನಿಕ ನಾಮಧೇಯ Gecarcoidea natalis . ಇಲ್ಲಿನ ದ್ವೀಪದ ತೀರದಲ್ಲಿ ವಾಸಿಸುವ ಇವುಗಳು ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಚಿಲ್ಕಾ ಸರೋರವರವು ಸಮುದ್ರವನ್ನು ಸೇರುವ ಗಡಿಯನ್ನು ತಲುಪುತ್ತವೆಯಂತೆ ಮತ್ತು ಅಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆಯಂತೆ. ಮರಿಗಳು ಸ್ವಲ್ಪ ಕಾಲ ಸಮುದ್ರದಲ್ಲಿ ವಾಸಿಸಿ, ಬೆಳೆಯುತ್ತಿದ್ದಂತೆ ದಡಕ್ಕೆ ವಾಪಾಸಾಗಿ ಮರಳಿನಲ್ಲಿ ವಾಸಿಸುತ್ತವೆಯಂತೆ.
ಏಡಿಯನ್ನು ತೋರಿಸಲು ಬಂದವ ಜೊತೆಗೆ ಒಂದು ಬೋಗುಣಿಯಲ್ಲಿ ಒಂದಿಷ್ಟು ಚಿಪ್ಪನ್ನು ತಂದ. ಇದನ್ನು ತಾನು ಸಮುದ್ರದಿಂದ ತಂದದ್ದೆಂದೂ, ನಮ್ಮ ಕಣ್ಣೆದುರಲ್ಲೇ ಅದರಿಂದ ಮುತ್ತು ತೆಗೆಯುತ್ತೇನೆಂದೂ ಹೇಳಿದ. ನೋಡನೋಡುತ್ತಿದ್ದ ಹಾಗೆ ನಾಲ್ಕಾರು ಚಿಪ್ಪನ್ನು ಸುತ್ತಿಗೆಯಿಂದ ಒಡೆದ, ಒಂದರೊಳಗಿಂದ ಸಾಕಷ್ಟು ದೊಡ್ಡ ಮುತ್ತನ್ನು ತೆಗೆದು ತೋರಿಸಿದ. ನಮ್ಮ ಅದೃಷ್ಟಕ್ಕೆ ಅದು ದೊರಕಿದೆಯೆಂದೂ, ಅದನ್ನು ಕೊಂಡರೆ ಹೇಗೆ ನಮ್ಮ ಭಾಗ್ಯೋದಯವಾಗುತ್ತದೆಯೆಂದೂ ವಿವರಿಸಿದ. ಆದರೆ ಗೂಗಲಮ್ಮ ಮೊದಲೇ ಎಚ್ಚರಿಕೆ ಕೊಟ್ಟಿದ್ದರಿಂದ ತೆಗೆದುಕೊಳ್ಳುವ ಮನಸ್ಸಾಗಲಿಲ್ಲ. ಜೊತೆಗೆ ಆತ ತನ್ನ ಜೇಬಿನಿಂದ ಒಂದಿಷ್ಟು ಅಮೂಲ್ಯ ಹರಳುಗಳನ್ನು ಹೊರತೆಗೆದು ಇವೆಲ್ಲವನ್ನು ಆತ ಇಂದು ರತ್ನಾಕರನಾದ ಸಮುದ್ರದೊಳಗಿನಿಂದ ತೆಗೆದದ್ದೆಂದೂ ಬಣ್ಣಿಸಲು ಪ್ರಾರಂಭಿಸಿದ ಮೇಲೆ ಇದ್ದಬದ್ದ ನಂಬಿಕೆಯೂ ಮಾಯವಾಗಿ ವಾಪಾಸ್ ಹೊರಟೆವು. ಅಂತೂ ಒಂದೂವರೆ ತಾಸಿನ ವಿಹಾರದ ನಂತರ ದಡಕ್ಕೆ ವಾಪಾಸಾದೆವು.
ಪುರಿ ಜಗನ್ನಾಥ ದರ್ಶನ
ಗಂಗರ ಆಳ್ವಿಕೆಯಲ್ಲಿ 12ನೇ ಶತಮಾನದಲ್ಲಿ ನಿರ್ಮಾಣವಾದ ದೇಗುಲ. ಮುಖ್ಯ ದೇಗುಲವು ಸುಮಾರು 214 ಅಡಿ ಎತ್ತರವಿದೆ. ಕಳಿಂಗ ಶೈಲಿಯ ದೇವಸ್ಥಾನ. ವಾರ್ಷಿಕವಾಗಿ ನಡೆಯುವ ಅದ್ಧೂರಿಯಾದ ರಥಯಾತ್ರೆಯ ಕಾರಣದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಹಿಂದೂಗಳ ನಂಬಿಕೆಯಂತೆ “ಚಾರ್ಧಾಮ್”ಯಾತ್ರಾಸ್ಥಳಗಳಲ್ಲಿ ಇದೂ ಒಂದು. ಗರ್ಭಗುಡಿಯಲ್ಲಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾದೇವಿಯರ ಮರದ ಮೂರ್ತಿಗಳಿವೆ. ಹನ್ನೆರಡರಿಂದ ಹದಿನೇಳು ವರ್ಷಗಳಿಗೊಮ್ಮೆ “ನಬಕಳೇಬರ” ಎಂಬ ಆಚರಣೆಯ ಮೂಲಕ ಹೊಸ ಮರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಇಲ್ಲಿ ನಡೆಯುವ ಅನ್ನದಾನವೂ ಸಹ ಪ್ರಸಿದ್ಧವಾಗಿದೆ. ಪ್ರತಿದಿನ ಸಾವಿರಾರು ಜನರಿಗೆ ಅಡುಗೆ ತಾಯಾರಾಗುವ ಬೃಹತ್ತಾದ ಅಡುಗೆಮನೆಯಿದೆ.
214 ಅಡಿ ಎತ್ತರದ ಮುಖ್ಯದೇವಾಲಯದ ಗೋಪುರದ ತುದಿಯಲ್ಲಿ ಸುದರ್ಶನ ಚಕ್ರವಿದೆ. ಅದರೆ ಮೇಲೆ ಭಗವಧ್ವಜವನ್ನು ಹಾರಿಸಲಾಗುತ್ತದೆ. ಪ್ರತಿದಿನ ಸಾಯಂಕಾಲ ಇದನ್ನು ಬದಲಾಯಿಸಿ ಹೊಸ ಧ್ವಜ ಹಾರಿಸಲಾಗುತ್ತದೆ. ಯಾವುದೇ ರೀತಿಯ ಸೇಫ್ಟಿ ಬೆಲ್ಟ್ಗಳಿಲ್ಲದೆ ಪಾಂಡಾಗಳು(ಪೂಜಾರಿಗಳು) ಈ ಗೋಪುರವನ್ನು ಏರುತ್ತಾರೆ. ಇದೊಂದು ನಿಜಕ್ಕೂ ರೋಮಾಂಚಕಾರಿ ಕ್ಷಣ. ಮಳೆಯಿರಲಿ, ಗುಡುಗು ಮಿಂಚುಗಳಿರಲಿ, ಚಂಡಮಾರುತವೇ ಇರಲಿ ಈ ಆಚರಣೆಯನ್ನು ಸಮಯಕ್ಕೆ ಸರಿಯಾಗಿ ನೆರವೇರಿಸಲಾಗುತ್ತದೆ. ಒಮ್ಮೆ ನಿಂತರೆ ದೇವಸ್ಥಾನದಲ್ಲಿ ಹನ್ನೆರಡು ವರ್ಷಗಳ ಕಾಲ ಪೂಜೆ ಮಾಡುವಂತಿಲ್ಲ. ದೇವ ಜಗನ್ನಾಥನೇ ಅವರನ್ನು ಕಾಪಾಡುತ್ತಾನೆ ಎಂಬುದು ನಂಬಿಕೆ.
ಪ್ರತಿವರ್ಷ ಇಲ್ಲಿ ನಡೆಯುವ ರಥಯಾತ್ರೆಯು ಜಗತ್ಪ್ರಸಿದ್ಧವಾದದ್ದು. ಸುಮಾರು ೧೪ ಮೀಟರ್ಗಳಷ್ಟು ಎತ್ತರವಿರುವ ಮರದ ರಥವನ್ನು ಪ್ರತಿವರ್ಷವೂ ಹೊಸದಾಗಿಯೇ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿನ ಕಲಾವಿದರು ರಥವನ್ನು ವಿವಿಧ ರೀತಿಯಲ್ಲಿ ಸಿಂಗರಿಸುತ್ತಾರೆ.
ನಮ್ಮ ಕರ್ನಾಟಕದ ಕೆಲವು ದೇವಾಲಯಗಳಂತೆ ಅಥವಾ ತಿರುಪತಿಯಲ್ಲಿ ಇರುವಂತೆ ಸರಿಯಾದ ಕ್ಯೂ ವ್ಯವಸ್ಥೆ ಇಲ್ಲಿ ಇಲ್ಲದಿರುವುದು ಬಹುದೊಡ್ಡ ಕೊರತೆಯಾಗಿದೆ. ದೇವಸ್ಥಾನದ ದ್ವಾರದವರೆಗೆ ಮಾತ್ರವೆ ಇರುವ ಕ್ಯೂ ಬಾಗಿಲ ಬಳಿ ಬರುತ್ತಿದ್ದಂತೆ ಮಾಯವಾಗಿ ಎಲ್ಲರೂ ಒಟ್ಟಿಗೇ ನುಗ್ಗುತ್ತಾರೆ. ಗಟ್ಟಿಯಿಲ್ಲದಿದ್ದರೆ ಕಾಲ್ತುಳಿತವಾಗುವ ಸಾಧ್ಯತೆಯೆ ಹೆಚ್ಚಿರುತ್ತದೆ. ಇಲ್ಲಿನ ಒಬ್ಬ ಪಾಂಡಾ/ಗೈಡ್ ನಮ್ಮ ಜೊತೆಗೆ ಇದ್ದುದರಿಂದಾಗಿ ನಮಗೆ ಆ ಜನಪ್ರವಾಹದಲ್ಲಿಯೂ ನುಗ್ಗಿ ದೇವರ ದರ್ಶನ ಮಾಡಲು ಸಾಧ್ಯವಾಯಿತು.
ರಾತ್ರಿಯಾಗಿದ್ದರಿಂದ ದೇವಸ್ಥಾನದಲ್ಲಿನ ಶಿಲ್ಪಕಲೆ ಇತ್ಯಾದಿಗಳನ್ನು ಆಸ್ವಾದಿಸಲು ನಮಗೆ ಸಾಧ್ಯವಾಗಲಿಲ್ಲ.
ಪುರಿಯ ಬೀಚ್ ಕೂಡ ಬಹಳಷ್ಟು ಹೆಸರುವಾಸಿಯಾಗಿದ್ದು ಇಲ್ಲಿ ಸಮುದ್ರಸ್ನಾನಕ್ಕೆ ಅನುಕೂಲ ಕಲ್ಪಿಸಲಾಗಿದೆಯಂತೆ, ನಮಗೆ ಸಮಯದ ಅಭಾವದಿಂದಾಗಿ ಅಲ್ಲಿಗೆ ಹೋಗಲಾಗಲಿಲ್ಲ.
ರಾತ್ರಿಯಾಗಿದ್ದರಿಂದ ದೇವಸ್ಥಾನದಲ್ಲಿನ ಶಿಲ್ಪಕಲೆ ಇತ್ಯಾದಿಗಳನ್ನು ಆಸ್ವಾದಿಸಲು ನಮಗೆ ಸಾಧ್ಯವಾಗಲಿಲ್ಲ.
ಪುರಿಯ ಬೀಚ್ ಕೂಡ ಬಹಳಷ್ಟು ಹೆಸರುವಾಸಿಯಾಗಿದ್ದು ಇಲ್ಲಿ ಸಮುದ್ರಸ್ನಾನಕ್ಕೆ ಅನುಕೂಲ ಕಲ್ಪಿಸಲಾಗಿದೆಯಂತೆ, ನಮಗೆ ಸಮಯದ ಅಭಾವದಿಂದಾಗಿ ಅಲ್ಲಿಗೆ ಹೋಗಲಾಗಲಿಲ್ಲ.







No comments:
Post a Comment