4 Jan 2010

ಕೊಡಚಾದ್ರಿ - ಪ್ರಕೃತಿಕಾವ್ಯ

ಕೊಡಚಾದ್ರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಶ್ಚಿಮ ಘಟ್ಟಗಳ ನಡುವೆಯಿದೆ. ನನ್ನವರ ತವರೂರು ನಿಟ್ಟೂರಿಗೆ ಕೇವಲ ೧೫ ಕಿಮಿ ದೂರದಲ್ಲಿದ್ದರೂ ,ಮದುವೆಯಾಗಿ ೧೨ ವರ್ಷಗಳಾದರೂ ಕೊಡಚಾದ್ರಿಗೆ ಚಾರಣ ಮಾಡಬೇಕು ಎಂಬ ಆಸೆ ನೆರವೆರಿರಲಿಲ್ಲ . ಮೊನ್ನೆ ಅಂತೂ ಆ ಅಸೆ ನೆರವೇರಿತು.

ಕೊಡಚಾದ್ರಿಗೆ ಚಾರಣ ಮಾಡಬಯಸುವವರಿಗೆ ಎರಡುs ಮೂರು ದಾರಿಯಿದೆ . ನಾವು ನಾಗೂಡಿ ಗ್ರಾಮದb ಮೂಲಕ ಬೆಟ್ಟದ ಬುಡ ತಲುಪಿ ಅಲ್ಲಿಂದ ಚಾರಣ ಪ್ರಾರಂಭಿಸಿದೆವು. ಅದಲ್ಲದೆ ಜೀಪಿನಲ್ಲಿ ಕೂಡ ಕೊಡಚಾದ್ರಿ ತಲುಪಬಹುದು.

ಚಾರಣದ ಹಾದಿಯಲ್ಲಿ


ಕೆಲವೊಮ್ಮೆ ದಟ್ಟ್ಟ ಕಾಡು , ಕೆಲವೊಮ್ಮೆ ಹುಲ್ಲುಗಾವಲಿನಂತಹ ಬೆಟ್ಟಗಳ ನಡುವೆ ಸಾಗುವ ಕಾಲುದಾರಿಯಲ್ಲಿ ಸಾಗುವಾಗ ಆಗುವ ದಿವ್ಯ ಅನುಭೂತಿಯನ್ನು ಶಬ್ದಗಳಲ್ಲಿ ವಿವರಿಸುವುದು ಕಷ್ಟ . ಆಕಾಶಕ್ಕೆ ಚಾಚಿದಂತೆ ಇರುವ ಮರಗಳು , ಅವುಗಳನ್ನಶ್ರಯಿಸಿ ಬೆಳೆದಿರುವ ಪರಾವಲಂಬಿ ಸಸ್ಯಗಳು , ಸುಂದರ ಕಾಡು ಹೂಗಳು , ಪಕ್ಷಿಗಳ ಇಂಚರ , ಎಲ್ಲದರ ಜೊತೆಗೆ ಎಲ್ಲಾದರೂ ಕಾಡು ಪ್ರಾಣಿಗಳು ಎದುರಾದರೆ ಎಂಬ ಭಯ ......ಒಹ್ ಬಿಡಿ ......ಕುವೆಂಪು , ಕಾರಂತರ ..ಕಾಡಿನ ವರ್ಣನೆಯ ಸಾಕ್ಷಾತ್ಕಾರವಾಯಿತು .

ಪಶ್ಚಿಮ ಘಟ್ಟ ಸಾಲು

ಕೊಡಚಾದ್ರಿ ಸಮುದ್ರ ಮಟ್ಟದಿಂದ ಸುಮಾರು ೧೩೦೦ ಅಡಿಗಳಷ್ಟು ಎತ್ತರದಲ್ಲಿದೆ. ದಾರಿಯಲ್ಲಿ ಸಾಗುವಾಗ ೧೫ - ೨೦ ವರ್ಷಗಳ ಹಿಂದೆ ದಟ್ಟ್ಟ ಕಾಡು , ಪ್ರಾಣಿ ಪಕ್ಷಿಗಳು , ದಾರಿಯಲ್ಲೇ ಎದುರಾಗುತ್ತಿದ್ದ ನೀರಿನ ತೊರೆಗಳು ಈಗಿಲ್ಲವೆಂದು ನನ್ನವರು ಬೇಸರ ಪಟ್ಟುಕೊಂಡರು. ಪ್ರಪಂಚದ ಎಂಟು ಅತಿ ಮುಖ್ಯ ಜೈವಿಕ ಹಾಟ್ ಸ್ಪಾಟ್ ಗಳಲ್ಲಿ ಒಂದಾದ ಈ ಪಶ್ಚಿಮ ಘಟ್ಟಗಳ ಭವಿಷ್ಯ ಹೇಗಿದೆಯೋ?



ಕಾಡುಕೋಣ ಇಲ್ಲಿ ಕುಳಿತಿತ್ತೋ ಏನೋ!!!


ಚಾರಣದ ನಡುವೆ ವಿರಾಮ



ಕಾಡು ಕುಸುಮ



ಬೃಹದಾಕಾರದ ಮರಗಳು

ಸುಮಾರು ಎರಡು ಘಂಟೆಗಳ ಪ್ರಯಾಣದ ನಂತರ ನಾವು ಕೊಡಚಾದ್ರಿಯಾ ದೇವಸ್ಥಾನವನ್ನು ತಲುಪಿದೆವು. ಕೊಲ್ಲೂರು ಮೂಕಾಂಬಿಕೆಯ ಮೂಲ ಇದೆ ಎಂದು ಭಟ್ಟರು ಕೊಲ್ಲೂರಿನಿಂದ ಬಂದ ಭಕ್ತರಿಗೆ ಹೇಳುತ್ತಿದ್ದರು .

ಭಟ್ಟರ ಮನೆಯಲ್ಲಿ ಊಟ ಮುಗಿಸಿ 'ಸರ್ವಜ್ಞ ಪೀಠ' ನೋಡಲು ಹೊರಟೆವು.


ಸರ್ವಜ್ಞ ಪೀಠಕ್ಕೆ ದಾರಿ

ಪಕ್ಕದಲ್ಲಿ ಕಣ್ಣಿಗೆ ಕಾಣದಷ್ಟು ಆಳದ ಪ್ರಪಾತ , ಉರಿವ ಬಿಸಿಲಿನ ಜೊತೆ ಇಕ್ಕಟ್ಟಾದ ದಾರಿಯಲ್ಲಿ ಬೆಟ್ಟವನ್ನು ಏರುವಾಗ ಉಸಿರು ಸಿಕ್ಕಿಹಾಕಿಕೊಂಡ ಅನುಭವ. ಶಂಕರಾಚಾರ್ಯರು ಇಲ್ಲಿ ತಪಸ್ಸು ಮಾಡಿದ್ದರೆಂಬ ಪ್ರತೀತಿಯಿದೆ. ಸಾವಿರಾರು ವರ್ಷಗಳಷ್ಟು ಹಿಂದೆ ಈ ಗೊಂಡಾರಣ್ಯಕ್ಕೆ ಬಂದು ಇಂತಹ ದುರ್ಗಮವಾದ ಪ್ರದೇಶದಲ್ಲಿ ತಪಃ ಗೈದ ಅವರ ಧಿಶಕ್ತಿ ಎಂತದ್ದಿರಬೇಕು?


ಸರ್ವಜ್ಞ ಪೀಠದಿಂದ ಕಾಣುವ ದೃಶ್ಯ

ಇಲ್ಲಿ ಕಲ್ಲಿನ ಒಂದು ಮಂಟಪವಿದೆ. ಸೌತೆಕಾಯಿ, ಮಜ್ಜಿಗೆ , ಬಿಸ್ಕೆಟ್ ಮೊದಲಾದವುಗಳನ್ನು ಮಾರುವ ಅಂಗಡಿಗಳು ನಡುವೆ ಇವೆ. ದಿನಾ ಅವನ್ನೆಲ್ಲ ಹೊತ್ತು ಇಲ್ಲಿಯವರೆಗೆ ತರುವ ಅವರ ಮುಂದೆ ಖಾಲಿ ಕೈಯಲ್ಲಿ ಹತ್ತಿ ಎದುಸಿರುಬಿಡುವ ನಮ್ಮ ಬಗ್ಗೆ ನಾಚಿಕೆಯೆನಿಸಿತು .


ಸರ್ವಜ್ಞ ಪೀಠದ ಇರುವುದು ಈ ಬೆಟ್ಟದಲ್ಲಿ.

ಇಲ್ಲಿಂದ ಸುಮಾರು ಒಂದೂವೆರೆ ಕಿಮಿ ಇಳಿಜಾರಿನಲ್ಲಿ ಇಳಿದರೆ ಚಿತ್ರಮೂಲ. ಇಳಿಯುವಾಗ ನನಗೆ ತುಂಬ ಭಯವಾಯಿತು. ಜಾರಿದರೆ ಎಲುಬು ಪುದಿಯಾಗುವಷ್ಟು ಆಳದ ಪ್ರಪಾತ . ನಾನು ಕಷ್ಟಪಟ್ಟು ಇಳಿಯುತ್ತಿದ್ದರೆ , ಮಗಳು ಇಂಚರ, ಆರು ವರ್ಷದ ಸಿಂಚನ {ಸ್ನೇಹಿತರ ಮಗಳು} ಆರಾಮವಾಗಿ ಇಳಿದು ಹತ್ತಿದ್ದರು.


ಚಿತ್ರಮೂಲದ ದಾರಿಯಲ್ಲಿ

ಚಿತ್ರಮೂಲದ ಕಲ್ಲು ಬಂಡೆಯ ನಡುವೆ ಹನಿಯುವ ಸಿಹಿಯಾದ ನೀರು ಕುಡಿದು ಸುಧಾರಿಸಿಕೊಂಡು ಸರ್ವಜ್ಞ ಪೀಠಕ್ಕೆ ವಾಪಾಸಾಗುವ ವೇಳೆಗೆ ಬಾನಿನಲ್ಲಿ ಸೂರ್ಯಾಸ್ತದ ತಯಾರಿ ನಡೆಯುತ್ತಿತ್ತು.


ಚಿತ್ರಮೂಲ -ಇಲ್ಲಿ ಕುಳಿತು ತಪಸ್ಸು ಮಾಡುವವರಿದ್ದಾರೆ

ಮೋಡ ಮುಸುಕಿದ್ದರೂ ನೆರೆದವರನ್ನು ಪೂರ್ಣ ನಿರಾಸೆಗೊಳಿಸದೆ ಸೂರ್ಯ ಇಣುಕುತ್ತಿದ್ದ. ಯಾವುದೇ ಅವಸರವಿಲ್ಲದೆ ಎಲ್ಲರ ಕ್ಯಾಮರಕ್ಕೆ ಫೋಸ್ ಕೊಡುತ್ತ ಬಣ್ಣ ಬದಲಿಸುತ್ತ ಸೂರ್ಯ ಮುಳುಗುವುದನ್ನು ಕಣ್ತುಂಬಿಕೊಂಡು ವಾಪಾಸ್ ಭಟ್ಟರ ಮನೆಗೆ ಹೊರಟೆವು.


ಸೂರ್ಯಾಸ್ತ ಎಂಬ ನಾಟಕಕ್ಕೆ ಸಿಧ್ಧವಾದ ಬಾನಂಗಳ


ತೂರಿ ಬಾ ..... ಜಾರಿ ಬಾ .....



ಮೋಹಕ ಸೂರ್ಯಾಸ್ತ

ಇಲ್ಲಿಯ ದೇವಸ್ಥಾನದ ಪೂಜೆ ಮಾಡಿಕೊಂಡು ಪ್ರವಾಸಿಗರಿಗೆ ಊಟ ವಸತಿಯ ವ್ಯವಸ್ಥೆ ಮಾಡುವ ಭಟ್ಟರ ಮನೆಯವರದು ನಿಜಕ್ಕೂ ಹೋರಾಟದ ಬದುಕು."ಈಗ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ , ಕೊಲ್ಲೂರು ಜಿಪುಗಳು ನಿರಂತರವಾಗಿ ಓಡಾಡುತ್ತವೆಯಾದರಿಂದ ಮೊದಲಿನ ಕಷ್ಟವಿಲ್ಲ. ಮೊದಲೆಲ್ಲ ತಲೆಹೊರೆಯ ಮೇಲೆ ದಿನಸಿ ಸಾಮಾನುಗಳನ್ನು ಹೊತ್ತು ಬೆಟ್ಟ ಹತ್ತುತ್ತಿದ್ದರು . ಘೋರ ಮಳೆಗಾಲ , ಮರಗಟ್ಟಿಸುವ ಚಳಿಗಾಲ ,ಸದಾ ಕಾಡು ಪ್ರಾಣಿಗಳ ಭಯ , ನೆರೆಹೊರೆ ಯಾರು ಇಲ್ಲದ ಒಂಟಿ ಮನೆ. ಅಬ್ಬ ನೆನೆಸಿಕೊಂಡರೆ ಭಯವಾಗುತ್ತದೆ "
೮೦ ವರ್ಷದ ನಮ್ಮೂರಿನ ರಾಮಜ್ಜ ನೆನಪಿಸಿಕೊಳ್ಳುತ್ತಾರೆ.


ಕಣ್ಣಾಮುಚ್ಚಾಲೆ

ರಾತ್ರಿ ಭಟ್ಟರ ಮನೆಯಲ್ಲಿ ಊಟ ಮಾಡಿ ಮಲಗಿ ಕಣ್ಣು ಮುಚ್ಚಿದರೆ ಪ್ರಪಾತಕ್ಕೆ ಕಾಲಿಟ್ಟಂತೆ ಭಾಸವಾಗಿ ನಿದ್ದೆಯೇ ಬರಲಿಲ್ಲ . ನಡೆದು ಕಾಲುಗಳು ಪದ ಹೇಳಲು ಪ್ರಾರಂಭಿಸಿದ್ದವು. ಅಂತೂ ಹೇಗೋ ರಾತ್ರಿ ಕಳೆದು ಬೆಳಗ್ಗೆ ೪.೩೦ ರ ನಸುಕಿನಲ್ಲಿ ಸೂರ್ಯೋದಯ ನೋಡಲು ಟಾರ್ಚ್ ಹಿಡಿದು ವೆಂಕತರಾಯನ ದುರ್ಗಕ್ಕೆ ಹೊರಟೆವು.(ಯಾರು ಹೇಳಿದ್ದು ಸೂರ್ಯನನ್ನು ನೋಡಲು ದೀಪ ಬೇಕೇ ಎಂದು!!!))




ವೆಂಕತರಾಯನ ದುರ್ಗಕ್ಕೆ ದಾರಿ

ಕತ್ತಲಲ್ಲಿ ಸುಲಭವಾಗಿ ಬೆಟ್ಟ ಹತ್ತಬಹುದಾದ ದಾರಿ ಬಿಟ್ಟು ದುರ್ಗಮವಾದ ದಾರಿಯಲ್ಲಿ ಅಕ್ಷರಶಃ ನಾಲ್ಕು ಕಾಲಿನಲ್ಲಿ ಹತ್ತಿದ ಥ್ರಿಲ್ ಚೆನ್ನಾಗಿತ್ತು. ಆದರೆ ಸೂರ್ಯ ಮುನಿಸಿಕೊಂಡಂತೆ ಮೋಡದ ನಡುವೆ ಮರೆಯಾಗಿದ್ದ. ಬೆಳಕಾಯಿತೆ ವಿನಃ ಸೂರ್ಯೋದಯದ ದೃಶ್ಯಗಳು ಕಾಣಲೇ ಇಲ್ಲ.




ಮುಂಜಾನೆಯ ಮಂಜಿನಲಿ ಪರ್ವತಶ್ರೇಣಿ

ಅಂತೂ ಇನ್ನು ಕಾಯುವುದು ವ್ಯರ್ಥವೆನ್ನಿಸಿದ ಮೇಲೆ ಕೆಳಗಿಳಿದೆವು . ನಡೆಯುವ ಉಮ್ಮೇದಿ ನನಗಂತೂ ಕಡಿಮೆಯಾಗಿತ್ತು. ಎಲ್ಲರೂ ಜೀಪಿನಲ್ಲಿ ಹೊರಟೆವು. ಜೀಪಿನ ಪ್ರಯಾಣ ಮಾಡಿದ ನಂತರ ನಡೆಯುವುದೇ ಹೆಚ್ಚು ಸುಲಭವೆಂದು ಅನಿಸಿತು. ಅಷ್ಟು ಕೆಟ್ಟ ರಸ್ತೆ ಊಹಿಸಿಕೊಳ್ಳುವುದೂ ಕಷ್ಟ



ಪ್ರಕೃತಿಗೆ ಮಾನವನ ಕೊಡುಗೆ - ಪ್ಲಾಸ್ಟಿಕ್ , ಕಸ , ಕೊಳಕು

ನೋವಿನ ಸಂಗತಿಯೆಂದರೆ ಹೆಚ್ಚು ಜನಪ್ರಿಯವಾಗುತ್ತಿರುವ ಈ ಸುಂದರ ಸ್ಥಳ ಮಾನವನಿಂದ ಕಸದ ಕೊಂಪೆಯಾಗುತ್ತಿದೆ. ಎಲ್ಲಿ ನೋಡಿದರೂ ಕುಡಿದು ಬಿಸಾಡಿದ ಬಾಟಲ್ ಗಳು, ಪ್ಲಾಸ್ಟಿಕ್ ಕವರ್ ಗಳು ಕಣ್ಣಿಗೆ ರಾಚುತ್ತವೆ. ನಮ್ಮ ಪರಿಸರದ ರಕ್ಷಣೆ ನಮ್ಮ ಹೊಣೆಯೆಂದು ಮಾನವರಿಗೆ ಅರಿವಾಗುವುದು ಯಾವಾಗಲೋ??
( ಹಾಂ ... ಅಂದ ಹಾಗೆ ಕೊಡಚಾದ್ರಿಯಲ್ಲಿ ನನಗೊಂದು ಸತ್ಯ ಸಕ್ಷಾತ್ಕಾರವಾಯ್ತು ನೋಡಿ . ನಾನು ದಪ್ಪ ಇದ್ದೇನೆ ಅಂತ ತಿಳಿದಿತ್ತು. ಆದರೆ ಎಷ್ಟು ಎನ್ನುವುದರ ಅರಿವು ಅಲ್ಲಾಯ್ತು. ಉತ್ತರ ಕರ್ನಾಟಕದ ಕಡೆಯವನೊಬ್ಬ ತನ್ನ ಹೆಂಡತಿಗೆ ನನ್ನನ್ನು ತೋರಿಸಿ ಹೇಳುತ್ತಿದ್ದ " ಲೇ ನೋಡು ಎಷ್ಟು ಫ್ಯಾಟ್ ಇದ್ದಾರ ಅದರೂ ಹೆಂಗ ನಡಿತಾರ !!! ನೀನೇನು ಹಿಂಗ ಕುಂತಿ ಏಳು ಲಗೂ ನಡೆ ...."
ಚಿತ್ರಮೂಲದಿಂದ ಮೇಲೇರುತ್ತಿದ್ದಾಗ ಸಿರಸಿಯ ಕಡೆಯ ಹುಡುಗರು " ಛೆ !! ಇದಕ್ಕೆ ಎಂತಕ್ಕೆ ಬೇಕಿತ್ತೋ ಮಾರಾಯ!!" ಎಂದು ಸಂತಾಪ ವ್ಯಕ್ತಪಡಿಸುತ್ತಿದ್ದರು.)

























28 comments:

  1. ಸುಮಾ ಮೇಡಂ,

    ಕೊಡಚಾದ್ರಿಯ ಚಾರಣದ ಬಗೆಗಿನ ಲೇಖನ ತುಂಬಾ ಸರಳವಾಗಿ ವಿವರಿಸಿದ್ದೀರಿ. ಡಿಸೆಂಬರ್‍ನಲ್ಲಿ ನಾವೂ ಸಹ ಅಲ್ಲಿಗೆ ಹೋಗಿದ್ದೆವು. ನನ್ನ ಬ್ಲಾಗಿನಲ್ಲಿ ಇದರ ಬಗ್ಗೆ ಬರೆದಿದ್ದೇನೆ. ಫೋಟೋಗಳೂ ಸಹ ಸುಂದರವಾಗಿವೆ. ಕೆಲವ್‌ಒಂದು ಸ್ಥಳಗಳನ್ನು ನಾವು ನೋಡಲಾಗಲಿಲ್ಲ.

    ಸುಂದರ ಫೋಟೋ-ಬರಹಕ್ಕೆ ಧನ್ಯವಾದಗಳು.

    ಸ್ನೇಹದಿಂದ,

    ReplyDelete
  2. ಕೊಡಚಾದ್ರಿಯ ಚಾರಣದ ವಿವರಣೆ ಕಣ್ಣಿಗೆ ಕಟ್ಟುವ೦ತಿದ್ದು, ಮು೦ದೆ ಅಲ್ಲಿಗೆ ಹೋಗುವವರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಿದೆ.
    ಛಾಯಾಚಿತ್ರಗಳು ಸೊಗಸಾಗಿವೆ. ತಾವೇ ದಾರಿ ತೋರಿಸುತ್ತಾ ಹೊರಟ ಹಾಗಿದೆ...?(ಮು೦ಚೂಣಿಯಲ್ಲಿದ್ದಿರಾ!)
    ಪ್ರಾಣಿಗಳ ಬಗ್ಗೆ ಏನೂ ಇಲ್ಲ ಪ್ರಾಣಿಪ್ರಿಯರಿ೦ದ!!!! ಬಹುಶಃ ಮು೦ದಿನ ಸ೦ಚಿಕೆಯಲ್ಲಿ ಬರಬಹುದಾ..
    ಅ೦ದ ಹಾಗೇ ಛಾರಣಕ್ಕೆ ಬೇಕಾಗುವ ದಿನಗಳೆಷ್ಟು ೧ ಅಥವಾ ೨?

    ReplyDelete
  3. ನೈಸು. :-)

    ನಾನು ಹೈಸ್ಕೂಲಲ್ ಇರ್ತಾ ಹೋಗಿದ್ದು ಅಷ್ಟೇ. ನನ್ ಅತ್ತೆ ಮನೆ ಅಲ್ಲೇ ಇರೋದು, ಆದ್ರೂ ಮತ್ತೊಂದ್ ಸಲ ಹೋಗ್ಲಿಕ್ ಆಗಿಲ್ಲ ಇನ್ನೂ.. :(

    ReplyDelete
  4. ಸುಮಾ ಮೇಡಂ,
    ಮನುಷ್ಯನ ಸ್ವಭಾವ ದಿನ ಗಳೆದಂತೆ ಮೃಗ ವಾಗುತ್ತಿದೆಯೇ?
    ಎಷ್ಟೊಂದು ಸುಂದರ ಜಗಹಗಳನ್ನು ಹೊಲಸು ಮಾಡುತ್ತಿದ್ದಾನೆ
    ಒಳ್ಳೆಯ ಲೇಖನ, ಒಳ್ಳೆಯ ಫೋಟೋಗಳು ಕೂಡ

    ReplyDelete
  5. ಸುಮಾ,
    ವಿವರವಾದ ವರ್ಣನೆ ಹಾಗು ಕೆಲವು ಅತ್ಯುತ್ತಮ ಫೋಟೋಗಳನ್ನು ಕೊಟ್ಟಿದ್ದೀರಿ.
    ಕೊಡಚಾದ್ರಿಯನ್ನು ಚಿತ್ರದಲ್ಲಾದರೂ ನೋಡಿದೆನಲ್ಲ ಎನ್ನುವ ಖುಶಿ ನನಗಿದೆ.

    ReplyDelete
  6. ಸುಮಾ ಮೇಡಂ,
    ಅಲ್ಲೆಲ್ಲಾ ಇವತ್ತಿಗೂ ಕಾಡು ಪ್ರಾಣಿಗಳು ಇರಬೇಕಿತ್ತು ಯಾಕಂದ್ರೆ ಇದ್ದಿದ್ರೆ ಮನುಷ್ಯ ಹೋಗಿ ಹೊಲಸು ಮಾಡ್ತಾ ಇರ್ಲಿಲ್ಲ ಆಲ್ವಾ...... ನಿಮ್ಮ ಚಿತ್ರ ಲೇಖನ ತುಂಬಾ ಚೆನ್ನಾಗಿದೆ, ನಾವೂ ನಿಮ್ಮ ಜೊತೆ ಪ್ರಯಾಣಿಸಿದ ಹಾಗಿತ್ತು...... ನಾಲ್ಕು ಕಾಲಲ್ಲಿ ನಡೆಯೋದರ ಮಜಾ ಚನ್ನಾಗಿರತ್ತೆ ಆಲ್ವಾ ಮೇಡಂ......

    ReplyDelete
  7. ಹೋದ ತಿಂಗಳಲ್ಲಿ ಕೊಡಚಾದ್ರಿಗೆ ಹೋಗಿ ಬಂದಿದ್ದೆ. ಅದೆಲ್ಲಾ ಮತ್ತೆ ನೆನಪಾಯ್ತು. ನಾವು ಚಾರಣ ಮಾಡಿದ ದಾರಿ ಮಧ್ಯದಲ್ಲೊಂದು ಸಣ್ಣ ಜಲಪಾತ(!) ಸಿಕ್ಕಿತ್ತು. ಅಲ್ಲಿ ಸ್ವಲ್ಪ ಹೊತ್ತು ಆಡಿ ಮುಂದೆ ಹೋಗಿದ್ದೆವು. ಫೋಟೋಗಳು ಚೆನ್ನಾಗಿವೆ. ಆದರೆ ಅಲ್ಲಿ ಕಾಣುವ ದೃಶ್ಯವನ್ನು, ಮೂಡುವ ಭಾವವನ್ನು ಯಾವ ಕ್ಯಾಮೆರಾದಲ್ಲೂ ಸೆರೆ ಹಿಡಿಯಲಾಗುವುದಿಲ್ಲ. ಅಲ್ಲಿಗೆ ಹೋಗಿಯೇ ಅನುಭವಿಸಬೇಕು, ಅದು ಮಜಾ. :)

    ReplyDelete
  8. ಭೂರಮೆಯ ಚಿತ್ರ ಕೂಡ ಬದಲಾದಂತಿದೆ. ಚೆನ್ನಾಗಿದೆ, ಎಲ್ಲಿಯದು?

    ReplyDelete
  9. ನಮ್ಮ ಜನಕ್ಕೆ self discipline ಇಲ್ಲ. ಇದು ತುಂಬಾ ನೋವಿನ ಸಂಗತಿ. ನಾವು ಚಾರಣಕ್ಕೆ ಹೋದರೆ ಕಸ ಹರಡದೆ collect ಮಾಡಿಕೊಂಡು ಬಂದು ಪೇಟೆಯ ಕಸದ ತೊಟ್ಟಿಗೆ ಹಾಕ್ತಿದ್ವಿ.

    ReplyDelete
  10. ನಾನು ಕ್ಯಾಮೆರಾ ತಗೊಂಡ ಮೇಲೆ ಮೊದಲ ಚಾರಣ ಕೊಡಚಾದ್ರಿಗೆ ಹೋಗಿದ್ದೆ. ಆ ಅನುಭವ, ಸಂಭ್ರಮ ಇನ್ನು ನೆನಪಿದೆ!

    ReplyDelete
  11. ಕ್ಷಣಚಿಂತನೆಯಲ್ಲಿ ಇತ್ತೀಚೆಗಷ್ಟೇ ಕೊಡಚಾದ್ರಿ ಚಾರಣ ಮಾಡಿದ್ದ ನನಗೆ ನಿಮ್ಮಿಂದ ಬೋನಸ್ ಸಿಕ್ಕಿತು. ಸೂಪರ್ ಚಿತ್ರಗಳು ಹಾಗೂ ಉತ್ತಮ ವಿವರೆಣೆ. ಧನ್ಯವಾದಗಳು.

    ReplyDelete
  12. --ಕ್ಷಣಚಿಂತನೆ ಚಂದ್ರು ಅವರೆ ನಿಮ್ಮ ಬ್ಲಾಗನಲ್ಲಿ ಕೊಡಚದ್ರಿಯ ಬಗ್ಗೆ ಲೇಖನ ಓದಿದೆ ತುಂಬಾ ವಿವರವಾಗಿ ಬರೆದಿದ್ದೀರಿ. ದನ್ಯವಾದಗಳು.

    ---ಸೀತರಾಂ ಸರ್ ಕೊಡಚದ್ರಿಯ ಚಾರಣಕ್ಕೆ ಅರ್ಧ ದಿನ ಸಾಕು. ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಹಾಂ ... ಅಂದಹಾಗೆ ಪ್ರಾಣಿಗಳಾ ಬಗ್ಗೆ ಏನೂ ಬರೆದಿಲ್ಲವೆಂದಿರಿ , ಪರಿಸ್ಥಿತಿ ಹಾಗಿತ್ತು. "ನನ್ನನ್ನು ಬಿಟ್ಟೂ ಬೇರಾವುದೇ ಪ್ರಾಣಿಯ ಹಿಂದೆ ನೀನು ಹೋಗುವಂತಿಲ್ಲ" ಎಂದು ನನ್ನೆಜಮಾನರು ಅಪ್ಪಣೆ ಕೊಟ್ಟಿದ್ದರು. ಆದ್ದರಿಂದ ಯಾವ ಪ್ರಾಣಿಯನ್ನೂ ಗಮನಿಸಲಾಗಲಿಲ್ಲ.

    ---ಸುಶ್ರುತ ನಿಮ್ಮ ಅತ್ತೆಯ ಮನೆಗೆ ಹೋಗಲು (ಆ ನೆಪದಲ್ಲಿ ಕೊಡಚಾದ್ರಿಗೆ ಹೋಗಲು) ನಿಮಗೆ ಮುಹೂರ್ತ ಕೂಡಿಬರಲೆಂದು ಹಾರೈಸುತ್ತೇನೆ.

    ReplyDelete
  13. ---ಗುರುಮೂರ್ತಿಯವರೆ ನಿಜಕ್ಕೂ ಅಲ್ಲಿನ ಕಸ ಪ್ಲಾಸ್ಟಿಕ್ ನೋಡಿದರೆ ಬೇಸರವಾಗುತ್ತದೆ. ಬೆಳಗ್ಗೆ ದೇವಸ್ಥಾನದ ಭಟ್ಟರು ಅಲ್ಲಿಯ ಸುತ್ತಮುತ್ತಲಿನ ಕಸ ನೀರಿನ ಬಾಟಲ್ ಮೊದಲಾದವುಗಳಾನ್ನು ಆರಿಸಿ ಸುಡುತ್ತಿದ್ದರು. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
    ---ಸುನಾಥ ಸರ್ ಕೊಡಚಾದ್ರಿಯ ಚೆಲುವನ್ನು ಕ್ಯಾಮರಾದಲ್ಲಿ ಹಿಡಿಯುವುದು ಅಸಾಧ್ಯ. ಸಾಧ್ಯವಾದರೆ ಒಮ್ಮೆ ಭೇಟಿ ಕೊಡಿ.
    ---ದಿನಕರ್ ಅವರೆ ನಾಲ್ಕು ಕಾಲಿನಲ್ಲಿ ನಡೆಯುವಾಗ ನನಗೆ ನಮ್ಮ ಪೂರ್ವಜರ(ಮಂಗಗಳು) ನೆನಪಾಯಿತು!! ಆ ಥ್ರಿಲ್ ತುಂಬಾ ಚೆನ್ನ್ನಾಗಿತ್ತು. ಧನ್ಯವಾದಗಳು.

    ReplyDelete
  14. ---ಆನಂದ್ ಅವರೆ ನೀವು ನೋಡಿದ ಫಾಲ್ಸ್ ಬಹುಶಃ ’ಹಿಡ್ಲುಮನೆ ಫಾಲ್ಸ್ ’ ಇರಬೇಕು. ಭೂರಮೆಯ ಚಿತ್ರ "ಹಸಿರುಮಕ್ಕಿ" ಎಂಬಲ್ಲಿ ತೆಗೆದದ್ದು. ಅದು ಶರಾವತಿ ಹಿನ್ನೀರಿನ ಪ್ರದೇಶ. ನನ್ನ ತವರೂರಿನಿಂದ ಗಂಡನ ತವರೂರಿಗೆ ಹೋಗುವಾಗ ಈ ಹಿನ್ನೀರಿನಲ್ಲಿ ಲಾಂಚ್ ಮೂಲಕ ಹೋಗಬೇಕು.

    ReplyDelete
  15. ಇಲ್ಲೇ ಕೊಡಚಾದ್ರಿ ದರ್ಶನ ಮಾಡಿಸಿದ್ರಿ ಧನ್ಯವಾದಗಳು...

    ReplyDelete
  16. ---ಸುಧೀ ನಾವೂ ಕೂಡ ಕಸವನ್ನು ಹೊರಗೆಲ್ಲೂ ಬಿಸಾಡದೆ ಬ್ಯಾಗ್ ನಲ್ಲಿ ಸಂಗ್ರಹಿಸಿ ವಾಪಾಸ್ ತಂದೆವು. ನನ್ನ ಮಗಳು ಇಂಚರ ಮತ್ತು ಭಾವನವರ ಮಗಳು ಐಶ್ವರ್ಯ ಇಬ್ಬರೂ ಸೇರಿ ಸರ್ವಜ್ಞಪೀಠದಲ್ಲಿ ನೆರದ ಜನರಿಗೆ ಕಸ ಬಿಸಾಡದಂತೆ ಮನವಿ ಮಾಡಿದರು. ಮಕ್ಕಳನ್ನು ಇಂತಹ ವಿಚಾರದಲ್ಲಿ ತಿದ್ದಿದರೆ ಅವರು ದೊಡ್ಡವರನ್ನೂ ಪರಿವರ್ತಿಸುತ್ತಾರೆ.

    ---ಸುಭ್ರಮಣ್ಯ ಭಟ್ ಅವರೆ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ReplyDelete
  17. ಸುಮಾ ಮೇಡಂ
    ನಮಸ್ತೆ. ಪ್ರವಾಸದ ಲೇಖನ ಚೆನ್ನಾಗಿ ಬರೆದಿದ್ದೀರಿ. ಇಂಥ ಲೇಖನಗಳನ್ನು ಬ್ಲಾಗಿಗೆ ಹಾಕುವಾಗ ಪತ್ರಿಕೆಗೂ ಕಳಿಸಬಹುದಲ್ಲವೇ? ನಮ್ಮ ಪತ್ರಿಕೆಯಲ್ಲಿಯೂ ಪ್ರವಾಸ ಅಂಕಣ ಬರುತ್ತಿದೆ. ಕೊಡಚಾದ್ರಿ ಈಗಾಗಲೇ ಪ್ರಕಟವಾಗಿದೆ. ನಿಮ್ಮ ಬುತ್ತಿಯಲ್ಲಿ ನೀವು ನೋಡಿದ ಪ್ರವಾಸಿ ಸ್ಥಳಗಳಿದ್ದರೆ ನಮ್ಮ ಪತ್ರಿಕೆಗೆ ಕಳಿಸಬಹುದು.
    ಈ&ಮೇಲ್:
    supplement@digantha.com

    ಇಂತೀ, ಪ್ರೀತಿಯಿಂದ
    ಚಿತ್ರಾಕರ್ಕೇರಾ
    ಹೊಸದಿಗಂತ ದಿನಪತ್ರಿಕೆ

    ReplyDelete
  18. ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು ಚಿತ್ರ. ನನ್ನ ಬುತ್ತಿಯಲ್ಲಿರುವ ಪ್ರವಾಸ ಲೇಖನಗಳನ್ನು ಕಳಿಸುತ್ತೇನೆ.

    ReplyDelete
  19. ಸುಮಾ, ಕೊಡಚಾದ್ರಿಗೆ ಹೋಗಬೇಕೆನ್ನುವ ನನ್ನ ಕನಸು ಇನ್ನೂ ನನಸಾಗಿಲ್ಲ.. ನಿನ್ನ ಚಿತ್ರ ಲೇಖನ ನೋಡಿದ ಮೇಲೆ ಇನ್ನೂ ಪ್ರೇರಣೆ ಬರ್ತಾ ಇದೆ! ಮನ ಮುಟ್ಟುವ ವಿವರಣೆ! keep it up!!

    ಹೇಳೋಕ್ಕೆ ಮರೆತಿದ್ದೆ ನೋಡು. ಮೊನ್ನೆ ನಾನು ನಿಮ್ಮ 'ಹಿನ್ನೀರಿನ ಲಾಂಚು' ಹತ್ತಿ ಬಂದೆ!!! ಸಿಕ್ಕಾಪಟ್ಟೆ ಜನ ಪ್ರವಾಹದ ಮಧ್ಯೆ! ನಿನ್ನ ನೆನಪಾಯಿತು :)

    ReplyDelete
  20. ಸುಮತ್ತೆ.."ಕೊಡಚಾದ್ರಿ - ಪ್ರಕೃತಿಕಾವ್ಯ" ಲೇಖನ ಚೆನ್ನಾಗಿದ್ದು..ಬೇಜಾರಿನ ವಿಷಯ ಅಂದ್ರೆ ಅಲ್ಲಿನ ಪ್ರಕೃತಿ ಸೌಂದರ್ಯನ ಮನುಷ್ಯ ಹಾಳು ಮಾಡ್ತಿರದು..Atleast ಇನ್ಮುಂದೆ ಆದ್ರು ಮನುಷ್ಯ ಇದ್ನ ಅರ್ಥ ಮಾಡ್ಕೊಂಡ್ರೆ ಮುಂದಿನ generation ಗೆ ಕೊಡಚಾದ್ರಿಯ ವೈಭವ ಬರಿ ಪುಸ್ತಕದ ವೈಭವ ಆಗೋದನ್ನ ತಪ್ಪುಸ್ಲಕ್ಕು...

    ReplyDelete
  21. ಸುಮಾ ಮೇಡಮ್,

    ನಿಮ್ಮ ಕೊಡಚಾದ್ರಿ ಚಿತ್ರಸಹಿತ ಲೇಖನವನ್ನು ಓದಿದ ಮೇಲೆ ನನಗಂತೂ ಹೋಗಲೇಬೇಕೆಂಬ ಆಸೆಯಾಗಿಬಿಟ್ಟಿದೆ. ಚಂದ್ರುಸರ್, ಇನ್ನಿತರರು ಹೋಗಿಬಂದ ಲೇಖನವನ್ನು ಹಾಕಿದಾಗ ನನಗೂ ಆಸೆಯಾಗಿತ್ತು. ನಾನು ಸುಮಾರು ವರ್ಷಗಳ ಹಿಂದೆ ಚಾರಣಹೋಗಿದ್ದು ಎಲ್ಲಾ ನೆನಪಾಯಿತು. ಸಾಧ್ಯವಾದರೆ ನನ್ನ ಗೆಳೆಯರ ಜೊತೆ ಮಾತಾಡಬೇಕು.

    ಸೊಗಸಾದ ಲೇಖನ.

    ReplyDelete
  22. ಅತ್ಯುತ್ತಮ ಚಿತ್ರಗಳು ಹಾಗೂ ಉತ್ತಮ ವಿವರೆಣೆ. Need to go there.

    ReplyDelete
  23. ಒಳ್ಳೆಯ ಅನುಭವಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.. ನಿಜವಾಗಿಯೂ ಕೊಡಚಾದ್ರಿ ಉತ್ತಮ ತಾಣ. ಆದರೆ ಕೆಲ ಮಂದಿ ಅದನ್ನು ಹಾಳುಗೆಡವುತ್ತಿರುವುದು ವಿಷಾದನೀಯ. ಗಣಿ ಧಣಿಗಳ ಕಣ್ಣು ಇದರ ಮೇಲೆಯೂ ಬಿದ್ದು ಸಂಪೆಕಟ್ಟೆಯಿಂದ ಕೊಡಚಾದ್ರಿಯಬುಡದವರೆಗೆ ಉತ್ತಮ ರಸ್ತೆಯಾಗಿರುವುದು ಭಯ ಹುಟ್ಟಿಸುತ್ತದೆ. ಹಾಗಾಗದಿದ್ದರೆ ಕ್ಷೇಮ.

    ReplyDelete
  24. ನಾನು ಹೋಗಿ ಬಂದು ಸರಿಯಾಗಿ ಒಂದು ವರ್ಷ ಆತು... ಸವಿನೆನಪು..

    ReplyDelete
  25. ಸುಮಾ ಮೇಡಮ್,

    ನಿಮ್ಮ ಕೊಡಚಾದ್ರಿಯ ಚಾರಣ ಕಥನ ಚೆನ್ನಾಗಿದೆ.. ಕೊಡಚಾದ್ರಿಯ ನಿಸರ್ಗ ಸೊಬಗು ವರ್ಣಿಸಲಸದಳ.. ನನ್ನ ಬ್ಲಾಗಿನಲ್ಲೂ ಕೊಡಚಾದ್ರಿಯ ಕೆಲವು ಚಿತ್ರಗಳಿವೆ ನೋಡಿ..

    http://umeshbalikai.blogspot.com/2009/02/blog-post_03.html

    ಅಭಿನಂದನೆಗಳು,
    - ಉಮೇಶ್

    ReplyDelete
  26. ಕೊಡಚಾದ್ರಿಯ ಅನುಭವವನ್ನು ಮರೆಯಲಾಗದು. ಚಳಿಗಾಲದ ಒಂದು ರಾತ್ರಿಯನ್ನು ಅಲ್ಲಿ ಕಳೆದಿದ್ದೇನೆ. ಒದೊಂದು ವಿಶೇಷ ಹುಣ್ಣಿಮೆಯ ದಿನವಾಗಿತ್ತು. ಬಹಳ ಜನರಿದ್ದರು, ಜೊತೆಗೆ ಭಜನೆಯೂ ಕೂಡ. ಇಬ್ಬರು ಗುರುಗಳು ಬಹಳ ಕಾಲ ಧ್ಯಾನಮಗ್ನರಾಗಿದ್ದರು. ಅವರಲ್ಲಿ ಒಬ್ಬರು ಸರ್ವಜ್ಞ ಮಂಟಪದ ಒಳಗೆ, ಇನ್ನೊಬ್ಬರಂತೂ ಹೊರಗೆ ಆ ಚಳಿಯಲ್ಲಿ, ಬರೇ ಕಾಷಾಯ ವಸ್ತ್ರ ತೊಟ್ಟು ಪದ್ಮಾಸನದಲ್ಲಿ ಬಹಳ ಕಾಲ ಮಿಸುಕಾಡದೆ ಧ್ಯಾನಮಗ್ನರಾಗಿದ್ದರು. ಫೋಟೋಗಳು ಚೆನ್ನಾಗಿವೆ, ಆದರೆ ಸ್ವಲ್ಪ ದೊಡ್ಡದಾಗಿ ಹಾಕಬಹುದಿತ್ತೇನೋ?
    ಒಂದಂತೂ ನಿಜ. ನಮ್ಮ ಜನ ಹೊರಡುವ ಮೊದಲೇ ಪರಿಸರ ಹಾಳುಗೆಡಹುವ ಪಣ ತೊಡುತ್ತಾರೆ.

    ReplyDelete
  27. ಗಭೀರ, ಹಾಸ್ಯದೊಂದಿಗೆ ಸುಂದರವಾಗಿ ನಿರೂಪಿಸಿದ್ದೀರಿ. ನಾವೂ ಹೋಗಿದ್ದೆವು. ಚಿತ್ರಮೂಲಕ್ಕೆ ಹೋಗಿ ಆ ಬಂಡೆಯನ್ನು ಮುರುಕು ಏಣಿಯಲ್ಲಿ ಏರಿದ್ದೆವು.

    ReplyDelete
  28. ಮೇಡಮ್ ನಿಮ್ಮ ಲೇಖನ ಚೆನ್ನಾಗಿದೆ ಚಿತ್ರಗಳು ಸೊಗಸಾಗಿವೆ.

    ReplyDelete