27 Jan 2010

ಸುಧಾರಿಸಬೇಕಾಗಿರುವ ದೂರ-ಶಿಕ್ಷಣ ವ್ಯವಸ್ಥೆ

ಆಮೀರ್ ಖಾನ್ ಸಿನೆಮಾ "ತ್ರೀ ಈಡಿಯಟ್ಸ್"....ಗಂಭೀರವಾದ ವಿಷಯವೊಂದನ್ನು ತಿಳಿಹಾಸ್ಯದೊಂದಿಗೆ ನಿರೂಪಿಸಿದೆ . ನಮ್ಮ ಶಿಕ್ಷಣವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಎತ್ತಿತೋರಿಸಿದೆ. ಇತ್ತೀಚೆಗೆ ಈ ಸಿನೆಮಾ ನೋಡುತ್ತಿದ್ದಾಗ , ನಾನು ದೂರಶಿಕ್ಷಣ(corespondence)ದಲ್ಲಿ ಎಮ್ ಎಸ್ಸಿ ಮಾಡುವಾಗ ಕಾಡಿದ ಕೆಲ ವಿಚಾರಗಳು ಪುನಃ ನೆನಪಾಯಿತು.
ಈಗ ಎಲ್ಲಾ ವಿಶ್ವವಿದ್ಯಾಲಯಗಳೂ ದೂರ-ಶಿಕ್ಷಣದ ಮುಖಾಂತರ ಅನೇಕ ವಿಧದ ಡಿಗ್ರಿ , ಡಿಪ್ಲೊಮಾ ಕೋರ್ಸ್ ನಡೆಸುತ್ತಿವೆ.
ಇದು ಅನೇಕರಿಗೆ ವರದಾನವಾಗಿದೆ. ಕೆಲಸ ಮಾಡುತ್ತಲೇ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಗಳಿಸಬಹುದು . ಕಾರಣಾಂತರಗಳಿಂದ ಮಧ್ಯದಲ್ಲೇ ಓದು ಬಿಟ್ಟವರು ಮುಂದುವರೆಸಿ , ಆತ್ಮವಿಶ್ವಾಸ ಉದ್ಯೋಗ ಗಳಿಸಿಕೊಳ್ಳಬಹುದು.
ಇವೆಲ್ಲ ದೂರ-ಶಿಕ್ಷಣದ ಒಂದು ಮುಖ . ಇನ್ನೊಂದು ಮುಖ ಆತಂಕ ಹುಟ್ಟಿಸುವಂತಿದೆ.
ಆರ್ಟ್ಸ್ , ಕಾಮರ್ಸ್ ನಂತಹ ವಿಷಯಗಳಾದರೆ ಪರವಾಗಿಲ್ಲ . ಆದರೆ ವಿಜ್ಞಾನದ ವಿಷಯಗಳಾದ ಭೌತಶಾಸ್ತ್ರ , ರಸಾಯನಶಾಸ್ತ್ರ , ಜೀವಶಾಸ್ತ್ರ, ಬಯೋಟೆಕ್ನಾಲಜಿ , ಮೊದಲಾದವುಗಳನ್ನು ದೂರಶಿಕ್ಷಣದ ಮುಖಾಂತರ ಕಲಿಯುವುದು , ಕಲಿಸುವುದು ಕಷ್ಟ. ಈ ವಿಷಯಗಳಿಗೆ ಥಿಯರಿಯಷ್ಟೇ ಅಲ್ಲ , ಪ್ರಾಕ್ಟಿಕಲ್ ಜ್ಞಾನವೂ ತುಂಬ ಮುಖ್ಯವಾದುದು. ವಿದ್ಯಾರ್ಥಿಗಳು ಪ್ರಯೋಗ ಮಾಡಿ ನೋಡಿಯೆ ಎಷ್ಟೋ ಥಿಯರಿಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಈ ದೂರ -ಶಿಕ್ಷಣ ಪದ್ದತಿಯಲ್ಲಿ ವಿಶ್ವವಿದ್ಯಾಲಯಕ್ಕೆ ನೇರವಾಗಿ ಅಥವಾ ಆಯಾ ಊರುಗಳಲ್ಲಿರುವ ಸ್ಟಡಿ ಸೆಂಟರ್ ಗಳ ಮೂಲಕ ಫೀಸ್ ಕಟ್ಟಿ , ಅವರು ಕಳಿಸುವ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯಬೇಕು. ಸ್ಟಡಿ ಸೆಂಟರ್ ನವರು ವರ್ಷದ ಕೊನೆಯಲ್ಲಿ ನಡೆಸುವ ಕೆಲವೇ ಘಂಟೆಗಳ ಥಿಯರಿ ತರಗತಿಗಳಿಗೆ ಹಾಜರಾಗದಿದ್ದರೂ ನಡೆಯುತ್ತದೆ. ಪ್ರಾಕ್ಟಿಕಲ್ಸ್ ನಲ್ಲಿ ಸುಲಭಸಾಧ್ಯವಾದ ಕೆಲ ಪ್ರಯೋಗಗಳನ್ನಷ್ಟೇ ಮಾಡಿಸಿ , ನಂತರ ಅದನ್ನೇ ಪರೀಕ್ಷೆಗೂ ಕೊಟ್ಟು ಮುಗಿಸುತ್ತಾರೆ.

ಅನೇಕ ಶಿಕ್ಷಕರು ಪ್ರಮೋಶನ್ ಗಾಗಿ ಇಂತಹ ಪದವಿ ಪಡೆಯುತ್ತಾರೆ. ಹೆಚ್ಚಿನವರಿಗೆ ಪದವಿಪತ್ರ ಪಡೆಯುವುದಷ್ಟೇ ಗುರಿ . ಹೇಗೋ ೫೨% ನಷ್ಟು ಅಂಕ ಗಳಿಸಿದರೆ ಭಡ್ತಿ ಸಲೀಸು.
ಪರೀಕ್ಷೆಗಳು ನಡೆಯುವ ಚೆಂದ ನೋಡಬೇಕು . ಚೀಟಿಗಳು ಹರಿದಾಡುವುದು , ಉತ್ತರಪತ್ರಿಕೆಯೇ ಹರಿದಾಡುವುದು ಮಾಮೂಲು . ಕಷ್ಟಪಟ್ಟು ಓದಿ ಬರೆಯುವವರೇ ನಾಚಬೇಕು . ಅನೇಕ ಕೇಂದ್ರಗಳಲ್ಲಿ ಸ್ಟಡಿ ಸೆಂಟರ್ ನವರೆ ಸಾಮೂಹಿಕವಾಗಿ ನಕಲು ಮಾಡಿಸುತ್ತಾರಂತೆ. ನಾನು ಓದಿದ ಸೆಂಟರ್ ಹೀಗೆ ಮಾಡಿಸಲಿಲ್ಲವೆಂದು ಬೇಸರ ಪಟ್ಟುಕೊಂಡ ಶಿಕ್ಷಕರೊಬ್ಬರು ಮರುವರ್ಷ ಗುಲ್ಬರ್ಗದ ಯಾವುದೋ ಸೆಂಟರ್ ನಿಂದ ಎಮ್ ಎಸ್ಸಿಯ ಎರಡೂ ವರ್ಷದ ಪರೀಕ್ಷೆ ಒಟ್ಟಿಗೇ ಬರೆದು ಪಾಸಾದರು!!

ಹೀಗೆ ಬರೆದು ಪದವಿ ಗಳಿಸಿದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಹೇಗೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಬಲ್ಲರು? ಕೇವಲ ಪರೀಕ್ಷಾದೃಷ್ಟಿಯಿಂದಷ್ಟೇ ಪಾಠ ಮಾಡಬಲ್ಲರು.

ಈಗಾಗಲೇ ನಮ್ಮ ಯುವಜನತೆಗೆ pure scince ನ ಬಗ್ಗೆ ಆಸಕ್ತಿ ಕುಂದಿದೆ. ವೃತ್ತಿಪರ ಕೋರ್ಸ್ ಗಳನ್ನು ಮಾಡಿ ಹೆಚ್ಚು ಹೆಚ್ಚು ದುಡಿಯುವುದಷ್ಟೇ ಮುಖ್ಯವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ತುಂಬ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಕುತೂಹಲ ಕೆರಳಿಸಿ ಹೆಚ್ಚಿನ ಸಾಧನೆಗೆ ಪ್ರೇರೇಪಿಸುವ ಹೊಣೆ ಶಿಕ್ಷಕರ ಮೇಲಿದೆ.
ಆದ್ದರಿಂದ ಶಿಕ್ಷಕರಾಗುವವರ ಶಿಕ್ಷಣದ ಗುಣಮಟ್ಟವೂ ಸರಿಯಾಗಿರುವುದು ತುಂಬ ಅವಶ್ಯಕ. ದುಡ್ಡಿಗಾಗಿ ಪದವಿ ಮಾರಿಕೊಳ್ಳುವ ಕೆಲಸವನ್ನು ವಿಶ್ವವಿದ್ಯಾಲಯಗಳು ನಿಲ್ಲಿಸಬೇಕಾಗಿದೆ.
ಹಾಗೆಂದು ನಾನು ದೂರಶಿಕ್ಷಣವೇ ಬೇಡವೆಂದು ಹೇಳುತ್ತಿಲ್ಲ . ಆದರೆ ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆಯಂತು ಖಂಡಿತಾ ಇದೆ. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಣತಜ್ಞರೂ ಯೋಚಿಸಬೇಕು.

15 comments:

  1. Matter u have raised is serious. You have reflected the mirror.What could be done to improve the situation? Who'll ring the cat?

    ReplyDelete
  2. ಸುಮಾ ಮೇಡಂ,
    ದೂರ ಶಿಕ್ಷಣದ ಹೆಸರು ಕೇಳಿದರೆ ಒಮ್ಮೆ ಮೈ ಜುಮ್ಮೆನ್ನುತ್ತವೆ ..... ಯಾಕೆಂದರೆ ನನ್ನ ಒಬ್ಬ ಫ್ರೆಂಡ್ ೫೦ ಸಾವಿರ ಕೊಟ್ಟು ಕೋರ್ಸ್ ಮಾಡಿದರೆ , ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಕೆಲಸ ಕೊಡುವವರು...... ತುಂಬಾ ಗಂಬೀರ ವಿಷಯದ ಬಗ್ಗೆಬರೆದಿದ್ದೀರಿ......

    ReplyDelete
  3. ಗ೦ಭೀರ ಚಿ೦ತನೆಯ ವಿಷಯ. ಪ್ರತಿಯೊ೦ದರಲ್ಲೂ ಅನುಕೂಲ-ಅನಾನುಕೂಲ ಇದ್ದೇ ಇವೆ. ಹಲವು ಜನರಿಗೆ ಓದುವ ಉಮೇದಿ ಇದ್ದರೂ ಕೆಲವೊ೦ದು ಪರಿಸ್ಥಿತಿಯಿ೦ದಾಗಿ ಸಾಧ್ಯವಾಗದೇ ಮು೦ದೆ ಅನುಕೂಲವಾದಾಗ ಮು೦ದುವರೆಸುವ ಅವಕಾಶ ನೀಡುವ ದೂರದ ಶಿಕ್ಷಣ ಬೇಡವೆನ್ನುವ ಹಾಗಿಲ್ಲ ಹಾಗ೦ತ ಅದರಲ್ಲಿ ಸೇರುವರೆಲ್ಲಾ ಉಮೇದಿಯವರೇ ಅನ್ನುವ ಹಾಗಿಲ್ಲ. ದಿಟ್ಟ ಪ್ರವೇಶ ಪರೀಕ್ಷೆ ಮತ್ತು ತೀವ್ರವಾದ ಪರೀಕ್ಷಾಕ್ರಮದಿ೦ದ ಬದಲಾವಣೆ ಸಾಧ್ಯ. ಆದರೇ ದುಡ್ಡನ್ನೇ ಲಕ್ಷವಾಗಿಸಿರುವ ಶಿಕ್ಷಣಾಕೇ೦ದ್ರಗಳನ್ನು ಪರಿವರ್ತಿಸುವ ಸಾಧ್ಯತೆ ಸಧ್ಯದ ವ್ಯವಸ್ಥೆಗೆ ಇದೇಯೇ?
    ಈ ಪ್ರಶ್ನೆಗೆ ಉತ್ತರವೂ ಸುಲಭದ್ದಿಲ್ಲ.

    ReplyDelete
  4. ಸುಮ ಅವರೆ,

    ನೀವಂದಿದ್ದು ನಿಜ. ದೂರಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪ ದೋಷಗಳಿವೆ.

    ನಾನೂ ಎಂ.ಎ. ಮಾಡಿದ್ದು ಮುಕ್ತ ವಿಶ್ವವಿದ್ಯಾಲಯದಲ್ಲೇ. ಆದರೆ ಕೊನೆಯ ವರ್ಷ ನನಗೆ ಒಂದು ವಿಷಯದಲ್ಲಿ ತೀರ ಕಡಿಮೆ ಮಾರ್ಕ್ಸ್ ಬಂತು. ತುಂಬಾ ಆಳವಾಗಿ ಅಭ್ಯಸಿಸಿ ಬರೆದ ನನ್ನ ಅಚ್ಚುಮೆಚ್ಚಿನ ವಿಷಯವೇ ಅದಾಗಿತ್ತು. ಬಲ್ಲವರ ಮೂಲಕ ವಿಚಾರಿಸಿದಾಗ ಆಘಾತಕಾರಿ ವಿಷಯವೊಂದು ಹೊರಬಂತು. ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಆ ವಿಷಯದಲ್ಲಿ ಹೆಚ್ಚಿನಂಕಗಳು ಕೊಡಬೇಕಂತೆ. ಹೊರಗಿನಿಂದ ಓದಿ ಬರೆಯುವವರಿಗೇ ಜಾಸ್ತಿ ಬಂದರೆ, ಅಷ್ಟು ವರುಷ ಅಲ್ಲೇ ಕಲಿತಿರುವವರಿಗೆ ಅನ್ಯಾಯವಾಗುವುದೆಂದು ಓರ್ವ ಮಹಾನ್ ಬುದ್ಧಿವಂತ ಪ್ರೊಫೆಸರ್ ಆ ಕೆಲಸ ಮಾಡಿದ್ದ. ಆದರೆ ನಮ್ಮ ವಿದ್ಯಾಸಂಸ್ಥೆಯೊಳಗಿನ ಕಾನೂನು ಅದರಲ್ಲೂ ದೂರಶಿಕ್ಷಣ ಪಡೆಯುವವರಿಗಾಗಿಯೇ ಇರುವ ಪಕ್ಷಪಾತಿ ರೂಲ್ಸ್‌ಗಳಿಂದಾಗಿ ನಾನು ನನ್ನ ನಿಜ ಅಂಕಗಳನ್ನು ಮತ್ತೆ ಪಡೆಯಲಾಗಲಿಲ್ಲ! ಆ ಕೊರಗು ಹಲವು ವರುಷಗಳ ಕಾಲ ನನ್ನ ಕಾಡಿದ್ದಿದೆ.

    ಎಲ್ಲಾ ರಂಗದಲ್ಲೂ ತುಂಬಿರುವ ಅವ್ಯವಸ್ಥೆ ಈ ರಂಗದಲ್ಲೂ ಇದೆ. ಆದರೆ ಸರಿಪಡಿಸುವ ನಿಟ್ಟಿನಲ್ಲಿ ಮಾತ್ರ ಯಾರೂ ಗಂಭೀರವಾಗಿ ಯೋಚಿಸುತ್ತಿಲ್ಲ! ಯೋಚಿಸುವವರು ಬೆರಳೆಣಿಕೆಯಷ್ಟಿದ್ದರೂ ಅವರನ್ನು ಗಣನೆಗೆ ತೆಗೆದುಕೊಳ್ಳುವುದೂ ಇಲ್ಲ!

    ಚಿಂತನಶೀಲ ಲೇಖನ.

    ReplyDelete
  5. ಸುಮಾ...

    ಒಂದು ಗಂಭೀರ ವಿಷಯವನ್ನು ಚರ್ಚಿಸಿದ್ದೀರಿ...

    ಶಿಕ್ಷಣ ಕ್ಷೇತ್ರ ತುಂಬಾ ಅಲಕ್ಷಿತ ಕ್ಷೇತ್ರ...

    ಸುಧಾರಣೆಯ ಅಗತ್ಯ ಬಹಳ ಇದೆ...

    ಚಿಂತನೆಗೆ ಹಚ್ಚುವ ಲೇಖನ...

    ಅಭಿನಂದನೆಗಳು...

    ReplyDelete
  6. ನನಗೆ ಭೌತಶಾಸ್ತ್ರೆದ ಪರ ಇದ್ದ ಆಸಕ್ತಿಯಿಂದಾಗಿ C.E.T ಯಲ್ಲಿ ಉತ್ತಮ ಅಂಕಗಳು ಬಂದರೂ M. Sc. ಓದುವ ಉದ್ದೇಶದಿಂದ B .Sc. ಮುಗಿಸಿದೆ.....ಕೆಲವು ಕಾರಣಗಳಿಂದ ನನ್ನ B. Sc ಮುಗಿದ ತಕ್ಷಣ M. Sc. ಓದಲಾಗಲಿಲ್ಲ. ೩ ವರ್ಷಗಳ ನಂತರ ನಾನು ದೂರಶಿಕ್ಷಣದ ಮೂಲಕ M. Sc ಮುಗಿಸಲು ಪ್ರಯತ್ನಪಟ್ಟಾಗ ಈ ಶಿಕ್ಷಣದ ವ್ಯವಸ್ಥೆಯಲ್ಲಿನ ತೂತು ಕಾನೂನುಗಳಿಂದಾಗಿ ಮತ್ತು ಕಲವೇ ದಿನಗಳ Contact class ಗಳ ಮತ್ತು Practicals ಗಳ ಆತುರದ ಬೋಧನೆಯಿಂದಾಗಿ ನನಗೆ M.Sc ಓದುವುದೇ ದುಸ್ತರವಾಯಿತು...ನನ್ನ ವಿಚಾರಗಳನ್ನು ಮಂಥಿಸುವುದಕ್ಕೆ ಸಮಯವೂ ಸಿಗದೆ ( ನಾನಾಗಲೇ ವೃತ್ತಿಯಲ್ಲೂ ನಿರತನಾಗಿದ್ದೆ ) ಇದನ್ನು ಕೈಬಿಟ್ಟು ಅಂಚೆ-ತೆರಪಿನ ಮೂಲಕ ಕನ್ನಡದಲ್ಲಿ M.A ಮುಗಿಸಿದೆ.
    ಆಶ್ಚರ್ಯವೆಂದರೆ ನನ್ನ ಜೊತೆ ಓದಲು ತಿಣುಕಾಡುತ್ತಿದ್ದವರೆಲ್ಲಾ M.Sc ಪ್ರಮಾಣಪತ್ರ ಪಡೆದುಬಿಟ್ಟಿದ್ದರು. ಹಣಕ್ಕಾಗಿ certificate ಮಾರಿಕೊಳ್ಳುವುದು ಶಿಕ್ಷಣದ ಮಾನವನ್ನು ಸಂತೆಯಲ್ಲಿ ಬಿಚ್ಚಿಟ್ಟಂತೆಯೇ ಸರಿ. ನೇರವಾಗಿ ಹೇಳಬೇಕೆಂದರೆ ಕೆಲವೊಂದು practicals ಗಳನ್ನು ವಿದ್ಯಾರ್ಥಿಗಳೇ ಉಪನ್ಯಾಸಕರಿಗೆ ಹೇಳಿಕೊಡುತ್ತಾರೆ...’ಕೋಟಾ’ ಮತ್ತು ’ಹಣದ’ ಸಾಮ್ರಾಜ್ಯದಲ್ಲಿ ...ನೀವು ಹೇಳಿದಂತೆ pure science ನಶಿಸುತ್ತಿದೆ. ನಿಮ್ಮ ಲೇಖನ ಚರ್ಚೆಯಾಗಬೇಕಾಗಿರುವ ವಿಚಾರ.....ವ್ಯವಸ್ಥೆಯನ್ನು ಬದಲಾಯಿಸುವುದು ಹೇಗೆ ? ಮತ್ತು ಯಾರು ? ಇದೇ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ ....... ಉತ್ತಮ ಮತ್ತು ಸಕಾಲಿಕ ಲೇಖನ....ಧನ್ಯವಾದಗಳು.

    ReplyDelete
  7. This comment has been removed by the author.

    ReplyDelete
  8. ದೂರಶಿಕ್ಷಣದ ಒಳಿತು ಕೆಡುಕುಗಳನ್ನು ಸರಿಯಾಗಿ ವಿಶ್ಲೇಷಿಸಿದ್ದೀರಿ.

    ReplyDelete
  9. ಸುಮ, science ವಿಷಯಗಳಲ್ಲಿ ದೂರ ಶಿಕ್ಷಣ ಎನ್ನುವುದು ಅಸಾಧ್ಯ ಮಾತ್ರವಲ್ಲದೇ ಹಾಸ್ಯಾಸ್ಪದ ಸಹಾ, practicals ಇದ್ದೇ ಹೇಳುವ ವಿಷಯ ತಲೆಗೆ ಹತ್ತಬೇಕಾದರೆ ನಾವೇ ಖುದ್ದು ಮಾಡಿ ಕಲಿಯಬೇಕಾಗುತ್ತದೆ...ಉದಾ, ಮೀನಿನ ಮೂತ್ರ ಪಿಂಡ ಬೆನ್ನುಮೂಳೆಗೆ ಹೊಂದಿಕೊಂಡು ತಲೆಯವರೆಗೂ ಹಬ್ಬಿರುತ್ತೆ...ಎನ್ನುವುದು ಚಿತ್ರ ಸಮೇತ ಪಠ್ಯದಲ್ಲಿದ್ದರೂ ಅದನ್ನು ಗುರುತಿಸುವುದು ಸುಲಭವಲ್ಲ...ದೂರ ಶಿಕ್ಷಣ ಸಾಧ್ಯ ಇರುವ ಕಡೆಯೂ ಕಾಟಾಚಾರಕ್ಕೆ ನಡೆಯುತ್ತೆ ಅಂತ ನನ್ನ ಅಭಿಪ್ರಾಯ...ಒಳ್ಲೆಯ ಲೇಖನ

    ReplyDelete
  10. ದೂರ ಶಿಕ್ಷಣದ ಬಗ್ಗೆ ನಿಮ್ಮ ವಿಶ್ಲೇಷಣೆ ಗಂಬೀರವಾಗಿದೆ. ಇದಿನ ಶಿಕ್ಷಣದ ಗುಣಮಟ್ಟ ಯೋಚಿಸಲೂ ಸಾದ್ಯವಿಲ್ಲ. ಶಿಕ್ಷಣ ಕೇವಲ ವ್ಯಾಪಾರವಾಗಿ ಹೋಗಿದೆ. ನಿಮ್ಮ ಬರಹ ಈ ಕ್ಷೇತ್ರದಲ್ಲಿ ಬೆಳಕು ಚಲ್ಲುವಂತದ್ದು.

    ReplyDelete
  11. ಇನ್ನಷ್ಟು ಸಮಕಾಲೀನ ಲೇಖನಗಳು ನಿಮ್ಮಿಂದ ಮೂಡಿ ಬರಲಿ.
    ಬರಹ ಚೆನ್ನಾಗಿದೆ.

    ReplyDelete
  12. ಸುಮ ಗಂಭೀರ ವಿಷಯದಬಗ್ಗೆ ಕೂಲಂಕಷವಾಗಿ ಹೇಳಿರುವಿರಿ ಅಭಿನಂದನೆಗಳು...

    ReplyDelete
  13. 'ಸುಮಾ' ಅವ್ರೆ.,

    ಖಂಡಿತವಾಗಿ ಇದು ಯೋಚನೆ ಮಾಡಬೇಕಾದ ವಿಷಯ..
    ನಾನು ಕೂಡ 'ವಿಜ್ಞಾನ'ದ ವಿದ್ಯಾರ್ಥಿ.. ಕಳೆದ ೩ ವರ್ಷದಿಂದ ೨೦-೨೫ ಜನರನ್ನು ನೋಡಿದ್ದೇನೆ,ಅವರ ಪೈಕಿ ಇಬ್ಬರು ಮಾತ್ರ ಉಪನ್ಯಾಸಕರಾಗಲು ಅರ್ಹರೆಂದು ನನ್ನ ಅನಿಸಿಕೆ.. .

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/

    ReplyDelete
  14. ನಿಜಕ್ಕೂ ಚಿಂತನೆ ಮಾಡಬೇಕಾದ ವಿಷಯ. ಶಿಕ್ಷಣ ಕ್ಶೇತ್ರ ಎಷ್ಟು ಸುಧಾರಿಸಬೇಕು. ನಾನೂ ಈ ಕ್ಷೇತ್ರದಲ್ಲಿರುವುದರಿಂದ ಗೊತ್ತಾಗುತ್ತದೆ

    ReplyDelete