20 Mar 2019

ವಿಚಿತ್ರ ಜೀವಿಗಳು ೪ - ನೀಲಿ ಸಮುದ್ರ ದೇವತೆ



ಅನಿಮೇಷನ್ ಕಲಾವಿದನೊಬ್ಬ ಸೃಷ್ಟಿಸಿದ ಕಾಲ್ಪನಿಕ ಜೀವಿಯಂತೆ ಕಾಣುವ ಇದು ಹಿಸ್ಕು ಹುಳುವಿನ (ಸ್ಲಗ್) ವರ್ಗಕ್ಕೆ ಸೇರಿದ ಜೀವಿ. “ನೀಲಿ ದೇವತೆ”, ನೀಲಿ ಸಮುದ್ರ ದೇವತೆ, ನೀಲಿ ಡ್ರಾಗನ್ , ಇತ್ಯಾದಿ ಹೆಸರಿನಿಂದ ಕರೆಯಲ್ಪಡುವ ಇದರ ವೈಜ್ಞಾನಿಕ ನಾಮಧೇಯ Glaucus atlanticus .
ಮಲೆನಾಡಿಗರಿಗೆ ಹಿಸ್ಕನ ಹುಳ  ಎಂದರೆ ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವ ದಟ್ಟ ಹಸಿರು ಅಥವಾ ಕಪ್ಪು ಬಣ್ಣದ ಲೋಳೆ ಲೋಳೆಯಾದ ಜೀವಿಯ ನೆನಪು  ಬರುತ್ತದೆ. ನಿಧಾನವಾಗಿ ಚಲಿಸುವ ಬಸವನ ಹುಳುವಿನ ಸೋದರ ಸಂಬಂಧಿ ಹಿಸ್ಕನ ಹುಳ. ಬಸವನ ಹುಳುವಿಗೆ ಬೆನ್ನ ಮೇಲೆ ಚಿಪ್ಪಿರುತ್ತದೆ, ಹಿಸ್ಕನ ಹುಳುವಿಗೆ ಇರುವುದಿಲ್ಲ ಅಷ್ಟೇ.
ನಾವು ನೋಡುವ ಬಸವನ ಹುಳು ಅಥವಾ ಹಿಸ್ಕನ ಹುಳುಗಳೆಲ್ಲಾ ನೆಲವಾಸಿಗಳು. ಆದರೆ ಈ  “ನೀಲಿ ದೇವತೆ” ಸಮುದ್ರವಾಸಿ. ನೆಲವಾಸಿ ಸ್ಲಗ್ ಗಳಿಗಿಂತಲೂ ಅತ್ಯಧಿಕ ಸಂಖ್ಯೆಯಲ್ಲಿ ಸಮುದ್ರವಾಸಿ ಸ್ಲಗ್ ಗಳಿವೆ ಸುಮಾರು ಎರಡೂವರೆಯಿಂದ ಮೂರು ಸಾವಿರ ವಿವಿಧ ಪ್ರಭೇದದ ಸಮುದ್ರವಾಸಿ ಸ್ಲಗ್ ಗಳನ್ನು  ಜೀವವಿಜ್ಞಾನಿಗಳು ಗುರುತಿಸಿದ್ದಾರೆ. ವೈವಿಧ್ಯಮಯವಾದ ಹೊಳೆವ ಬಣ್ಣಗಳಲ್ಲಿ, ವಿವಿಧ ಆಕಾರಗಳಲ್ಲಿ ಸಮುದ್ರದಲ್ಲಿ ಇವು ಕಂಗೊಳಿಸುತ್ತವೆ.
ಈ ನೀಲಿ ಸಮುದ್ರ ಹಿಸ್ಕು ನೀರಿನಲ್ಲಿ ಅಂಗಾತನವಾಗಿ (ಅಂದರೆ ಬೆನ್ನು ಕೆಳಗೆ ಹೊಟ್ಟೆ ಮೇಲೆ) ತೇಲುತ್ತಿರುತ್ತದಂತೆ. ದೇಹದಲ್ಲಿರುವ ಗಾಳಿ ಚೀಲದ ಸಹಾಯದಿಂದ ಹೀಗೆ ತೇಲುವ ಸಾಮರ್ಥ್ಯ ಬರುತ್ತದೆ. ಅದರ ಹೊಟ್ಟೆಯ ಭಾಗದಲ್ಲಿ ಹೊಳೆವ ನೀಲಿ ಬಣ್ಣವೂ ಬೆನ್ನಿನ ಭಾಗದಲ್ಲಿ ಬೂದು ಬಣ್ಣವೂ ಇದೆ. ಕೆಳಗಿನಿಂದ ಮತ್ತು ಮೇಲೆನಿಂದ ನೋಡುವ ಭಕ್ಷಕಗಳಿಗೆ ಸುಳಿವು ಸಿಗದಂತೆ ನೀರಿನ ಬಣ್ಣದೊಂದಿಗೆ ಈ ಬಣ್ಣಗಳು ಮಿಳಿತಗೊಳ್ಳುತ್ತವೆ.
ಚಿಕ್ಕ ಪುಟ್ಟ ಜೀವಿಗಳನ್ನು ಕೊಂದು ತಿನ್ನುವ ಬೇಟೆಗಾರ ಇದು. ಆಶ್ಚರ್ಯಕರ ಸಂಗತಿಯೆಂದರೆ ತಾನು ಕೊಂದು ತಿನ್ನುವ ಕಂಟಕಚರ್ಮಿಗಳ ದೇಹದಲ್ಲಿರುವ ವಿಷಕೋಶವನ್ನು ತನ್ನ ದೇಹದಲ್ಲಿರುವ ಬೆರಳುಗಳಂತಹ ಅಂಗದಲ್ಲಿ ಶೇಖರಿಸಿಟ್ಟುಕೊಳ್ಳುವ ವಿಶಿಷ್ಟ ಕಲೆ ಇದಕ್ಕೆ ಸಿದ್ಧಿಸಿದೆ. ಹೀಗೆ ಶೇಖರಿಸಿಟ್ಟುಕೊಂಡ ವಿಷದಿಂದಾಗಿ ಭಕ್ಷಕಗಳು ಇದರ ಹತ್ತಿರ ಸುಳಿಯುವುದಿಲ್ಲ.
ಹೆಣ್ಣು ಗಂಡು ಎಂಬ ಬೇರೆ ಬೇರೆ ಜಾತಿ ಇವುಗಳಲ್ಲಿಲ್ಲ. ಒಂದೇ ದೇಹದಲ್ಲಿ ಎರಡೂ ರೀತಿಯ ಲೈಂಗಿಕಾಂಗಗಳಿವೆಯಾದ್ದರಿಂದ  ಬೇರೊಂದು ಜೀವಿಯೊಡನೆ  ವೀರ್ಯ ಬದಲಾಯಿಸಿಕೊಂಡು ಎರಡೂ ಏಕಕಾಲದಲ್ಲಿ ಮೊಟ್ಟೆಯಿಡುತ್ತವೆ.
ಈ ಸಮುದ್ರ ಸ್ಲಗ್ ಗಳು ಪ್ರಪಂಚದ ಎಲ್ಲಾ ಕಡೆಗಳಲ್ಲೂ ಕಂಡುಬರುತ್ತವೆ. ಆದರೆ ದಡಕ್ಕೆ ಬರುವುದು ಅಪರೂಪವಾದ್ದರಿಂದ ಜನಸಾಮಾನ್ಯರಿಗೆ ಕಾಣಿಸುವುದೂ ಕಡಿಮೆ. ಈ ರೀತಿಯ ಸಮುದ್ರಜೀವಿಗಳ ಬಗ್ಗೆ ವಿಜ್ಞಾನ ಪ್ರಪಂಚಕ್ಕೆ ತಿಳಿದಿರುವುದು ಅತ್ಯಲ್ಪ ಸಂಗತಿಗಳಷ್ಟೇ ಆಗಿರುವುದರಿಂದ, ಇನ್ನೂ ಇಂತಹ ಜೀವಿಗಳು ತಮ್ಮೊಡನೆ ಸೃಷ್ಟಿಯ ಅದೆಷ್ಟು ರಹಸ್ಯಗಳನ್ನು ಅಡಗಿಸಿಕೊಂಡಿವೆಯೋ . 

2 comments:

  1. ನೀಲೀದೇವತೆಯನ್ನು ನೋಡಿ ಮೋಹಗೊಂಡೆ! ಇದರ ವಿವರಗಳು ತಿಳಿದಂತೆ ಅದ್ಭುತವೆನಿಸಿತು. Survival ಹಾಗು procreation ಸಲುವಾಗಿ ಜೀವಿಗಳು ಎಂತೆಂತಹ ವಿಧಾನಗಳನ್ನು ಹುಡುಕಿಕೊಂಡಿವೆಯಲ್ಲ ಎಂದು ಆಶ್ಚರ್ಯವಾಯಿತು. ಚಿತ್ರ ಹಾಗು ವಿವರಗಳಿಗಾಗಿ ಧನ್ಯವಾದಗಳು.

    ReplyDelete